ಸುಂದರ ಸಮುದ್ರ ಕಿನಾರೆಗಳಿಂದ ಜಗತ್ತಿನ ಗಮನ ಸೆಳೆದಿದ್ದ, ದೇವರ ಸ್ವಂತ ನಾಡು ಎಂದೇ ಬಣ್ಣಿಸಿಕೊಂಡಿದ್ದ ಕೇರಳದಲ್ಲಿ ಕೊರೊನಾ ಕಾಣಿಸಿಕೊಂಡಾಗ ಕೇರಳಿಗರು ಬೆಚ್ಚಿಬಿದ್ದಿದ್ದರು. ತಮ್ಮ ರಾಜ್ಯವನ್ನು ಕೊರೊನಾ ಮಹಾಮಾರಿ ಆಪೋಷನ ತೆಗೆದುಕೊಂಡು ಬಿಟ್ಟಿದೆ ಎಂಬ ಆತಂಕ ಕಂಡುಬಂತು. ಅದಕ್ಕೆ ಸರಿಯಾಗಿ ದೇಶದ ಮೊದಲನೇ ಕೊರೊನಾ ಸೋಂಕು ಪ್ರಕರಣವೂ ಕೇರಳದಿಂದಲೇ ವರದಿಯಾಯಿತು. ಕೇರಳದ 14 ಜಿಲ್ಲೆಗಳ ಪೈಕಿ 13 ಜಿಲ್ಲೆಗಳಲ್ಲಿಯೂ ಕೊರೊನಾ ವೈರಾಣು ತಾಂಡವ ವಾಡತೊಡಗಿತು. ಕೇರಳ ಭಾರತದ ಮಿನಿ ಇಟಲಿಯಾಗುತ್ತೆ ಎಂದೇ ಹೇಳಲಾಯಿತು. ಆದರೆ, ಇದೆಲ್ಲವನ್ನೂ ಮೀರಿದ ಕೇರಳ ತನ್ನ ದಿಟ್ಟ ಮುಂಜಾಗ್ರತಾ ಕ್ರಮಗಳಿಂದಾಗಿ ಕೊರೊನಾ ವಿರುದ್ಧ ಸಮರ್ಥವಾಗಿ ಸಮರ ಸಾರಿಬಿಟ್ಟಿತು. ದೇಶಕ್ಕೇ ಮಾದರಿಯಾಗುವಂತೆ ಕೇರಳ ಕೊರೊನಾ ಸಂಕಷ್ಟವನ್ನು ಮೆಟ್ಟಿ ನಿಂತಿದೆ. ಕೇರಳದಲ್ಲಿ 407 ಪ್ರಕರಣಗಳು ವರದಿಯಾಗಿದ್ದು, ಇಬ್ಬರು ಸಾವನ್ನಪ್ಪಿ ಇದುವರೆಗೂ 291 ಮಂದಿ ಗುಣಮುಖರಾಗಿದ್ದಾರೆ. ಈ ಮೂಲಕ ಕೊರೊನಾ ತಡೆಯತ್ನದಲ್ಲಿ ಕೇರಳ ರಾಜ್ಯ ಭಾರತಕ್ಕೆ ಮಾದರಿಯಾಯಿತು. ಈ ಯಶಸ್ಸಿನ ಕಥೆಯ ಹಿಂದಿರುವವರು ಓರ್ವ ನಿವೃತ್ತ ಶಿಕ್ಷಕಿ. ಅವರ ಹೆಸರು ಕೆ. ಕೆ. ಶೈಲಜಾ. 63 ವರ್ಷದ ಶೈಲಜಾ ಟೀಚರ್ ಈಗ ಕೇರಳದ ಆರೋಗ್ಯ ಸಚಿವೆ ! ಕೊಡಗಿನ ಪಕ್ಕದ ರಾಜ್ಯವಾಗಿ, ಕೊಡಗಿನಲ್ಲಿ ಕೇರಳಿಗರ ಸಂಖ್ಯೆಯೂ ಹೆಚ್ಚಿರುವ ಹಿನ್ನೆಲೆಯಲ್ಲಿ ಕೊರೊನಾ ಪೀಡಿತ ಕೇರಳದ ಸ್ಥಿತಿಗತಿಯ ಅವಲೋಕನ ಇದು.
