ವೀರಾಜಪೇಟೆ, ಏ. 15: ಬುಧವಾರ ಸಂತೆ ದಿನವಾದ್ದರಿಂದ ಕೊರೊನ ಲಾಕ್‍ಡೌನ್ ಸಡಿಲಿಕೆಯ ಅವಧಿಯಲ್ಲಿ ಇಂದು ವೀರಾಜಪೇಟೆ ಪಟ್ಟಣದಲ್ಲಿ ಜನ ಹಾಗೂ ವಾಹನ ಸಂಚಾರದ ದಟ್ಟಣೆ ಅಧಿಕಾವಾಗಿತ್ತು. ಬೆಳಗಿನ 6ಗಂಟೆಗೆ ನಿರ್ಬಂಧ ಸಡಿಲಿಕೆಯಾಗುತ್ತಲೇ ನಿರ್ಬಂಧದ ಷರತ್ತಿನಂತೆ ಪ್ರಾರಂಭವಾದ ದಿನಸಿ ಅಂಗಡಿಗಳು, ಕೋಳಿ, ಕುರಿ, ಮೀನು ಅಂಗಡಿಗಳ ಮುಂದೆ ಗ್ರಾಹಕರು ಜಮಾಯಿಸಿದ್ದುದು ಕಂಡು ಬಂತು.

ತರಕಾರಿ ವ್ಯಾಪಾರವನ್ನು ಇಲ್ಲಿನ ಖಾಸಗಿ ಹಾಗೂ ಸಾರಿಗೆ ಸಂಸ್ಥೆ ಬಸ್ಸು ನಿಲ್ದಾಣಗಳಿಗೆ ಸ್ಥಳಾಂತರಿಸಿದ್ದರಿಂದ ನ್ಯಾಯ ಸಮ್ಮತವಾದ ದರದಲ್ಲಿ ಅಪ್ಪಟ ತರಕಾರಿ ದೊರೆಯುತ್ತದೆ ಎಂದು ಭಾವಿಸಿ ಬಿಸಿಲಿನ ಬೇಗೆಯಲ್ಲೂ ಗ್ರಾಹಕರು ತರಕಾರಿಯನ್ನು ಖರೀದಿಸುತ್ತಿದ್ದರು. ಕೋಳಿ, ಕುರಿ, ಸ್ಥಳೀಯ ಹಸಿ ಮೀನಿನ ಮಾರಾಟದ ಬೆಲೆಯ ನಾಮಫಲಕಗಳನ್ನು ಪಟ್ಟಣ ಪಂಚಾಯಿತಿ ಎಲ್ಲ ಅಂಗಡಿಗಳ ಮುಂದೆ ತೂಗು ಹಾಕಿದ್ದರಿಂದ ವ್ಯಾಪಾರಿಗಳು ದುಬಾರಿ ಬೆಲೆಗೆ ಮಾರಾಟ ಮಾಡಲು ಹಿಂಜರಿಯುತ್ತಿದ್ದರು. ಮಾಂಸಹಾರಿ ಪದಾರ್ಥಗಳನ್ನು ಅಧಿಕ ಬೆಲೆಗೆ ಮಾರಾಟ ಮಾಡುವ ಅಂಗಡಿ ಮಳಿಗೆಗಳ ಪರವಾನಗಿಯನ್ನು ರದ್ದುಪಡಿಸುವುದರೊಂದಿಗೆ ದಂಡ ವಿಧಿಸಲಾಗುವುದು ಎಂದು ಪಟ್ಟಣ ಪಂಚಾಯಿತಿ ಷರತ್ತು ವಿಧಿಸಿದೆ.

ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಎಲ್ಲ ಬೇಕರಿಗಳು ನಿರ್ಬಂಧದ ಸಡಿಲಿಕೆ ಸಮಯದಲ್ಲಿ ತೆರೆದಿದ್ದವು. ವೀರಾಜಪೇಟೆ ಸುತ್ತಮುತ್ತವಿರುವ ತೋಟ ಕಾರ್ಮಿಕರು ಕಾಲ್ನಡಿಗೆಯಲ್ಲಿಯೇ ಪಟ್ಟಣಕ್ಕೆ ಬಂದು ಸಂತೆ ದಿನದ ಮಾದರಿಯಲ್ಲಿ ಸಾಮಗ್ರಿಗಳನ್ನು ಖರೀದಿಸುತ್ತಿದ್ದರು. ತೋಟ ಮಾಲೀಕರುಗಳು ವಾಹನದಲ್ಲಿ ಬಂದು ತರಕಾರಿ ದಿನಸಿ ಸಾಮಗ್ರಿಗಳನ್ನು ಕೊಂಡುಕೊಳ್ಳುತ್ತಿದ್ದರು.

