ಇಬ್ಬರು ಉಗ್ರರ ಬಂಧನ
ಶ್ರೀನಗರ, ಏ.20 : ದಕ್ಷಿಣ ಕಾಶ್ಮೀರ ಜಿಲ್ಲೆಯ ಶೋಪಿಯಾನ್ನಲ್ಲಿ ಭದ್ರತಾ ಪಡೆಗಳ ಮೇಲೆ ದಾಳಿ ನಡೆಸಲು ಯೋಜಿಸಿದ್ದ ಇಬ್ಬರು ಜೈಶ್-ಎ-ಮೊಹಮದ್ (ಜೆಎಂ) ಉಗ್ರರನ್ನು ಬಂಧಿಸಿ, ಬಂಧಿತರಿಂದ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಭದ್ರತಾ ಪಡೆಗಳ ಮೇಲೆ ದಾಳಿ ನಡೆಸಲು ಯೋಜನೆ ರೂಪಿಸಿದ್ದ ಉಗ್ರರ ಚಲನವಲನದ ಬಗ್ಗೆ ನಿರ್ದಿಷ್ಟ ಮಾಹಿತಿಯನ್ನು ಆಧರಿಸಿ, ಶೋಪಿಯಾನ್ನ ವಾಚಿ ಪೆಟ್ರೋಲ್ ಬಳಿ ಪೊಲೀಸ್, 55 ರಾಷ್ಟ್ರೀಯ ರೈಫಲ್ಸ್ ಮತ್ತು ಸಿಆರ್ಪಿಎಫ್ನ 178 ಬೆಟಾಲಿಯನ್ ನ ಜಂಟಿ ತಪಾಸಣಾ ಕೇಂದ್ರ ಸ್ಥಾಪಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಯುಎನ್ಐಗೆ ತಿಳಿಸಿದ್ದಾರೆ. ‘ಇಬ್ಬರು ವ್ಯಕ್ತಿಗಳು ಅನುಮಾನಾಸ್ಪದವಾಗಿ ಓಡಾಡುತ್ತಿರುವುದನ್ನು ಗಮನಿಸಿದ ಭದ್ರತಾ ಪಡೆಗಳು, ಅವರನ್ನು ನಿಲ್ಲುವಂತೆ ಸೂಚಿಸಿದಾಗ ಶಂಕಿತರು ಸ್ಥಳದಿಂದ ಪರಾರಿಯಾಗಲು ಪ್ರಯತ್ನಿಸಿದ್ದಾರೆ. ಆದರೂ, ಭದ್ರತಾ ಪಡೆಗಳು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿವೆ. ಭದ್ರತಾ ಪಡೆಗಳು ಬಂಧಿತರಿಂದ ಪಿಸ್ತೂಲ್ ಮತ್ತು ಎರಡು ಗ್ರೆನೇಡ್ಗಳನ್ನು ವಶಪಡಿಸಿಕೊಂಡಿವೆ ಎಂದು ಅವರು ಹೇಳಿದ್ದಾರೆ. ವಾಚಿಯಲ್ಲಿ ನಿಯೋಜಿಸಲಾಗಿರುವ ಭದ್ರತಾ ಪಡೆಗಳ ದಾಳಿ ನಡೆಸಲು ಈ ಇಬ್ಬರು ಯೋಜಿಸಿದ್ದರು. ಕೊರೊನಾವೈರಸ್ ಹರಡುವಿಕೆ ತಡೆಗೆ ಲಾಕ್ಡೌನ್ ಜಾರಿಗೊಳಿಸಲು ಭದ್ರತಾ ಪಡೆಗಳನ್ನು ಇಲ್ಲಿ ನಿಯೋಜಿಸಲಾಗಿದೆ.
