ಮಡಿಕೇರಿ, ಏ. 16 : ಕೊರೊನಾ ವೈರಸ್ ತಡೆಗೆ ಮುನ್ನೆಚ್ಚರಿಕಾ ಕ್ರಮವಾಗಿ ದೇಶದಾದ್ಯಂತ ಲಾಕ್‍ಡೌನ್ ಆಗಿರುವ ಕಾರಣ 2020 ರ ಮಾರ್ಚ್, ಏಪ್ರಿಲ್ ಮತ್ತು ಮೇ ತಿಂಗಳಿನಲ್ಲಿ ಗ್ರಾಹಕರು ಕಟ್ಟಬೇಕಿರುವ ಅಂಚೆ ಜೀವ ವಿಮೆ ಹಾಗೂ ಗ್ರಾಮೀಣ ಅಂಚೆ ಜೀವ ವಿಮೆ ಕಂತನ್ನು ದಂಡ ರಹಿತವಾಗಿ 30ನೇ ಜೂನ್ 2020 ರವರೆಗೂ ಪಾವತಿಸಲು ಅಂಚೆ ಇಲಾಖೆ ಅವಕಾಶ ನೀಡಿದೆ.

ಅಂಚೆ ಕಚೇರಿಯ ಆರ್.ಡಿ. ಖಾತೆಗಳಲ್ಲಿ ಮಾರ್ಚ್ ಹಾಗೂ ಏಪ್ರಿಲ್ 2020ರ ಕಂತುಗಳನ್ನು ದಂಡ ರಹಿತವಾಗಿ ಕಂತು ಪಾವತಿಸಲು 30ನೇ ಜೂನ್ 2020 ರ ವರೆಗೂ ಅವಕಾಶ ಮಾಡಿಕೊಡಲಾಗಿದೆ. ಅಂಚೆ ಕಚೇರಿಯ ಸುಕನ್ಯ ಸಮೃದ್ಧಿ ಖಾತೆ (ಎಸ್‍ಎಸ್‍ಎ) ಹಾಗೂ ಸಾರ್ವಜನಿಕ ಭವಿಷ್ಯ ನಿಧಿ (ಪಿಪಿಎಫ್) ಖಾತೆಗೆ 2019-2020 ರಲ್ಲಿ ಕಡ್ಡಾಯ ಜಮಾ ಮಾಡಲು ಬಾಕಿ ಇರುವ ಗ್ರಾಹಕರು ತಮ್ಮ ಕಂತನ್ನು 30ನೇ ಜೂನ್ 2020 ರವರೆಗೂ ಪಾವತಿಸಲು ಅವಕಾಶ ಕಲ್ಪಿಸಲಾಗಿದೆ.

ಕೊಡಗು ಅಂಚೆ ವಿಭಾಗದ ಕೆಳಗೆ ಇರುವ ಪ್ರಧಾನ ಅಂಚೆ ಕಚೇರಿಯು, 24 ಉಪ ಅಂಚೆ ಕಚೇರಿಗಳು ಮತ್ತು 185 ಶಾಖಾ ಅಂಚೆ ಕಚೇರಿಗಳು ಅಗತ್ಯ ಸೇವೆಗಳನ್ನು ನೀಡುವಲ್ಲಿ ನಿರತವಾಗಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕಾಗಿ ವಿನಂತಿಸಿಕೊಳ್ಳಲಾಗಿದೆ. ಇದರ ಜೊತೆಗೆ ಆನ್‍ಲೈನ್ ಮೂಲಕ ಅಂಚೆ ಜೀವ ವಿಮೆ ಹಾಗೂ ಗ್ರಾಮೀಣ ಅಂಚೆ ಜೀವ ವಿಮೆ ಕಂತನ್ನು ಹಾಗೂ ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್ ಖಾತೆಯ ಮೊಬೈಲ್ ಬ್ಯಾಂಕಿಂಗ್ ಮೂಲಕ ಆರ್.ಡಿ., ಪಿಪಿಎಫ್ ಹಾಗೂ ಸುಕನ್ಯ ಸಮೃದ್ಧಿ ಖಾತೆಯ ಕಂತುಗಳನ್ನು ಗ್ರಾಹಕರು ಮನೆಯಿಂದಲೇ ಪಾವತಿಸಬಹುದಾಗಿದೆ ಎಂದು ಜಿಲ್ಲಾ ಅಂಚೆ ಕಚೇರಿ ಅಧೀಕ್ಷರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.