ಮಡಿಕೇರಿ, ಏ. 16: ಜಿಲ್ಲೆಯಲ್ಲಿ ಕೊರೊನಾ ಹಿನ್ನೆಲೆಯಲ್ಲಿ ಲಾಕ್‍ಡೌನ್ ನಂತಹ ನಿರ್ಬಂಧದ ನಡುವೆಯೇ ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿದ್ದ ಪ್ರಕರಣವೊಂದು ಬೆಳಕಿಗೆ ಬಂದಿದೆ.

ಮೂರ್ನಾಡು ಸನಿಹದ ಕಾಂತೂರು ಹೊಳೆಯಿಂದ ಅನಧಿಕೃತವಾಗಿ ಮರಳನ್ನು ತೆಗೆದು ಸಾಗಾಟಕ್ಕೆ ಯತ್ನ ನಡೆದಿದ್ದ ಸಂದರ್ಭ ಸ್ಥಳೀಯರು ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿ ಇದನ್ನು ತಡೆಹಿಡಿದು ಪೊಲೀಸರಿಗೆ ಮಾಹಿತಿ ನೀಡಿದ್ದರೆನ್ನಲಾಗಿದೆ.

ತಾ. 14ರ ಸಂಜೆ ಈ ಪ್ರಕರಣ ನಡೆದಿದ್ದು, ತಕ್ಷಣ ಸ್ಥಳಕ್ಕೆ ಧಾವಿಸಿದ ಮಡಿಕೇರಿ ಗ್ರಾಮಾಂತರ ಠಾಣಾಧಿಕಾರಿ ಚಂದ್ರಶೇಖರಯ್ಯ ಹಾಗೂ ಸಿಬ್ಬಂದಿ ದಾಳಿ ನಡೆಸಿ ಮರಳು ತುಂಬಿದ್ದ ಪಿಕ್‍ಅಪ್ (ಕೆಎ 12 9086) ಸಹಿತ ಆರೋಪಿ ಬೋಜ ಎಂಬಾತನನ್ನು ಬಂಧಿಸಿದ್ದಾರೆ.

ಈ ವ್ಯಾಪ್ತಿಯಲ್ಲಿ ನಿರಂತರವಾಗಿ ಮರಳು ದಂಧೆ ನಡೆಯುತ್ತಿರುವ ಬಗ್ಗೆ ಸಾರ್ವಜನಿಕರಿಂದ ಆಕ್ಷೇಪ ವ್ಯಕ್ತಗೊಂಡಿದ್ದು, ಹಲವಾರು ಬಾರಿ ಪೊಲೀಸರಿಗೆ ಮಾಹಿತಿ ನೀಡಲಾಗಿತ್ತು. ಆದರೂ ಆರೋಪಿಗಳು ಈ ದಂಧೆಯನ್ನು ಮುಂದುವರೆಸಿದ್ದಾರೆ.

ಮೊನ್ನೆಯ ಕಾರ್ಯಾಚರಣೆ ಸಂದರ್ಭ ಇನ್ನು ಹಲವರು ಪರಾರಿಯಾಗಿದ್ದಾರೆನ್ನಲಾಗಿದೆ. ವಾಹನ ವಶಪಡಿಸಿಕೊಂಡ ಮರುದಿನವೂ ಬಂಧಿತ ಆರೋಪಿಗೆ ಸೇರಿದ ಮತ್ತೊಂದು ವಾಹನದಲ್ಲಿ ಮತ್ತೆ ಇದೇ ಸ್ಥಳದಿಂದ ಮರಳು ತೆಗೆಯುವ ಪ್ರಯತ್ನ ನಡೆದಿದೆ ಎಂದು ಸಾರ್ವಜನಿಕರು ತಿಳಿಸಿದ್ದಾರೆ.

ಈ ದಂಧೆಯನ್ನು ಪೊಲೀಸರು ಕಟ್ಟುನಿಟ್ಟಾಗಿ ನಿಯಂತ್ರಿಸಬೇಕಿದೆ ಎಂದು ಆಗ್ರಹಿಸಿರುವ ಸಾರ್ವಜನಿಕರು ಠಾಣಾಧಿಕಾರಿ ತಕ್ಷಣದ ಸ್ಪಂದನವನ್ನು ಸ್ವಾಗತಿಸಿದ್ದಾರೆ.