ಪಾದರಾಯನಪುರದಲ್ಲಿ ಗರುಡ ಭದ್ರತೆ
ಬೆಂಗಳೂರು, ಏ.20 : ಪಾದರಾಯನಪುರ ದಲ್ಲಿ ಭಾನುವಾರ ರಾತ್ರಿ ವೈದ್ಯಕೀಯ ಸಿಬ್ಬಂದಿ, ಆಶಾಕಾರ್ಯಕರ್ತೆಯರು ಹಾಗೂ ಪೊಲೀಸರು ಮೇಲೆ ಹಲ್ಲೆ ನಡೆದ ಘಟನೆಯ ಬಳಿಕ ಪಾದರಾಯನಪುರದಲ್ಲಿ ಗರುಡ ತಂಡ ಭದ್ರತೆ ಕೈಗೊಂಡಿದ್ದು, ಇಡೀ ಪ್ರದೇಶ ಸಂಪೂರ್ಣ ಸೀಲ್ಡೌನ್ ಆಗಿದೆ. ರೈಫಲ್ ಹಿಡಿದುಕೊಂಡು ಗರುಡ ಕಮಾಂಡೋಗಳು ನಡು ರಸ್ತೆಯಲ್ಲಿ ನಿಂತು ನಿಗಾ ವಹಿಸುತ್ತಿದ್ದಾರೆ. ಮಾಸ್ಕ್ ಹಾಕದೆ, ಹೊರಗಡೆ ಓಡಾಡುವ ಜನರಿಗೆ ಫುಲ್ ಕ್ಲಾಸ್ ತೆಗೆದುಕೊಳ್ಳುತ್ತಿದ್ದಾರೆ. ಗರುಡ ಟೀಮ್ ನೋಡಿ ಜನ ಮನೆಯಿಂದ ಹೊರಬರಲು ಭಯಪಡುತ್ತಿದ್ದಾರೆ. ಇತ್ತ ಪೊಲೀಸರು ಕೂಡ ಪ್ರತಿ ಏರಿಯಾದಲ್ಲೂ ಗಸ್ತು ತಿರುಗುತ್ತಿದ್ದಾರೆ. ಬೈಕ್ಗಳಲ್ಲಿ, ಜೀಪ್ನಲ್ಲಿ ಪೊಲೀಸರು ಸುತ್ತಾಡುತ್ತಿದ್ದಾರೆ. ಪ್ರತಿ ಗಲ್ಲಿ ಗಲ್ಲಿಗೂ ಪೊಲೀಸ್ ಸರ್ಪಗಾವಲು ಇರಿಸಲಾಗಿದ್ದು ಪಾದರಾಯನಪುರ ಸಂಪೂರ್ಣ ಖಾಕಿಮಯವಾಗಿದೆ.
ಗಲಭೆ ಪ್ರಕರಣ ಸಿಸಿಬಿಗೆ ವರ್ಗಾವಣೆ
ಬೆಂಗಳೂರು, ಏ.20 : ನಗರದ ಪಾದರಾಯನಪುರದಲ್ಲಿ ಭಾನುವಾರ ಕೊರೊನಾ ಶಂಕಿತರನ್ನು ಹೋಂ ಕ್ವಾರಂಟೈನ್ ಗೆ ಕರೆದುಕೊಂಡು ಹೋಗುತ್ತಿದ್ದ ಸರ್ಕಾರಿ ಸಿಬ್ಬಂದಿ ಹಾಗೂ ಆರೋಗ್ಯ ಇಲಾಖೆಯ ಕಾರ್ಯಕರ್ತೆಯರ ಮೇಲೆ ಸ್ಥಳೀಯರ ಹಲ್ಲೆ ನಡೆಸಿದ ಪ್ರಕರಣದ ತನಿಖೆಯನ್ನು ಸಿಸಿಬಿಗೆ ವರ್ಗಾವಣೆ ಮಾಡಲಾಗಿದೆ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅವರು ತಿಳಿಸಿದ್ದಾರೆ. ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಭಾನುವಾರ ಪಾದರಾಯನಪುರದ ಘಟನೆ ಕುರಿತಂತೆ ಸಮಗ್ರ ತನಿಖೆ ನಡೆಸಲು ಪ್ರಕರಣವನ್ನು ಸಿಸಿಬಿಗೆ ವರ್ಗಾವಣೆ ಮಾಡಲಾಗಿದ್ದು, ಸೌಮೇಂದು ಮುಖರ್ಜಿ ನೇತೃತ್ವದ ಸಿಸಿಬಿ ಪೊಲೀಸರ ತಂಡ, ತನಿಖೆಯನ್ನು ನಡೆಸಿ ವರದಿ ನೀಡಲಿದೆ ಎಂದರು. ಪಾದರಾಯನಪುರದ ಘಟನೆಗೆ ಸಂಬಂಧಿಸಿದಂತೆ ಶಾಸಕ ಜಮೀರ್ ಅಹ್ಮದ್ ಅವರ ಪಾತ್ರ ಏನು ಎಂಬುದು ಕುರಿತು ತನಿಖೆ ನಡೆಸಲಾಗುವುದು.ಇನ್ನು, ಅಗತ್ಯವಿದ್ದಲ್ಲಿ, ಜಮೀರ್ ಅವರನ್ನು ಕೂಡ ಕ್ವಾರಂಟೈನ್ ಗೆ ಒಳಪಡಿಸಲಾಗುವುದು ಎಂದರು.
