ಇಡೀ ವಿಶ್ವವನ್ನೇ ತಲ್ಲಣಗೊಳಿಸಿರುವ ಕೋವಿಡ್ 19 ಸೋಂಕು ಎಲ್ಲ ಉದ್ಯಮಗಳನ್ನೂ ಪಾತಾಳಕ್ಕೆ ತಳ್ಳಿದೆ. ದೇಶವು ಒಂದೆಡೆ ನೋಟು ನಿಷೇಧ, ಜಾಗತಿಕ ಆರ್ಥಿಕ ಹಿಂಜರಿತದಿಂದ ಚೇತರಿಸಿಕೊಳ್ಳುತಿದ್ದ ಈ ಸಮಯದಲ್ಲೇ ಕೋವಿಡ್ ಸೋಂಕು ಬರ ಸಿಡಿಲಿನಂತೆ ಮೇಲೆರಗಿ ಆಘಾತ ವನ್ನೇ ನೀಡಿದೆ. ದೇಶದ ಮಾಧ್ಯಮ ರಂಗವು ಕೂಡ ಈ ಹೊಡೆತದಿಂದ ತೀವ್ರ ತಲ್ಲಣಿಸಿದೆ. ಅನೇಕ ಪ್ರಮುಖ ಪತ್ರಿಕೆಗಳು ತಮ್ಮ ಉದ್ಯೋಗಿಗಳಿಗೆ ತಿಂಗಳ ಸಂಬಳ ಕಡಿತಗೊಳಿಸುವುದಾಗಿ ಹೇಳಿದ್ದರೆ ಅನೇಕ ಪತ್ರಿಕೆಗಳು ಉದ್ಯೋಗಿಗಳನ್ನು ಕೆಲಸದಿಂದಲೇ ತೆಗೆದು ಹಾಕಿವೆ.

ಖಾಸಗೀ ಮಾದ್ಯಮ ಸಂಸ್ಥೆಗಳಾದ ಟೈಮ್ಸ್ ಆಫ್ ಇಂಡಿಯಾ, ನ್ಯೂಸ್ ನೇಷನ್ ಮತ್ತು ದಿ ಕ್ವಿಂಟ್ ಅನೇಕ ಉದ್ಯೋಗಿಗಳನ್ನು ವಜಾಗೊಳಿಸಿವೆ. ಮುಂಬೈನಲ್ಲಿ ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಯಲ್ಲಿ ಕಳೆದ 24 ವರ್ಷಗಳಿಂದ ಭಾನುವಾರದ ಮ್ಯಾಗಜೀನ್ ಸೆಕ್ಷನ್‍ನಲ್ಲಿ ಕೆಲಸ ಮಾಡುತಿದ್ದ ನೋನ ವಾಲಿಯ ಅವರನ್ನು ಇಡೀ ತಂಡದೊಂದಿಗೆ ಆಡಳಿತ ಮಂಡಳಿ ವಜಾಗೊಳಿಸಿದೆ. ನ್ಯೂಸ್ ನೇಷನ್ ನೆಟ್ವರ್ಕ್ ತನ್ನ ಸಂಪೂರ್ಣ ಇಂಗ್ಲೀಷ್ ಡಿಜಿಟಲ್ ತಂಡವನ್ನು ವಜಾಗೊಳಿಸಿದೆ. ದಿ ಕ್ವಿಂಟ್ ತನ್ನ ಅರ್ಧದಷ್ಟು ಸಿಬ್ಬಂದಿಯನ್ನು ವೇತನವಿಲ್ಲದೆ ರಜೆ ಹೋಗಲು ಕೇಳಿದೆ ಎಂದು ವರದಿಯಾಗಿದೆ.

ಇಂದಿನ ಮಾದ್ಯಮ ಕ್ಷೇತ್ರದಲ್ಲಿ ದೃಶ್ಯ ಮಾದ್ಯಮಗಳ ಪ್ರಭಾವ ದಿನೇ ದಿನೇ ಹೆಚ್ಚುತಿದ್ದರೂ ಮುದ್ರಣ ಮಾಧ್ಯಮ ತನ್ನ ಛಾಪನ್ನು ಇಂದಿಗೂ ಉಳಿಸಿಕೊಂಡಿದೆ. ಇಂದು ದೃಶ್ಯ ಮಾಧÀ್ಯಮಗಳು ಜಾಹೀರಾತಿನ ಅಲ್ಪ ಸ್ವಲ್ಪ ಆದಾಯವನ್ನು ಗಳಿಸುತ್ತಿದ್ದರೂ ಬಹುತೇಕ ಇವು ನಷ್ಟದಲ್ಲೇ ನಡೆಯುತ್ತಿವೆ. ಮುದ್ರಣ ಮಾಧ್ಯಮವಂತೂ ಸಂಪೂರ್ಣ ನೆಲ ಕಚ್ಚಿದೆ. ಅನೇಕ ಪತ್ರಿಕೆಗಳು ತಮ್ಮ ಪ್ರಕಟಣೆಯನ್ನೇ ನಿಲ್ಲಿಸಿವೆ. ಲಾಕ್‍ಡೌನ್‍ನಿಂದಾಗಿ ಪತ್ರಿಕೆಗಳ ಗಾತ್ರ ಅರ್ಧಕ್ಕೆ ಕುಸಿದಿದೆ. ಪತ್ರಕರ್ತರು ಅತಂತ್ರ ಸ್ಥಿತಿಯಲ್ಲಿದ್ದಾರೆ.

