ನೋಟ್‍ಬ್ಯಾನ್ ಆದಾಗ ಬೊಬ್ಬೆ ಇಟ್ಟವರು ಹಲವರು. ಮೊಸಳೆ ಕಣ್ಣೀರಿಟ್ಟವರು, ಮೈ ಪರಚಿಕೊಂಡವರೂ ಅನೇಕರು. ಬಡವರು ಎ.ಟಿ.ಎಂ. ಮುಂದೆ ನಿಂತು ಕಷ್ಟಪಡುತ್ತಿದ್ದಾರೆ. ಆದ್ದರಿಂದ ನೋಟ್ ಬ್ಯಾನನ್ನು ಹಿಂದಕ್ಕೆ ಪಡೆದುಕೊಳ್ಳಿ ಎಂದು ಒತ್ತಾಯಿಸಿದವರು ಹಲವರು. ಬಡವರ ಬಳಿ ಬ್ಯಾಂಕ್ ಖಾತೆಯೇ ಇರಲಿಲ್ಲ. ಮೋದಿಜೀಯವರು ಯಾವಾಗ ಜನಧನ್ ಯೋಜನೆಯ ಮೂಲಕ ಬಡವರಿಗೆ ಖಾತೆ ತೆರೆಯಲು ಅನುವು ಮಾಡಿದರೊ ಆಗ ಬ್ಯಾಂಕಿಗೆ ಹೋಗುವ ಅವಕಾಶವಾಯಿತಷ್ಟೆ. ಇದನ್ನು ಏಕೆ ಹೇಳುತ್ತಿದ್ದೇವೆ ಅಂದರೆ ಜನರಿಗೆ ಸೃಷ್ಟಿಕರ್ತ ಹೇಗೆಲ್ಲಾ ಪಾಠ ಕಲಿಸುತ್ತಾನೆ ಎನ್ನುವುದಕ್ಕೆ ಇದು ಉದಾಹರಣೆ. ಆಗ ಸರಕಾರದ ವ್ಯವಸ್ಥೆಗೆ ಹೊಂದಿಕೊಳ್ಳದವರು ಈಗ ಪ್ರಕೃತಿಯ ಕರೆಗೆ ಹೊಂದಿಕೊಳ್ಳುತ್ತಿದ್ದಾರೆ.

ಕೊರೊನಾ ಇಡೀ ಮನುಕುಲಕ್ಕೆ ಬರಬಾರದಿತ್ತು. ಈ ಕೊರೊನಾದಿಂದ ಜನರು ಸರಕಾರದ ಮಾತಿಗೆ ಓಗೊಟ್ಟು ಮನೆಯಿಂದ ಹೊರಗೆ ಬಾರದೇ ಮನೆಯಲ್ಲೇ ಕೂರುವಂತೆ ಆಯಿತು. ಇದರಿಂದ ಮನೆ ಮಂದಿಯೊಂದಿಗೆ ಪ್ರೀತಿಯಿಂದ ಸಮಯ ಕಳೆಯುವಂತೆ ಆಯಿತು. ಇದಕ್ಕಿಂತ ಸಂತೋಷ ಬೇರೆ ಏನಿದೆ ? ಜನರು ಮನೆಯಿಂದ ಹೊರ ಬಾರದೆ ಇದ್ದುದರಿಂದ ಪೆಟ್ರೋಲ್, ಡೀಸೆಲ್ ಉಳಿತಾಯವಾಯಿತು. ಶಬ್ದ ಮಾಲಿನ್ಯ ಕಮ್ಮಿಯಾ ಯಿತು. ಪರಿಸರದಲ್ಲಿ ಮೇಲೆ ಕೆಟ್ಟ ಪರಿಣಾಮ ಬೀರುವಂತಹ ವಾಹನದ ಹೊಗೆ ಕಮ್ಮಿಯಾಯಿತು. ಇದರಿಂದ ವಾಯು ಮಾಲಿನ್ಯ ಕಮ್ಮಿಯಾಯಿತು. ದೆಹಲಿಯಂತಹ ನಗರ ವಾಯು ಮಾಲಿನ್ಯದಿಂದ ನಲುಗಿ ಹೋಗಿತ್ತು. ಈಗ ವಾಹನ ಸಂಚಾರ ಕಡಿಮೆಯಾಗಿದ್ದರಿಂದ ವಾಯು ಮಾಲಿನ್ಯ ಕಡಿಮೆಯಾಗಿದೆ. ಹಾಗೇ ಬೆಂಗಳೂರು, ಚೆನ್ನೈ, ಕೊಲ್ಕತ್ತಾ, ಮುಂಬೈಯಂಥ ಮಹಾನಗರ ಸ್ತಬ್ಧಗೊಂಡಿರುವುದರಿಂದ ವಾಯು ಮಾಲಿನ್ಯ, ಶಬ್ದ ಮಾಲಿನ್ಯ ಕಮ್ಮಿಯಾಯಿತು. ಎಂದೂ ಅಡುಗೆ ಮನೆಗೆ ಕಾಲು ಇಡದೇ ಹೊಟೇಲ್, ಮೆಸ್‍ನಲ್ಲಿ ಊಟ ಮಾಡುತ್ತಿದ್ದವರು ಈಗ ತಾವೇ ತಯಾರಿಸಿ ಕೊಂಡು ಊಟ ಮಾಡುತ್ತಿದ್ದಾರೆ. ಲಾಂಡ್ರಿಯಲ್ಲಿ ಬಟ್ಟೆಯನ್ನು ಕೊಡುತ್ತಿದ್ದವರು ತಾವೇ ಬಟ್ಟೆಯನ್ನು ಒಗೆದುಕೊಳ್ಳುತ್ತಿದ್ದಾರೆ. ಹೀಗೆ ಕಾಲವು ಎಲ್ಲರಿಗೆ ಪಾಠ ಕಲಿಸುತ್ತಿದೆ. ಬಾರ್ ಮತ್ತು ಪಬ್‍ನಲ್ಲಿ ಕಾಲ ಕಳೆಯುತ್ತಿದ್ದವರು ಹೆಂಡದ ದಾಸರಾಗಿದ್ದವರು ಈ ಕೊರೊನಾ ಎಂಬ ಪಾಠದಿಂದ ದುಶ್ಚಟದಿಂದ ದೂರವಾಗುತ್ತಿದ್ದಾರೆ. ಒಮ್ಮೆ ಈ ಮಹಾಮಾರಿಯಿಂದ ಪಾರಾದರೆ ಸಾಕು ಅಂತ ಅನ್ನಿಸಿಬಿಟ್ಟಿದೆ. ಇದರಿಂದ ದೇಶಕ್ಕೆ ಮತ್ತು ಪ್ರಪಂಚಕ್ಕೆ ತುಂಬಲಾರದ ನಷ್ಟವಾಗಿದೆ. ಕೊರೊನಾ ದೂರವಾಗಲು ಎಲ್ಲರೂ ಆ ಭಗವಂತನನ್ನು ನಿತ್ಯವೂ ಪ್ರಾರ್ಥಿಸೋಣ.

- ಪಾಲೇಕಂಡ ರತ್ನ ಕರುಂಬಯ್ಯ, ಅರಮೇರಿ.