ಪ್ರಯಾಣಿಕರೇ ಗಮನಿಸಿ... ಬೆಂಗಳೂರಿಗೆ ತೆರಳುವ ಬಸ್ ಇನ್ನೇನು ಹೊರಡಲು ತಯಾರಾಗಿದೆ..., ಮಂಗಳೂರಿಗೆ ತೆರಳುವ ಬಸ್ ಇನ್ನು ಕೆಲವೇ ನಿಮಿಷಗಳಲ್ಲಿ ನಿಲ್ದಾಣಕ್ಕೆ ಬರಲಿದೆ.
ಹೀಗೆಲ್ಲಾ ಸಂದೇಶಗಳನ್ನು ನೀಡುತ್ತಿದ್ದ ಕೊಡಗು ಜಿಲ್ಲೆಯ ಸರ್ಕಾರಿ ಬಸ್ ನಿಲ್ದಾಣಗಳಲ್ಲಿ ಈಗ ಕೇಳಿಬರುತ್ತಿರುವುದೇನು ?
ಟೊಮ್ಯಾಟೋ...ಟೊಮ್ಯಾಟೋ...ಕೆ.ಜಿ.ಗೆ 20 ರೂಪಾಯಿ, ಬೀನ್ಸ್ 40 ರೂಪಾಯಿ... ಬೆಸ್ಟ್... ಚೀಪ್ ರೇಟ್...ಬನ್ನಿ. ಬನ್ನಿ.... ಕನ್ಸಿಶನ್ರೇಟ್ ಇಂದು ಮಾತ್ರ, ನಾಳೆ ಸಿಗೋದಿಲ್ಲ.
ಇದೇನಾಗಿ ಹೋಯಿತು ? ದಿನಕ್ಕೆ ಸಾವಿರಾರು ಪ್ರಯಾಣಿಕರು ಬರುತ್ತಿದ್ದ ಬಸ್ಸ್ಟಾಂಡ್ ಈಗ ತರಕಾರಿ ಮಾರಾಟದ ಸಂತೆಯಾಯಿತೇ ?
ಇದರ ಹಿಂದಿದೆ ಒಂದು ಯಶಸ್ವಿ ಕಾರ್ಯಯೋಜನೆಯ ಕಥೆ.
.....
ಕೊರೊನಾ ಸೋಂಕಿನಿಂದ ಪಾರಾಗಲು ಮನೆಯಲ್ಲಿಯೇ ಇರಿ. ಅನವಶ್ಯಕವಾಗಿ ಮನೆಯಿಂದ ಹೊರಬರಬೇಡಿ ಎಂಬೆಲ್ಲಾ ಪೆÇಲೀಸರ ಮಾತಿಗೆ ಕೆಲವು ಜನ ಕಿವಿಗೊಡಲೇ ಇಲ್ಲ. ಸುಮ್ಮಸುಮ್ಮನೆ ತರಕಾರಿಕೊಳ್ಳುವ ನೆಪದಲ್ಲಿ ಸಂತೆಗೆ ಹೋಗಿ ಬರುತ್ತೇವೆಂದು ಮನೆ ಬಿಟ್ಟವರು ಊರೆಲ್ಲಾ ಸುತ್ತಿ ಹಿಂದಿರುಗುತ್ತಿದ್ದರು.
ಇತ್ತ ಪಟ್ಟಣ ಪ್ರದೇಶದ ಮಾರ್ಕೇಟ್ ಬಳಿಯಲ್ಲಿಯೂ ತರಕಾರಿ ವ್ಯಾಪಾರಸ್ಥರು ರಸ್ತೆ ಬದಿಯೇ ತರಕಾರಿ ಹರಡಿಕೊಂಡು ವ್ಯಾಪಾರ ಪ್ರಾರಂಭಿಸಿ ಬಿಟ್ಟಿದ್ದರು. ತರಕಾರಿ ಬೆಲೆಯನ್ನೂ ಸಿಕ್ಕಾಪಟ್ಟೆ ಏರಿಕೆ ಮಾಡಿ ಜನರ ಆಕ್ರೋಷಕ್ಕೂ ಕಾರಣರಾದರು. ತರಕಾರಿ ಖರೀದಿಸಲು ಹೋದವರು ಇಕ್ಕಟ್ಟಾದ ಸ್ಥಳಗಳಲ್ಲಿ ಮಾರುತ್ತಿದ್ದ ತರಕಾರಿ ಖರೀದಿ ಸಂದರ್ಭ ಸಾಮಾಜಿಕ ಅಂತರವನ್ನೂ ಪಾಲಿಸುತ್ತಿರಲಿಲ್ಲ. ಸೋಂಕು ವ್ಯಾಪಿಸುವ ದಟ್ಟ ಸಾಧ್ಯತೆಯೂ ಇಂಥ ಪ್ರದೇಶಗಳಲ್ಲಿತ್ತು.
ಹೀಗಾಗಿ, ಪೆÇಲೀಸ್ ಇಲಾಖೆ ಕಾರ್ಯಪ್ರರ್ವತ್ತವಾಗಲೇಬೇಕಾದ ಅನಿವಾರ್ಯತೆ ಸೃಷ್ಟಿಯಾಯಿತು. ತರಕಾರಿ ಖರೀದಿಗೂ ಉಪಯೋಗವಾಗ ಬೇಕು, ವಿಶಾಲ ಪ್ರದೇಶವೂ ದೊರಕಬೇಕೆಂಬ ಚಿಂತನೆಯಲ್ಲಿ ಪೆÇಲೀಸರ ಕಣ್ಣಿಗೆ ಬಿದ್ದದ್ದೇ ಮಡಿಕೇರಿ ಸರ್ಕಾರಿ ಬಸ್ ನಿಲ್ದಾಣ.
ಸ್ಥಳ ಆಯ್ಕೆಯಾದ ಕೂಡಲೇ ಜಿಲ್ಲಾ ಮತ್ತು ನಗರ ಚೇಂಬರ್ ಆಫ್ ಕಾಮರ್ಸ್ ಪ್ರತಿನಿಧಿಗಳೊಂದಿಗೆ ಸಮಾಲೋಚನೆ ನಡೆಸಿದ ಪೆÇಲೀಸ್ ಪ್ರಮುಖರು ಬಸ್ಸ್ಟಾಂಡ್ನಲ್ಲಿಯೇ ತರಕಾರಿ ಸಂತೆ ಪ್ರಾರಂಭಿಸಲು ಮುಂದಾದರು. ಈ ಚಿಂತನೆ ಇದೀಗ ಅದ್ಭುತ ಯಶಸ್ಸು ಪಡೆದುಕೊಂಡಿದೆ. ಮಾಮೂಲು ಸಂತೆ ಪ್ರದೇಶಕ್ಕಿಂತ ಬಸ್ಸ್ಟ್ಯಾಂಡ್ ಸಂತೆಯೇ ಜನಪ್ರಿಯವಾಗಿದೆ ಸಂತೆಯಲ್ಲಿ ವ್ಯಾಪಾರ ನಡೆಸುತ್ತಿದ್ದವರ ಜತೆಗೆ ಹೊಸ ತರಕಾರಿ ವ್ಯಾಪಾರಿಗಳೂ ಕಂಡು ಬರುತ್ತಿದ್ದಾರೆ. ಲಾಕ್ಡೌನ್ ಸಂದರ್ಭ ಮನೆಯಲ್ಲಿಯೇ ಕುಳಿತಿರುವ ಬದಲಿಗೆ ಸಂತೆ ವ್ಯಾಪಾರವಾದರೂ ಮಾಡಿ ಒಂದಿಷ್ಟು ಸಂಪಾದನೆ ಮಾಡಲು ಹಲವು ಯುವಕರು ನವ ಚಿಂತನೆಯೊಂದಿಗೆ ಮುಂದಾಗಿದ್ದು ಸ್ಪಷ್ಟವಾಗಿದೆ. ಸರ್ಕಾರಿ ಬಸ್ಸ್ಟ್ಯಾಂಡ್ನಲ್ಲಿ ನಡೆಯುವ ತರಕಾರಿ ಸಂತೆಗೆ ಎಪಿಎಂಸಿ ಮತ್ತು ಪೆÇಲೀಸರು ಬೆಲೆ ನಿಗದಿ ಮಾಡುತ್ತಿದ್ದಾರೆ. ಹೀಗಾಗಿ ಗ್ರಾಹಕನಿಗೆ ಹಿಂದೆಂದೂ ದೊರಕದ್ದು ಸೂಕ್ತ ಬೆಲೆಯಲ್ಲಿ ತರಕಾರಿ ದೊರಕುತ್ತಿದೆ.
