ಮಡಿಕೇರಿ, ಏ. 15: ನಿನ್ನೆಯಿಂದ ಕೇಂದ್ರ ಸರಕಾರವು ಮತ್ತೆ ಮೇ 3ರ ತನಕ ‘ಲಾಕ್‍ಡೌನ್’ ಮುಂದುವರೆಸಿ ರುವ ಬೆನ್ನಲ್ಲೇ ಜಿಲ್ಲಾಡಳಿತ ಎಂದಿನಂತೆ ವಾರದಲ್ಲಿ ಮೂರು ದಿವಸ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ಕಲ್ಪಿಸಿದೆ. ಆ ಮೇರೆಗೆ ಇಂದು ಜಿಲ್ಲೆಯಾದ್ಯಂತ ವ್ಯಾಪಾರಿಗಳು ಮತ್ತು ಸಾರ್ವಜನಿಕರು ಅಗತ್ಯ ವಸ್ತುಗಳನ್ನು ಕೊಂಡುಕೊಳ್ಳುವಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು.
ಆದರೆ ಮೊನ್ನೆ ಸೋಮವಾರದ ಸಂಖ್ಯೆಯಲ್ಲಿ ಇಂದು ಸಾರ್ವಜನಿಕರು ಕಂಡುಬರಲಿಲ್ಲ. ಇದೀಗ ಮೀನು - ಮಾಂಸ ಖರೀದಿಗೂ ಅವಕಾಶ ಕಲ್ಪಿಸಿರುವ ಹಿನ್ನೆಲೆಯಲ್ಲಿ ತರಕಾರಿ ವ್ಯಾಪಾರ ಅಷ್ಟಾಗಿ ಗೋಚರಿಸಲಿಲ್ಲ. ಬದಲಾಗಿ ವಾಹನಗಳ ಸಂಚಾರ ಸಾಕಷ್ಟು ಸಂಖ್ಯೆಯಲ್ಲಿ ಎದುರಾದರೂ ಎಲ್ಲಿಯೂ ಜನ ಜಂಗುಳಿ ಇರಲಿಲ್ಲ. ಗ್ರಾಹಕರು ಮಾರ್ಪಾಡುಗೊಂಡಿರುವ ವ್ಯವಸ್ಥೆಗೆ ಹೊಂದಿಕೊಂಡು ವೈದ್ಯಕೀಯ ಸೇವೆ, ಬ್ಯಾಂಕ್ ಸೇವೆಗಳನ್ನು ಬಳಸಿಕೊಂಡು ತಮ್ಮ ವ್ಯವಹಾರದಲ್ಲಿ ತೊಡಗಿಸಿಕೊಂಡಿದ್ದರು.
ಮಡಿಕೇರಿ ಸೇರಿದಂತೆ ಕೊಡಗಿನ ತಾಲೂಕು ಕೇಂದ್ರಗಳು, ಇತರ ಪಟ್ಟಣ ಪ್ರದೇಶಗಳಲ್ಲಿ ಸಾಮಾನ್ಯ ವ್ಯಾಪಾರ ವಹಿವಾಟು ಗೋಚರಿಸಿತು. ಮಧ್ಯಾಹ್ನ ವಾಗುತ್ತಿದ್ದಂತೆಯೇ ವ್ಯಾಪಾರ ಸ್ಥಗಿತಗೊಂಡು; ಸಾರ್ವಜನಿಕರು ತಮ್ಮ ತಮ್ಮ ಮನೆಗಳತ್ತ ತೆರಳುತ್ತಿದ್ದ ಚಿತ್ರಣ ಕಂಡುಬಂತು. ಪೊಲೀಸ್ ಇಲಾಖೆ ಮುನ್ನೆಚ್ಚರಿಕೆ ಕ್ರಮದೊಂದಿಗೆ ನಿರಂತರ ಸೂಚನೆ ನೀಡುತ್ತಿತ್ತು.
ಪೊಲೀಸ್ ಇಲಾಖೆ, ಸ್ಥಳೀಯ ಪಂಚಾಯಿತಿಗಳು, ಗೃಹ ರಕ್ಷಕ ಸಿಬ್ಬಂದಿ ಮುಂಜಾಗ್ರತಾ ಕ್ರಮ ಕೈಗೊಂಡಿದ್ದರು. ಸಾರ್ವಜನಿಕರು ಮತ್ತು ವ್ಯಾಪಾರಿಗಳು ಪರಸ್ಪರ ಅಂತರ ಕಾಯ್ದುಕೊಂಡು, ಕೊರೊನಾ ಸೋಂಕು ಹರಡದಂತೆ ತಮ್ಮ ಕೆಲಸ ಕಾರ್ಯಗಳನ್ನು ಕೈಗೊಳ್ಳಬೇಕೆಂದು ಧ್ವನಿವರ್ಧಕದಲ್ಲಿ ಪೊಲೀಸರು ಪದೇ ಪದೇ ಸಂದೇಶ ರವಾನಿಸತೊಡಗಿದ್ದರು.
ಮಧ್ಯಾಹ್ನ ಬಳಿಕ ವ್ಯಾಪಾರ- ವಹಿವಾಟು - ವಾಹನಗಳ ಸಂಚಾರ ಸ್ಥಗಿತಗೊಂಡು ಮತ್ತೆ ಕೊಡಗು ಸ್ತಬ್ಧ ಗೊಂಡ ದೃಶ್ಯ ಕಾಣುವಂತಾಯಿತು. ಆ ಬೆನ್ನಲ್ಲೇ ಎಂದಿನಂತೆ ಸ್ಥಳೀಯ ಆಡಳಿತ ಸ್ವಚ್ಛತಾ ಕಾರ್ಯದೊಂದಿಗೆ ಔಷಧಿ ಸಿಂಪಡಿಸಿ ಕೊರೊನಾ ಹರಡದಂತೆ ತನ್ನ ಕೆಲಸ ನಿರ್ವಹಿಸಿತು.