ಮಡಿಕೇರಿ, ಏ. 15: ಜಿಲ್ಲೆಯಾದ್ಯಂತ ಕೊರೊನಾ ವೈರಸ್ ಸೋಂಕು ತಡೆಗಟ್ಟುವಿಕೆ ಮತ್ತು ನಿಯಂತ್ರಿಸುವ ನಿಟ್ಟಿನಲ್ಲಿ ಸರ್ಕಾರ ಮಾರ್ಚ್ 23 ರಿಂದ ಲಾಕ್‍ಡೌನ್ ಮಾಡಿದ್ದು, ಈ ಹಿನ್ನೆಲೆಯಲ್ಲಿ ಮದ್ಯ ಮಾರಾಟ ವಹಿವಾಟನ್ನು ನಿಷೇಧಿಸಲಾಗಿದೆ.

ಪರಿಸ್ಥಿತಿಯ ದುರ್ಲಾಭ ಪಡೆದು ಕೆಲ ಕಿಡಿಗೇಡಿಗಳು ಗ್ರಾಮಾಂತರ ಪ್ರದೇಶಗಳಲ್ಲಿ ಕಳ್ಳಭಟ್ಟಿ, ಗೇರುಹಣ್ಣಿನ ಸಾರಾಯಿಯಂತಹ ಮಾದಕ ದ್ರವ್ಯಗಳ ಅಕ್ರಮ ತಯಾರಿಕೆ ಮತ್ತು ಮಾರಾಟ ನಡೆಸುತ್ತಿರುವುದು ಇಲಾಖೆಯ ಗಮನಕ್ಕೆ ಬಂದಿದೆ.

ಸರ್ಕಾರ ಲಾಕ್‍ಡೌನ್‍ನ್ನು ಮೇ 3ರ ವರೆಗೆ ವಿಸ್ತರಿಸಿರುವುದರಿಂದ ಮದ್ಯ ನಿಷೇಧ ಸಂದರ್ಭದಲ್ಲಿ ಅಕ್ರಮ ನಡೆಯದಂತೆ ನಿಗಾವಹಿಸಲು ಈಗಾಗಲೇ ಅಬಕಾರಿ ತಂಡಗಳನ್ನು ರಚಿಸಲಾಗಿದೆ. ಅಕ್ರಮಗಳು ನಡೆಯದಂತೆ ಪ್ರತಿ ದಿನ ದಾಳಿ ಹಾಗೂ ಗಸ್ತು ನಡೆಸಲಾಗುತ್ತಿದೆ.

ಇಲ್ಲಿಯವರೆಗೆ 308 ದಾಳಿಗಳಲ್ಲಿ 10 ಪ್ರಕರಣಗಳನ್ನು ದಾಖಲಿಸಿ, 745 ಲೀ. ಬೆಲ್ಲದ ಹುಳಿರಸ, 13.750 ಲೀ. ಕಳ್ಳಭಟ್ಟಿ ಸಾರಾಯಿ, 8.280 ಲೀ. ಅಕ್ರಮ ಮದ್ಯವನ್ನು ವಶಪಡಿಸಿಕೊಂಡು ಆರೋಪಿಯನ್ನು ಬಂಧಿಸಲಾಗಿದೆ ಎಂದು ಅಬಕಾರಿ ಉಪ ಆಯುಕ್ತೆ ಪಿ. ಬಿಂದುಶ್ರೀ ಮಾಹಿತಿ ನೀಡಿದ್ದಾರೆ.