170 ಕೊರೊನಾ ಹಾಟ್‍ಸ್ಪಾಟ್ ಜಿಲ್ಲೆಗಳು
ನವದೆಹಲಿ, ಏ. 15: ದೇಶದಲ್ಲಿ 21 ದಿನಗಳ ಕಟ್ಟುನಿಟ್ಟಿನ ಲಾಕ್‍ಡೌನ್ ಮುಗಿದರೂ ಮಹಾಮಾರಿ ಕೊರೊನಾ ವೈರಸ್ ನಿಯಂತ್ರಣಕ್ಕೆ ಬಾರದ ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿ ಅವರು ಮತ್ತೆ 19 ದಿನ ಲಾಕ್‍ಡೌನ್ ಅನ್ನು ವಿಸ್ತರಿಸಿದ್ದಾರೆ. ಅಲ್ಲದೆ ದೇಶಾದ್ಯಂತ 170 ಜಿಲ್ಲೆಗಳನ್ನು ಕೊರೊನಾ ಹಾಟ್‍ಸ್ಪಾಟ್ ಎಂದು ಕೇಂದ್ರ ಸರ್ಕಾರ ಘೋಷಿಸಿದೆ. ಕೊರೊನಾ ಸೋಂಕು ಪ್ರಕರಣಗಳು ಆಧರಿಸಿ ಜಿಲ್ಲೆಗಳನ್ನು ಮೂರು ವರ್ಗಗಳಾಗಿ ವಿಂಗಡಿಸಲಾಗಿದ್ದು, ಹಾಟ್‍ಸ್ಪಾಟ್, ನಾನ್ ಹಾಟ್‍ಸ್ಪಾಟ್ ಮತ್ತು ಗ್ರೀನ್ ಎಂದು ವರ್ಗೀಕರಿಸಲಾಗಿದೆ. ದೇಶಾದ್ಯಂತ ಒಟ್ಟು 170 ಜಿಲ್ಲೆಗಳನ್ನು ಹಾಟ್‍ಸ್ಪಾಟ್ ಎಂದು ಗುರುತಿಸಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲಾವ್ ಅಗರವಾಲ್ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಹಾಟ್‍ಸ್ಪಾಟ್ ಜಿಲ್ಲೆಗಳಲ್ಲಿ ಪ್ರತಿ ಮನೆಯಲ್ಲೂ ತಪಾಸಣೆ ನಡೆಸಲಾಗುತ್ತದೆ. ಯಾವುದೇ ಪಾಸಿಟಿವ್ ಪ್ರಕರಣಗಳು ವರದಿಯಾಗದ ಜಿಲ್ಲೆಗಳಲ್ಲಿ ತಾ. 20 ರ ನಂತರ ಲಾಕ್‍ಡೌನ್ ಸಡಿಲಗೊಳಿಸಲಾಗುವುದು ಎಂದು ಹೇಳಿದ್ದಾರೆ. ಅಲ್ಲದೆ ದೇಶದಲ್ಲಿ ಕೊರೊನಾ ಇನ್ನೂ ಸಮೂಹಕ್ಕೆ ಹೋಗಿಲ್ಲ ಎಂದು ಅಗರವಾಲ್ ಅವರು ಸ್ಪಷ್ಟಪಡಿಸಿದ್ದಾರೆ. ಈ ಮಧ್ಯೆ ದೇಶಾದ್ಯಂತ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ 12 ಸಾವಿರ ಗಡಿ ದಾಟಿದ್ದು, 392 ಮಂದಿ ಮೃತಪಟ್ಟಿದ್ದಾರೆ.
