ಮಡಿಕೇರಿ, ಏ. 16: ಕೊರೊನಾ... ಕೊರೊನಾ... ಕೊರೊನಾ..! ಎಲ್ಲಿ ನೋಡಿದರೂ, ಯಾರನ್ನೂ ಮಾತನಾಡಿದರೂ ಕೊರೊನಾದ್ದೇ ಮಾತು.

ಪತ್ರಿಕೆ, ಸುದ್ದಿ ಮಾಧ್ಯಮವನ್ನು ತಿರುವಿ ಹಾಕಿದರೂ ಕೊರೊನಾದ್ದೇ ಸುದ್ದಿ. ಇಂತಹ ಪರಿಸ್ಥಿತಿಯಲ್ಲಿ ಕೇಂದ್ರ ಸರ್ಕಾರ ಘೋಷಿಸಿದ ಒಂದು ಅವಧಿಯ 21 ದಿನದ ಲಾಕ್‍ಡೌನ್ ಈಗಾಗಲೇ ಮುಗಿದು ಎರಡನೇ ಹಂತದ ಲಾಕ್‍ಡೌನ್‍ಗೆ ಕಾಲಿಟ್ಟಿದ್ದೇವೆ. ಆದರೆ ಕೂಲಿ ಕಾರ್ಮಿಕರ ಪಾಡು ದೇವರಿಗೆ ಪ್ರೀತಿ ಎಂಬತಾಗಿದೆ. ಒಂದು ಹಂತದ ಲಾಕ್‍ಡೌನ್‍ಗೆ ಕೂಲಿ ಕಾರ್ಮಿಕರೇನೋ ಸಹಿಸಿಕೊಂಡರು. ಆದರೆ ಎರಡನೇ ಹಂತದ 19 ದಿನಗಳ ಲಾಕ್‍ಡೌನ್‍ನ್ನು ಹೇಗೆ ಸಹಿಸಿಕೊಳ್ಳುವುದು?

ಈಗಾಗಲೇ ಸ್ವಸಹಾಯ ಸಂಘಗಳ ಮೂಲಕ ಪಡೆದುಕೊಂಡ ಸಾಲವನ್ನು ಮರುಪಾವತಿಸುವಂತೆ ಸಂಘಗಳ ಪ್ರಮುಖರು ಸದಸ್ಯರಿಗೆ ದುಂಬಾಲು ಬಿದ್ದಿದ್ದಾರೆ. ಕೆಲಸವಿಲ್ಲದೆ ಕೂಲಿ ಕಾರ್ಮಿಕರು 21 ದಿನವನ್ನು ದೂಡಿದ್ದಾರೆ. ಇತ್ತ ಕೂಲಿ ಕೆಲಸವೂ ಇಲ್ಲ, ಹೊಟ್ಟೆಯ ಹಿಟ್ಟಿಗೆ ಪರದಾಡುವಂತಾಗಿದೆ. ಆದರೂ ಇದೀಗ ಸಾಲ ಕಟ್ಟಬೇಕಂತೆ, ಇಲ್ಲದಿದ್ದರೆ ಚಕ್ರಬಡ್ಡಿ ಹಾಕುತ್ತಾರಂತೆ ಎಂಬಿತ್ಯಾದಿಯಾಗಿ ಪೀಡಿಸಲು ತೊಡಗಿದ್ದಾರೆ ಎಂದು ಹೆರವನಾಡು ಗ್ರಾಮದ ಉಡೋತ್‍ಮೊಟ್ಟೆ ಕಾಲೋನಿಯ ಕಾರ್ಮಿಕ ಸದಸ್ಯರು ಅಳಲು ತೋಡಿಕೊಂಡಿ ದ್ದಾರೆ. ಇದರಿಂದಾಗಿ ಕಾರ್ಮಿಕರು ಮತ್ತಷ್ಟು ಸಂಕಷ್ಟಕ್ಕೆ ಈಡಾಗುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಕೊಡಗು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‍ನಲ್ಲಿ ದೇಶದ ಪ್ರಧಾನ ಸೇವಕ ಮೋದಿ ಹೆಸರಿನಲ್ಲಿ ಸ್ವಸಹಾಯ ಸಂಘವನ್ನು ತೆರೆದಿರುವ ಉಡೋತ್‍ಮೊಟ್ಟೆಯ ಕಾರ್ಮಿಕರು ಬ್ಯಾಂಕ್‍ನಿಂದ ಸಾಲವನ್ನು ಪಡೆದುಕೊಂಡು ತಮ್ಮ ಜೀವನ ನಿರ್ವಹಣೆ ಮಾಡುತ್ತಿದ್ದರು. ಇದೀಗ ಇಂದು ವಾರದ ಕೊನೆಯ ದಿನವಾದುದರಿಂದ ಸಾಲ ಮರು ಪಾವತಿ ಮಾಡುವಂತೆಯೂ ಇಲ್ಲದಿದ್ದರೆ ಚಕ್ರಬಡ್ಡಿ ವಿಧಿಸುವುದಾಗಿ ತಾಕೀತು ಮಾಡುತ್ತಿದ್ದಾರೆ ಎನ್ನಲಾಗಿದೆ.