.....
ಚೀನಾದಲ್ಲಿ ಡಿಸೆಂಬರ್‍ನಲ್ಲಿ ಕೊರೊನಾ ಪ್ರಕರಣ ವರದಿಯಾಗು ತ್ತಿದ್ದಂತೆಯೇ ಭಾರತದಲ್ಲಿ ಮೊದಲು ಎಚ್ಚತ್ತುಕೊಂಡದ್ದೇ ಕೇರಳ ರಾಜ್ಯ ಸರ್ಕಾರ. ಜನವರಿ ಮೊದಲ ವಾರದಲ್ಲಿಯೇ ಮುಖ್ಯಮಂತ್ರಿ ಪಿಣರಾಯ್ ವಿಜಯನ್ ತುರ್ತು ಸಭೆ ನಡೆಸಿ ಕೊರೊನಾ ಸಂಬಂಧಿತ ಕಾರ್ಯಪಡೆಯನ್ನು ರಚಿಸಿಬಿಟ್ಟರು. ರಾಜ್ಯದ ಆರೋಗ್ಯ ಸಚಿವೆ ಕೆ. ಕೆ. ಶೈಲಜ ಅವರಿಗೆ ಈ ಕಾರ್ಯಪಡೆಯ ಹೊಣೆ ನೀಡಲಾಯಿತು. ಚೀನಾದಲ್ಲಿ ಕೊರೊನಾ ಸೋಂಕು ವರದಿಯಾಗಿರುವ ಬಗ್ಗೆ ಕೇರಳ ತಳಮಳಗೊಳ್ಳಲು ಸಕಾರಣವೂ ಇತ್ತು. ಸುಮಾರು 2.75 ಲಕ್ಷ ಕೇರಳಿಗರು ಜಗತ್ತಿನ 124 ದೇಶಗಳಲ್ಲಿ ವಿವಿಧ ಉದ್ಯೋಗದಲ್ಲಿ, ಶಿಕ್ಷಣ ಪಡೆಯುತ್ತಲೋ ಇದ್ದಾರೆ. ಹೀಗಿರುವಾಗ ವಿದೇಶ ಗಳಲ್ಲಿರುವ ಕೇರಳಿಗರಿಗೆ ಕೊರೊನಾ ಸೋಂಕು ತಗುಲಿದರೆ ಅಪಾಯ ಖಂಡಿತಾ ಎಂಬ ಮುಂದಾಲೋಚನೆ ಕೇರಳ ಸರ್ಕಾರದ್ದಾಗಿತ್ತು. ಇದರ ಜತೆಗೇ ವುಹಾನ್‍ನಲ್ಲಿನ ವಿಶ್ವವಿದ್ಯಾನಿಲಯದಲ್ಲಿಯೇ ಕೇರಳದ 520 ವಿದ್ಯಾರ್ಥಿ ಗಳು ಶಿಕ್ಷಣ ಪಡೆಯುತ್ತಿದ್ದರು. ಈ ರೀತಿ ವುಹಾನ್‍ನಲ್ಲಿ ವಿದ್ಯಾಭ್ಯಾಸ ಪಡೆಯುತ್ತಿದ್ದವರ ಪೈಕಿ ಮೂವರು ವಿದ್ಯಾರ್ಥಿಗಳು ಭಾರತಕ್ಕೆ ಬಂದರು. ದೆಹಲಿಯಿಂದ ದೇಶೀಯ ವಿಮಾನದಲ್ಲಿ ಕೊಚ್ಚಿ ವಿಮಾನ ನಿಲ್ದಾಣಕ್ಕೆ ಬಂದಿಳಿದರು. ಕೊಚ್ಚಿಯ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿದೇಶದಿಂದ ಬಂದವ ರನ್ನು ತೀವ್ರ ತಪಾಸಣೆಗೆ ಒಳಪಡಿಸಲಾಗುತ್ತಿತ್ತೇ ವಿನಾ ದೇಶೀಯ ವಿಮಾನಗಳಲ್ಲಿ ಬಂದವರ ತಪಾಸಣೆ ಇರಲಿಲ್ಲ. ಹೀಗಾಗಿ ವುಹಾನ್‍ನಿಂದ ದೆಹಲಿಗಾಗಿ ಕೊಚ್ಚಿಗೆ ಬಂದ ವಿದ್ಯಾರ್ಥಿಗಳು ಅಲ್ಲಿಂದ ತಂದಿದ್ದ ಸೋಂಕಿನೊಂದಿಗೆ ಕಾಸರಗೋಡು, ತ್ರಿಚೂರು ತಲುಪಿಬಿಟ್ಟರು. ಅದು ಹೇಗೋ ವುಹಾನ್ ವಿದ್ಯಾರ್ಥಿಗಳ ಬರುವಿಕೆ ಮಾಹಿತಿ ಪಡೆದ ಕೇರಳ ಆರೋಗ್ಯ ಕಾರ್ಯಪಡೆ ರಾತ್ರೋರಾತ್ರಿ ತೆರಳಿ ಮನೆಯಿಂದಲೇ ಈ ವಿದ್ಯಾರ್ಥಿಗಳನ್ನು ಆಸ್ಪತ್ರೆಗೆ ದಾಖಲಿಸಿತು. ಸೋಂಕು ಮತ್ತಷ್ಟು ಪಸರಿಸುವುದನ್ನು ಸರ್ಕಾರದ ಸಕಾಲಿಕ ಕ್ರಮ ತಪ್ಪಿಸಿತು. ಆದರೆ, ಈ ರೀತಿ ಬಂದ ವಿದ್ಯಾರ್ಥಿಯೋರ್ವನಲ್ಲಿ ಕೊರೊನಾ ಸೋಂಕು ಜನವರಿ 30 ರಂದು ವರದಿಯಾಯಿತಲ್ಲದೇ ಇದೇ ಭಾರತದ ಮೊದಲ ಕೊರೊನಾ ಸೋಂಕು ಎನಿಸಿಕೊಂಡಿತು. ಆ ವಿದ್ಯಾರ್ಥಿ ತ್ರಿಚೂರಿನಲ್ಲಿ ಚಿಕಿತ್ಸೆ ಬಳಿಕ ಕಳೆದ ತಿಂಗಳು ಚೇತರಿಸಿಕೊಂಡು ಮನೆಗೆ ಮರಳಿದ. ಕೊರೊನಾ ವಿರುದ್ಧ ಕೇರಳ ಸರ್ಕಾರ ಕಟ್ಟೆಚ್ಚರ ವಹಿಸಿರುವಂತೆಯೇ ಫೆಬ್ರವರಿ 28 ರಂದು ದೋಹಾ ಮೂಲಕ ಕೊಚ್ಚಿಗೆ ಬಂದಿಳಿದ ಮೂವರು ತಾವು ಬಂದ ದೇಶದ ಬಗ್ಗೆ ತಪ್ಪು ಮಾಹಿತಿ ನೀಡಿ ತಪಾಸಣೆಯಿಂದ ತಪ್ಪಿಸಿಕೊಂಡರು. ಈ ಮೂವರು ಮನೆಗೆ ತೆರಳಿದ ಬಳಿಕ ತಮ್ಮಲ್ಲಿದ್ದ ಸೋಂಕನ್ನು 12 ಮಂದಿಗೆ ಹಬ್ಬಿಸಿದರು. ತದ ನಂತರ ಕಾಸರಗೋಡು ಸೇರಿದಂತೆ ಕೇರಳದ ಒಂದೊಂದೇ ಜಿಲ್ಲೆಗಳಿಗೆ ಕೊರೊನಾ ಸೋಂಕು ವ್ಯಾಪಿಸತೊಡಗಿತು. ಪ್ರಾರಂಭಿಕ ಹಂತದಲ್ಲಿ ದೇಶದಲ್ಲಿಯೇ ಮೊದಲ ಸ್ಥಾನದಲ್ಲಿದ್ದ ಕೇರಳ ನಂತರ ತನ್ನ ಕಠಿಣ ಕ್ರಮಗಳಿಂದಾಗಿ ಇದೀಗ ದೇಶದಲ್ಲಿ 17 ನೇ ಸ್ಥಾನ ಪಡೆದಿದೆ. ಕೊರೊನಾ ಸೋಂಕಿತರ ಪ್ರಮಾಣ ಕೇರಳದಲ್ಲಿ ಗಣನೀಯವಾಗಿ ನಿಯಂತ್ರಣಕ್ಕೆ ಬಂದಿದೆ. ಸದಾ ಬಂದ್, ಗಲಾಟೆ, ಪ್ರತಿಭಟನೆಗಳಿಗೆ ಹೆಸರಾಗಿದ್ದ ಕೇರಳದ ಜನ, ವಿವಿಧ ಪ್ರಗತಿಪರ ರಾಜಕೀಯ ಪಕ್ಷಗಳು ಇತಿಹಾಸದಲ್ಲಿಯೇ ಮೊತ್ತ ಮೊದಲ ಬಾರಿಗೆ ಎಂಬಂತೆ ಕೊರೊನಾ ಮಹಾಮಾರಿ ತಡೆಗೆ ಒಂದಾಗಿ ಸರ್ಕಾರಕ್ಕೆ ಬೆಂಬಲ ನೀಡಿದವು. ಕೇರಳದ ಜನ 21 ದಿನಗಳ ಲಾಕ್‍ಡೌನ್ ಸಂದರ್ಭ ಮನೆಯಿಂದ ಹೊರಕ್ಕೇ ಬಾರದೇ ಕೇರಳ ಉಳಿಸಿ ಎಂಬ ಸಂದೇಶ ಸಾರಿದರು. ಕೇರಳಕ್ಕೆ ಅಪಾಯ ಸಂಭವಿಸಿದರೆ ತಮ್ಮೆಲ್ಲರ ಕಥೆಯೂ ಮುಗಿಯಿತು ಎಂಬುದನ್ನು ಕೇರಳದ ಜನತೆ ಚೆನ್ನಾಗಿಯೇ ಅರ್ಥಮಾಡಿಕೊಂಡಿದ್ದರು. ಹೀಗಾಗಿಯೇ ಲಾಕ್‍ಡೌನ್ ಕೇರಳದಲ್ಲಿ ಸಂಪೂರ್ಣ ಫಲಪ್ರದವಾಯಿತು ಕೇರಳದಲ್ಲಿನ 14 ಜಿಲ್ಲೆಗಳ ಪೈಕಿ ಕೊಟ್ಟಾಯಂ ಹೊರತುಪಡಿಸಿ ಉಳಿದ 13 ಜಿಲ್ಲೆಗಳೂ ಕೊರೊನಾ ಸೋಂಕಿನಿಂದ ನರಳಿದೆ. ಕೊರೊನಾ ಪ್ರಕರಣ ತಡೆಗಟ್ಟಲು ಫೆÉಬ್ರವರಿಯಲ್ಲಿಯೇ ಕೇರಳದ ಎಲ್ಲಾ ವೈದ್ಯಕೀಯ ಕಾಲೇಜು. ಕಾಲೇಜು, ಶಿಕ್ಷಣ ಸಂಸ್ಥೆಗಳಲ್ಲಿ ವಿಶೇಷ ವಾರ್ಡ್ ತೆರೆಯಲಾಯಿತು. ತಳಮಟ್ಟದಲ್ಲಿನ ಆರೋಗ್ಯ ಕಾರ್ಯಕರ್ತೆಯರಿಗೆ ಸೂಕ್ತ ತರಬೇತಿ ನೀಡಿ ಸಜ್ಜುಗೊಳಿಸಲಾಯಿತು. ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಅಗತ್ಯ ಔಷಧಿ, ಸಿಬ್ಬಂದಿಗಳನ್ನು ಕಳುಹಿಸಲಾಯಿತು. ಸ್ವಯಂ ಸೇವಕರಿಗೂ ತರಬೇತಿ ನೀಡಲಾಯಿತು. ಕೊರೊನಾ ಬಂದೇ ಬರುತ್ತದೆ. ರಕ್ಷಿಸಿಕೊಳ್ಳುವುದು ಹೇಗೆಂಬ ಮಾರ್ಗದರ್ಶನ ನೀಡಲಾಯಿತು. ಲಾಕ್‍ಡೌನ್‍ನ ಮಹತ್ವವನ್ನು ಮೊದಲೇ ಹೇಳಲಾಯಿತು. ಸಾಮಾಜಿಕ ಅಂತರವನ್ನು ಜನನಿಬಿಡ ಕೇರಳದ ಜನರೂ ಶಿಸ್ತುಬದ್ದವಾಗಿ ಪಾಲಿಸಿದರು ಎಂಬುದೂ ವಿಶೇಷವೇ. ಸರ್ಕಾರ ಜಿಓಕೆ ಡೈರೆಕ್ಟ್ ಎಂಬ ಆ್ಯಪ್ ಪ್ರಾರಂಭಿಸಿತು. ಸೂಕ್ತ ಶಿಕ್ಷಣವನ್ನೂ ಈ ಮೂಲಕ ಜನತೆಗೆ ನೀಡಲಾಯಿತು. ಸಂಪರ್ಕತಡೆಯಲ್ಲಿದ್ದ ಸಾವಿರಾರು ಜನತೆಯನ್ನು ಜಿಪಿಎಸ್ ಮೂಲಕ ಸಂಪರ್ಕಿಸಿ ಅವರು ಮನೆಯಿಂದ ಹೊರಬಾರದಂತೆ ಗಮನ ಹರಿಸಲಾಯಿತು. ಎಲ್ಲಾ ಆಧುನಿಕ ತಂತ್ರಜ್ಞಾನಗಳನ್ನೂ ಕೊರೊನಾ ಸಮರಕ್ಕಾಗಿ ಕೇರಳ ಸರ್ಕಾರ ಬಳಸಿಕೊಂಡಿತು. ಈ ಎಲ್ಲಾ ಯೋಜನೆಗಳ ಹಿಂದೆ ಶೈಲಜಾ ಅವರ ಚಿಂತನೆಯಿತ್ತು. ಆರೋಗ್ಯ ಕ್ಷೇತ್ರದಲ್ಲಿನ ಪರಿಣತಿಯೂ ಕೇರಳದ ನೆರವಿಗೆ ಬಂತು. ಇದೇ ಕಾರಣದಿಂದಾಗಿ ವಿಶ್ವ ಆರೋಗ್ಯ ಸಂಸ್ಥೆ ಇದೀಗ ಕೇರಳದಲ್ಲಿ 5 ಆಸ್ಪತ್ರೆಗಳಲ್ಲಿ ಕೊರೊನಾಕ್ಕೆ ರಾಮಬಾಣ ಎನಿಸಿರುವ ಪ್ಲಾಸ್ಮಾ ಚಿಕಿತ್ಸೆಗೆ ಅನುಮತಿ ನೀಡಿದೆ. ಪ್ರವಾಸೋದ್ಯಮವೇ ಆಧಾರವಾಗಿರುವ ಕೇರಳದಲ್ಲಿ ಕೊರೊನಾ ಪ್ರಕರಣ ಹೆಚ್ಚಾದಲ್ಲಿ ಉದ್ಯಮದ ನಾಶ ಖಂಡಿತಾ. ಹೀಗಾಗಿ ಪ್ರತಿಯೋರ್ವರೂ ಸರ್ಕಾರದ ನಿಯಮ ಪಾಲಿಸಬೇಕೆಂಬ ಸ್ವಯಂ ಪ್ರತಿಜ್ಞೆಯಿಂದಾಗಿಯೇ ಕೇರಳದಲ್ಲಿ ಗಣನೀಯವಾಗಿ ಕೊರೊನಾ ಸೋಂಕು ಕಡಿಮೆಯಾಯಿತು. 2018ರಲ್ಲಿ ಕೇರಳದಲ್ಲಿ ತಾಂಡವವಾಡಿದ್ದ ಎಚ್ 1 ಎನ್ 1 ಕಾಯಿಲೆಯಿಂದಾಗಿ 19 ಜನ ಸಾವನ್ನಪ್ಪಿದ್ದರು. ಆಗ ರೂಪಿಸಲಾದ ಆರೋಗ್ಯ ಸಂರಕ್ಷಣಾ ತಂತ್ರಗಳೇ ಈ ಬಾರಿಯೂ ಕೇರಳಕ್ಕೆ ಮಾದರಿಯಾಯಿತು.