ಕೊರೊನಾ ವೈರಸ್‍ಗೆ ವೈದ್ಯ ಬಲಿ
ಶಿಲ್ಲಾಂಗ್, ಏ. 15: ಮೇಘಾಲಯದಲ್ಲಿ ಹಿರಿಯ ವೈದ್ಯರೊಬ್ಬರು ಕೋವಿಡ್-19ನಿಂದ ಮೃತಪಟ್ಟಿದ್ದು, ಇದರೊಂದಿಗೆ ಕಣಿವೆ ರಾಜ್ಯದಲ್ಲಿ ಮಹಾಮಾರಿ ಕೊರೊನಾ ವೈರಸ್ ಮೊದಲ ಬಲಿ ಪಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕೊರೊನಾ ವೈರಸ್‍ನಿಂದ ವೈದ್ಯರ ಸಾವು ಖಚಿತಪಡಿಸಿದ ಮೇಘಾಲಯ ಮುಖ್ಯಮಂತ್ರಿ ಕೊನ್ರಾಡ್ ಕೆ. ಸಗ್ಮಾ ಅವರು, ಮೇಘಾಲಯದ ಮೊದಲ ಕೋವಿಡ್-19 ರೋಗಿಯೊಬ್ಬರು ನಿಧನರಾದರು ಎಂದು ತಿಳಿಸಲು ನನಗೆ ತುಂಬಾ ದುಃಖವಾಗುತ್ತಿದೆ. ಅವರ ಕುಟುಂಬ ಮತ್ತು ಪ್ರೀತಿಪಾತ್ರರಿಗೆ ನನ್ನ ಹೃತ್ಪೂರ್ವಕ ಸಂತಾಪ. ಅವರ ಆತ್ಮವು ಶಾಂತಿಯಿಂದ ವಿಶ್ರಾಂತಿ ಪಡೆಯಲಿ ಎಂದು ಹೇಳಿದ್ದಾರೆ. ಖಾಸಗಿ ಆಸ್ಪತ್ರೆಯೊಂದರ ಸಂಸ್ಥಾಪಕರಾಗಿದ್ದ 69 ವರ್ಷದ ವೈದ್ಯರೊಬ್ಬರಿಗೆ ಎರಡು ದಿನಗಳ ಹಿಂದೆ ಕೋವಿಡ್-19 ಪಾಸಿಟಿವ್ ದೃಢಪಟ್ಟಿತ್ತು.
ಎರಡು ಜಾತಿಯ ಬಾವಲಿಗಳಲ್ಲಿ ಕೊರೊನಾ
ನವದೆಹಲಿ, ಏ. 15: ವಿಶ್ವಾದ್ಯಂತ ಮರಣ ಮೃದಂಗ ಭಾರಿಸುತ್ತಿರುವ ಮಾರಕ ಕೊರೊನಾ ವೈರಸ್ ಚೀನಾದಲ್ಲಿ ಮಾತ್ರವಲ್ಲ, ಭಾರತದಲ್ಲಿರುವ ಎರಡು ಜಾತಿಯ ಬಾವಲಿಗಳಲ್ಲೂ ಪತ್ತೆಯಾಗಿದೆ ಎಂದು ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐಸಿಎಂಆರ್)ನ ಸಂಶೋಧಕರು ಹೇಳಿದ್ದಾರೆ. ತಾ. 13 ರಂದು ಐಸಿಎಂಆರ್ ಪ್ರಕಟಿಸಿರುವ ಜರ್ನಲ್‍ನಲ್ಲಿ ಈ ವರದಿ ಪ್ರಕಟವಾಗಿದ್ದು, ವಿಶ್ವಾದ್ಯಂತ ಈಗಾಗಲೇ 2ಲಕ್ಷಕ್ಕೂ ಅಧಿಕ ಮಂದಿಯನ್ನು ಭಾದಿಸುತ್ತಿರುವ ಕೊರೊನಾ ವೈರಸ್ ಸೋಂಕಿಗೆ ಸಂಬಂಧಿಸಿದಂತೆ ವಿಶ್ವಾದ್ಯಂತ ಹಲವು ದೇಶಗಳ ವಿಜ್ಞಾನಿಗಳು ಸಂಶೋಧನೆ ಕೈಗೊಂಡಿದ್ದು, ಈ ಪೈಕಿ ಭಾರತೀಯ ವಿಜ್ಞಾನಿಗಳೂ ಮುಂಚೂಣಿಯಲ್ಲಿದ್ದಾರೆ. ವೈರಸ್ ಗುಣಲಕ್ಷಣಗಳು ಅದರ ಮೂಲಗಳನ್ನು ಹುಡುಕುತ್ತಿದ್ದ ವಿಜ್ಞಾನಿಗಳಿಗೆ ಇದೀಗ ಅಚ್ಚರಿ ಅಂಶ ತಿಳಿದುಬಂದಿದ್ದು, ಭಾರತದಲ್ಲಿರುವ ಎರಡು ಜಾತಿಯ ಬಾವಲಿಗಳ ಕೊರೊನಾ ವೈರಸ್‍ನ ಗುಣಲಕ್ಷಣಗಳು ಪತ್ತೆಯಾಗಿದೆ. ಅಂತೆಯೇ ಈ ಬಾವಲಿಗಳು ಸೋಂಕುಗಳನ್ನ ಹರಡುವ ಮತ್ತು ಸಂರಕ್ಷಿಸುವ ಸಾಮಥ್ರ್ಯ ವನ್ನು ಹೊಂದಿವೆ. ಆದರೆ ಬಾವಲಿಗಳು ಈ ವೈರಸ್ ಅನ್ನು ಮಾನವರಿಗೆ ಪ್ರಸರಿಸುವ ಕುರಿತು ಯಾವುದೇ ಮಾಹಿತಿ ಲಭ್ಯವಾಗಿಲ್ಲ ಎಂದು ಪುಣೆಯ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿ ವಿಜ್ಞಾನಿ ಡಾ. ಪ್ರಗ್ಯಾ ಡಿ. ಯಾದವ್ ಹೇಳಿದ್ದಾರೆ. ಕೇರಳ, ಕರ್ನಾಟಕ, ಹಿಮಾಚಲ ಪ್ರದೇಶ, ಪುದಚೇರಿ ಮತ್ತು ತಮಿಳುನಾಡು ಸೇರಿದಂತೆ ದೇಶದ 7 ರಾಜ್ಯಗಳಿಂದ ತರಲಾಗಿದ್ದ ಸುಮಾರು 25 ಜಾತಿಯ ಬಾವಲಿಗಳನ್ನು ವಿಜ್ಞಾನಿಗಳು ಸಂಶೋಧನೆಗೆ ಒಳಪಡಿಸಿದ್ದು, ಈ ಪೈಕಿ ಸ್ಟೆರೊಪಸ್ ಮತ್ತು ರೌಸೆಟ್ಟಸ್ ಎಂಬ 2 ಜಾತಿಯ ಬಾವಲಿಗಳಲ್ಲಿ ಮಾತ್ರ ಕೊರೊನಾ ವೈರಸ್ ಲಕ್ಷಣಗಳು ಕಂಡುಬಂದಿವೆ.
2022 ರವರೆಗೆ ಸಾಮಾಜಿಕ ಅಂತರ ಅಗತ್ಯ
ವಾಷಿಂಗ್ಟನ್, ಏ. 15: ಕೇವಲ ಲಾಕ್‍ಡೌನ್‍ನಿಂದ ಮಾತ್ರ ಮಾರಕ ಕೊರೊನಾ ವೈರಸ್ ಹರಡುವಿಕೆಯನ್ನು ತಡೆಗಟ್ಟಲು ಸಾಧ್ಯವಿಲ್ಲ, 2022 ರವರೆಗೂ ಸಾಮಾಜಿಕ ಅಂತರ ಕಾಯ್ದುಕೊಂಡರೆ ಮಾತ್ರ ಈ ಜಗತ್ತು ವೈರಸ್ ಸೋಂಕಿನಿಂದ ವಿಮುಕ್ತಿ ಪಡೆಯಲಿದೆ ಎಂದು ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ. ವಿಶ್ವಾದ್ಯಂತ ಮರಣ ಮೃದಂಗ ಭಾರಿಸುತ್ತಿರುವ ಮಾರಕ ಕೊರೊನಾ ವೈರಸ್ ಸೋಂಕು ಪ್ರಸರಣದ ಹಿನ್ನಲೆ ಎಚ್ಚರಿಕೆ ನೀಡಿರುವ ಹಾವರ್ಡ್ ವಿಜ್ಞಾನಿಗಳು, ಕೇವಲ ಒಮ್ಮೆ ಲಾಕ್‍ಡೌನ್ ಜಾರಿಗೊಳಿಸುವ ಮೂಲಕ ಕೊರೊನಾ ವೈರಾಣು ಸೋಂಕು ಹರಡುವುದನ್ನು ತಡೆಗಟ್ಟಲು ಸಾಧ್ಯವಾಗದು. 2022ರ ವರೆಗೂ ಸಾಮಾಜಿಕ ಅಂತರ (ದೈಹಿಕ ಅಂತರ) ಪಾಲಿಸುವಂತಹ ಕಠಿಣ ಕ್ರಮ ಜಾರಿಗೊಳಿಸಿದರೆ ಮಾತ್ರ ಮಾರಾಣಾಂತಿಕ ವೈರಸ್‍ನಿಂದ ಜಗತ್ತು ವಿಮುಕ್ತಿಯಾಗುವ ಸಾಧ್ಯತೆಯಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಅಮೇರಿಕಾದಲ್ಲಿ ಕೊರೊನಾ ಸೋಂಕಿನಿಂದ ಮರಣಗಳ ಸಂಖ್ಯೆ ತಾರಕಕ್ಕೇರಿ (25 ಸಾವಿರ) ಲಕ್ಷಾಂತರ ಮಂದಿ ಸೋಂಕಿಗೆ ಒಳಗಾಗಿರುವ ಹಿನ್ನೆಲೆ ಕೊರೊನಾ ಸಾಂಕ್ರಾಮಿಕ ರೋಗದ ಪರಿಣಾಮಗಳ ಬಗ್ಗೆ ವಿಜ್ಞಾನಿಗಳು ಅಧ್ಯಯನ ನಡೆಸುತ್ತಿದ್ದಾರೆ.