ಅದೂ ಎಂಥ ತರಕಾರಿ, ಗ್ರಾಮೀಣ ಪ್ರದೇಶದ ತಾಜಾ ತಾಜಾ ತರಕಾರಿ. ಕೆಲವೊಮ್ಮೆ ನಿಗದಿ ಪಡಿಸಿದ ದರ ಕ್ಕಿಂತಲೂ ಕಡಿಮೆ ಬೆಲೆಗೆ ಮಾರಿರುವ ಉದಾಹರಣೆಯೂ ಇದೆ. ವಾರದ ಮೂರು ದಿನ 6 ಗಂಟೆ ಅವಧಿಯಲ್ಲಿ ತಂದ ತರಕಾರಿ ಖಾಲಿ ಮಾಡಿ ಮನೆಗೆ ಸಂಪಾದನೆಯ ಹಣ ಕೊಂಡೊಯ್ಯ ಬೇಕಾದ ಅನಿವಾರ್ಯತೆಯಲ್ಲಿ ತರಕಾರಿ ವ್ಯಾಪಾರಸ್ಥನಿದ್ದಾನೆ.
ಇದೊಂದು ರೀತಿ ಇನ್ಸ್ಟಾಂಟ್ ತರಕಾರಿ ಸಂತೆ ವ್ಯಾಪಾರ. ಪ್ರಾರಂಭ ದಿಂದಲೇ ಮಡಿಕೇರಿ ಸಂತೆಯಲ್ಲಿ 35-40 ವ್ಯಾಪಾರಸ್ಥರು ಕಂಡು ಬರುತ್ತಿದ್ದು ಜನ ಕೂಡ ಸರದಿ ಸಾಲಿನಲ್ಲಿ ವಿಶಾಲವಾದ ಜಾಗದಲ್ಲಿ ನಿಂತು ಸಾಮಾಜಿಕ ಅಂತರ ಕಾಪಾಡಿಕೊಂಡಿದ್ದಾರೆ. ನಗರ ಮತ್ತು ಗ್ರಾಮೀಣ ಪ್ರದೇಶಗಳ ತರಕಾರಿ ವ್ಯಾಪಾರಸ್ಥನಿಗೆ ನ್ಯಾಯ ನೀಡಲಾಗಿದೆ ಎಂದು ಮಡಿಕೇರಿ ನಗರ ಚೇಂಬರ್ಆಫ್ಕಾಮರ್ಸ್ ಅಧ್ಯಕ್ಷ ಎಂ. ಧನಂಜಯ್ ಹೆಮ್ಮೆಯಿಂದ ಹೇಳುತ್ತಾರೆ.
