*ಸಿದ್ದಾಪುರ, ಏ.15 : ಕೊರೊನಾ ಸೋಂಕು ಹರಡದಂತೆ ತಡೆಯಲು ಮುಂಜಾಗೃತಾ ಕ್ರಮವಾಗಿ ದೇಶವ್ಯಾಪಿ ದಿಢೀರ್ ಆಗಿ ಲಾಕ್ ಡೌನ್ ಆದೇಶ ಕಟ್ಟುನಿಟ್ಟಾಗಿ ಜಾರಿಯಾಗಿ ಮೂರು ವಾರಗಳೇ ಕಳೆದಿವೆÉ. ಇದೀಗ ಮತ್ತೆ ಎರಡನೇ ಹಂತದ ಲಾಕ್ ಡೌನ್ ಆದೇಶ ಜಾರಿಯಾಗಿರುವುದರಿಂದ ಹೊರ ರಾಜ್ಯ ಮತ್ತು ಜಿಲ್ಲೆಗಳಲ್ಲಿ ಸಿಲುಕಿಕೊಂಡಿರುವ ಕೊಡಗಿನವರ ಆತಂಕ ಹೆಚ್ಚಾಗಿದೆ.

ಲಾಕ್ ಡೌನ್ ಆದೇಶ ಜಾರಿಯಾದ ತಕ್ಷಣ ಬಹುತೇಕರು ತಮ್ಮ ಮನೆಗಳನ್ನು ಸೇರಿಕೊಂಡರು. ತಮ್ಮ ಊರುಗಳಲ್ಲಿಯೇ ಬದುಕು ಕಟ್ಟಿಕೊಂಡ ವರಿಗೆ ಲಾಕ್ ಡೌನ್ ಬಿಸಿ ಅಷ್ಟೊಂದು ದೊಡ್ಡ ಪ್ರಮಾಣದಲ್ಲಿ ಪರಿಣಾಮ ಬೀರಿಲ್ಲ. ಆದರೆ ಜ್ಞಾನದ ಹಸಿವನ್ನು ನೀಗಿಸಿಕೊಳ್ಳಲು ಮತ್ತು ಹೊಟ್ಟೆಯ ಹಸಿವನ್ನು ತಣಿಸಿಕೊಳ್ಳಲು ಊರು ಬಿಟ್ಟು ಊರಿಗೆ ತೆರಳಿದವರ ಸ್ಥಿತಿಯಂತೂ ಈಗ ಸಾಕ್ಷಾತ್ ನರಕವಾಗಿ ಬಿಟ್ಟಿದೆ. ಕುಟುಂಬದ ಸದಸ್ಯರಿಗೆ ಮತ್ತು ಕುಟುಂಬ ದಿಂದ ದೂರ ಇರುವವರಿಗೆ ಕಣ್ಣೀರು ಬಿಟ್ಟರೆ ಬೇರೆ ಪರಿಹಾರ ಕಾಣುತ್ತಿಲ್ಲ.

