ನವದೆಹಲಿ, ಏ. 14: ಕೊರೊನಾ ವೈರಸ್ ಸೋಂಕು ಹರಡುವುದನ್ನು ಸಂಪೂರ್ಣವಾಗಿ ತಡೆಯುವ ಸಲುವಾಗಿ ದೇಶಾದ್ಯಂತ ಜಾರಿಯಲ್ಲಿರುವ ಲಾಕ್ಡೌನ್ ಅನ್ನು ಮೇ 3 ರವರೆಗೆ ವಿಸ್ತರಿಸಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಪ್ರಕಟಿಸಿದ್ದಾರೆ.ಇದರಿಂದ ದೇಶದಲ್ಲಿ ಲಾಕ್ಡೌನ್ ಅನ್ನು 18 ದಿನಗಳ ಕಾಲ ವಿಸ್ತರಿಸಿದಂತಾಗಿದೆ. ಆದರೆ, ಲಾಕ್ಡೌನ್ ನಿಂದ ಕಂಗೆಟ್ಟಿರುವ ಜನರಿಗೆ ಒಂದು ಸಿಹಿ ಸುದ್ದಿಯನ್ನೂ ನೀಡಿದ್ದಾರೆ. ಏ. 20ರ ನಂತರ ಕೊರೊನಾ ಸೋಂಕಿನಿಂದ ಮುಕ್ತವಾಗಿರುವ ಪ್ರದೇಶಗಳಲ್ಲಿ ಷರತ್ತುಬದ್ಧ ರಿಯಾಯಿತಿ ನೀಡುವ ಘೋಷಣೆ ಮಾಡಿದ್ದಾರೆ.ಇದಕ್ಕಾಗಿ ಎಲ್ಲಾ ರಾಜ್ಯ, ಜಿಲ್ಲೆಗಳು ಒಂದು ವಾರದ ಅಗ್ನಿ ಪರೀಕ್ಷೆ ಎದುರಿಸಬೇಕಾಗುತ್ತದೆ. ಈ ಅವಧಿಯಲ್ಲಿ ಲಾಕ್ಡೌನ್ ನಿಯಮಗಳ ಪಾಲನೆ, ಜನರ ಸಹಕಾರಗಳ ಮೇಲೆ ನಿಗಾ ವಹಿಸಲಾಗುವುದು. ಈ ಸಮಯದಲ್ಲಿ ಕೊರೊನಾ ಹಾಟ್ಸ್ಪಾಟ್ಗಳಲ್ಲದ ಪ್ರದೇಶಗಳಲ್ಲಿ 10 ಷರತ್ತುಗಳನ್ನೊಳಗೊಂಡ ರಿಯಾಯಿತಿ ನೀಡಲಾಗುವುದು ಎಂದಿದ್ದಾರೆ.
ಆದರೆ, ಈ ಪ್ರದೇಶದಲ್ಲಿ ಒಂದೊಮ್ಮೆ ಕೊರೊನಾ ವೈರಸ್ ಪಾದ ಊರಿದರೆ ತಕ್ಷಣ ಎಲ್ಲಾ ರಿಯಾಯಿತಿಗಳನ್ನು ಹಿಂಪಡೆಯಲಾಗುವುದು. ಬಡ ಜನರ ಸಂಕಷ್ಟ ಕಡಿಮೆಗೊಳಿಸಲು ಈ ನಿಯಮ ರೂಪಿಸಲಾಗಿದೆ. ಈ ಕುರಿತು ಸಂಬಂಧಿಸಿದ ರಾಜ್ಯ ಸರ್ಕಾರಗಳು ಬುಧವಾರ ವಿಸ್ತೃತ ಮಾರ್ಗಸೂಚಿ ಪ್ರಕಟಿಸಲಿವೆ ಎಂದಿದ್ದಾರೆ.
ಕೊರೊನಾ ಕುರಿತು ಬೇಜವಾಬ್ದಾರಿ ಬೇಡ, ಬೇರೆಯವರಿಗೂ ಬೇಜವಾಬ್ದಾರಿತನ ತೋರಲು ಬಿಡಬೇಡಿ. ಏಪ್ರಿಲ್ 20ರಿಂದ ಸೀಮಿತ ಪ್ರದೇಶಗಳಲ್ಲಿ ಸೀಮಿತ ರಿಯಾಯಿತಿಗಳು ದೊರೆಯಲಿದೆ. ಇದನ್ನು ಬಡವರನ್ನು ಗಮನದಲ್ಲಿರಿಸಿಕೊಂಡು ಮಾಡಲಾಗಿದೆ. ದಿನನಿತ್ಯದ ದುಡಿಮೆಯಿಂದ ಜೀವಿಸುವವರು ನಮ್ಮ ದೊಡ್ಡ ಕುಟುಂಬವಾಗಿದೆ. ಅವರ ಕಡೆಗೆ ಗಮನ ನೀಡಬೇಕಿದೆ ಎಂದಿದ್ದಾರೆ.
