ಕರೆದಾಗ ತೆರಳ ಬೇಕಾದಲ್ಲಿಗೆ ಬರುವ ತ್ರಿಚಕ್ರ ವಾಹನಗಳು ಮನೆ ಸೇರಿದೆ...... ನಗುನಗುತ್ತಾ ಪಯಣಿ ಗರಿಗೆ ಸ್ಪಂದನೆ ನೀಡುತ್ತಿದ್ದ ಚಾಲಕರ ಮನ ಮುರುಟಿ ಹೋಗಿದೆ. ಲಾಕ್‍ಡೌನ್ ಕೊಡಗಿನ ಆಟೋ ಚಾಲಕರ ಜೀವನದಲ್ಲಿಯೂ ಭಾರೀ ಪರಿಣಾಮ ಬೀರಿದೆ. ಕೊಡಗಿನಂಥ ಗುಡ್ಡಗಾಡು ಜಿಲ್ಲೆಯ ಮೂಲೆ-ಮೂಲೆಗಳಲ್ಲಿಯೂ ಕಾರ್ಯನಿರ್ವಹಿಸುತ್ತಿದ್ದ ಸಾವಿರಾರು ಆಟೋ ಚಾಲಕರು ಮತ್ತೊಂದು ಆರ್ಥಿಕ ಹೊಡೆತದಿಂದ ಕಂಗಾಲಾಗಿದ್ದಾರೆ. ಜಿಲ್ಲಾ ಕೇಂದ್ರ ಮಡಿಕೇರಿಯಿಂದ ಮೊದಲ್ಗೊಂಡು ಗಡಿ ಪ್ರದೇಶಗಳಾದ ಕುಟ್ಟ, ಕರಿಕೆ, ಕೊಪ್ಪ, ಕೊಡ್ಲಿಪೇಟೆ ಗಳಲ್ಲಿಯೂ ತಿಚಕ್ರ ವಾಹನ ಸೇವೆ ನೀಡುತ್ತಿದ್ದ ಚಾಲಕ ವೃಂದ ಈಗ ಭವಿಷ್ಯದ ಚಿಂತೆಯಲ್ಲಿ ಕಂಗಾಲಾಗಿದ್ದಾರೆ.

ಆಟೋ ಚಾಲಕರ ವ್ಯಥೆಯ ಕಥೆಯತ್ತಲಿನ ನೋಟವಿದು.

ಕೊಡಗಿನಲ್ಲಿ ಸಾರ್ವಜನಿಕರ ಸಂಚಾರದ ವಿಚಾರಕ್ಕೆ ಬಂದಾಗ ಬಹುಪಾಲು ಆಟೋಗಳದ್ದೇ ದರ್ಬಾರ್. ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ 900 ಆಟೋಗಳಿದ್ದರೆ, ಕುಶಾಲನಗರ ವ್ಯಾಪ್ತಿಯಲ್ಲಿ 1200 ಆಟೋಗಳಿವೆ. ವೀರಾಜಪೇಟೆಯಲ್ಲಿ 900, ಸೋಮವಾರಪೇಟೆಯಲ್ಲಿ 800 ಆಟೋಗಳಿವೆ. ಜಿಲ್ಲೆಯ ಎಲ್ಲಾ ಭಾಗದ ಆಟೋಗಳನ್ನು ಲೆಕ್ಕಹಾಕಿದರೂ 9230 ಆಟೋ ಗಳಿವೆ. ಈ ತ್ರಿಚಕ್ರ ವಾಹನಗಳನ್ನೇ ಜೀವನಕ್ಕಾಗಿ ಅವಲಂಭಿಸಿ ಸರಿಸುಮಾರು 10 ಸಾವಿರ ಚಾಲಕರಿದ್ದಾರೆ. ಇವರನ್ನು ಅವಲಂಭಿಸಿ 50-60 ಸಾವಿರ ಕುಟುಂಬ ಸದಸ್ಯರಿದ್ದಾರೆ. ಪ್ರವಾಸಿಗರನ್ನೇ ನೆಚ್ಚಿಕೊಂಡಿದ್ದ ಆಟೋ ಚಾಲಕರ ಪಾಲಿಗೆ 2018 ರ ಮಹಾಮಳೆಯಿಂದ ಸಂಕಷ್ಟದ ದಿನಗಳು ಶುರುವಾಯಿತು. 