ಮಡಿಕೇರಿ ಸರ್ಕಾರಿ ಬಸ್ಸ್ಟ್ಯಾಂಡ್ ಸಂತೆಯ ಯಶಸ್ಸನ್ನು ಗಮನಿಸಿದ ಬಳಿಕ ವೀರಾಜಪೇಟೆ ಸರ್ಕಾರಿ ಬಸ್ಸ್ಟ್ಯಾಂಡ್ನಲ್ಲಿಯೂ ಇದೇ ಮಾದರಿಯಾಗಿ ಸಂತೆ ವ್ಯಾಪಾರ ಬಸ್ಸ್ಟ್ಯಾಂಡ್ನಲ್ಲಿ ಪ್ರಾರಂಭವಾಗಿದೆ. ಅಲ್ಲಿಯೂ ಬಸ್ಸ್ಟ್ಯಾಂಡ್ ಸಂತೆಗೆ ಉತ್ತಮ ಸ್ಪಂದನೆ ದೊರಕಿದೆ.
ಕೊಡಗಿನ ಈ ಸಂತೆ ವಹಿವಾಟು ರಾಜ್ಯ ರಾಜಧಾನಿ ಬೆಂಗಳೂರಿಗರ ಗಮನವನ್ನೂ ಸೆಳೆದಿದೆ. ಕೊಡಗಿನಲ್ಲಿರುವಂತೆ ಸಂತೆ ತರಕಾರಿ ಬೆಲೆಯನ್ನು ಮೊದಲೇ ನಿಗದಿಪಡಿಸಿ ಹೆಚ್ಚಿನ ದರಕ್ಕೆ ಮಾರಾಟದ ದಂಧೆಯನ್ನು ನಿಯಂತ್ರಿಸಿ ಎಂದು ಬೆಂಗಳೂರು ಮಹಾನಗರ ಪಾಲಿಕೆಗೆ ಹಲವರು ಒತ್ತಾಯಿಸಿರುವುದು ಕೊಡಗಿನಲ್ಲಿ ಕಾರ್ಯರೂಪಕ್ಕೆ ಬಂದ ಯಶಸ್ವಿ ಪ್ರಯೋಗದ ಹಿಂದಿನ ವ್ಯಕ್ತಿಗಳಿಗೆ ಸಂದ ಗೌರವ.
ಬಸ್ಸ್ಟ್ಯಾಂಡ್ ಕಥೆ.
ಜಿಲ್ಲೆಯ ಎರಡೂ ಬಸ್ಸ್ಟ್ಯಾಂಡ್ಗಳಲ್ಲಿ ವಾರದ ಮೂರು ದಿನದ ಸಂತೆ ಪ್ರಾರಂಭವಾಗಿದೆ. ಸರ್ಕಾರಿ ಬಸ್ಗಳು ಸ್ಟ್ಯಾಂಡ್ನಲ್ಲಿಯೇ ನಿಂತಿದೆ. ಕೊಡಗಿನ ಇತಿಹಾಸದಲ್ಲಿಯೇ ಮಡಿಕೇರಿ ಡಿಪೆÇೀಕ್ಕೆ ಸೇರಿದ ಎಲ್ಲಾ 115 ಬಸ್ಗಳು ಕೇಂದ್ರ ಸ್ಥಾನದಲ್ಲಿ ವಿಶ್ರಾಂತಿ ಪಡೆಯುತ್ತಿದೆ.
