ವೀರಾಜಪೇಟೆ, ಏ. 20: ಕೊಡಗು ಕೇರಳದ ಸಂಪರ್ಕದ ಗಡಿ ಭಾಗದ ಕುಟ್ಟ, ಮಾಕುಟ್ಟ ಚೆಕ್ಪೋಸ್ಟ್ ಪೂರ್ಣವಾಗಿ ಬಂದ್ ಆಗಿ ಬಿಗಿ ಪೊಲೀಸ್ ಬಂದೋ ಬಸ್ತ್ ಇದ್ದರೂ ಇಲ್ಲಿನ ಐದು ಬೇಕರಿಗಳಲ್ಲಿ ಕೇರಳದ ಕಣ್ಣಾನೂರು, ಕೂತುಪರಂಬು ಹಾಗೂ ಇರಿಟ್ಟಿಯಿಂದ ತರಿಸಲಾದ ಚಿಪ್ಸ್, ಮಿಕ್ಸ್ಚರ್ ಪ್ಯಾಕೇಟ್ ಬಂಡಲ್ಗಳು ಪತ್ತೆಯಾಗಿವೆ.ವೀರಾಜಪೇಟೆ ಪಟ್ಟಣ ಪಂಚಾಯಿತಿ ಬೇಕರಿ ಪದಾರ್ಥಗಳನ್ನು ವಶ ಪಡಿಸಿಕೊಂಡು ಪರಿಶೀಲಿಸಿದಾಗ ಚಿಪ್ಸ್ ಪ್ಯಾಕೆಟ್ಗಳ ಮೇಲೆ ಸಿದ್ಧ ಪಡಿಸಿದ ತಾ 17-4-20 ಎಂದು ನಮೂದಿಸಲಾಗಿದೆ. ಇನ್ನು ಕೆ¯ವು ಪ್ಯಾಕೇಟ್ಗಳ ಮೇಲೆ ತಾ:20-4-20 ಎಂದು ಲೇಬಲ್ ಅಂಟಿಸಲಾಗಿದೆ. ಈ ಪ್ರಕಾರ ಎಲ್ಲ ಬೇಕರಿ ಪದಾರ್ಥಗಳು ನಕಲಿ ಎಂದು ಶಂಕಿಸಲಾಗಿದೆ. ಈ ಎಲ್ಲ ನಕಲಿ ಬೇಕರಿ ತಿಂಡಿ ತಿನಿಸು ಪದಾರ್ಥಗಳನ್ನು ಮೂರು ದಿನಗಳ ನಂತರ ಮಣ್ಣಿನಲ್ಲಿ ಹೂತು ನಾಶ ಪಡಿಸಲಾಗುವುದು ಎಂದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಶ್ರೀಧರ್ ತಿಳಿಸಿದ್ದಾರೆ.ಇಂದು ಬೆಳಿಗ್ಗೆ 10ಗಂಟೆಯ ಸಮಯದಲ್ಲಿ ಇಲ್ಲಿನ ಮುಖ್ಯ ರಸ್ತೆಯಲ್ಲಿರುವ ಎಕ್ಸ್ಪೋ ಬೇಕರಿ ಮುಂದೆ ಗೂಡ್ಸ್ ವಾಹನದಲ್ಲಿ ಬೇಕರಿಯ ತಿಂಡಿ ತಿನಿಸು ಪದಾರ್ಥ ಗಳನ್ನು ಬೇಕರಿ ಗೋಡೌನ್ಗೆ ರವಾನಿ ಸಲಾಗುತ್ತಿತ್ತು. ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಶ್ರೀಧರ್, ಆರೋಗ್ಯಾ ಧಿಕಾರಿ, ನಗರ ಪೊಲೀಸ್ ಸಬ್ಇನ್ ್ಸಪೆಕ್ಟರ್ ಮರಿಸ್ವಾಮಿ ಈ ಗೂಡ್ಸ್ ವಾಹನದಲ್ಲಿ ಬಂದ ಪದಾರ್ಥಗಳನ್ನು ಪರಿಶೀಲಿಸಿದಾಗ ನಕಲಿ ಮಾಲುಗಳು ಪತ್ತೆಯಾಗಿವೆ.
(ಮೊದಲ ಪುಟದಿಂದ) ಸುಳಿವನ್ನರಿತ ಅಧಿಕಾರಿಗಳು ಇಲ್ಲಿನ ಲಕ್ಷ್ಮಿ ಬೇಕರಿ, ಮೂರ್ನಾಡು ರಸ್ತೆಯ ವಿನಾಯಕ ಬೇಕರಿ, ಕಾವೇರಿ ಬೇಕರಿ, ಪ್ರಿನ್ಸ್ ಬೇಕರಿಗಳ ಮೇಲೆ ದಾಳಿ ನಡೆಸಿದಾಗ ಒಟ್ಟು 5 ಬೇಕರಿಗಳಿಂದ ರೂ. 80,000 ಮೌಲ್ಯದ ನಕಲಿ ಪದಾರ್ಥಗಳು ದೊರೆತಿವೆ. ಇದಲ್ಲದೆ ಆರ್ಜಿ ಗ್ರಾಮದಲ್ಲಿ ಈ ಪದಾರ್ಥಗಳನ್ನು ದಾಸ್ತಾನು ಮಾಡುವ ದಾಸ್ತಾನು ಮಳಿಗೆ ಇದ್ದು, ಅಧಿಕಾರಿಗಳು ಇದಕ್ಕೆ ಬೀಗ ಜಡಿದು ಅದರ ಕೀಯನ್ನು ಆರ್ಜಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವಶಕ್ಕೆ ನೀಡಿದ್ದಾರೆ.
ವೀರಾಜಪೇಟೆ ಪಟ್ಟಣ ಪಂಚಾಯಿತಿ ಕೊರೊನಾ ವೈರಸ್ನ ಲಾಕ್ಡೌನ್ ನಿರ್ಬಂಧವಿದ್ದರೂ ಪದಾರ್ಥಗಳನ್ನು ಕೇರಳದಿಂದ ಅಕ್ರಮವಾಗಿ ತರಿಸಿ ಮಾರಾಟ ಮಾಡಲಾಗುತ್ತಿರುವುದರಿಂದ ಪಟ್ಟಣ ಪಂಚಾಯಿತಿ 5 ಬೇಕರಿಗಳ ವಿರುದ್ಧ ಪ್ರಕರಣ ದಾಖಲಿಸಿದೆ.
ಕೊರೊನಾ ವೈರಸ್ ಲಾಕ್ಡೌನ್ನ ನಿರ್ಬಂಧದ ಉಲ್ಲಂಘನೆಯಡಿಯಲ್ಲೂ ಪ್ರಕರಣ ದಾಖಲಿಸಲು ಪೊಲೀಸ್ ಇಲಾಖೆ ಚಿಂತನೆ ನಡೆಸಿದೆ.