ಮಡಿಕೇರಿ, ಏ. 16: ಕೊಡಗಿನಲ್ಲಿ ಕೊರೊನಾ ಪ್ರಕರಣಗಳ ಪೈಕಿ ಈ ಹಿಂದೆ ಒಂದೇ ಒಂದು ಸೋಂಕಿತ ವ್ಯಕ್ತಿಗೆ ಪಾಸಿಟಿವ್ ಎಂದು ಬಂದಿದ್ದರೂ ಚಿಕಿತ್ಸೆ ಬಳಿಕ 35 ವರ್ಷದ ಕೊಂಡಂಗೇರಿಯ ವ್ಯಕ್ತಿ ಆಸ್ಪತ್ರೆÉಯಿಂದ ಕಳೆದ 9 ದಿನಗಳ ಹಿಂದೆ ಬಿಡುಗಡೆಗೊಂಡಿದ್ದರು. ನಿನ್ನೆ ಮತ್ತೆ ಅವರಿಗೆ ತುಸು ಅನಾರೋಗ್ಯದ ಕಾರಣ ಸ್ವಯಂಪ್ರೇರಿತರಾಗಿ ಮಡಿಕೇರಿಯ ಕೋವಿಡ್ ಆಸ್ಪತ್ರೆಗೆ ದಾಖಲಾಗಿದ್ದರು. ನಿನ್ನೆ ದಿನ ಅವರ ಗಂಟಲ ದ್ರವದ ಮಾದರಿಯನ್ನು ಮೈಸೂರಿನ ಲ್ಯಾಬ್‍ಗೆ ಕಳುಹಿಸಲಾಗಿತ್ತು. ಇಂದು ಜಿಲ್ಲಾಡಳಿತಕ್ಕೆ ವರದಿ ತಲುಪಿದ್ದು ಮತ್ತೆ ನೆಗೆÀಟಿವ್ ಎಂದು ಖಾತರಿಯಾಗಿದೆ. ಈ ಕುರಿತು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಇಂದು ಮಾಧ್ಯಮಗಳಿಗೆ ಬಿಡುಗಡೆ ಮಾಡಿರುವ ವರದಿಯಲ್ಲಿ ಖಚಿತಗೊಂಡಿದೆ. ಇದರಿಂದಾಗಿ, ಕೊಡಗು ಜಿಲ್ಲಾಡಳಿತಕ್ಕೆ ಹಾಗೂ ಕೊಡಗಿನ ಜನತೆಗೆ ನೆಮ್ಮದಿ ಮೂಡಿಸಿದೆ; ಸದ್ಯದ ಆತಂಕ ಮರೆಯಾಗಿದೆ. ಅಲ್ಲದೆ, ಮಾಧ್ಯಮವೊಂದರಲ್ಲಿ ಮತ್ತೆ ಕೊಡಗಿನ ವ್ಯಕ್ತಿಗೆ ಪಾಸಿಟಿವ್ ಎಂದು ಪ್ರಕಟಗೊಂಡಿರುವದಕ್ಕೆ ಬೇಸರ ವ್ಯಕ್ತಪಡಿಸಿರುವ ಜಿಲ್ಲಾಧಿಕಾರಿಯವರು ಸುಳ್ಳು ವದಂತಿಗಳಿಗೆ ಕಿವಿಗೊಡದಿರಲು ಕೋರಿದ್ದಾರೆ. ನೆಗೆಟಿವ್ ಎಂದು ವರದಿ ಬಂದಿದ್ದರೂ ಈ ವ್ಯಕ್ತಿಯನ್ನು ಕೋವಿಡ್ ಆಸ್ಪತ್ರೆಯಲ್ಲಿ ನಿರೀಕ್ಷಣೆಯಲ್ಲಿಡಲಾಗಿದೆ. ಸಾರ್ವಜನಿಕರು ಆತಂಕ ಪಡುವ ಅಗತ್ಯವಿಲ್ಲ ಎಂದೂ ಜಿಲ್ಲಾಧಿಕಾರಿ ಸ್ಪಷ್ಟಪಡಿಸಿದ್ದಾರೆ. ‘ಶಕ್ತಿ’ಗೆ ತಿಳಿದುಬಂದಂತೆ ಆ ವ್ಯಕ್ತಿಗೆ ಸೇವಿತ ಆಹಾರವು ಜೀರ್ಣಗೊಳ್ಳದೆ ಸಮಸ್ಯೆಯಾಗಿದ್ದು ವೈದ್ಯರುಗಳು ಚಿಕಿತ್ಸೆ ನೀಡಿದ್ದು ಗುಣಮುಖರಾಗುತ್ತಿದ್ದಾರೆ ಎಂದು ತಿಳಿದುಬಂದಿದೆ.