ಕೇಂದ್ರ ಹಾಗೂ ರಾಜ್ಯಗಳು ಕೊರೊನಾ ನಿರ್ಮೂಲನೆಗೆ ಪಣತೊಟ್ಟು ಕರ್ತವ್ಯ ನಿರತವಾಗಿದ್ದರೂ ಕೂಲಿ ಕಾರ್ಮಿಕರ ಪಾಡು ದೇವರಿಗೆ ಪ್ರೀತಿ ಎಂಬತಾಗಿದೆ. ಕಡು ಬಡವರಿಗೆ ಸರ್ಕಾರವೇನೋ ಒಬ್ಬರಿಗೆ ತಿಂಗಳಿಗೆ 5 ಕೆ.ಜಿ. ಅಕ್ಕಿಯಂತೆ ಎರಡು ತಿಂಗಳ ಅಕ್ಕಿ ಮತ್ತು ಗೋಧಿ ವಿತರಿಸಿದೆ. ಉಜ್ವಲ ಯೋಜನೆಯಡಿ ಉಚಿತ ಗ್ಯಾಸ್ ಹಾಗೂ ಜನ್‍ಧನ್ ಖಾತೆದಾರರಿಗೆ ತಿಂಗಳಿಗೆ ರೂ. 500 ವಿತರಿಸುತ್ತಿದೆ. ಸದÀ್ಯದ ತುರ್ತು ಪರಿಸ್ಥಿತಿಯಲ್ಲಿ ಕಡುಬಡವರು ಕಷ್ಟಪಟ್ಟು ಜೀವನ ನಿರ್ವಹಣೆ ಮಾಡಬಹುದು. ಆದರೆ ಈ ಸೌಲಭ್ಯ ಎಲ್ಲಾ ಬಡವರಿಗೂ ಸಿಗುತ್ತಿದೆಯೇ ಎಂದರೆ ಖಂಡಿತಾ ಇಲ್ಲ. ಇನ್ನೂ ಅನೇಕ ಬಡವರಿಗೆ ಈ ಸೌಲಭ್ಯಗಳು ಸಿಗುತ್ತಿಲ್ಲ. ಸರ್ಕಾರಗಳ ಮಾನದಂಡವೂ ಇದಕ್ಕೆ ಕಾರಣ ಇರಬಹುದೇನೋ ? ಆದರೂ ದೇಶ ಹಾಗೂ ಜನತೆ ಇಂತಹ ತುರ್ತುಪರಿಸ್ಥಿತಿಯಲ್ಲಿರುವಾಗ ಕಾರ್ಮಿಕರಿಗೆ ಕೆಲಸವೂ ಇಲ್ಲದಂತಹ ಸಂದರ್ಭದಲ್ಲಿ ಕಾರ್ಮಿಕ ಸದಸ್ಯರು ಸಾಲ ಮರುಪಾವತಿ ಮಾಡುವುದಾದರು ಹೇಗೆ? ಸಾಲ ನೀಡಿದ ಬ್ಯಾಂಕ್ ಹಾಗೂ ಸಂಘ ಸಂಸ್ಥೆಗಳಿಗೆ ಸ್ವಲ್ಪವೂ ಮಾನವೀಯತೆ ಇಲ್ಲದಾಯಿತೇ ಎಂಬ ಪ್ರಶ್ನೆ ಕಾರ್ಮಿಕರನ್ನು ಕಾಡುತ್ತಿದೆ.