ಸಿದ್ದಾಪುರ ಏ.16 : ತನ್ನ ಪತ್ನಿ ಹಾಗೂ ಪುಟ್ಟ ಮಗುವನ್ನು ನೋಡಬೇಕೆನ್ನುವ ಆತುರದಲ್ಲಿ ತಮಿಳುನಾಡಿನಿಂದ ಅಭ್ಯತ್‍ಮಂಗಲ ಗ್ರಾಮಕ್ಕೆ ಆಗಮಿಸಿದ್ದ ವ್ಯಕ್ತಿಯ ಮೇಲೆ ಕಾನೂನು ಕ್ರಮ ಜರುಗಿಸುವುದ ರೊಂದಿಗೆ ಮಡಿಕೇರಿಯ ಕೋವಿಡ್ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಪಿ. ಮುತ್ತುಬೀರನ್ ಎಂಬಾತ ತಮಿಳುನಾಡಿನ ಕೋಡಂಬಕ್ಕಾಂ ಗ್ರಾಮ ನಿವಾಸಿಯಾಗಿದ್ದು, ವಾಲ್ನೂರು- ತ್ಯಾಗತ್ತೂರು ಗ್ರಾ.ಪಂ. ವ್ಯಾಪ್ತಿಯ ಅಭ್ಯತ್‍ಮಂಗಲ ಗ್ರಾಮದ ಜ್ಯೋತಿನಗರದ ರಾಜೇಶ್ವರಿ ಎಂಬವರನ್ನು ವಿವಾಹವಾದ ನಂತರ ಇಲ್ಲಿಯೇ ತಂಗುತ್ತಿದ್ದರು. ಒಂದು ತಿಂಗಳ ಹಿಂದೆ ಚೆನ್ನೈಗೆ ಕೆಲಸಕ್ಕೆಂದು ಹೋಗಿದ್ದವರು ಕೊರೊನಾ ಲಾಕ್ ಡೌನ್‍ನಿಂದ ಅಭ್ಯತ್‍ಮಂಗಲಕ್ಕೆ ಮರಳಲು ಸಾಧ್ಯವಾಗಿರಲಿಲ್ಲ. ಪತ್ನಿ ಹಾಗೂ ಮಗುವನ್ನು ನೋಡಲೇಬೇಕೆಂದು ನಿಶ್ಚಯಿಸಿದ ಮುತ್ತುಬೀರನ್ ತಮಿಳುನಾಡು ಪೊಲೀಸರ ಬಳಿ ತಾಯಿ ಮೃತಪಟ್ಟಿರುವುದಾಗಿ ಸುಳ್ಳು ಹೇಳಿ ಪಾಸ್ ಪಡೆದು ಜಿಲ್ಲೆಗೆ ಬಂದಿದ್ದರು. ಈ ಬಗ್ಗೆ ಮಾಹಿತಿ ದೊರೆತ ಜ್ಯೋತಿ ನಗರದ ನಿವಾಸಿಗಳು ಆಕ್ಷೇಪ ವ್ಯಕ್ತಪಡಿಸಿ ಪೊಲೀಸರಿಗೆ ಮಾಹಿತಿ ನೀಡಿದರು. ಸ್ಥಳಕ್ಕೆ ಆಗಮಿಸಿದ ಚೆಟ್ಟಳ್ಳಿ ಪೊಲೀಸ್ ಠಾಣೆಯ ಅಧಿಕಾರಿಗಳು ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿಗಳು ಮುತ್ತುಬೀರನ್ ಅವರ ಆರೋಗ್ಯ ಪರೀಕ್ಷೆಗೆಂದು ಮಡಿಕೇರಿಯ ಜಿಲ್ಲಾಸ್ಪತ್ರೆಗೆ ಕರೆದೊಯ್ದರು. ಇದೀಗ ಗಂಟಲ ದ್ರವ ಹಾಗೂ ರಕ್ತದ ಮಾದರಿಯನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗಿದ್ದು, ವರದಿಯನ್ನು ನಿರೀಕ್ಷಿಸಲಾಗುತ್ತಿದೆ. ಈತನಿಗೆ ಜಿಲ್ಲೆಯ ಗಡಿಭಾಗದ ಕೊಪ್ಪ ತಪಾಸಣಾ ಕೇಂದ್ರದಲ್ಲಿ ಪರೀಕ್ಷಿಸಿ ಕ್ವಾರಂಟೈನ್ ನಲ್ಲಿರುವಂತೆ ಸೀಲ್ ಕೂಡ ಹಾಕಲಾಗಿದೆ.

ತಮಿಳುನಾಡಿನಲ್ಲಿ ಕೊರೊನಾ ವೈರಸ್ ವ್ಯಾಪಕವಾಗಿ ಹರಡಿರುವುದ ರಿಂದ ಜ್ಯೋತಿನಗರದ ನಿವಾಸಿಗಳು ಆತಂಕ ವ್ಯಕ್ತಪಡಿಸಿ ಅಧಿಕಾರಿಗಳ ಗಮನ ಸೆಳೆದಿದ್ದರು.