ಇಲ್ಲಿನ ಎಲ್ಲ ರಾಷ್ಟ್ರೀಕೃತ ಬ್ಯಾಂಕ್‍ಗಳ ಮುಂದೆ ನಗದು ಪಡೆಯಲು ಗ್ರಾಹಕರು ಬೆಳಗಿನ 9ಗಂಟೆಗೆ ಸರದಿಯಲ್ಲಿ ನಿಂತಿದ್ದರು. ಎಲ್ಲರೂ ಮಾಸ್ಕ್ ಧರಿಸಿ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವಂತೆ ಬ್ಯಾಂಕ್‍ನ ಸಿಬ್ಬಂದಿಗಳು ಗ್ರಾಹಕರಿಗೆ ಸೂಚನೆ ನೀಡುತ್ತಿದ್ದರು. ಬ್ಯಾಂಕ್‍ನ ಒಳಗಡೆ ಹೋಗಲು ಅಂತರ ಕಾಯ್ದುಕೊಳ್ಳುವ ಪರಿಸ್ಥಿತಿಯಲ್ಲಿ ಎರಡರಿಂದ ಮೂರು ಮಂದಿಯನ್ನು ಬಿಡಲಾಗುತ್ತಿತ್ತು. ಸಹಕಾರ ಬ್ಯಾಂಕ್‍ಗಳ ಮುಂದೆಯೂ ಗ್ರಾಹಕರು ಅಂತರ ಕಾಯ್ದುಕೊಂಡು ಸರದಿ ಪ್ರಕಾರ ಬ್ಯಾಂಕ್‍ನೊಳಗೆ ಹೋಗುತ್ತಿದ್ದರು. ವಾಹನ ದಟ್ಟಣೆ ಅಧಿಕವಾದುದರಿಂದ ಬೆಳಗಿನ 9 ಗಂಟೆಯಿಂದ ಅಪರಾಹ್ನ 12ಗಂಟೆಯ ತನಕ ಪೊಲೀಸರು ವಿರಾಮವಿಲ್ಲದೆ ವಾಹನ ಸಂಚಾರವನ್ನು ನಿಯಂತ್ರಿಸುತ್ತಿದ್ದರು.

ಬೆಳಗ್ಗಿನ ಆರು ಗಂಟೆಯಿಂದ ಅಪರಾಹ್ನ 12ಗಂಟೆಯವರೆಗೆ ನಿರ್ಬಂಧದ ಸಡಿಲಿಕೆಯ ಸಮಯದಲ್ಲಿ ಪೊಲೀಸ್ ಇಲಾಖೆ ಏಕ ಮುಖ ಸಂಚಾರವನ್ನು ದಿಢೀರನೆ ಬದಲಾವಣೆ ಮಾಡಿದ್ದರಿಂದ ಗೋಣಿಕೊಪ್ಪಲು ರಸ್ತೆಯಿಂದ ಬಳಸಿ ಖಾಸಗಿ ಬಸ್ಸು ನಿಲ್ದಾಣ ತಲುಪಲು ಸುಮಾರು 90 ನಿಮಿಷಗಳು ಬೇಕಾಗುತ್ತದೆ ಎಂದು ವಾಹನ ಚಾಲಕರು ಪೊಲೀಸ್ ಇಲಾಖೆಯ ಈ ನಿರ್ಧಾರ ಕುರಿತು ಅಸಮಾಧಾನ ವ್ಯಕ್ತಪಡಿಸುತ್ತಿದ್ದರು.

ಇಲ್ಲಿನ ಸಾರ್ವಜನಿಕರ ಆಸ್ಪತ್ರೆಯಲ್ಲಿಯೂ ಸಂತೆ ದಿನವಾದರೂ ರೋಗಿಗಳ ಸಂಖ್ಯೆ ಕಡಿಮೆ ಇತ್ತು.