ಕೊನೇಹನಿ.
.......
ಕೊಡಗು ಸನಿಹದಲ್ಲಿರುವ ಕಣ್ಣೂರು ಜಿಲ್ಲೆಯ ಕೆ.ಕೆ.ಶೈಲಜಾ ಟೀಚರ್ ಕುತುಪರಂಬ ಕ್ಷೇತ್ರದಿಂದ ಕೇರಳ ವಿಧಾನಸಭೆಗೆ ಶಾಸಕಿಯಾಗಿ ಪ್ರವೇಶಿಸಿದರು. ಕೇರಳದ ಸಚಿವ ಸಂಪುಟದಲ್ಲಿನ ಈರ್ವರು ಮಹಿಳಾ ಸಚಿವರ ಪೈಕಿ ಈಕೆಯೂ ಒಬ್ಬರು. ನಿಫಾ ವೈರಾಣು ಕೇರಳದಲ್ಲಿ ತಾಂಡವವಾಡಿದ ಸಂದರ್ಭ ಶೈಲಜಾ ತನ್ನ ತಂಡದೊಂದಿಗೆ ವೈರಾಣು ಧಾಳಿ ತಡೆಗಟ್ಟುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಇದನ್ನೇ ಆದರಿಸಿ ವೈರಸ್ ಎಂಬ ಮಲಯಾಳ ಚಿಲನಚಿತ್ರ ಕೂಡ ತೆರೆಕಂಡಿತ್ತು. ಶೈಲಜಾ ಟೀಚರ್ ಕಾರ್ಯವನ್ನೇ ಚಿತ್ರದಲ್ಲಿ ರೇವತಿ ಪಾತ್ರದ ಮೂಲಕ ಬಿಂಬಿಸಲಾಯಿತು. ಸ್ತ್ರೀಶಬ್ದಂ ಎಂಬ ಮಾಸಪತ್ರಿಕೆಯ ಪ್ರಧಾನ ಸಂಪಾದಕಿಯೂ ಆಗಿರುವ ಸರಳ ವ್ಯಕ್ತಿತ್ವದ ಶೈಲಜಾ ಚೀನಾ ದೇಶದ ಕುರಿತಾಗಿ ಚೀನಾ-ರಾಷ್ಟ್ರಂ, ರಾಷ್ಟ್ಟೀಯಂ ಎಂಬ ಕೃತಿ ರಚಿಸಿದ್ದಾರೆ. ವಿಪರ್ಯಾಸ ಎಂದರೆ ಚೀನಾದ ಒಳಹೊರಗನ್ನು ತನ್ನ ಕೃತಿ ಮೂಲಕ ಪರಿಚಯಿಸಿದ್ದ ಶೈಲಜಾ ಇದೀಗ ಚೀನಾದಿಂದ ಕೇರಳಕ್ಕೆ ತಗುಲಿದ ಕಣ್ಣಿಗೆ ಕಾಣದ ರಕ್ಕಸ ವೈರಸ್ ವಿರುದ್ದ ಆರೋಗ್ಯ ಸಚಿವೆಯಾಗಿ ಸಮರ ಸಾರುವಂತಾಗಿದೆ !