2019 ರಲ್ಲಿಯೂ ಪ್ರವಾಹದಿಂದಾಗಿ ಸಮಸ್ಯೆ ಮುಂದುವರೆಯಿತು. ಕೊಡಗಿನಂಥ ಮಳೆನಾಡು ಜಿಲ್ಲೆಯಲ್ಲಿ ವರ್ಷದ 5-6 ತಿಂಗಳು ಜನರ ಸಂಚಾರ ಕಡಿಮೆಯಾಗಿ ಆಟೋಗಳ ವರಮಾನವೂ ಅಷ್ಟಕ್ಕಷ್ಟೆ. ಹೀಗಾಗಿ ಪ್ರವಾಸಿಗರು ಹೆಚ್ಚಾಗಿ ಬರುವ ಅಕ್ಟೋಬರ್‍ನಿಂದ ಡಿಸೆಂಬರ್, ಮಾರ್ಚ್ ಅಂತ್ಯದಿಂದ ಮೇ ಅಂತ್ಯದವರೆಗೆ ಆಟೋ ಚಾಲಕರು ಒಂದಿಷ್ಟು ಸಂಪಾದನೆ ಮಾಡುತ್ತಿದ್ದರು. ಹೀಗೆ ಮಾಡಿದ ಸಂಪಾದನೆಯನ್ನು ಮಳೆಗಾಲದಲ್ಲಿ ಉಂಟಾಗುತ್ತಿದ್ದ ನಷ್ಟಕ್ಕೆ ಹೊಂದಿಸಿಕೊಳ್ಳಲಾಗುತ್ತಿತ್ತು. ಎಲ್ಲವೂ ಸರಿಹೋಗುತ್ತಿದೆ ಯೇನೋ ಎಂಬಂಥ ಸ್ಥಿತಿಯಲ್ಲಿ ಇದೀಗ ಕೊರೊನಾ ಪರಿಣಾಮ ಲಾಕ್‍ಡೌನ್ ಸಮಸ್ಯೆ ಎದುರಾಗಿದೆ. ಆಟೋಗಳು 40 ದಿನಗಳ ಕಾಲ ರಸ್ತೆಗಿಳಿಯದಾಗಿದೆ.

ದಿನದ ದುಡಿಮೆಯನ್ನೇ ಸಂಸಾರದ ಬಂಡಿ ಸಾಗಿಸಲು ನಂಬಿದ್ದ ಚಾಲಕರ ಮನದಲ್ಲಿ ಕಳವಳ ತೀವ್ರವಾಗಿದೆ. ಆಟೋಕೊಳ್ಳಲು ಮಾಡಿದ್ದ ಸಾಲ ಮತ್ತು ಬಡ್ಡಿಯನ್ನೂ ತೀರಿಸಬೇಕಾದ ಚಿಂತೆ ಸಾಲಗಾರರಾಗಿರುವ ಶೇ.95 ರಷ್ಟು ಚಾಲಕರನ್ನು ಕಾಡುತ್ತಿದೆ. ಸರ್ಕಾರವೇನೋ 10 ಕೆ.ಜಿ.ಅಕ್ಕಿ, 1 ಕೆ.ಜಿ.ಗೋಧಿ ಯನ್ನು ನೀಡುತ್ತಿದೆ. ಆದರೆ ಒಂದು ಸಂಸಾರಕ್ಕೆ ಈ ಪಡಿತರ ಸಾಕಾಗುತ್ತ ದೆಯೇ ಅಕ್ಕಿ-ಗೋಧಿಯಿಂದ ದಿನದ ಊಟ ತಯಾರಿಸಲು ಸಾದ್ಯವೇ. ಮನೆಗೆ ಬೇಕಾದ ಉಪ್ಪು, ಖಾರಕ್ಕೂ ದುಡ್ಡಿಲ್ಲ. ಸಿಲಿಂಡರ್‍ಕೊಳ್ಳಲೂ ಸಮಸ್ಯೆಯಾಗಿದೆ ಎಂದು ಆಟೋ ಚಾಲಕರು ನೋವಿನಿಂದ ಹೇಳಿಕೊಳ್ಳುತ್ತಿದ್ದಾರೆ. ಅನೇಕರಿಗೆ ಪಡಿತರ ಕಿಟ್ ನೀಡಿದ ಜನಪ್ರತಿನಿಧಿ ಗಳು ಆಟೋ ಚಾಲಕರನ್ನೂ ರೇಷನ್ ಕಿಟ್‍ಗಾಗಿ ಪರಿಗಣಿಸ ಬೇಕು. ಸಂಘ-ಸಂಸ್ಥೆಗಳೂ ತಮ್ಮೂರಿನ ವ್ಯಾಪ್ತಿಯಲ್ಲಿ ಸಂಚಾರ ಸೇವೆ ನೀಡುತ್ತಿದ್ದ ಆಟೋಚಾಲಕರಿಗೆ ನೆರವಿನ ಹಸ್ತ ಚಾಚಬೇಕೆಂದು ಜಿಲ್ಲಾ ಆಟೋಚಾಲಕರ ಸಂಘದ ಅಧ್ಯಕ್ಷ ಡಿ. ಎಚ್. ಮೇದಪ್ಪ ಕೋರಿ ಕೊಳ್ಳುತ್ತಾರೆ. ಶಾಲೆಗಳಿಗೆ ಮಕ್ಕಳನ್ನು ಕರೆದೊಯ್ಯುತ್ತಿದ್ದ ನೂರಾರು ಆಟೋಗಳ ಚಾಲಕರಿಗೆ ಪೋಷಕರು ಇನ್ನೂ ಮಾರ್ಚ್ ತಿಂಗಳ ಹಣ ನೀಡಿಲ್ಲ. ಈ ಹಣ ದೊರಕಿದರೆ ಒಂದಿಷ್ಟ್ಟು ನಿಟ್ಟುಸಿರು