ಮಕ್ಕಳಲ್ಲಿ ಆತ್ಮವಿಶ್ವಾಸ ಮೂಡಿಸಿದ ಸಚಿವರು
ಬೆಂಗಳೂರು, ಏ.20 : ಕೊರೊನಾ ವೈರಸ್ ಸೋಂಕು ನಿಯಂತ್ರಣಕ್ಕಾಗಿ ಲಾಕ್ ಡೌನ್ ಘೋಷಣೆಯಾಗಿ ಎಸ್.ಎಸ್.ಎಲ್.ಸಿ. ಪರೀಕ್ಷೆಗಳನ್ನು ಮುಂದೂಡಿರುವುದರಿಂದ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್, ರಾಜ್ಯದ ನಾನಾ ಭಾಗದ ಮಕ್ಕಳೊಂದಿಗೆ ಸ್ವತಃ ದೂರವಾಣಿ ಕರೆ ಮಾತನಾಡಿ ಮಕ್ಕಳಲ್ಲಿ ಆತ್ಮವಿಶ್ವಾಸ ಮೂಡಿಸಿದರು. ಸೋಮವಾರ ಬೆಳಗ್ಗೆ ತಮ್ಮ ಕಚೇರಿಯಿಂದ ಮಕ್ಕಳಿಗೆ ತಾವೇ ಫೋನ್ ಮೂಲಕ ಸಂಪರ್ಕಿಸಿ, ಮಕ್ಕಳ ಪರೀಕ್ಷಾ ಸಿದ್ಧತೆ, ಆರೋಗ್ಯ ಕುರಿತು ವಿಚಾರಿಸಿದರು. ಶಿಕ್ಷಣ ಇಲಾಖೆಯಿಂದ ದೂರದರ್ಶನ ಮತ್ತು ಆಕಾಶವಾಣಿ ಸೇರಿದಂತೆ ಹಲವು ಮಾಧ್ಯಮಗಳ ಮೂಲಕ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳ ಪೂರ್ವ ಸಿದ್ಧತೆಗೆ ಮಾರ್ಗದರ್ಶಿ ತರಗತಿಗಳನ್ನು ಇಷ್ಟರಲ್ಲಿಯೇ ಪ್ರಸಾರ ಮಾಡಲಾಗುವುದು. ಇದನ್ನು ಪ್ರತಿಯೊಬ್ಬರೂ ಅನುಸರಿಸಬೇಕು ಎಂದು ಸಲಹೆ ಮಾಡಿದರು.
ವಿಜಯ್ ಮಲ್ಯ ಸಲ್ಲಿಸಿದ್ದ ಅರ್ಜಿ ವಜಾ
ನವದೆಹಲಿ, ಏ.20 : ಭಾರತದ ಬ್ಯಾಂಕುಗಳಿಗೆ ಸುಮಾರು 9 ಸಾವಿರ ಕೋಟಿ ಸಾಲ ಮರುಪಾವತಿ ಮಾಡದ ಪ್ರಕರಣದಲ್ಲಿ ಭಾರತಕ್ಕೆ ಗಡಿಪಾರು ಆದೇಶ ಪ್ರಶ್ನಿಸಿ ಮದ್ಯ ಉದ್ಯಮಿ ವಿಜಯ್ ಮಲ್ಯ ಸಲ್ಲಿಸಿದ್ದ ಅರ್ಜಿಯನ್ನು ಬ್ರಿಟನ್ ಹೈಕೋರ್ಟ್ ಇಂದು ವಜಾಗೊಳಿಸಿದೆ. ಭಾರತಕ್ಕೆ ಗಡಿಪಾರು ಆದೇಶ ಪ್ರಶ್ನಿಸಿ 64 ವರ್ಷದ ಕಿಂಗ್ ಪಿಶರ್ ಮಾಲೀಕ ಈ ವರ್ಷ ಫೆಬ್ರವರಿ ತಿಂಗಳಲ್ಲಿ ಬ್ರಿಟನ್ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದರು. ಬ್ರಿಟನ್ ಹೈಕೋರ್ಟ್ ನ್ಯಾಯಾಧೀಶರಾದ ಸ್ಟೀಫನ್ ಇರ್ವಿನ್ ಮತ್ತು ಎಲಿಜಬೆತ್ ಲಾಯಿಂಗ್ ಅವರನ್ನೊಳಗೊಂಡ ದ್ವಿಸದಸ್ಯ ಪೀಠ ವಿಜಯ್ ಮಲ್ಯ ಸಲ್ಲಿಸಿದ ಅರ್ಜಿಯನ್ನು ವಜಾಗೊಳಿಸಿದೆ.