ಮಡಿಕೇರಿ ಬಳಿ ಕಾರ್ಯ ನಿರ್ವಹಿಸುತ್ತಿರುವ ಜವಾಹರ್ ನವೋದಯ ವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಲ್ಲಿ ಒಟ್ಟು 23 ಕೊಡಗಿನ ವಿದ್ಯಾರ್ಥಿಗಳನ್ನು ಮೈಗ್ರೆಷÀನ್ ಕೋರ್ಸಿಗೆಂದು ಮಧ್ಯ ಪ್ರದೇಶಕ್ಕೆ ಶಾಲಾ ಆಡಳಿತ ಮಂಡಳಿ ಕಳುಹಿಸಿಕೊಟ್ಟಿದೆ. ಕೊರೊನಾ ಲಾಕ್‍ಡೌನ್‍ನ ನಿರೀಕೆÀ್ಷಯೇ ಇಲ್ಲದ ವಿದ್ಯಾರ್ಥಿ ಸಮೂಹ ಮತ್ತು ವಿದ್ಯಾರ್ಥಿಗಳ ಪೋಷಕರು ಈಗ ಆತಂಕಕ್ಕೆ ಒಳಗಾಗಿದ್ದಾರೆ. ಏ.14 ರ ನಂತರ ಲಾಕ್‍ಡೌನ್ ಸಡಿಲಿಕೆಯಾಗಿ ಕೊಡಗಿನ ಮನೆಗಳನ್ನು ಸೇರಿ ಬಿಡಬಹುದೆಂದು ನಿರೀಕ್ಷೆಯಲ್ಲಿದ್ದ ವಿದ್ಯಾರ್ಥಿಗಳಿಗೆ ನಿರಾಶೆ ಮೂಡಿದೆ. ತಮ್ಮ ಮಕ್ಕಳು ಇಂದು ಅಥವಾ ನಾಳೆ ಬರಬಹುದು ಎಂದು ಕಾತುರದಿಂದ ಕಾಯುತ್ತಿದ್ದ ಪೋಷಕರಿಗೆ ಮೇ 3ರ ವರೆಗೆ ಲಾಕ್‍ಡೌನ್ ವಿಸ್ತರಣೆಯಾಗಿ ರುವುದು ಬರಸಿಡಿಲಾಗಿ ಪರಿಣಮಿಸಿದೆ.

ಬೇರೆ ಪರಿಸ್ಥಿತಿಗಳಾಗಿದ್ದರೆ ಹೇಗೋ ದಿನದೂಡಬಹುದಿತ್ತು, ಆದರೆ ಇಡೀ ವಿಶ್ವವನ್ನೇ ಕಾಡುತ್ತಿರುವ ಕೊರೊನಾ ವೈರಸ್ ದೇಶದಲ್ಲೂ ವ್ಯಾಪಿಸುತ್ತಿರುವುದರಿಂದ ಮಧ್ಯ ಪ್ರದೇಶದಲ್ಲಿರುವ ತಮ್ಮ ಮಕ್ಕಳ ಗತಿಯೇನು ಎಂದು ಪೋಷಕರು ಆತಂಕಗೊಂಡಿದ್ದಾರೆ. ಪ್ರತಿದಿನ ಮೊಬೈಲ್ ಫೋನ್‍ನಲ್ಲಿ ಮಾತನಾಡಿಕೊಳ್ಳುವ ಪೋಷಕರು ಹಾಗೂ ಮಕ್ಕಳು ಕಣ್ಣೀರು ಹಾಕಿಕೊಂಡೇ ದಿನ ಕಳೆಯುತ್ತಿದ್ದಾರೆ.

ಪೋಷಕರ ಮನವಿಗೆ ಸ್ಪಂದಿಸಿರುವ ಮಧ್ಯಪ್ರದೇಶದ ನವೋದಯ ವಿದ್ಯಾಲಯ ಆಡಳಿತ ಮಂಡಳಿ ರೈಲು ಸಂಚಾರ ಇಲ್ಲದೆ ಇರುವುದರಿಂದ ಬಸ್ ನಲ್ಲಿ ಕಳುಹಿಸಿ ಕೊಡುತ್ತೇವೆ, ಆದರೆ ಎಲ್ಲಾ ಜವಬ್ದಾರಿಗಳನ್ನು ನೀವೆ ವಹಿಸಿಕೊಳ್ಳಬೇಕೆಂದು ಹೇಳಿ ಕೈತೊಳೆದುಕೊಂಡು ಬಿಟ್ಟಿದೆ. ಬಹುತೇಕ ವಿದ್ಯಾರ್ಥಿಗಳ ಪೋಷಕರು ಕಾರ್ಮಿಕ ವರ್ಗದವರು ಹಾಗೂ ಆರ್ಥಿಕವಾಗಿ ಹಿಂದುಳಿದವರೇ ಆಗಿದ್ದು, ಅಸಹಾಯಕ ಸ್ಥಿತಿಯನ್ನು ಅನುಭವಿಸುತ್ತಿದ್ದಾರೆ.

