ವೀರಾಜಪೇಟೆ, ಏ. 16 : ಕಳೆದ 19 ದಿನಗಳ ಹಿಂದೆ ಕೊರೊನಾ ವೈರಸ್ ಹರಡುವ ಭೀತಿ ಹಿನ್ನೆಲೆಯಲ್ಲಿ ಕೇರಳದಿಂದ ಕೊಡಗಿನ ಮಾಕುಟ್ಟ ಚೆಕ್‍ಪೋಸ್ಟ್‍ಗೆ ಬಂದಿದ್ದ 71 ಮಂದಿ ಕೂಲಿ ಕಾರ್ಮಿಕರನ್ನು ತಾಲೂಕು ಆಡಳಿತ ಬಾಳುಗೋಡು, ಆರ್ಜಿ ಹಾಗೂ ಇಲ್ಲಿನ ಹಿಂದಳಿದ ವರ್ಗಗಳ ವಸತಿ ನಿಲಯದಲ್ಲಿ ಕೊರೊನಾ ಲಾಕ್ ಡೌನ್‍ನ ನಿರ್ಬಂಧದಂತೆ ಕ್ವಾರಂಟೈನ್‍ನಲ್ಲಿಡಲಾಗಿತ್ತು. ಇವರುಗಳ ಅವಧಿ ತಾ.12ಕ್ಕೆ ಮುಕ್ತಾಯಗೊಂಡಿದ್ದರಿಂದ ಎಲ್ಲ ಕಾರ್ಮಿಕರು ತವರಿಗೆ ತೆರಳಲು ಸಿದ್ಧತೆ ನಡೆಸಿದ್ದರೂ ಸರಕಾರದ ಆದೇಶಕ್ಕಾಗಿ ಕಾಯುತ್ತಿದ್ದಾರೆ ಎಂದು ತಾಲೂಕು ತಹಶೀಲ್ದಾರ್ ಎಂ.ಎಲ್. ನಂದೀಶ್ ತಿಳಿಸಿದ್ದಾರೆ.ಕರ್ನಾಟಕದಿಂದ ಕಾರ್ಮಿಕರಾಗಿ ದುಡಿಯಲು ಕೇರಳಕ್ಕೆ ವಲಸೆ ಹೋಗಿ ಹಿಂತಿರುಗಿದ್ದ ಈ 71 ಕಾರ್ಮಿಕರುಗಳಲ್ಲಿ ಕೊರೊನಾ ವೈರಸ್ ಸೋಂಕಿನ ಯಾವುದೇ ಲಕ್ಷಣಗಳು ಚಿಹ್ನೆಗಳು ಕಂಡು ಬಾರದಿದ್ದು ತಪಾಸಣೆಯ ನೆಗೆಟಿವ್ ಫಲಿತಾಂಶ ಬಂದುದರಿಂದ ಇವರುಗಳನ್ನು ತವರಿಗೆ ಕಳುಹಿಸಲಾಗುವುದು. ಇದಕ್ಕಾಗಿ ಜಿಲ್ಲಾಧಿಕಾರಿಗೆ ಪತ್ರ ಬರೆಯಲಾಗಿದ್ದು ಸರಕಾರದ ಆದೇಶ ಬಂದ ತಕ್ಷಣ ಎಲ್ಲರನ್ನೂ ತವರಿಗೆ ಕಳಿಸಲಾಗುವುದು ಎಂದು ನಂದೀಶ್ ತಿಳಿಸಿದರು.ಕಾರ್ಮಿಕರೆಲ್ಲರೂ ವಿಜಾಪುರ, ರಾಯಚೂರು, ಗದಗ್ ಸೇರಿದಂತೆ ಉತ್ತರ ಕರ್ನಾಟಕದ ವಿವಿಧ ಭಾಗಗಳಿಂದ ಕೇರಳಕ್ಕೆ ವಲಸೆ ಹೋಗಿದ್ದರೆಂದೂ ಹೇಳಲಾಗಿದೆ.