ಸುಳ್ಳು ವದಂತಿ : ವಿನಯ್ ದುಬೆ ಬಂಧನ
ಮುಂಬೈ, ಏ. 15: ಸುಳ್ಳು ವದಂತಿ ಹಬ್ಬಿಸಿ ಪ್ರಚೋದನೆ ನೀಡಿ ಸಾವಿರಾರು ವಲಸಿಗರು ಮುಂಬೈಯ ಬಾಂದ್ರಾ ನಿಲ್ದಾಣದಲ್ಲಿ ಸೇರುವಂತೆ ಮಾಡಿದ ವಿನಯ್ ದುಬೆಯನ್ನು ಪೊಲೀಸರು ಬಂಧಿಸಿದ್ದಾರೆ. ಸ್ವಘೋಷಿತ ಕಾರ್ಮಿಕ ನಾಯಕನಾಗಿರುವ ವಿನಯ್ ದುಬೆ ಸೋಷಿಯಲ್ ಮೀಡಿ ಯಾಗಳಲ್ಲಿ ಚಲೋ ಘರ್ ಕಿ (ಮನೆಗೆ ಹೋಗೋಣ) ಎಂಬ ಅಭಿಯಾ ನವನ್ನು ಆರಂಭಿಸಿದ್ದರು. ಇದರಿಂದ ಕೊರೊನಾ ವೈರಸ್ ಲಾಕ್‍ಡೌನ್‍ನಿಂದ ಅಲ್ಲಲ್ಲೇ ಸಿಕ್ಕಿಹಾಕಿಕೊಂಡಿದ್ದ ವಲಸಿಗರು ತಮ್ಮ ತಮ್ಮ ಊರು ಗಳಿಗೆ ಹೋಗಲು ಪ್ರಚೋದಿಸಿದ್ದ. ಈ ವೀಡಿಯೊ ವ್ಯಾಪಕವಾಗಿ ವೈರಲ್ ಆಗಿತ್ತು. ವಿನಯ್ ದುಬೆ ಫೇಸ್‍ಬುಕ್ ಮತ್ತು ಟ್ವಿಟ್ಟರ್‍ನಲ್ಲಿ ಹಾಕಿರುವ ಪೋಸ್ಟ್‍ನಿಂದಾಗಿ ಪ್ರಚೋದನೆ ಸಿಕ್ಕಿ ಲಾಕ್‍ಡೌನ್, ಸಾಮಾಜಿಕ ಅಂತರದ ನಿಯಮ ಮೀರಿ ಬಾಂದ್ರಾ ರೈಲು ನಿಲ್ದಾಣದ ಹತ್ತಿರ ಬಂದು ತಮ್ಮ ಊರುಗಳಿಗೆ ಹೋಗಲು ಪ್ರಯತ್ನಿಸಿದರೇ ಎಂಬ ಬಗ್ಗೆ ಮುಂಬೈ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಈ ಬಾರಿ ನೈರುತ್ಯ ಮುಂಗಾರು ಸಾಮಾನ್ಯ
ನವದೆಹಲಿ, ಏ. 15: ಈ ವರ್ಷ ನೈರುತ್ಯ ಮುಂಗಾರು ಸಾಮಾನ್ಯವಾಗಿದ್ದು, ವಾಡಿಕೆಯಂತೆ ಮಳೆ ಸುರಿಯುವ ನಿರೀಕ್ಷೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಹೇಳಿದೆ. ಇದು ದೇಶದ ರೈತರಲ್ಲಿ ಭರವಸೆ ಮೂಡಿಸಿದೆ. ಈ ವರ್ಷ ದೀರ್ಘಾವಧಿಯ ಸರಾಸರಿ ಮಳೆ ಶೇ. 