ಮಡಿಕೇರಿ, ಏ. 20: ಪಾಲಿಬೆಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನೆಲೆಸಿರುವ ಎರಡು ಕುಟುಂಬಗಳ ಸಂಕಷ್ಟ ಅರಿತು ಮಾಧ್ಯಮ ಸ್ಪಂದನ ಸದಸ್ಯ ಪುತ್ತಂ ಪ್ರದೀಪ್ ಗ್ರಾಮ ಪಂಚಾಯಿತಿ ಮೂಲಕ ಅಗತ್ಯ ವಸ್ತುಗಳ ಕಿಟ್ ಒದಗಿಸಿದ್ದಾರೆ.
ಗ್ರಾಪಂ ಅಧ್ಯಕ್ಷ ಪುಲಿಯಂಡ ಪಿ. ಬೋಪಣ್ಣ, ಪಿಡಿಒ ಕೆ.ಎಂ. ತಿಮ್ಮಯ್ಯ ಅವರ ಗಮನ ಸೆಳೆಯುವ ಮೂಲಕ ಕಿಟ್ ಒದಗಿಸಿದ್ದಾರೆ.
ತಂದೆ- ತಾಯಿ ಕಳೆದು ಕೊಂಡಿರುವ ವಿಶೇಷಚೇತನ ಯುವತಿಗೆ ನೀಡಲಾಗಿದೆ.
ವಯೋವೃದ್ಧ ತಾಯಿಯ ಲಾಲನೆ- ಪಾಲನೆಗಾಗಿ ಮಹಿಳೆ ಯೊಬ್ಬರಿಗೆ ಕಿಟ್ ಕೊಡಿಸಲಾಗಿದೆ.
* ಬಿಹಾರದ ಕಾರ್ಮಿಕನ ಸಂಕಷ್ಟಕ್ಕೆ ಮಾಧ್ಯಮ ಸ್ಪಂದನ ಸದಸ್ಯ ಎಸ್.ಎ.ಮುರಳೀಧರ್ ಸಕಾರಾತ್ಮಕ ವಾಗಿ ಸ್ಪಂದಿಸಿ ಗಮನ ಸೆಳೆದಿದ್ದಾರೆ.
ಕಳೆದ ನಾಲ್ಕು ವರ್ಷದಿಂದ ಸೋಮವಾರಪೇಟೆಯ ಕೆ.ಎಸ್.ಆರ್.ಟಿ.ಸಿ. ಬಸ್ ತಂಗುದಾಣದ ಶೌಚಾಲಯ ನಿರ್ವಹಣೆ ಮಾಡುತ್ತಿದ್ದಾರೆ.
ಗುತ್ತಿಗೆದಾರ ಶಂಭು ಮೂಲಕ ಆಹಾರ ಕಿಟ್ ಒದಗಿಸಿದರು. ಅಡುಗೆ ಮಾಡಲು ಗ್ಯಾಸ್ ಇಲ್ಲದ್ದರಿಂದ ಗ್ಯಾಸ್ ಸಿಲಿಂಡರ್, ಗ್ಯಾಸ್ ಸ್ಟೌವ್, ರೆಗ್ಯುಲೇಟರ್ ನೀಡುವುದರ ಮೂಲಕ ಉದಾರತೆ ಮೆರೆದಿದ್ದಾರೆ. ಮಾಧ್ಯಮ ಸ್ಪಂದನ ಸದಸ್ಯ ವಿಶ್ವ ಕುಂಬೂರು ಕೂಡ ಆಹಾರ ಕಿಟ್ ಒದಗಿಸಿ, ಸಹಕರಿಸಿದ್ದಾರೆ. ಗ್ಯಾಸ್ ಹೊತ್ತಿಸಿ ಅಡುಗೆ ಮಾಡುವಾಗ, ಬಿಹಾರದ ವ್ಯಕ್ತಿ ಕಣ್ಣೀರು ಸುರಿಸಲಾರಂಭಿಸಿದರು. ಸಂಕಷ್ಟಕ್ಕೆ ಸ್ಪಂದಿಸಿದವರಿಗೆ ಧನ್ಯವಾದ ಅರ್ಪಿಸಿದರು. ಮಂಡ್ಯ ಸ್ಟಾರ್ ಲೋಕಿ, ಪಾರ್ವತಿ ಗ್ಯಾಸ್ ಏಜೆನ್ಸಿಯ ಸತೀಶ್, ರವಿ ಇದ್ದರು.
