ಮದ್ಯ, ಗುಟ್ಖಾ, ತಂಬಾಕು ನಿಷೇಧ
ನವದೆಹಲಿ, ಏ. 16: ಕೊರೊನಾ ವೈರಸ್ ಹೊಡೆತಕ್ಕೆ ಮಹಾನಗರಗಳೇ ಪತರಗುಟ್ಟಿ ಹೋಗಿವೆ. ಈ ಆತಂಕದ ಪರಿಸ್ಥಿತಿಯಲ್ಲೇ ದೇಶದ 325 ಜಿಲ್ಲೆಗಳಲ್ಲಿ ಒಂದು ಪ್ರಕರಣವೂ ಪತ್ತೆಯಾಗಿಲ್ಲ ಎನ್ನುವುದು ಗಮನಾರ್ಹ. ರಾಜ್ಯಗಳಿಗೆ ಕೇಂದ್ರ ಗೃಹ ಸಚಿವಾಲಯ ಸೂಚಿಸಿರುವ ಆದೇಶಗಳೆಂದರೆ, ಲಾಕ್‍ಡೌನ್ ನಿಯಮಗಳ ಉಲ್ಲಂಘನೆಗೆ ಕಾರಣರಾದ ಅಧಿಕಾರಿಗಳ ವಿರುದ್ಧ ವಿಪತ್ತು ನಿರ್ವಹಣಾ ಕಾಯ್ದೆಯಡಿ ಗೃಹ ಸಚಿವಾಲಯ ಕ್ರಮ ಕೈಗೊಳ್ಳುತ್ತದೆ. ಐದು ಅಥವಾ ಹೆಚ್ಚಿನ ಜನರು ಒಂದೇ ಸ್ಥಳದಲ್ಲಿ ಒಟ್ಟುಗೂಡಬಾರದು; ಸಾರ್ವಜನಿಕ ಸ್ಥಳಗಳು ಮತ್ತು ಕೆಲಸದ ಸ್ಥಳಗಳಲ್ಲಿ ಉಗುಳುವುದಕ್ಕೆ ನಿರ್ಬಂಧ. ಕೊರೊನಾ ಲಾಕ್‍ಡೌನ್ ಪರಿಣಾಮಕಾರಿಯಾಗಿ ಜಾರಿಗೆ ಬರುವಂತೆ ನೋಡಿಕೊಳ್ಳಲು ಮದ್ಯ, ಗುಟ್ಖಾ, ತಂಬಾಕು ಮಾರಾಟವನ್ನು ಕಟ್ಟುನಿಟ್ಟಾಗಿ ನಿಷೇಧಿಸಬೇಕು. ವಯಸ್ಸಾದ, ಅನಾರೋಗ್ಯ ಮತ್ತು ಚಿಕ್ಕ ಮಕ್ಕಳಿರುವವರನ್ನು ಮನೆಯಿಂದ ಕೆಲಸ ಮಾಡಲು ಪ್ರೋತ್ಸಾಹಿಸಬೇಕು. ಸಾರ್ವಜನಿಕ ಸ್ಥಳಗಳು ಮತ್ತು ಕೆಲಸದ ಸ್ಥಳಗಳಲ್ಲಿ ಕಡ್ಡಾಯವಾಗಿ ಮಾಸ್ಕ್‍ಗಳನ್ನು ಧರಿಸುವುದು ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಕೆಲವು ನಿಯಮಗಳನ್ನು ಜಾರಿಗೊಳಿಸಬೇಕು. ಕೆಲಸದ ಸ್ಥಳಗಳಲ್ಲಿ ತಾಪಮಾನ ತಪಾಸಣೆ ಮತ್ತು ಸ್ಯಾನಿಟೈಸರ್ಗಳ ಬಳಕೆ ಕಡ್ಡಾಯ. ವಲಸೆ ಕಾರ್ಮಿಕರು ಮತ್ತು ಅತಂತ್ರ ಸ್ಥಿತಿಯಲ್ಲಿರುವರ ಸುರಕ್ಷತೆ, ಆಶ್ರಯ ಮತ್ತು ಆಹಾರ ಸುರಕ್ಷತೆಗೆ ಸಾಕಷ್ಟು ವ್ಯವಸ್ಥೆಗಳನ್ನು ಖಾತ್ರಿಪಡಿಸಿಕೊಳ್ಳಲು ಕ್ಯಾಬಿನೆಟ್ ಕಾರ್ಯದರ್ಶಿ ಎಲ್ಲಾ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳನ್ನು ಪ್ರಶ್ನಿಸಿದರು. ವಲಸೆ ಕಾರ್ಮಿಕರಿಗೆ ವ್ಯವಸ್ಥೆಗಳನ್ನು ಕಲ್ಪಿಸಲು ಜಿಲ್ಲಾಧಿಕಾರಿಗಳು ನೋಡಲ್ ಅಧಿಕಾರಿಗಳನ್ನು ನೇಮಿಸಬೇಕು. ಜನ ಗುಂಪು ಸೇರುವುದು ಮತ್ತು ಅಂಗಡಿಗಳು ಮತ್ತು ಸಂಸ್ಥೆಗಳನ್ನು ತೆರೆಯುವುದು ಸೇರಿದಂತೆ ಲಾಕ್‍ಡೌನ್ ಮಾರ್ಗಸೂಚಿಗಳ ಉಲ್ಲಂಘನೆಯ ಘಟನೆಗಳ ಬಗ್ಗೆ ಪ್ರತಿದಿನವೂ ಮೇಲ್ವಿಚಾರಣೆ ನಡೆಸುತ್ತಿದೆ. ಇದೇ ವೇಳೆ ಆರೋಗ್ಯ ಕಾರ್ಯಕರ್ತರ ವಿರುದ್ಧದ ಹಿಂಸಾಚಾರದ ಪ್ರಕರಣಗಳ ಬಗ್ಗೆಯೂ ಗಮನ ಹರಿಸಿದೆ. ಭಾರತದಲ್ಲಿ ಇಲ್ಲಿವರೆಗೂ 2,90,401 ಜನರನ್ನು ಪರೀಕ್ಷಿಸಲಾಗಿದ್ದು, ನಿನ್ನೆ ನಡೆದ 30,043 ಪ್ರಕರಣಗಳ ಪೈಕಿ ಐಸಿಎಂಆರ್‍ನ 176 ಲ್ಯಾಬ್‍ಗಳಲ್ಲಿ 26,331 ಪರೀಕ್ಷೆಗಳು ಮತ್ತು 78 ಖಾಸಗಿ ಲ್ಯಾಬ್‍ಗಳಲ್ಲಿ 3,712 ಪರೀಕ್ಷೆಗಳು ನಡೆದಿವೆ. ದೇಶದಲ್ಲಿ 325 ಜಿಲ್ಲೆಗಳಲ್ಲಿ ಕೊರೊನಾ ವೈರಸ್ ಪತ್ತೆಯಾಗಿಲ್ಲ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
ರಾಜ್ಯದಲ್ಲಿ ಒಂದೇ ದಿನ 36 ಪ್ರಕರಣ ಪತ್ತೆ
ಬೆಂಗಳೂರು, ಏ. 16: ರಾಜ್ಯದಲ್ಲಿ ಕೊರೊನಾ ಸೋಂಕು ದಿನೇ ದಿನೇ ವ್ಯಾಪಕವಾಗಿ ಹರಡುತ್ತಿದ್ದು, ಗುರುವಾರ ಒಂದೇ ದಿನ ರಾಜ್ಯದಲ್ಲಿ ಹೊಸದಾಗಿ 36 ಮಂದಿಗೆ ಕೋವಿಡ್-19 ಪಾಸಿಟಿವ್ ದೃಢಪಟ್ಟಿದೆ. ಇದರೊಂದಿಗೆ ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 315ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಈವರೆಗೆ 13 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ ಮತ್ತು 82 ಮಂದಿ ಚಿಕಿತ್ಸೆ ನಂತರ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಇಂದು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಸೋಂಕಿಗೆ ಚಿಕಿತ್ಸೆ ಪಡೆಯುತ್ತಿದ್ದ 66 ವರ್ಷದ ಓರ್ವ ವ್ಯಕ್ತಿ ಸಾವನ್ನಪ್ಪಿದ್ದಾರೆ. ಇದರೊಂದಿಗೆ ಒಟ್ಟು ಸಾವನ್ನಪ್ಪಿರುವವರ ಸಂಖ್ಯೆ 13ಕ್ಕೆ ಹೆಚ್ಚಳವಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಧ್ಯಮ ಪ್ರಕಟಣೆ ತಿಳಿಸಿದೆ. ಇಂದು ಸಂಜೆ ಕಲಬುರಗಿಯ 5 ವರ್ಷದ ಬಾಲಕ ಹಾಗೂ 32 ವರ್ಷದ ವ್ಯಕ್ತಿಗೆ ಸೋಂಕು ದೃಢಪಟ್ಟಿದೆ. ಹೊಸದಾಗಿ ಪತ್ತೆಯಾಗಿರುವ ಪ್ರಕರಣಗಳಲ್ಲಿ ಬೆಳಗಾವಿಯಲ್ಲಿ 17, ವಿಜಯಪುರದಲ್ಲಿ 7, ಮೈಸೂರಿನಲ್ಲಿ 3, ಕಲಬುರಗಿಯಲ್ಲಿ 2 ಸೇರಿದಂತೆ ಒಟ್ಟು ರಾಜ್ಯಾದ್ಯಂತ 36 ಪ್ರಕರಣಗಳು ದೃಢಪಟ್ಟಿವೆ.
ಮಹತ್ವದ ಪ್ರಗತಿ ಸಾಧಿಸಿದ ವಿಜ್ಞಾನಿಗಳು
ಅಹಮದಾಬಾದ್, ಏ. 16: ಕೊರೊನಾ ವೈರಸ್‍ಗೆ ಮದ್ದು ಕಂಡು ಹಿಡಿಯುವ ನಿಟ್ಟಿನಲ್ಲಿ ಗುಜರಾತ್‍ನ ವಿಜ್ಞಾನಿಗಳು ಮಹತ್ವದ ಪ್ರಗತಿ ಸಾಧಿಸಿದ್ದಾರೆ. ಕೋವಿಡ್-19ಗೆ ಕಾರಣವಾಗಿರುವ ವೈರಾಣುವಿನ ಜಿನೋಮ್ ಸೀಕ್ವೆನ್ಸ್‍ನ್ನು ಡಿಕೋಡ್ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಜೀನೋಮ್ ಎಂದರೆ ವಂಶವಾಹಿಗಳ ಗುಚ್ಛ. ಇದು ವೈರಾಣುಗಳ ನಿರ್ದಿಷ್ಟ ಗುಣಲಕ್ಷಣಗಳನ್ನು ನಿರ್ಧರಿಸುತ್ತದೆ. ಜೀನೋಮ್ ಸೀಕ್ವೆನ್ಸ್ ಅಥವಾ ವಂಶವಾಹಿಳ ಗುಚ್ಛದ ಅನುಕ್ರಮವನ್ನು ಡಿಕೋಡ್ ಮಾಡುವುದರಿಂದ ವೈರಾಣುವಿನ ಮೂಲವನ್ನು ತಿಳಿದು ಸೂಕ್ತ ಚಿಕಿತ್ಸಾ ವಿಧಾನಕ್ಕೆ ಸಹಕಾರಿಯಾಗಲಿದೆ. ಮೊದಲ ಬಾರಿಗೆ ಭಾರತದಲ್ಲಿ ಗುಜರಾತ್ ನ ಬಯೋಟೆಕ್ನಾಲಜಿ ಸಂಶೋಧನಾ ಕೇಂದ್ರ(ಜಿಬಿಆರ್‍ಸಿ)ದ ವಿಜ್ಞಾನಿಗಳು ಜೀನೋಮ್ ಸೀಕ್ವೆನ್ಸ್ ಡಿಕೋಡ್ ಮಾಡುವಲ್ಲಿ ಯಶಸ್ವಿಯಾಗಿದ್ದು, ಗುಜರಾತ್ ಮುಖ್ಯಮಂತ್ರಿ ಕಚೇರಿ ಟ್ವೀಟ್ ಮೂಲಕ ವಿಜ್ಞಾನಿಗಳ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದೆ.