ಕಾನೂನು ಕ್ರಮ: ಪಿ.ಡಬ್ಲ್ಯೂ.ಡಿ. ಗುತ್ತಿಗೆದಾರನಾಗಿರುವ ಮುತ್ತುಬೀರನ್ ತನ್ನ ತಾಯಿ ಸರಸ್ವತಿ ಮೃತಪಟ್ಟಿರುತ್ತಾರೆಂದು ಸುಳ್ಳು ಮಾಹಿತಿ ನೀಡಿ ಕಮಿಷನರ್, ಗ್ರೇಟರ್ ಚೆನ್ನೈ ಕಾರ್ಪೋರೇಷನ್ ಇವರಿಂದ ತಾ. 15 ರಂದು ಪಾಸ್ ಪಡೆದುಕೊಂಡು ಚೆನ್ನೈಯಿಂದ ಹೊರಟು ಮೋಟಾರ್ ಬೈಕ್‍ನಲ್ಲಿ (ಕೆಎ 12 ವಿ 1798) ಇಂದು ಬೆಳಗ್ಗಿನ ಜಾವ 6.30 ಗಂಟೆಗೆ ಚೆಟ್ಟಳ್ಳಿಗೆ ಬಂದಿರುತ್ತಾನೆ.

(ಮೊದಲ ಪುಟದಿಂದ) ಕೋವಿಡ್-19 ಸಾಂಕ್ರಾಮಿಕ ಖಾಯಿಲೆಯ ಹಿನ್ನೆಲೆಯಲ್ಲಿ ಕೇಂದ್ರ ಸರಕಾರವು ಲಾಕ್‍ಡೌನ್ ಆದೇಶ ಹೊರಡಿಸಿದ್ದರೂ ಸಹ ತನ್ನ ತಾಯಿಯವರು ಎರಡು ವರ್ಷಗಳ ಹಿಂದೆಯೇ ಮೃತಪಟ್ಟಿದ್ದರೂ ಸುಳ್ಳು ಮಾಹಿತಿ ನೀಡಿದ ಮತ್ತು ಆದೇಶವನ್ನು ಉಲ್ಲಂಘಿಸಿದ ಪರಿಣಾಮ ಪಿ. ಮುತ್ತುಬೀರನ್ ಮೇಲೆ ಕಲಂ 188, 269, 270, ಐಪಿಸಿ ರೆ/ವಿ 52 ಡಿಎಂಎ. ಆಕ್ಟ್ 2005ರ ಪ್ರಕಾರ ಪೊಲೀಸರು ಕಾನೂನು ಕ್ರಮ ಜರುಗಿಸಿದ್ದಾರೆ.

ಜಿಲ್ಲಾ ಪೊಲೀಸ್ ಅಧೀಕ್ಷಕಿ ಡಾ. ಸುಮನ್ ಡಿ.ಪಿ. ಅವರ ನಿರ್ದೇಶನದಂತೆ ಮಡಿಕೇರಿ ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕ ಬಿ.ಪಿ. ದಿನೇಶ್‍ಕುಮಾರ್, ಮಡಿಕೇರಿ ಗ್ರಾಮಾಂತರ ವೃತ್ತ ನಿರೀಕ್ಷಕ ಸಿ.ಎನ್. ದಿವಾಕರ್ ಮಾರ್ಗದರ್ಶನದಲ್ಲಿ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯ ಉಪ ನಿರೀಕ್ಷಕ ಹೆಚ್.ವಿ. ಚಂದ್ರಶೇಖರ್, ಚೆಟ್ಟಳ್ಳಿ ಉಪಠಾಣೆಯ ಪ್ರೊ. ಪಿಎಸ್‍ಐ ಜಗದೀಶ್ ದೂಳ್‍ಶೆಟ್ಟಿ, ಸಿಬ್ಬಂದಿಯವರಾದ ಮಧು, ಸಿದ್ಧರಾಮ ಜೆ. ವಂದಲಾ ಅವರುಗಳು ಪಿ. ಮುತ್ತುಬೀರನ್‍ನನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ಮಾಡಿ ನೋಟೀಸ್ ನೀಡಿ ಕ್ರಮ ಕೈಗೊಂಡಿದ್ದಾರೆ. ನ್ಯಾಯಾಲಯಕ್ಕೆ ಈ ಬಗ್ಗೆ ವರದಿಯನ್ನು ನೀಡಿ ಕಾನೂನು ಕ್ರಮ ಕೈಗೊಂಡಿದ್ದಾರೆ.

-ವರದಿ: ಸುಧಿ, ವಾಸು