ಮಡಿಕೇರಿ, ಏ. 16: ದೇಶದಲ್ಲಿ ಹಸಿವು ಮತ್ತು ಅನಾರೋಗ್ಯದಿಂದ ಯಾರಿಗೂ ಲಾಕ್‍ಡೌನ್ ಸಂದರ್ಭ ತೊಂದರೆ ಎದುರಾಗದಂತೆ ಆರೋಗ್ಯ ಇಲಾಖೆ ನಿಗಾವಹಿಸುವಂತೆ ಕೇಂದ್ರ ಹಾಗೂ ರಾಜ್ಯ ಸರಕಾರಗಳ ನಿರ್ದೇಶನದಂತೆ ಕೊಡಗಿನಲ್ಲಿ ಆರೋಗ್ಯ ಇಲಾಖೆಯಿಂದ ತಪಾಸಣೆ ಹಾಗೂ ಚಿಕಿತ್ಸೆ ಕಲ್ಪಿಸಲಾಗುತ್ತಿದೆ. ಕೆಲವೆಡೆ ಡೇರೆಗಳನ್ನು ನಿರ್ಮಿಸಿಕೊಂಡು ಬದುಕು ಕಟ್ಟಿಕೊಂಡಿರುವ ಅಲೆಮಾರಿಗಳಿಗೂ ಆಸರೆಯೊಂದಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ನಗರದ ರಾಜ್ಯ ಸಾರಿಗೆ ಬಸ್ ನಿಲ್ದಾಣದ ಹಿಂಭಾಗದಲ್ಲಿ ಇಂತಹ ತಾತ್ಕಾಲಿಕ ಡೇರೆಗಳನ್ನು ಹಾಕಿಕೊಂಡು ವಾಸಿಸುತ್ತಿರುವ ಅಲೆಮಾರಿ ಕಾರ್ಮಿಕ ಕುಟುಂಬಗಳಿಗೆ ಇಂದು ಆರೋಗ್ಯ ತಪಾಸಣೆ ನಡೆಸಲಾಯಿತು. ಇಂತಹವರಿಗೆ ಕೊರೊನಾ ಸೇರಿದಂತೆ ಯಾವುದೇ ಆರೋಗ್ಯ ಸಮಸ್ಯೆ, ಮಾಮೂಲಿ ಕಾಯಿಲೆಗಳು ಉಂಟಾಗದಂತೆ ನಿಗಾವಹಿಸಿರುವ ಆರೋಗ್ಯ ಕಾರ್ಯಕರ್ತರು; ಈ ಮಂದಿ ವಾಸವಿರುವೆಡೆಗೆ ಭೇಟಿ ನೀಡಿ ತಪಾಸಣೆ ಕೈಗೊಂಡಿರುವ ದೃಶ್ಯ ಎದುರಾಯಿತು.

ಅಲೆಮಾರಿಗಳಿಗೆ ತಪಾಸಣೆ ಸಂದರ್ಭ ಸಮಸ್ಯೆಗಳಿದ್ದರೆ ವೈದ್ಯರು ಖುದ್ದು ಆಗಮಿಸಿ ಔಷಧೋಪಚಾರ ನೀಡಲಿದ್ದಾರೆ. ಮಾತ್ರವಲ್ಲದೆ ಕೊರೊನಾ ಸೋಂಕಿನ ಸಂಶಯದಿಂದ ಆಸ್ಪತ್ರೆಗಳಿಗೆ ಭೇಟಿ ನೀಡಿ; ಮುಂಜಾಗ್ರತಾ ಕ್ರಮದೊಂದಿಗೆ ಗೃಹಬಂಧನದಲ್ಲಿ (ಕ್ವಾರೆಂಟೈನ್) ಇರುವವರಿಗೂ ಈ ಆರೋಗ್ಯ ಕಾರ್ಯಕರ್ತರು ಮನೆ ಮನೆ ತೆರಳಿ ಆಗಿಂದಾಗ್ಗೆ ತಪಾಸಣೆ ಕೈಗೊಂಡಿದ್ದಾರೆ.

ಕೊಡಗು ಜಿಲ್ಲೆಯಾದ್ಯಂತ ಇಂತಹ ಮುನ್ನೆಚ್ಚರಿಕೆ ಕೈಗೊಳ್ಳಲಾಗಿದ್ದು, ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳ ವ್ಯಾಪ್ತಿಯಲ್ಲಿ ಆರೋಗ್ಯ ಕಾರ್ಯಕರ್ತರು ಅಲ್ಲಿನ ವೈದ್ಯರ ನೇತೃತ್ವದಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಮೋಹನ್ ತಿಳಿಸಿದ್ದಾರೆ. ತಾವು ಕೂಡ ಇಂದು ಕಣ್ಣಂಗಾಲ, ಕಾಕೋಟುಪರಂಬು ಕೇಂದ್ರಗಳಿಗೆ ಭೇಟಿ ನೀಡಿದ್ದಾಗಿ ಅವರು ನೆನಪಿಸಿದರು.

ಎಲ್ಲಿಯೂ ಮಾಮೂಲಿ ರೋಗ ಸಂಬಂಧ ಬಳಲುವವರಿಗೆ ಔಷಧಿಗಳು, ಚುಚ್ಚುಮದ್ದು ಇತ್ಯಾದಿ ಕೊರತೆ ಉಂಟಾಗದಂತೆ ನಿಗಾವಹಿಸಲಾಗಿದೆ ಎಂದರು. ಇಂದು ನಗರದಲ್ಲಿ ಡಾ. ಚಂದ್ರಶೇಖರ್ ನೇತೃತ್ವದಲ್ಲಿ ಆರೋಗ್ಯ ಸಿಬ್ಬಂದಿಗಳಾದ ಶಾಂತಿ, ತೇಜಸ್ವಿನಿ, ನಂದಿತಾ, ವರ್ಷ ಹಾಗೂ ಪವನ್ ಇಲ್ಲಿನ ರಾಜ್ಯ ಸಾರಿಗೆ ಬಸ್ ನಿಲ್ದಾಣ ಬಳಿ ಅಲೆಮಾರಿಗಳನ್ನು ಖುದ್ದು ತಪಾಸಣೆ ಕೈಗೊಂಡಿದ್ದ ದೃಶ್ಯ ‘ಶಕ್ತಿ’ಗೆ ಎದುರಾಯಿತು. ಮನುಷ್ಯ ಜೀವ ಉಳಿಸಿಕೊಂಡು, ಆರೋಗ್ಯದಿಂದ ಇದ್ದರೆ ನಾಳೆಯೂ ದುಡಿದು ತಿನ್ನಬಹುದು ಎಂದು ಈ ತಂಡ ಅಭಿಪ್ರಾಯಪಟ್ಟಿತು.