ಮಡಿಕೇರಿ, ಏ. 14: ವಿವಿಧ ಬ್ಯಾಂಕ್‍ಗಳ ಗ್ರಾಹಕರಿಗೆ ಕರೆಮಾಡಿ ವಂಚಿಸುವುದರೊಂದಿಗೆ, ಹಣ ಲಪಟಾಯಿಸುವವರ ವಿರುದ್ಧ ಸಾರ್ವಜನಿಕರು ಜಾಗೃತರಾಗಿರುವಂತೆ ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಡಿ.ಪಿ. ಅವರು ಪ್ರಕಟಣೆ ಮೂಲಕ ಕರೆ ನೀಡಿದ್ದಾರೆ.

ಬ್ಯಾಂಕ್ ವ್ಯವಹಾರ ಸಂಬಂಧ ಅಥವಾ ಸಾಲಮನ್ನಾ ಹೆಸರಿನಲ್ಲಿ; ಗ್ರಾಹಕರಿಗೆ ವಂಚಕರು ಕರೆ ಮಾಡಿ ಮಾಹಿತಿ ಪಡೆಯುವುದರೊಂದಿಗೆ ಮೋಸಗೊಳಿಸುತ್ತಿದ್ದು, ಇಂತಹ ಕರೆಗಳನ್ನು ಸ್ವೀಕರಿಸಿ ಜನರು ವಂಚನೆಗೆ ಒಳಗಾಗಬಾರದು ಎಂದು ಸಾರ್ವಜನಿಕ ಪ್ರಕಟಣೆಯೊಂದಿಗೆ ಎಸ್ಪಿ ಕಳಕಳಿ ವ್ಯಕ್ತಪಡಿಸಿದ್ದಾರೆ.

ಕೊರೊನಾ ವೈರಸ್ ನಿರ್ಮೂಲನೆಯ ಹಿನ್ನೆಲೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರಗಳು ಸಾಮಾನ್ಯ ಜನರ ಅನುಕೂಲಕ್ಕಾಗಿ ಜನ್‍ಧನ್ ಯೋಜನೆಯ ಖಾತೆದಾರರಿಗೆ ಜೀವನ ನಿರ್ವಹಣೆಗಾಗಿ ಹಣವನ್ನು ನೇರವಾಗಿ ಖಾತೆಗೆ ನೀಡುತ್ತಿದೆ. ಸಾರ್ವಜನಿಕ ಬ್ಯಾಂಕ್ ಮತ್ತು ಇತರ ಹಣಕಾಸು ಸಂಸ್ಥೆಗಳಲ್ಲಿ ಸಾಲವನ್ನು ಪಡೆದ ಸಾಲಗಾರರು ತಮ್ಮ ಸಾಲವನ್ನು; ಇಎಂಐ ಮೂಲಕ ನೀಡಬೇಕಾಗಿರುವು ದನ್ನು ಮೂರು ತಿಂಗಳವರೆಗೆ ಮುಂದೂಡಿರುವುದಾಗಿ ಸರ್ಕಾರ ಆದೇಶ ಮಾಡಿದೆ. ಆದರೆ ಇದರ ಬಗ್ಗೆ ಕೆಲವು ಕಿಡಿಗೇಡಿಗಳು ವಂಚನೆ ಮಾಡುವ ಉದ್ದೇಶದಿಂದ ನಿಮ್ಮ ಬ್ಯಾಂಕ್ ಖಾತೆಗೆ ಜನ್‍ಧನ್ ಹಣವನ್ನು ಪಾವತಿ ಮಾಡಲು, ಇಎಂಐಗಳನ್ನು ಮರುಪಾವತಿ ಮಾಡುವ ಸಂಬಂಧ ಸಾರ್ವಜನಿಕರಿಗೆ ಕರೆ ಮಾಡಿ; ತಾವು ಬ್ಯಾಂಕ್ ಮ್ಯಾನೇಜರ್/ ಸಿಬ್ಬಂದಿ ಹೆಡ್ ಆಫೀಸ್‍ನಿಂದ ಮಾತನಾಡುತ್ತಿದ್ದು, ನಿಮ್ಮ ಖಾತೆಗೆ ಪ್ರಧಾನಮಂತ್ರಿಗಳ ನಿಧಿಯಿಂದ ನೀಡುತ್ತಿರುವ ಜನ್‍ಧನ್ ಹಣವನ್ನು ನಿಮ್ಮ ಖಾತೆಗೆ ಹಾಕುತ್ತಿರುವುದಾಗಿ ಮೋಸಗೊಳಿ ಸುತ್ತಿದ್ದಾರೆ.

