ಕಣಿವೆ, ಏ. 13 : ಕೊರೊನಾ ವೈರಸ್ ಹರಡುವಿಕೆ ತಪ್ಪಿಸಲು ರಾಜ್ಯ ಹಾಗೂ ದೇಶ ಸಂಪೂರ್ಣ ಲಾಕ್ ಡೌನ್ ಆಗಿರುವಾಗ ಪ್ರವಾಸೀ ಚಟುವಟಿಕೆಗಳನ್ನು ಕೂಡ ಸರ್ಕಾರ ಬಂದ್ ಮಾಡಿತ್ತು. ಆದರೆ ಕುಶಾಲನಗರ ಸಮೀಪದ ಏಳನೇ ಹೊಸಕೋಟೆ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಪ್ಯಾಡಿಂಗ್ಟನ್ ರೆಸಾರ್ಟ್‍ನಲ್ಲಿ ಪ್ರವಾಸಿಗರು ಬಂದು ತಂಗಿದ್ದು ಮೋಜು ಮಸ್ತಿಯಲ್ಲಿ ತೊಡಗಿದ್ದಾರೆ ಎಂಬ ಸ್ಥಳೀಯರ ದೂರಿನ ಮೇರೆಗೆ ಸುಂಟಿಕೊಪ್ಪ ಪೆÇಲೀಸ್ ಠಾಣೆಯಲ್ಲಿ ಭಾನುವಾರ ದೂರು ದಾಖಲಾಗಿತ್ತು. ಬಳಿಕ ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಡÀ ಕೊಡಗು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರ ಆದೇಶದ ಮೇರೆಗೆ ಸೋಮವಾರಪೇಟೆ ತಾಲೂಕು ಪಂಚಾಯತಿ ಕಾರ್ಯನಿರ್ವಹಣಾಧಿಕಾರಿ ಸುನಿಲ್ ಅವರು ಪಂಚಾಯಿತಿ ರಾಜ್ ಕಾಯಿದೆಯನ್ನು ಬಳಸಿ ಪ್ಯಾಡಿಂಗ್‍ಟನ್ ರೆಸಾರ್ಟ್‍ಗೆ ಏಳನೇ ಹೊಸಕೋಟೆ ಗ್ರಾಮ ಪಂಚಾಯತಿ ಕಾರ್ಯಾಲಯದಿಂದ ನೀಡಿದ್ದ ಅನುಮತಿ ರದ್ದುಗೊಳಿಸಿ ಕೂಡಲೇ ರೆಸಾರ್ಟ್ ಮುಚ್ಚುವಂತೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಸೋಮವಾರ ಲಿಖಿತ ನಿರ್ದೇಶನ ನೀಡಿದರು. ಸೋಮವಾರ ರೆಸಾರ್ಟ್‍ಗೆ ತೆರಳಿದ ಪಂಚಾಯಿತಿ ಅಧಿಕಾರಿ ಎಚ್.ಪಿ.ರವೀಶ್ ಮತ್ತು ಸಿಬ್ಬಂದಿಗಳು ರೆಸಾರ್ಟ್ ಮುಚ್ಚಿಸಿದ್ದಾರೆ. ಅಲ್ಲದೇ ರೆಸಾರ್ಟ್‍ನ ಅಡುಗೆ ಕೋಣೆ ಮತ್ತು ಮುಖ್ಯ ಪ್ರವೇಶ ದ್ವಾರಕ್ಕೆ ಬೀಗ ಜಡಿದಿದ್ದು ಮುಂದಿನ ಕ್ರಮಕ್ಕೆ ತಾಲೂಕು ಪಂಚಾಯಿತಿಗೆ ಮಾಹಿತಿ ನೀಡಿದ್ದಾರೆ. ರೆಸಾರ್ಟ್‍ಗೆ ಬೀಗ ಜಡಿಯುವುದಕ್ಕೂ ಮೊದಲು ಸುಂಟಿಕೊಪ್ಪ ಠಾಣಾಧಿಕಾರಿ ತಿಮ್ಮಪ್ಪ ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಎಚ್.ಪಿ. ರವೀಶ್ ಭಾನುವಾರ ರೆಸಾರ್ಟ್ ಬಳಿ ನಡೆದ ಘಟನೆಯ ಬಗ್ಗೆ ಸ್ಥಳೀಯರಿಂದ ಮಾಹಿತಿ ಪಡೆದರು.ಇದಕ್ಕೂ ಮುನ್ನ ಮಧ್ಯಾಹ್ನದ ವೇಳೆಗೆ ಅಧಿಕಾರಿಗಳು ರೆಸಾರ್ಟ್‍ಗೆ ತೆರಳಿ ವ್ಯವಸ್ಥಾಪಕಿ ರಶ್ಮಿ ಅವರಿಗೆ ಪರವಾನಗಿ ರದ್ದುಪಡಿಸಿರುವ ಲಿಖಿತ ಆದೇಶವನ್ನು ಹಸ್ತಾಂತರಿಸಿದರು. ಅಲ್ಲದೆ ಬೀಗ ಜಡಿಯಲು ಮುಂದಾದಾಗ, ರೆಸಾರ್ಟ್ ಪಾಲುದಾರ ಪ್ರವೀಣ್ ಇದಕ್ಕೆ ಆಕ್ಷೇಪಿಸಿ, ತನ್ನ ಸಂಸ್ಥೆಗೂ ಪ್ರಕರಣಕ್ಕೂ ಯಾವುದೇ ಸಂಬಂಧವಿಲ್ಲ; ಅಲ್ಲದೆ ನಿನ್ನೆ ರೆಸಾರ್ಟ್‍ನ ವಿರುದ್ಧ ಯಾವುದೇ ಕೇಸು ದಾಖಲಾಗಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಯಾವ ಆಧಾರದ

(ಮೊದಲ ಪುಟದಿಂದ) ಮೇಲೆ ಬೀಗಮುದ್ರೆ ಜಡಿಯುತ್ತೀರಿ ಎಂದು ಪ್ರಶ್ನಿಸಿದರಲ್ಲದೆ, ರೆಸಾರ್ಟ್‍ನಲ್ಲಿ ನೌಕರರು ಹಾಗೂ ಕುಟುಂಬ ವಾಸವಿದ್ದು, ಆಡಳಿತ ಬೀಗ ಜಡಿಯಲು ಮುಂದಾದರೆ ನ್ಯಾಯಾಲಯದ ಮೊರೆ ಹೋಗುವುದಾಗಿ ಎಚ್ಚರಿಸಿದರು. ಬೆಳವಣಿಗೆಯಿಂದ ಕಸಿವಿಸಿಗೊಂಡ ಅಧಿಕಾರಿಗಳು ಪರವಾನಗಿ ರದ್ಧತಿಯ ಆದೇಶ ನೀಡಿ ಹಿಂತಿರುಗಿದರು. ನಂತರ ಹಿರಿಯ ಅಧಿಕಾರಿಗಳೊಂದಿಗೆ ಮಧ್ಯಾಹ್ನದ ಬಳಿಕ ಆಗಮಿಸಿದ ಅಧಿಕಾರಿಗಳು ರೆಸಾರ್ಟ್‍ನ ಗೇಟಿಗೆ ಬೀಗ ಹಾಕಿದರಲ್ಲದೆ, ಅಡುಗೆ ಮನೆಗೂ ಬೀಗ ಜಡಿದರು.

ಖಂಡನೆ

ಏಳನೇ ಹೊಸಕೋಟೆಯಲ್ಲಿ ಲಾಕ್‍ಡೌನ್ ದಿನದಲ್ಲಿ ರೆಸಾರ್ಟ್‍ನಲ್ಲಿ ಪ್ರವಾಸಿಗರಿಗೆ ಕೊಠಡಿ ನೀಡಿ ಪ್ರವಾಸೋದ್ಯಮಕ್ಕೆ ಅವಕಾಶ ಕಲ್ಪಿಸಿರುವುದು ಖಂಡನೀಯ. ಇದು ಸರ್ಕಾರದ ನಿಯಮಗಳ ಉಲ್ಲಂಘನೆಯಾಗುತ್ತದೆ.