ದೇಶದಲ್ಲಿ ಕೊರೊನಾ ಹಾಟ್ಸ್ಪಾಟ್ಗಳನ್ನು ಗುರುತಿಸಿ ಮೊದಲಿಗಿಂತ ಹೆಚ್ಚು ನಿಗಾ ವಹಿಸಬೇಕು. ಹಾಟ್ಸ್ಪಾಟ್ ಆಗಿ ಬದಲಾಗುವ ಲಕ್ಷಣಗಳಿರುವ ಪ್ರದೇಶಗಳ ಮೇಲೂ ನಿಗಾ ವಹಿಸಬೇಕು. ಹೊಸ ಹಾಟ್ಸ್ಟಾಟ್ಗಳು ನಿರ್ಮಾಣವಾದಲ್ಲಿ ಕೊರೊನಾ ವಿರುದ್ಧದ ನಮ್ಮ ಎಲ್ಲಾ ಹೋರಾಟ ನಿಷ್ಫಲವಾಗುತ್ತದೆ ಎಂದು ಹೇಳಿದ್ದಾರೆ.
“ನಿಮ್ಮೆಲ್ಲರ ಸಹಕಾರದಿಂದ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಕಷ್ಟ ಸಹಿಸಿಕೊಂಡು ದೇಶವನ್ನು ರಕ್ಷಿಸಿದ್ದೀರಿ.ಇದರಲ್ಲಿ
(ಮೊದಲ ಪುಟದಿಂದ) ನೀವು ಎದುರಿಸಿದ ಕಷ್ಟಗಳ ಅರಿವಿದೆ. ಆಹಾರ, ಪ್ರಯಾಣ, ಮನೆ-ಕುಟುಂಬಗಳಿಂದ ದೂರವಿರುವ ಸಂಕಷ್ಟ ಎದುರಿಸಿದ್ದೀರಿ. ನೀವು ದೇಶಕ್ಕಾಗಿ ಶಿಸ್ತಿನ ಸಿಪಾಯಿಗಳ ತರ ನಿಮ್ಮ ಕರ್ತವ್ಯ ನಿಭಾಯಿಸಿದ್ದೀರಿ. ನಿಮಗೆಲ್ಲರಿಗೂ ನನ್ನ ನಮನಗಳು” ಎಂದು ನುಡಿದರು..
“ಡಾ.ಬಾಬಾ ಸಾಹೇಬ್ ಡಾ.ಬಿ.ಆರ್. ಅಂಬೇಡ್ಕರ್ ಅವರ ಜನ್ಮದಿನದಂದು ನಾವೆಲ್ಲರೂ ಸಾಮೂಹಿಕ ಶಕ್ತಿಯನ್ನು ಪ್ರದರ್ಶಿಸಬೇಕು. ಇದು ಅವರಿಗೆ ನಿಜವಾದ ಶ್ರದ್ಧಾಂಜಲಿ ಸಲ್ಲಿಸುವದಾಗಿದೆ. ಅವರ ಜೀವನ ಪ್ರತಿ ಸಂಕಷ್ಟವನ್ನು ಸಂಕಲ್ಪ ಶಕ್ತಿ ಹಾಗೂ ದೃಢತೆಯೊಂದಿಗೆ ಎದುರಿಸುವ ಸಂದೇಶ ನೀಡುತ್ತದೆ.
ಅನೇಕ ರಾಜ್ಯಗಳಲ್ಲಿ ಹೊಸ ವರ್ಷದ ಆರಂಭವಾಗಿದೆ. ಈ ಸಮಯದಲ್ಲಿ ನಾನು ಪ್ರತಿಯೊಬ್ಬರ ಉತ್ತಮ ಆರೋಗ್ಯವನ್ನು ಹಾರೈಸುತ್ತೇನೆ.
ಇತರ ದೇಶಗಳಲ್ಲಿ ಕೊರೊನಾ ಪರಿಸ್ಥಿತಿ ಹೀನಾಯವಾಗಿದೆ. ದೇಶದಲ್ಲಿ 550 ಪ್ರಕರಣಗಳಿದ್ದಾಗ ದೇಶಾದ್ಯಂತ 21 ದಿನಗಳ ಸಂಪೂರ್ಣಲಾಕ್ ಡೌನ್ ನಂತಹ ಮಹತ್ತರ ನಿರ್ಧಾರ ತೆಗೆದುಕೊಳ್ಳಲಾಗಿತ್ತು. ದೇಶದಲ್ಲಿ ಸಮಸ್ಯೆ ಹೆಚ್ಚಳವಾಗಲು ಕಾಯಲಿಲ್ಲ. ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಮತ್ತು ಲಾಕ್ ಡೌನ್ ನಿಂದ ದೇಶಕ್ಕೆ ಬಹಳ ಲಾಭವಾಗಿದೆ.
ಕೇವಲ ಆರ್ಥಿಕ ದೃಷ್ಟಿಯಿಂದ ನೋಡಿದರೆ ಇದು ದುಬಾರಿಯಾಗಿದೆ. ಬಹಳಷ್ಟು ದರ ತೆರಬೇಕಾಗಿದೆ. ಆದರೆ, ಭಾರತೀಯರ ಜೀವನದ ಮುಂದೆ ಇದನ್ನು ಹೋಲಿಸಲಾಗದು. ವಿಶ್ವಾದ್ಯಂತ ದೇಶ ತೆಗೆದುಕೊಂಡಿರುವ ಕ್ರಮಗಳ ಕುರಿತು ಚರ್ಚೆ ನಡೆಯುತ್ತಿದೆ” ಎಂದು ಮುಕ್ತ ನುಡಿಯಾಡಿದರು.