ಸಾಲವನ್ನು ಪಡೆದ ಸಾಲಗಾರರಿಗೆ ನೀವು 3 ಇಎಂಐ ಬದಲಾಗಿ 2 ಇಎಂಐಗಳನ್ನು ಒಂದೇ ಬಾರಿ ಪಾವತಿ ಮಾಡಿದರೆ ಒಂದು ಇಎಂಐ ವಿನಾಯಿತಿ ನೀಡಲಾಗು ವುದು, ಅದಕ್ಕಾಗಿ ನಿಮ್ಮ ಬ್ಯಾಂಕ್ ಖಾತೆಯನ್ನು ಅಪ್‍ಡೇಟ್ ಮಾಡಬೇಕು. ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಮತ್ತು ಪಾನ್‍ಕಾರ್ಡ್ ಲಿಂಕ್ ಮಾಡಬೇಕು. ನಿಮ್ಮ ಎಟಿಎಂ ಕಾರ್ಡ್ ರಿನಿವಲ್ ಮಾಡಬೇಕು ಎಂದು ಹೇಳಿ ತಮ್ಮ ಖಾತೆಗೆ ಅಥವಾ ಯಾವುದಾದರೂ ಕಂಪನಿಯ ವಸ್ತುಗಳನ್ನು ಕೊಳ್ಳಲು ಉಪಯೋಗಿಸಿ ವಂಚನೆ / ಮೋಸ ಮಾಡುತ್ತಿರುವ ಪ್ರಕರಣಗಳ ಬಗ್ಗೆ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರುಗಳು ದಾಖಲಾಗುತ್ತಿದೆ. ಇದನ್ನು ತಡೆಗಟ್ಟಲು ಸಾರ್ವಜನಿಕರು ಯಾವುದೇ ವ್ಯಕ್ತಿ ಕರೆ ಮಾಡಿ ಮಾಹಿತಿ ಯನ್ನು ಕೇಳಿದಾಗ ಕೊಡಬಾರದು ಮತ್ತು ಅಂತಹ ಕರೆಗಳಿಗೆ ಉತ್ತರಿಸಬೇಡಿ, ಮಾಹಿತಿಗಳನ್ನು ನೀಡಿ ಮೋಸ ಹೋಗಬೇಡಿ.

ಯಾವುದೇ ಬ್ಯಾಂಕಿನ ಮ್ಯಾನೇಜರ್/ ಸಿಬ್ಬಂದಿ ಈ ಮಾಹಿತಿಯನ್ನು ಕೇಳಿ ನಿಮಗೆ ಫೋನ್ ಕರೆ ಮಾಡುವುದಿಲ್ಲ ಎಂದು ಎಸ್ಪಿ ನೆನಪಿಸಿದ್ದಾರೆ. ಅಲ್ಲದೆ ಆರ್ಮಿಯಲ್ಲಿ / ನೌಕಾ ಸೇನೆಯಲ್ಲಿ ಕೆಲಸ ಮಾಡುತ್ತಿರುವುದಾಗಿ ಸಮವಸ್ತ್ರದಲ್ಲಿ ಫೋಟೋವನ್ನು ಫೇಸ್‍ಬುಕ್ / ಕ್ವಿಕರ್. ಕಾಮ್/ ಓಎಲ್‍ಎಕ್ಸ್ ಮುಂತಾದ ಸಾಮಾಜಿಕ ಜಾಲತಾಣ ದಲ್ಲಿ ಹಾಕಿ, ವಂಚಕರು ರಾಯಲ್ ಎನ್‍ಫೀಲ್ಡ್ ಬುಲೆಟ್ ದ್ವಿಚಕ್ರ ವಾಹನವನ್ನು ಅಥವಾ ಕಾರು ಅಥವಾ ಟ್ರ್ಯಾಕ್ಟರ್ ಅನ್ನು ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದೇನೆ ಎಂದು ಜಾಹೀರಾತನ್ನು ನೀಡುತ್ತಿದ್ದು, ಸಾರ್ವಜನಿಕರು ಇಂತಹ ಮೋಸದ ಬಗ್ಗೆಯೂ ಎಚ್ಚರದಿಂದಿದ್ದು, ಈ ಬಗ್ಗೆ ವಂಚನೆಗೆ ಒಳಗಾಗಬಾರದು ಎಂದು ಪೊಲೀಸ್ ಅಧೀಕ್ಷಕರು ಸಲಹೆ ನೀಡಿದ್ದಾರೆ.