ಬಿಡುವಂತಾಗುತ್ತದೆ. ಫೈನಾನ್ಸ್ ಸಂಸ್ಥೆಗಳಲ್ಲಿ ಸಾಲ ಮಾಡಿ ಆಟೋ ಖರೀದಿಸಿದವರಿಗೆ ಬಡ್ಡಿ ಕಟ್ಟಿ ಎಂಬ ಕರೆ ಬರುತ್ತಿದೆ. ಸರ್ಕಾರದ ಸೂಚನೆ ಪಾಲಿಸಿ ಆಟೋಚಾಲಕರನ್ನು ಬಡ್ಡಿ ಕಟ್ಟುವಂತೆ ಪೀಡಿಸಬೇಡಿ ಎಂದೂ ಮೇದಪ್ಪ ಸಾಲಗಾರರ ಪರವಾಗಿ ಮನವಿ ಮಾಡಿದರು. ದೆಹಲಿ ಸರ್ಕಾರ ಲಾಕ್‍ಡೌನ್ ಸಂದರ್ಭದಲ್ಲಿ ಆಟೋಚಾಲಕರ ಸಂಕಷ್ಟ ಗಮನಿಸಿ ತಿಂಗಳಿಗೆ 5 ಸಾವಿರ, ಕೇರಳ ಸರ್ಕಾರ 3500ರೂ. ನೆರವು ನೀಡಿದೆ. ಅದೇ ರೀತಿ ಕರ್ನಾಟಕ ಸರ್ಕಾರವೂ ಆಟೋ ಚಾಲಕರ ನೆರವಿಗೆ ಮುಂದಾಗಿ ಚಾಲಕರನ್ನು ರಕ್ಷಿಸಬೇಕೆಂಬುದೂ ಚಾಲಕರ ಸಂಘದ ಆಗ್ರಹವಾಗಿದೆ. ಪ್ರತೀ ವರ್ಷ ಸರ್ಕಾರಕ್ಕೆ ಆಟೋಚಾಲಕರು ತೆರಿಗೆ ರೂಪದಲ್ಲಿ ಏನಿಲ್ಲವೆಂದರೂ 10 ಸಾವಿರ ರೂ. ತೆರಿಗೆ ಕಟ್ಟುತ್ತಾರೆ. ಈಗ ಸರ್ಕಾರ ನಮ್ಮ ನೆರವಿಗೆ ಬರಲೇಬೇಕು ಎಂಬುದು ಇವರ ಒತ್ತಾಯ. ಕೊಡಗಿನ ಆಟೋ ಚಾಲಕರು ಸ್ವಾಭಿಮಾನಿಗಳು ಸಾರ್, ಹಬ್ಬಕ್ಕೂ ಹೊಸ ಬಟ್ಟೆ ಖರೀದಿಸಲು ಬೇರೆಯವರಂತೆ ಆಟೋ ಚಾಲಕರ ಬಳಿ ದುಡ್ಡಿರೋಲ್ಲ. ಹೀಗಿದ್ದರೂ ಏನೂ ಆಗದವರಂತೆ ನಗುನಗುತ್ತಾ ಜನರಿಗೆ ಆಟೋ ಸೇವೆ ನೀಡುತ್ತಿರುತ್ತಾರೆ. ಮನಸ್ಸಿನೊಳಗೆ ನೋವಿನ ಬಂಡಿ ಓಡುತ್ತಲೇ ಇರುತ್ತದೆ ಎಂದು ಹೇಳಿದ ಮೇದಪ್ಪ, ಮಳೆಗಾಲದಲ್ಲಿ ಸಾವಿರಾರು ರೂ. ವೆಚ್ಚ ಮಾಡಿ ಟಾರ್ಪಲ್, ಸೈಡ್‍ಸ್ಕ್ರೀನ್ ಆಟೋಕ್ಕೆ ಹಾಕಿಸಲಾಗುತ್ತದೆ ಇದು ಕೇವಲ 3 ತಿಂಗಳು ಮಾತ್ರ ಬಾಳಿಕೆ ಬರುತ್ತೆ. ಗುಡ್ಡಗಾಡು ಪ್ರದೇಶವಾಗಿರುವುದರಿಂದ ಪೆಟ್ರೋಲ್ ಕೂಡ ಜಾಸ್ತಿಯೇ ಬೇಕು. ಆಟೋಗಳಿಗೆ ಸ್ಪೇರ್ ಪಾಟ್ರ್ಸ್‍ಗಳಿಗೂ ರೇಟ್ ಹೆಚ್ಚುತ್ತಲೇ ಇದೆ. ವಾರವಾರಕ್ಕೂ ಹೊಸ ಆಟೋಗಳು ರಸ್ತೆಗಿಳಿಯುತ್ತಲೇ ಇದೆ. ಈ ಎಲ್ಲಾ ಸಮಸ್ಯೆಗಳ ನಡುವೇ ಲಾಕ್‍ಡೌನ್ ಹೊಡೆತದಿಂದ ನಮ್ಮ ಸ್ಥಿತಿ ಚಿಂತಾಜನಕವಾಗಿದೆ ಎಂದು ನೋವು ಹೇಳಿಕೊಂಡರು ಚಾಲಕರು.