ನಿಯಮ ಪಾಲನೆಗೆ ವಕ್ಫ್ ಸಮಿತಿ ಮನವಿ
ಬೆಂಗಳೂರು, ಏ. 16: ದರ್ಗಾ ಮತ್ತು ಮಸೀದಿ ಹೋಗುವುದು ಮುಖ್ಯವಲ್ಲ, ಜೀವ ಉಳಿಸಿಕೊಳ್ಳುವುದು ಬಹಳ ಮುಖ್ಯ. ಹೀಗಾಗಿ ಸಾಮೂಹಿಕ ಪ್ರಾರ್ಥನೆ, ಸಾಮೂಹಿಕ ನಮಾಜ್ ಮಾಡದೇ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸೂಚಿಸುವ ನಿಯಮವನ್ನು ಆದೇಶವನ್ನು ಮುಸ್ಲಿಂಮ್ ಸಮುದಾಯದ ಬಾಂಧವರು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ರಾಜ್ಯ ವಕ್ಫ್ ಮಂಡಳಿ ಅಧ್ಯಕ್ಷ ಮುಹಮ್ಮದ್ ಯೂಸೂಫ್ ಕರೆ ನೀಡಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಂಜಾನ್ ಸಮಯದಲ್ಲಿ ಬಡವರಿಗೆ ಸಹಾಯ ಮಾಡುವಾಗ ಜನ ಸೇರುವುದು ಬೇಡ. ಸಾಮೂಹಿಕವಾಗಿ ಸೇರಿ ಸಮಾಜಕ್ಕೆ ಅನಾಹುತ ಸೃಷ್ಟಿಸುವುದು ಬೇಡ. ಪ್ರಸಕ್ತ ಕೊರೊನಾ ಸಂಕಷ್ಟದ ಸಂದರ್ಭದಲ್ಲಿ ಬರೀ ಮುಸ್ಲಿಂ ಸಮುದಾಯದವರಿಗಷ್ಟೇ ಸಹಾಯ ಮಾಡದೇ ಇತರ ಸಮುದಾಯಗಳಿಗೂ ಸಹಾಯ ಮಾಡಬೇಕು. ಹೀಗೆ ಮಾಡುವುದರಿಂದ ದೇವರ ಕೃಪೆಗೆ ಪಾತ್ರರಾಗಬಹುದು ಎಂದು ಸಲಹೆ ನೀಡಿದರು. ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸುವಾಗ ನಾಲ್ಕರಿಂದ ಐದು ಜನ ಮಾತ್ರ ಮಸೀದಿಯಲ್ಲಿ ಇರಬೇಕು. ಧ್ವನಿವರ್ಧಕ ಅಳವಡಿಸುವುದು ಬೇಡ. ಮೇ 3 ವರೆಗೂ ಇದು ಅನ್ವಯ ಆಗಲಿದೆ ಎಂದು ಮುಹಮ್ಮದ್ ಯೂಸುಫ್ ಹೇಳಿದರು.
