ಸೋಮವಾರಪೇಟೆ, ಏ.20: ಮಡಿಕೇರಿ ಸಮೀಪದ ಚೆಂಬು ಸಮೀಪದ ತಾವೂರು ಗ್ರಾಮದಲ್ಲಿ ಅಬಕಾರಿ ಇಲಾಖಾಧಿಕಾರಿಗಳು ಕಾರ್ಯಾಚರಣೆ ನಡೆಸಿ, ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಕಳ್ಳಭಟ್ಟಿ ಮತ್ತು ಪುಳಿಗಂಜಿಯನ್ನು ವಶಕ್ಕೆ ಪಡೆದು, ಆರೋಪಿಗಳಿಗೆ ನೋಟೀಸ್ ಜಾರಿ ಮಾಡಿದ್ದಾರೆ.
ತಾವೂರು ಗ್ರಾಮದ ಕೆ.ಪಿ. ಬೆಳ್ಳಿ ಹಾಗೂ ಕಟ್ಟಿಪಳ್ಳದ ಸಿ.ಪಿ. ವಿಜಯ ಎಂಬವರುಗಳು, ತಾವೂರಿನ ಬೆಳ್ಳಿ ಅವರಿಗೆ ಸೇರಿದ ಕೋಕೋ ಮತ್ತು ಅಡಿಕೆ ತೋಟದಲ್ಲಿ ಅಕ್ರಮವಾಗಿ ಕಳ್ಳಭಟ್ಟಿ ತಯಾರಿಸುತ್ತಿದ್ದ ಸಂದರ್ಭ ಕಾರ್ಯಾಚರಣೆ ನಡೆಸಿದ ಅಧಿಕಾರಿಗಳು, 120 ಲೀಟರ್ ಗೇರುಹಣ್ಣಿನ ಪುಳಿಗಂಜಿ, 10 ಲೀಟರ್ ಗೇರುಹಣ್ಣಿನ ಕಳ್ಳಭಟ್ಟಿಯನ್ನು ವಶಕ್ಕೆ ಪಡೆದು, ಪುಳಿಗಂಜಿ-ಕಳ್ಳಭಟ್ಟಿಯನ್ನು ಸ್ಥಳದಲ್ಲೇ ನಾಶಪಡಿಸಿ ಆರೋಪಿಗಳಿಗೆ ನೋಟೀಸ್ ಜಾರಿ ಮಾಡಿದ್ದಾರೆ.
ಕಾರ್ಯಾಚರಣೆಯಲ್ಲಿ ಅಬಕಾರಿ ಉಪ ನಿರೀಕ್ಷಕ ಜಿ.ಆರ್. ಅನಿಲ್, ಕೆ.ಎಸ್. ಅಮ್ಜದ್, ಎಚ್.ಎಸ್. ರಾಜು, ಲಕ್ಷ್ಮೀದೇವಿ ಭಾಗವಹಿಸಿದ್ದರು.
ಸಂಪಾಜೆ ಸಮೀಪದ ಮೇಲ್ಚೆಂಬು ಗ್ರಾಮದ ಪದ್ಮಯ್ಯ ಎಂಬವರು ಅಕ್ರಮವಾಗಿ ಕಳ್ಳಭಟ್ಟಿ ತಯಾರಿಸಲು ಸಂಗ್ರಹಿಸಿಟ್ಟಿದ್ದ ಸುಮಾರು 50 ಲೀಟರ್ ಗೇರುಹಣ್ಣಿನ ಪುಳಿಗಂಜಿಯನ್ನು ವಶಕ್ಕೆ ಪಡೆದು, ಆರೋಪಿಗೆ ನೋಟೀಸ್ ನೀಡಿದ್ದಾರೆ.
ಇದರೊಂದಿಗೆ ಬಾಲಂಬಿ ಮೇಲ್ಚೆಂಬು ಗ್ರಾಮದ ಹನಿಯಪ್ಪ ಎಂಬವರ ಮನೆಯೊಳಗಿದ್ದ 6 ಲೀಟರ್ ಗೇರುಹಣ್ಣಿನ ಕಳ್ಳಭಟ್ಟಿ ಮತ್ತು 40 ಲೀಟರ್ ಪುಳಿಗಂಜಿಯನ್ನು ವಶಕ್ಕೆ ಪಡೆದು ಆರೋಪಿಯ ವಿರುದ್ಧ ಅಬಕಾರಿ ಕಾಯ್ದೆಯನ್ವಯ ಮೊಕದ್ದಮೆ ದಾಖಲಿಸಿ, ನೋಟೀಸ್ ನೀಡಲಾಗಿದೆ.
ಕಾರ್ಯಾಚರಣೆಯಲ್ಲಿ ಮಡಿಕೇರಿ ಅಬಕಾರಿ ಸಬ್ ಇನ್ಸ್ಪೆಕ್ಟರ್ ಬಿ.ಎಸ್. ಲೋಕೇಶ್, ಸಿಬ್ಬಂದಿಗಳಾದ ಕೆ.ಪಿ. ಸರಿತ, ಮೋಹನ್ ಕುಮಾರ್ ಅವರುಗಳು ಭಾಗವಹಿಸಿದ್ದರು.