ಕೊನೇ ಹನಿ

ಮನೆಗೊಂದು ಮರ ಎಂಬ ಅರಣ್ಯ ಇಲಾಖೆ ಫೋಷಣೆಯಂತೆ ಈಗ ಮನೆಗೊಂದು ವಾಹನ ಎಂಬಂತಾಗಿದೆ. ಪ್ರತೀ ಮನೆಯಲ್ಲಿಯೂ ಬೈಕ್, ಸ್ಕೂಟಿಯಿದೆ. ಮೊದಲೆಲ್ಲಾ ಗ್ಯಾಸ್ ತೆಗೆದುಕೊಂಡು ಬರಲೂ ಆಟೋ ಬೇಕಿತ್ತು. ಈಗ ದ್ವಿಚಕ್ರ ವಾಹನಗಳೇ ಬಳಕೆಯಾಗುತ್ತಿದೆ. ಹೊಸ ಚಾಲಕರೂ ಆಟೋ ಓಡಿಸುವುದರಲ್ಲಿ ಮಜಾ ಇದೆ ಎಂಬ ಭ್ರಮೆಯಿಂದ ಆಟೋ ರಸ್ತೆ ಗಿಳಿಸುತ್ತಿದ್ದಾರೆ. ರಸ್ತೆಗಿಳಿದ ಮೇಲೆ ಆಟೋದ ಕಷ್ಟ ಗೊತ್ತಾಗುತ್ತಿದೆ. ಲಾಕ್‍ಡೌನ್ ನಿರ್ಧಾರ ಖಂಡಿತಾ ಸರಿಯಿದೆ. ಆದರೆ ಜನರನ್ನೇ ಅವಲಂಭಿಸಿ ರುವ ಆಟೋಚಾಲಕರ ಜೀವನೋಪಾಯಕ್ಕೂ ಸರ್ಕಾರ ಮಾರ್ಗೋಪಾಯ ಕಂಡುಹುಡುಕಬೇಕಾಗಿದೆ ಎಂಬ ಮೇದಪ್ಪ ಸಲಹೆ ಆಳುವವರ ಮನಸ್ಸು ಮುಟ್ಟಬೇಕಾಗಿದೆ. ವಾರದ ಮೂರು ದಿನ ಎಲ್ಲರೂ ಮನೆಯಿಂದ ಹೊರ ಹೋಗಿ ದಿನಸಿ, ತರಕಾರಿ, ಮಾಂಸ ತರುತ್ತಾರೆ. ನಾವ್ ಎಲ್ಲಿಗೆ ಹೋಗೋಣ.. ನಮ್ಮ ಹತ್ರ ಖರೀದಿಸಲು ದುಡ್ಡೆಲ್ಲಿದೆ ? ರಾಜರಂತೆ ಆಟೋ ಓಡಿಸಿ ಮನೆಗೆ ಬರುತ್ತಿದ್ದವರು ಈಗ ಮನೆ ಸೇರಿ ಪಾಡು ಪಡುತ್ತಿದ್ದೇವೆ ಎಂದ ಆಟೋ ಚಾಲಕನ ನೋವಿಗೆ ಅರ್ಥವಿದೆ.

ಆಟೋ ಚಾಲಕರ ಕಷ್ಟಕ್ಕೆ ಸ್ಪಂದಿಸಿ...ಏನಿಲ್ಲ ಎಂದರೂ ನೀವು ಸಾಮಾನ್ಯವಾಗಿ ಪ್ರಯಾಣಿಸುವ ಆಟೋ ಚಾಲಕನಿಗೆ ಕರೆ ಮಾಡಿ ಕ್ಷೇಮ ವಿಚಾರಿಸಿ.