* ಇಪ್ಪತ್ತೆರಡು ದಿನದ ಬಳಿಕ ಎರಡೂವರೆ ವಯಸ್ಸಿನ ಮಗು ತಂದೆ- ತಾಯಿ ಒಟ್ಟಿಗೆ ಸೇರಲು ಮಾಧ್ಯಮ ಸ್ಪಂದನ ಸದಸ್ಯರು ಸಾಥ್ ನೀಡಿದ್ದಾರೆ.
ಮಂಗಳೂರಿನ ಬಜ್ಪೆಯಲ್ಲಿ ನೆಲೆಸಿರುವ ದಂಪತಿಯ ಎರಡೂವರೆ ವರ್ಷ ಪ್ರಾಯದ ಪುತ್ರಿಯನ್ನು ನೀರುಕೊಲ್ಲಿಯಲ್ಲಿರುವ ಅಜ್ಜಿ ಮನೆಯಲ್ಲಿ ಬಿಡಲಾಗಿತ್ತು. ಆ ಬಳಿಕ ಲಾಕ್ ಡೌನ್ ಘೋಷಣೆಯಾಗಿದ್ದ ರಿಂದ ಮಗು ಕರೆಸಿಕೊಳ್ಳಲು ಸಾಧ್ಯವಾಗಿರಲಿಲ್ಲ.
ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್ ಅವರ ಸ್ಪಂದನದಿಂದ ಪಾಲಕರು ಸಂಪಾಜೆ ಗೇಟ್ವರೆಗೆ ಗುರುವಾರ ಬೈಕ್ನಲ್ಲಿ ಆಗಮಿಸಿದ್ದರು.
ಮಾಧ್ಯಮ ಸ್ಪಂದನ ಸದಸ್ಯರಾದ ನವೀನ್ ಡಿಸೋಜ, ಎನ್.ಸಿ. ಪ್ರಜ್ವಲ್, ವಿಜಯ್, ಮೋಹನ್ ಕಾರಿನಲ್ಲಿ ಮಗುವನ್ನು ಸಂಪಾಜೆ ಗೇಟ್ವರೆಗೆ ಕರೆದುಕೊಂಡು ಹೋದರು. ಅಪ್ಪ- ಅಮ್ಮನ ಮಡಿಲಿಗೆ ಮಗು ಸೇರಿಸಿದ ಸಮಾಧಾನದಲ್ಲಿ ಸ್ಪಂದನ ಸದಸ್ಯರು ಮಡಿಕೇರಿಗೆ ಮರಳಿದರು.
* ಕಡಲೆಕಾಯಿ ವ್ಯಾಪಾರ ಮಾಡಿ ತನ್ನ ಹನ್ನೆರಡು ವರ್ಷದ ವಿಶೇಷಚೇತನ ಮಗು ಸೇರಿದಂತೆ ಎರಡು ಮಕ್ಕಳು ಮತ್ತು ಪತ್ನಿಯೊಂದಿಗೆ ಜೀವನ ಮಾಡುತ್ತಿರುವ ವ್ಯಕ್ತಿಯ ಸಂಕಷ್ಟಕ್ಕೆ ಮಾಧ್ಯಮ ಸ್ಪಂದನ ಸಕಾರಾತ್ಮಕವಾಗಿ ಸ್ಪಂದಿಸಿದೆ.
ಸ್ಪಂದನ ಸದಸ್ಯರಾದ ಟಿ.ಎನ್. ಮಂಜುನಾಥ್, ಪಾರ್ಥ ಚಿಣ್ಣಪ್ಪ, ಹೇಮಂತ್ ಗುರುವಾರ ಖುದ್ದು ಮನೆಗೆ ತೆರಳಿ ಆಹಾರ ಕಿಟ್ ವಿತರಿಸಿದರು.