ವಿಮೆ ಪಾವತಿಗೆ ಸರ್ಕಾರ ನಿರ್ಧಾರ
ಬೆಂಗಳೂರು, ಏ.20 : ಕರ್ನಾಟಕ ರೈತ ಸುರಕ್ಷಾ ಫಸಲ್ ಭೀಮಾ ಯೋಜನೆಯಡಿ ಬ್ಯಾಂಕುಗಳಲ್ಲಿ ರೈತರ ಫಸಲುಗಳಿಗೆ ಮಾಡಿಸಲಾದ ವಿಮೆ ಪಾವತಿಗೆ ರಾಜ್ಯ ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ಸಚಿವ ಸಂಪುಟದಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ. ಕಳೆದ 2016 ಸಾಲಿನ ರಾಜ್ಯ ಸರ್ಕಾರದ ಪಾಲಿನ ವಿಮಾ ಮೊತ್ತ 18.59 ಕೋಟಿ ರೂ ಭರಿಸಲು ಸಮ್ಮತಿ ನೀಡಲಾಗಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ. ಮಾಧು ಸ್ವಾಮಿ ಮಾಹಿತಿ ನೀಡಿದರು. ನಿಗಮ ಹಾಗೂ ಮಂಡಳಿಗಳಲ್ಲಿ ನಿಯೋಜನೆಯ ಮೇರೆಗೆ ತೆರಳುತ್ತಿದ್ದ ವಿವಿಧ ಇಲಾಖೆಗಳ ಅಧಿಕಾರಿ ಹಾಗೂ ನೌಕರರು ತಮ್ಮನ್ನು ಅಲ್ಲಿಯೇ ಖಾಯಂಗೊಳಿಸುವಂತೆ ನ್ಯಾಯಾಲಯಗಳಲ್ಲಿ ಮೊಕದ್ದಮೆಗಳನ್ನು ದಾಖಲಿಸುವ ಪ್ರಕರಣಗಳಲ್ಲಿ ತೀವ್ರ ಏರಿಕೆ ಕಂಡು ಬಂದ ಹಿನ್ನೆಲೆಯಲ್ಲಿ ಕರ್ನಾಟಕ ನಾಗರಿಕ ಸೇವೆಗಳ ನಿಯಮಾವಳಿಗಳಿಗೆ ತಿದ್ದುಪಡಿ ತರಲು ಸಂಪುಟ ತೀರ್ಮಾನಿಸಿದೆ.
ಅಂತ್ಯಕ್ರಿಯೆ ವಿರೋಧಿಸಿದವರ ಬಂಧನ
ಚೆನ್ನೈ, ಏ.20 : ಕೋವಿಡ್-19 ಸೋಂಕಿನಿಂದ ಮೃತಪಟ್ಟ ವೈದ್ಯರ ಅಂತ್ಯಕ್ರಿಯೆಗೆ ವಿರೋಧಿಸಿದ 20 ಮಂದಿಯನ್ನು ತಮಿಳುನಾಡಿನ ಪೊಲೀಸರು ಬಂಧಿಸಿದ್ದಾರೆ. ಚೆನ್ನೈ ನಲ್ಲಿ ಈ ಘಟನೆ ನಡೆದಿದೆ. 55 ವರ್ಷದ ವೈದ್ಯರು ಖಾಸಗಿ ಆಸ್ಪತ್ರೆಯಲ್ಲಿ ಕೋವಿಡ್-19 ಸೋಂಕಿನಿಂದ ಮೃತಪಟ್ಟಿದ್ದರು. ಅಂತ್ಯಕ್ರಿಯೆ ನಡೆಸುವುದಕ್ಕೆ ಸ್ಥಳೀಯರು ವಿರೋಧ ವ್ಯಕ್ತಪಡಿಸಿದರು. ಅಷ್ಟೇ ಅಲ್ಲದೇ ಆರೋಗ್ಯ ಅಧಿಕಾರಿಗಳಿದ್ದ ಆಂಬುಲೆನ್ಸ್ ಮೇಲೆ ದಾಳಿಯನ್ನೂ ನಡೆಸಿದರು. ಸ್ಥಳಕ್ಕೆ ಧಾವಿಸಿದ ಪೊಲೀಸರು ಪರಿಸ್ಥಿತಿ ನಿಯಂತ್ರಿಸಿ ಪ್ರತಿಭಟನಾ ನಿರತ 20 ಜನರನ್ನು ಬಂಧಿಸಿದ ನಂತರ ಅಂತ್ಯಕ್ರಿಯೆ ನಡೆದಿದೆ. ನಗರದಲ್ಲಿ ಈ ರೀತಿ ನಡೆದಿರುವ 2 ನೇ ಘಟನೆ ಇದಾಗಿದೆ. ಕೆಲವು ದಿನಗಳ ಹಿಂದೆ ನೆಲ್ಲೂರಿನ ಖಾಸಗಿ ಆಸ್ಪತ್ರೆಯಲ್ಲಿ ವ್ಯಕ್ತಿಯೋರ್ವ ಕೋವಿಡ್-19 ರಿಂದ ಮೃತಪಟ್ಟಿದ್ದರು.