ಟಿವಿ-ಮೊಬೈಲ್ ಮಾರಾಟಕ್ಕೆ ಅವಕಾಶ
ನವದೆಹಲಿ, ಏ. 16: ಕೊರೊನಾ ವೈರಸ್ ಲಾಕ್‍ಡೌನ್ ನಡುವೆ ತಾ. 20 ರಿಂದ ಅಮೆಜಾನ್, ಫ್ಲಿಪ್ ಕಾರ್ಟ್ ಮತ್ತು ಸ್ನ್ಯಾಪ್ ಡೀಲ್ ನಂತಹ ಇ-ಕಾಮರ್ಸ್ ವೇದಿಕೆಗಳಲ್ಲಿ ಮೊಬೈಲ್ ಫೋನ್, ಟಿವಿ, ರೆಫ್ರಿಜರೇಟರ್, ಲ್ಯಾಪ್ ಟಾಪ್ ಮತ್ತು ಸ್ಯಾನಿಟೈಸರಿ ವಸ್ತುಗಳನ್ನು ಮಾರಾಟ ಮಾಡಲು ಅವಕಾಶ ನೀಡಲಾಗುತ್ತಿದೆ. ಮೇ 3 ರವರೆಗೂ ಲಾಕ್‍ಡೌನ್ ವಿಸ್ತರಣೆ ಸಂಬಂಧ ಪರಿಷ್ಕೃತ ಮಾರ್ಗಸೂಚಿಯನ್ನು ಕೇಂದ್ರ ಗೃಹ ಕಾರ್ಯದರ್ಶಿ ಅಜಯ್ ಬಲ್ಲಾಳ್ ಹೊರಡಿಸಿದ ಬೆನ್ನಲ್ಲೇ ಗೃಹ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ಈ ಸ್ಪಷ್ಟೀಕರಣವನ್ನು ನೀಡಿದ್ದಾರೆ. ಮೊಬೈಲ್ ಪೋನ್‍ಗಳು, ಟಿವಿಗಳು, ರೆಫ್ರಿಜಿರೇಟರ್‍ಗಳು ತಾ. 20 ರಿಂದ ಇ-ಕಾಮರ್ಸ್ ವೇದಿಕೆಗಳಲ್ಲಿ ದೊರೆಯಲಿವೆ ಎಂದು ಅವರು ತಿಳಿಸಿದ್ದಾರೆ. ಆದಾಗ್ಯೂ, ಇ-ಕಾಮರ್ಸ್ ಕಂಪೆನಿಗಳ ವಸ್ತುಗಳನ್ನು ಸಾಗಿಸುವ ವಾಹನಗಳು ರಸ್ತೆಯ ಮೇಲೆ ಓಡಾಡಲು ಸಂಬಂಧಿತ ಆಡಳಿತ ಸಂಸ್ಥೆಗಳಿಂದ ಅನುಮತಿಯನ್ನು ಪಡೆಯಬೇಕಾಗಿದೆ.
ಪಾಲಿಸಿ ಕಂತು ನವೀಕರಿಸಲು ಕಾಲಾವಕಾಶ
ನವದೆಹಲಿ, ಏ. 16: ಕೊರೊನಾ ಸೋಂಕು ಹಾಗೂ ದೇಶಾದ್ಯಂತ ಲಾಕ್‍ಡೌನ್ ವಿಸ್ತರಣೆ ಮಾಡಲಾಗಿರುವ ಕಾರಣ ಆರೋಗ್ಯ, ಮೋಟಾರು ವಿಮಾ ಪಾಲಿಸಿ ಕಂತು ನವೀಕರಿಸಲು ಮೇ 15 ರ ತನಕ ಅವಕಾಶವಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಅವರು, ಕಳೆದ ಮಾರ್ಚ್ 25 ರಿಂದ ಮೇ 3 ರ ನಡುವೆ ಕಂತು ಪಾವತಿಸಬೇಕಿದ್ದ ಪಾಲಿಸಿಗಳಿಗೆ ಮಾತ್ರ ಈ ವಿನಾಯಿತಿ ಅನ್ವಯವಾಗಲಿದೆ ಎಂದೂ ಸ್ಪಷ್ಟಪಡಿಸಿದ್ದಾರೆ. ಕಂತು ವಿನಾಯಿತಿ ಅವಧಿಯಲ್ಲೂ ವಿಮಾ ಕಂಪೆನಿಗಳು ಕ್ಲೇಮುಗಳ ಪ್ರಕ್ರಿಯೆಯನ್ನು ಎಂದಿನಂತೆ ನಡೆಸಬೇಕು ಎಂದು ಸೂಚಿಸಿದ್ದಾರೆ. ಗೃಹ ಸೇರಿದಂತೆ ವಿವಿಧ ಸಾಲಗಳ ಕಂತು ಪಾವತಿಗೆ ಈ ಹಿಂದೆಯೇ ಕೇಂದ್ರ ಹಣಕಾಸು ಸಚಿವಾಲಯ ಮೂರು ತಿಂಗಳ ವಿನಾಯಿತಿ ಘೋಷಿಸಿತ್ತು.