ಮಡಿಕೇರಿ ಡಿಪೆÇೀದಿಂದ ದಿನನಿತ್ಯ 109 ಮಾರ್ಗಗಳಲ್ಲಿ ಸರ್ಕಾರಿ ಬಸ್ಗಳು ಸಂಚರಿಸಿ, ದಿನಕ್ಕೆ ಕನಿಷ್ಟ 13-14 ಲಕ್ಷ ಆದಾಯ ಬರುತ್ತಿತ್ತು. ಇದೀಗ 21 ದಿನದ ಲಾಕ್ಡೌನ್ನಿಂದಾಗಿ ಮಡಿಕೇರಿ ಬಸ್ ಡಿಪೆÇೀವೊಂದಕ್ಕೇ ಅಂದಾಜು 2.75 ಕೋಟಿ ರೂ. ನಷ್ಟ ಸಂಭವಿಸಿದೆ. ಡಿಪೆÇೀದಲ್ಲಿ ಕಾರ್ಯನಿರ್ವಹಿಸುವ 380 ಚಾಲಕ, ನಿರ್ವಾಹಕ ಸೇರಿದಂತೆ ಒಟ್ಟು 485 ಸಿಬ್ಬಂದಿಗಳ ಮಾಸಿಕ ವೇತನವೇ 1.56 ಕೋಟಿ ರೂ.ಗಳಾಗಿದೆ. ಅತೀ ದೂರದ 1050 ಕಿಮೀ. ಪ್ರಯಾಣ ನಿರ್ವಹಿಸುವ ಮಡಿಕೇರಿ-ಹುಬ್ಬಳ್ಳಿ ಮಾರ್ಗ ಸೇರಿದಂತೆ ಎಲ್ಲಾ ಬಸ್ಗಳೂ ನಿಲ್ದಾಣದಲ್ಲಿದ್ದು ಎರಡು ದಿನಗಳಿಗೊಮ್ಮೆ ಡಿಪೆÇೀದ ಮೆಕ್ಯಾನಿಕ್ಗಳು ಪ್ರತೀ ಬಸ್ ಅನ್ನು ಸ್ಟಾರ್ಟ್ ಮಾಡಿ ಸುಸ್ಥಿತಿಯಲ್ಲಿರಿಸುತ್ತಿದ್ದಾರೆ ಎಂಬ ಮಾಹಿತಿ ನೀಡಿದವರು ಮಡಿಕೇರಿ ಡಿಪೆÇೀ ಮ್ಯಾನೇಜರ್ ಗೀತಾ.
ಸದ್ಯದ ಪರಿಸ್ಥಿತಿಯಲ್ಲಿ ಲಾಕ್ಡೌನ್ಗೆ ಕೊಂಚ ವಿನಾಯಿತಿ ದೊರಕಿದರೂ ಸಾರ್ವಜನಿಕ ಸಾರಿಗೆ ಪ್ರಾರಂಭವಾಗುವುದು ಸಂಶಯವೇ. ಅದರಲ್ಲಿಯೂ ಎಸಿ ಅಳವಡಿಕೆಯ ಫ್ಲೈ ಬಸ್, ವೋಲ್ವೋ ಸಂಚಾರಕ್ಕೆ ಬಹಳ ತಿಂಗಳೇ ಬೇಕಾದೀತು.
ಕೊನೇ ಹನಿ. ಸಂತೆ ನಡೆಯುತ್ತಿರುವ ಮಡಿಕೇರಿ ಬಸ್ಸ್ಟ್ಯಾಂಡ್ 1.75 ಎಕರೆ ಪ್ರದೇಶದಲ್ಲಿದ್ದು 1981 ರಿಂದ ಕಾರ್ಯಾರಂಭಿಸುತ್ತಿದೆ. ವೀರಾಜಪೇಟೆ ಬಸ್ಸ್ಟ್ಯಾಂಡ್ 3.82 ಎಕರೆ ವಿಶಾಲವಾದ ಪ್ರದೇಶದಲ್ಲಿದೆ.
ಇಷ್ಟೊಂದು ವಿಶಾಲವಾದ ಜಾಗದಲ್ಲಿರುವ ಸರ್ಕಾರಿ ಬಸ್ಸ್ಟ್ಯಾಂಡ್ಗಳು ಒಂದು ದಿನ ಬಸ್ ಸಂಚಾರದ ಬದಲಿಗೆ ತರಕಾರಿ ವ್ಯಾಪಾರದ ಸಂತೆಯಾದೀತು ಎಂದು ಯಾವಾಗ, ಯಾರು ತಾನೇ ಊಹಿಸಿದ್ದರು? !