100 ಮಳೆಯಾಗುವ ಸಾಧ್ಯತೆ ಇದೆ. ಇದನ್ನು ಸಾಮಾನ್ಯವೆಂದು ಪರಿಗಣಿಸಲಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ನಿರ್ದೇಶಕ ಎಂ. ಮಹಾಪತ್ರ ತಿಳಿಸಿದ್ದಾರೆ. ಈ ವರ್ಷ ವಾಡಿಕೆಯಂತೆ ಸಾಮಾನ್ಯ ಮಳೆಯಾಗಲಿದೆ ಎಂದು ಮಹಾಪತ್ರ ಅವರು ಹೇಳಿದ್ದಾರೆ. ಐಎಂಡಿ ದೇಶದಲ್ಲಿ ಮುಂಗಾರು ಆರಂಭವಾಗುವ ಮತ್ತು ಅಂತ್ಯಗೊಳ್ಳುವ ದಿನಾಂಕಗಳನ್ನು ಪರಿಸ್ಕರಿಸಲಿದೆ ಎಂದು ಕೇಂದ್ರ ಭೂ ವಿಜ್ಞಾನ ಸಚಿವಾಲಯದ ಕಾರ್ಯದರ್ಶಿ ಎಂ. ರಾಜೀವ್ ತಿಳಿಸಿದ್ದಾರೆ. ಭಾರತದಲ್ಲಿ ಕಳೆದ 50 ವರ್ಷಗಳ ಸರಾಸರಿ ಮುಂಗಾರು ಮಳೆ ಪ್ರಮಾಣ 96 ಪರ್ಸೆಂಟ್‍ನಿಂದ 104 ಪರ್ಸೆಂಟ್‍ನಡುವೆ ಇದೆ. ಈ ವರ್ಷ ಇದರ ಪ್ರಮಾಣ ಶೇ. 100 ರಷ್ಟು ನಿರೀಕ್ಷಿಸಲಾಗಿದೆ. ನಾಲ್ಕು ತಿಂಗಳ ಅವಧಿಯ ಮುಂಗಾರು ಜೂನ್‍ನಿಂದ ಆರಂಭಗೊಳ್ಳಲಿದೆ.
ವೈರಸ್ ಸೋಂಕಿತ ಮಹಿಳೆ ಆತ್ಮಹತ್ಯೆ
ಮುಂಬೈ, ಏ. 15: ಕೊರೊನಾ ವೈರಸ್ ಸೋಂಕಿಗೆ ತುತ್ತಾಗಿದ್ದ 29 ವರ್ಷದ ಮಹಿಳೆಯೊಬ್ಬರು ತಮ್ಮ ವೇಲ್‍ನಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಮುಂಬೈನ ನಾಯರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಹಿಳೆ ಆಸ್ಪತ್ರೆಯ ವಾರ್ಡ್ ನಂಬರ್ 25ರಲ್ಲಿ ಬಾತ್ ರೂಂನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಇತ್ತೀಚೆಗೆ ಆಸ್ಪತ್ರೆಗೆ ದಾಖಲಾಗಿದ್ದ ಮಹಿಳೆಯನ್ನು ಕೋವಿಡ್-19ಗೆ ಒಳಪಡಿಸಲಾಗಿತ್ತು. ಪರೀಕ್ಷೆಯಲ್ಲಿ ಪಾಸಿಟಿವ್ ಬಂದಿದ್ದರಿಂದ ನೊಂದು ಆತ್ಮಹತ್ಯೆಗೆ ಶರಣಾಗಿದ್ದಾರೆ. ಮಹಿಳೆಯ ಮೃತದೇಹ ಬಾತ್ ರೂಂನಲ್ಲಿ ಪತ್ತೆಯಾಗಿದ್ದು ಇದನ್ನು ಗಮನಿಸಿದ ಆಸ್ಪತ್ರೆ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಬಂದ ಪೊಲೀಸರು ಆಕಸ್ಮಿಕ ಸಾವು ಎಂದು ಪ್ರಕರಣ ದಾಖಲಿಸಿದ್ದಾರೆ.