ಮುದ್ರಣ ಮಾದ್ಯಮದ ಬಹು ದೊಡ್ಡ ಸವಾಲು ಎಂದರೆ ನ್ಯೂಸ್ ಪ್ರಿಂಟ್, ಇಂಕ್ ಹಾಗೂ ಇತರ ವಸ್ತುಗಳನ್ನು ಕೊಂಡು ತರುವುದು. ಅಂಗಡಿಗಳು ಮತ್ತು ಸಾಗಾಟವೂ ಬಂದ್ ಆಗಿರುವುದರಿಂದ ಪತ್ರಿಕೆಗಳು ಹೊರ ಬರಲು ಸಾಧ್ಯವಾಗುತ್ತಿಲ್ಲ. ಅಷ್ಟೇ ಅಲ್ಲ ಪತ್ರಿಕೆಗಳ ಜೀವಾಳವೇ ಆಗಿರುವ ಜಾಹೀರಾತು ಸಂಪೂರ್ಣ ನಿಂತೇ ಹೋಗಿದೆ. ಒಂದು 12 ಪುಟಗಳ ರಾಜ್ಯ ಮಟ್ಟದ ಪತ್ರಿಕೆಯೊಂದು ಪ್ರಿಂಟ್ ಆಗಬೇಕಾದರೆ 15 ರಿಂದ 18 ರೂಪಾಯಿಗಳ ವೆಚ್ಚ ಆಗುತ್ತದೆ, ಇದರ ಮಾರಾಟದ ಬೆಲೆ ಕೇವಲ 5-6 ರೂಪಾಯಿಗಳಾಗಿದೆ. ಜಾಹೀರಾತು ಇದ್ದರೆ ಮಾತ್ರ ಈ ಬೆಲೆಗೆ ನೀಡಲು ಸಾಧ್ಯ, ಜತೆಗೆ ಸರ್ಕಾರಿ ಜಾಹೀರಾತುಗಳೂ ಸಿಗುತ್ತಿಲ್ಲ.

ಇಂದು ಮುದ್ರಣ ಮಾದ್ಯಮದಲ್ಲಿ ಸರ್ಕಾರೀ ಜಾಹೀರಾತುಗಳ ಪಾಲು ಶೇಕಡಾ 5 ರಷ್ಟಿದೆ. ಆದರೆ ಈ ಜಾಹೀರಾತುಗಳಲ್ಲೂ 800 ರಿಂದ 900 ಕೋಟಿ ರೂಪಾಯಿಗಳಷ್ಟು ಹಣ ಮಾಧ್ಯಮ ಸಂಸ್ಥೆಗಳಿಗೆ ಬಾಕಿ ಇದ್ದು ಕೂಡಲೇ ಪಾವತಿ ಮಾಡುವಂತೆ ಕೋರಲಾಗಿದೆ ಎಂದು ದೇಶದ ಜಾಹೀರಾತು ಏಜೆನ್ಸಿಗಳ ಸಂಘದ ಅಧ್ಯಕ್ಷ ಭಾಸಿನ್ ಹೇಳಿದ್ದಾರೆ. ಮೊದಲೇ ಮಾಧ್ಯಮ ಕ್ಷೇತ್ರದಲ್ಲಿ ಉದ್ಯೋಗ ಕಡಿತ ಹೆಚ್ಚಾಗಿರುವ ಈ ಸಮಯದಲ್ಲೇ ಪತ್ರಿಕೆಗಳು ನಿಂತು ಹೋಗಿರುವುದರಿಂದ ನೂರಾರು ಪತ್ರಕರ್ತರು ಕೆಲಸ ಕಳೆದುಕೊಳ್ಳಲಿದ್ದಾರೆ. ಸರ್ಕಾರ ಮುಂದೆ ಲಾಕ್‍ಡೌನ್ ತೆರೆದರೂ ಹಿಂದಿನ ಸ್ಥಿತಿಗೆ ಬರಲು ಅನೇಕ ತಿಂಗಳುಗಳೇ ಬೇಕಾಗುತ್ತವೆ.

-ಕೋವರ್ ಕೊಲ್ಲಿ ಇಂದ್ರೇಶ್