ನರ್ಸ್‍ಗಳ ಕಣ್ಣೀರು

ಮತ್ತೊಂದೆಡೆ ಬೆಂಗಳೂರಿನ ವಿಜಯನಗರದ ವಿಜಯ ಆಸ್ಪತ್ರೆಯಲ್ಲಿ ಶುಶ್ರೂಷಕಿಯರಾಗಿ ಕಾರ್ಯ ನಿರ್ವಹಿಸುತ್ತಿದ್ದ ಕೊಡಗಿನ ವಿವಿಧ ಭಾಗಗಳ ಯುವತಿಯರು ಲಾಕ್‍ಡೌನ್ ಕಾರಣದಿಂದಲೇ ಸಂಕಷ್ಟಕ್ಕೆ ಸಿಲುಕಿದ್ದಾರೆ. ವೈರಸ್ ಹರಡುವ ಭೀತಿಯಿಂದ ಆಸ್ಪತ್ರೆಯನ್ನು ಮುಚ್ಚಲಾಗಿದ್ದು, ಅಭ್ಯತ್‍ಮಂಗಲ, ವೀರಾಜಪೇಟೆ, ಕುಶಾಲನಗರ ಮತ್ತಿತರ ಭಾಗಗಳ ಒಟ್ಟು ಎಂಟು ಮಂದಿ ಯುವತಿಯರು ತಾವಿದ್ದ ಹಾಸ್ಟೆಲ್‍ನಲ್ಲೇ ಕೆಲಸವಿಲ್ಲದೆ ಉಳಿದುಕೊಂಡು ಬಿಟ್ಟಿದ್ದಾರೆ. ಲಾಕ್‍ಡೌನ್‍ನಿಂದಾಗಿ ಸಾರಿಗೆ ವ್ಯವಸ್ಥೆಯಿಲ್ಲದೆ ಸ್ವಂತ ಊರಿಗೆ ಬರಲಾಗದೆ ಹಾಸ್ಟೆಲ್ ಬಾಡಿಗೆಯನ್ನು ನೀಡಲೂ ಆಗದೆ ಅಸಹಾಯಕ ರಾಗಿದ್ದಾರೆ. ಪೋಷಕರು ಬಡ ಕಾರ್ಮಿಕರಾಗಿದ್ದು, ಹಾಸ್ಟೆಲ್ ವೆಚ್ಚವನ್ನು ಭರಿಸಲಾಗದೆ ಕಣ್ಣೀರು ಹಾಕುತ್ತಿದ್ದಾರೆ.

ಜಿಲ್ಲಾಧಿಕಾರಿಗಳಿಗೆ ಮನವಿ

ನವೋದಯ ವಿದ್ಯಾಲಯದ ವಿದ್ಯಾರ್ಥಿಗಳ ಪೋಷಕರು ಹಾಗೂ ಶುಶ್ರೂಷಕಿಯರ ಪೋಷಕರು ತಾ.16 ರಂದು (ಇಂದು) ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲು ನಿರ್ಧರಿಸಿದ್ದಾರೆ. ತಮ್ಮ ಮಕ್ಕಳನ್ನು ಊರಿಗೆ ಕರೆ ತರಲು ಸಹಾಯ ಮಾಡುವಂತೆ ಕೋರಿಕೊಳ್ಳುವುದಾಗಿ ತಿಳಿಸಿರುವ ಪೋಷಕರು, ಜಿಲ್ಲೆಯನ್ನು ಪ್ರತಿನಿಧಿಸುತ್ತಿರುವ ಸಂಸದರು ಕೂಡ ಈ ಬಗ್ಗೆ ಗಮನ ಹರಿಸಬೇಕೆಂದು ಮನವಿ ಮಾಡಿದ್ದಾರೆ. -ಅಂಚೆಮನೆ ಸುಧಿ