ಮಡಿಕೇರಿ, ಏ. 13: ಮಡಿಕೇರಿ ನಗರದೊಳಗೆ ಎಲ್ಲೆಂದರಲ್ಲಿ ಸುತ್ತಾಡುತ್ತಾ; ಹಾದಿ ಬೀದಿಗಳಲ್ಲಿ ಮೇಯುತ್ತಾ ಇದ್ದಂತಹ ಇಪ್ಪತ್ತು ದನಗಳನ್ನು ಮಡಿಕೇರಿ ನಗರಸಭೆಯಿಂದ ಇಂದು ಸೆರೆಹಿಡಿದು ಚೆಟ್ಟಿಮಾನಿಯ ಶ್ರೀಕೃಷ್ಣ ಗೋಶಾಲೆಗೆ ಸೇರಿಸಲಾಗಿದೆ. ನಗರಸಭೆ ಆಯುಕ್ತ ಎಂ.ಎಲ್. ರಮೇಶ್ ಅವರು ಖುದ್ದು ಪೊಲೀಸರು ಹಾಗೂ ಪೌರಕಾರ್ಮಿಕರೊಂದಿಗೆ ದನಗಳನ್ನು ಹಿಡಿದು ಲಾರಿ ಮುಖಾಂತರ ಗೋಶಾಲೆಗೆ ಕೊಂಡೊಯ್ಯಲು ಸಹಕಾರ ನೀಡಿದ್ದಾರೆ.ಶ್ರೀಕೃಷ್ಣ ಗೋಶಾಲೆಯ ಪ್ರಮುಖ ಹರೀಶ್ ಆಚಾರ್ಯ ಹಾಗೂ ಇತರರು ದನಗಳನ್ನು ಒಯ್ಯುವುದರೊಂದಿಗೆ ಬೀದಿಗಳಲ್ಲಿ ಅಡ್ಡಾಡುತ್ತಿರುವುದಕ್ಕೆ ಮುಕ್ತಿ ಕರುಣಿಸಿ ಗೋಶಾಲೆಯಲ್ಲಿ ಆಸರೆ ಕಲ್ಪಿಸಿದ್ದಾರೆ.ಮಾಲೀಕರಿಗೆ ಷರತ್ತು: ಈ ಹಿಂದೆ ನಗರಸಭೆಯಿಂದ ಸಂಬಂಧಪಟ್ಟ ಮಾಲೀಕರುಗಳಿಗೆ ಸಾರ್ವಜನಿಕ ಪ್ರಕಟಣೆ ಮುಖಾಂತರ ದನಗಳನ್ನು ಬೀದಿಗೆ ಬಿಡದಂತೆ ಎಚ್ಚರಿಕೆ ನೀಡಿದ್ದರೂ, ಸ್ಪಂದಿಸದಿರುವ ಕಾರಣದಿಂದ ಗೋಶಾಲೆಗೆ ಸೇರಿಸಲಾಗಿದೆ(ಮೊದಲ ಪುಟದಿಂದ) ಎಂದು ಪೌರಾಯುಕ್ತರು ಪ್ರತಿಕ್ರಿಯೆ ನೀಡಿದ್ದಾರೆ. ಒಂದು ವೇಳೆ ಮಾಲೀಕರು ಈ ಬಗ್ಗೆ ಇನ್ನಾದರೂ ಕಾಳಜಿ ವಹಿಸುವವರಿದ್ದರೆ ನಗರಸಭೆ ಹಾಗೂ ಪೊಲೀಸ್ ಇಲಾಖೆಯ ಗಮನಕ್ಕೆ ತಂದು ಗೋಶಾಲೆಯ ಷರತ್ತುಗಳೊಂದಿಗೆ ತಮ್ಮ ದನಗಳನ್ನು ಹಿಂಪಡೆಯಬಹುದು ಎಂದು ಅವರು ಸಲಹೆ ನೀಡಿದ್ದಾರೆ. ಒಂದು ಪುಟ್ಟ ಕರುವಿನ ಸಹಿತ ಹಸುವಿನೊಂದಿಗೆ ಇಪ್ಪತ್ತು ದನಗಳನ್ನು ಗೋಶಾಲೆಗೆ ಸೇರಿಸಲಾಗಿದೆ ಎಂದು ಅವರು ‘ಶಕ್ತಿ’ಗೆ ತಿಳಿಸಿದ್ದಾರೆ.