ಮಡಿಕೇರಿ, ಏ. 16: ಕೊಡಗು ಸೇವಾಕೇಂದ್ರ ವತಿಯಿಂದ ಕೊಡಗಿನ ಕುಗ್ರಾಮವಾದ ಸೋಮವಾರಪೇಟೆ ತಾಲೂಕಿನ ಕುಂಬಾರಗಡಿಗೆ, ಸೂರ್ಲಬ್ಬಿ, ಮತ್ತು ಮಡಿಕೇರಿ ತಾಲೂಕಿನ ಗಾಳಿಬೀಡು ಪಂಚಾಯಿತಿ ವ್ಯಾಪ್ತಿಯ ಮುಟ್ಲು ಗ್ರಾಮಗಳ 200ಕ್ಕೂ ಹೆಚ್ಚು ಕುಟುಂಬಗಳಿಗೆ ಒಂದು ತಿಂಗಳಿಗಾಗುವಷ್ಟು ದಿನಸಿ ಸಾಮಗ್ರಿಗಳನ್ನು ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಮಾತನಾಡಿದ ಹಾಕತ್ತೂರಿನ ಕಾಫಿ ಬೆಳೆಗಾರ ತೇಲಪಂಡ ಪ್ರಮೋದ್ ಕೊರೊನಾ ವೈರಸ್ ಅನ್ನು ಮಟ್ಟ ಹಾಕುವ ನಿಟ್ಟಿನಲ್ಲಿ ಪ್ರಧಾನಮಂತ್ರಿಗಳು ಘೋಷಿಸಿದ ಲಾಕ್‍ಡೌನ್‍ನಿಂದ ದಿನಸಿ ಸಾಮಗ್ರಿಗಳಿಗೆ ವಾರದ ಮೂರು ದಿವಸ ಬೆಳಿಗ್ಗೆ 6 ಗಂಟೆಯಿಂದ 12 ಗಂಟೆಯವರೆಗೆ ಜಿಲ್ಲಾಡಳಿತ ಸಮಯ ನಿಗದಿಮಾಡಿದ್ದು, ಆದರೆ ಈ ಭಾಗದ ಜನರಿಗೆ ವಾಹನಗಳ ಸೌಲಭ್ಯ ಇಲ್ಲದ ಕಾರಣ, ಅವರುಗಳು ಹತ್ತಿರದ ಪಟ್ಟಣವಾದ ಮಾದಾಪುರ ಮತ್ತು ಸೋಮವಾರಪೇಟೆ ಸೇರುವ ಹೊತ್ತಿಗೆ ಮಧ್ಯಾಹ್ನವಾಗುತ್ತದೆ. ಅಲ್ಲಿ ಸಾಮಗ್ರಿ ಖರೀದಿಸಿ ಹಿಂತೆರಳುವ ವೇಳೆ ಅವಧಿ ಮೀರಿರುತ್ತದೆ. ಇದನ್ನು ಮನಗಂಡು ಈ ಗ್ರಾಮದ ಜನರಿಗೆ ಕೊಡಗು ಸೇವಾ ಕೇಂದ್ರ ಮತ್ತು ಹೊರಗಿನ ಸಮಾನ ಮನಸ್ಕ ದಾನಿಗಳಿಂದ ಸಂಗ್ರಹಿಸಿದ ಹಣದಿಂದ ಇನ್ನೂರಕ್ಕೂ ಹೆಚ್ಚು ಕಿಟ್ಟನ್ನು ವಿತರಿಸಲಾಗಿದೆ ಎಂದು ತಿಳಿಸಿದರು.

ಹಮ್ಮಿಯಾಲ ಮತ್ತು ಇತರ ಕಡೆಗಳಿಗೂ ಹಂಚುವ ಕಾರ್ಯಕ್ರಮವಿದೆ ಎಂದರು.

ಕಾರ್ಯಕ್ರಮದಲ್ಲಿ ಸಂಸ್ಥೆಯ ಸಂಚಾಲಕ ತಮ್ಮು ಪೂವಯ್ಯ, ಮೈಸೂರಿನ ವೈದ್ಯರು, ಸಮಾಜಸೇವಕ ತೇಲಪಂಡ ಎಂ. ಕಾರ್ಯಪ್ಪ, ಪುತ್ತರಿರ ಪಪ್ಪು ತಿಮ್ಮಯ್ಯ. ವೀರಾಜಪೇಟೆಯ ವಿ.ಟಿ. ಮದನ್, ತೇಲಪಂಡ ಅವಿನಾಶ್ ಪೂವಯ್ಯ ಮುಂತಾದವರು ಪಾಲ್ಗೊಂಡಿದ್ದರು.