ಈಗಾಗಲೇ ಕೊಡಗು ಜಿಲ್ಲೆಯಲ್ಲಿ ಎಲ್ಲಾ ರೆಸಾರ್ಟ್, ಹೊಟೇಲ್, ರೆಸ್ಟೋರೆಂಟ್‍ಗಳು ಕೂಡ ಸರ್ಕಾರದ ಆದೇಶಕ್ಕೆ ಮನ್ನಣೆ ನೀಡಿ ತಮ್ಮ ಎಲ್ಲಾ ವಹಿವಾಟುಗಳನ್ನು ಸಂಪೂರ್ಣವಾಗಿ ನಿಲುಗಡೆ ಮಾಡಿದೆ. ಹೀಗಿದ್ದರೂ ರೆಸಾರ್ಟ್ ಒಂದು ವಹಿವಾಟು ನಡೆಸಿರುವುದು ವಿಷಾದನೀಯ. ಮುಂದಿನ ದಿನಗಳಲ್ಲಿ ಇಂತಹ ಯಾವುದೇ ಕಾರ್ಯಕ್ಕೂ ಕೊಡಗಿನ ಯಾವುದೇ ಪ್ರವಾಸೋದ್ಯಮಿಗಳು ಅವಕಾಶ ನೀಡಬಾರದು. ಸರ್ಕಾರದ ಸೂಚನೆಯನ್ನು ಕಟ್ಟುನಿಟ್ಟಾಗಿ ಪಾಲಿಸಿ, ಸಹಕರಿಸಬೇಕೆಂದು ಕೊಡಗು ಹೊಟೇಲ್, ರೆಸ್ಟೋರೆಂಟ್ ಮತ್ತು ರೆಸಾರ್ಟ್ ಅಸೋಸಿಯೇಷನ್ ಅಧ್ಯಕ್ಷ ನಾಗೇಂದ್ರ ಪ್ರಸಾದ್ ಹೇಳಿಕೆಯಲ್ಲಿ ಮನವಿ ಮಾಡಿದ್ದಾರೆ.

ಕಪ್ಪುಚುಕ್ಕೆ

ಕೊಡಗು ಜಿಲ್ಲಾಡಳಿತವು ಕೊರೊನಾ ವಿರುದ್ಧ ಅತ್ಯಂತ ಯಶಸ್ವಿಯಾಗಿ ಹೋರಾಡುತ್ತಿರುವ ಸಂದರ್ಭದಲ್ಲಿ ರೆಸಾರ್ಟ್ ಕಾನೂನನ್ನು ನಿರ್ಲಕ್ಷಿಸಿದ್ದು, ಇದನ್ನು ಕೊಡಗು ಟೂರಿಸಂ ಅಸೋಸಿಯೇಷನ್ ಖಂಡಿಸಿದೆ. ಕೊಡಗಿನ ಹಲವಾರು ಹೊಟೇಲ್‍ಗಳು, ಹೋಂ ಸ್ಟೇಗಳು ಜಿಲ್ಲಾಡಳಿತಕ್ಕೆ ತಮ್ಮ ಕೊಠಡಿಗಳನ್ನು ಉಚಿತವಾಗಿ ಬಿಟ್ಟುಕೊಡಲು ತೀರ್ಮಾನಿಸಿದ್ದರೂ ಇಂತಹ ಹಣದಾಹಿ ರೆಸಾರ್ಟ್‍ಗಳಿಂದ ಕೊಡಗಿಗೆ ಕಪ್ಪುಚುಕ್ಕೆಯಾಗಿದೆ ಎಂದು ಕಾರ್ಯದರ್ಶಿ ಮಾದೇಟಿರ ತಿಮ್ಮಯ್ಯ ಹಾಗೂ ಅಧ್ಯಕ್ಷ ಸತ್ಯ ಚೈಯಂಡ ಹೇಳಿಕೆ ನೀಡಿದ್ದಾರೆ.