ಇದುವರೆಗೆ ಜಿಲ್ಲೆಯಲ್ಲಿ ಪರೀಕ್ಷೆಗೆ ಒಳಪಟ್ಟ 105 ಪ್ರಕರಣಗಳಲ್ಲಿ ನೆಗೆಟಿವ್ ವರದಿ ಬಂದಿದ್ದು, ಉಳಿದಂತೆ 15 ಪ್ರಕರಣಗಳ ಮಾದರಿ ಕಳುಹಿಸಲಾಗಿದ್ದು ವರದಿಯನ್ನು ನಿರೀಕ್ಷಿಸಲಾಗಿದೆ.

ಇದೀಗ ಅಶ್ವಿನಿ ಆಸ್ಪತ್ರೆಯನ್ನು ಸರಕಾರಿ ಆಸ್ಪತ್ರೆಯಾಗಿ ಪರಿವರ್ತಿಸಿರುವದರಿಂದ ಅಲ್ಲಿ ಇತರ ರೋಗಗಳ ಚಿಕಿತ್ಸೆಗೆ ಸರಾಸರಿ ದಿನಂಪ್ರತಿ ಸುಮಾರು 300 ಮಂದಿ ತಪಾಸಣೆÉಗೆ ಬರುತ್ತ್ತಿದ್ದಾರೆ. ಅಲ್ಲಿ ಬಂದವರ ಪೈಕಿ ನೆಗಡಿ. ಕೆಮ್ಮು ಅಥವ ಜ್ವರ ಲಕ್ಷಣವಿದ್ದರೆ ಕೋವಿಡ್ ಆಸ್ಪತ್ರೆಗೆ ಕಳುಹಿಸಲಾಗುತ್ತದೆ. ಅಂತಹವರನ್ನು ಅಲ್ಲಿ ದಾಖಲಿಸಿಕೊಂಡು ಅವರ ಗಂಟಲು ದ್ರವವನ್ನು ಮೈಸೂರಿನ ಲ್ಯಾಬ್‍ಗೆ ಕಳುಹಿಸಲಾಗುತ್ತದೆ. ಲ್ಯಾಬಿನಿಂದ ಒಂದು ದಿನದಲ್ಲಿಯೇ ವರದಿ ಲಭಿಸಲಿದ್ದು ನೆಗೆಟಿವ್ ಎಂದು ಗೊತ್ತಾದೊಡನೆ ಅಂತಹವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಿ ಕಳುಹಿಸಲಾಗುತ್ತದೆ. ಹೀಗಾಗಿ ಪ್ರತಿ ದಿನವೂ ತಪಾಸಣೆಗೆ ಒಳಪಡುವವರ ಸಂಖ್ಯೆಯಲ್ಲಿ ಬದಲಾವಣೆಗಳಾಗುತ್ತಿರುತ್ತದೆ. ಕೆಲವರು ಸ್ವಯಂ ಪ್ರೇರಿತರಾಗಿ ಪರೀಕ್ಷೆಗೆ ಬಂದವರನ್ನು ಕೂಡ ಶೀತ, ಜ್ವರದ ಲಕ್ಷÀಣವಿದ್ದರೆ ಕೋವಿಡ್ ಆಸ್ಪತ್ರೆಗೆ ದಾಖಲಿಸಿಕೊಳ್ಳಲಾಗುತ್ತದೆ ಎಂದು ‘ಶಕ್ತಿ’ಗೆ ತಿಳಿದುಬಂದ ವಿದ್ಯಮಾನ.