ಮಡಿಕೇರಿ, ಏ. 12: ಕೊಡಗು ಜಿಲ್ಲೆಯಲ್ಲಿ ಕೊರೊನಾ ನಿರ್ಬಂಧದ ನಡುವೆ ಗೋಹತ್ಯೆ ಪ್ರಕರಣಗಳು ಹೆಚ್ಚಾಗುತ್ತಿರುವ ಬಗ್ಗೆ ವಿಶ್ವ ಹಿಂದೂ ಪರಿಷತ್ ಕಳವಳ ವ್ಯಕ್ತಪಡಿಸಿದ್ದು; ಈ ದಂಧೆಯ ಬಗ್ಗೆ ಕಟ್ಟುನಿಟ್ಟಿನ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದೆ.
ಇತ್ತೀಚಿನ ಕೆಲವು ದಿನಗಳಲ್ಲಿ ಜಿಲ್ಲೆಯ ಹಲವಾರು ಕಡೆಗಳಲ್ಲಿ ಗೋಮಾಂಸ ದಂಧೆ ಪ್ರಕರಣಗಳು ಬೆಳಕಿಗೆ ಬರುತ್ತಿರುವ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ವಿಹಿಂಪ ಅಧ್ಯಕ್ಷ ಟಾಟಾ ಬೋಪಯ್ಯ ಅವರು ಪೊಲೀಸ್ ಇಲಾಖೆ ಈ ಬಗ್ಗೆ ಕಠಿಣ ಕ್ರಮ ಜರುಗಿಸುವಂತಾಗಬೇಕು ಎಂದು ಆಗ್ರಹಿಸಿದ್ದಾರೆ. ಅಕ್ರಮವಾಗಿ ನಿರಂತರ ಜಿಲ್ಲೆಯ ಹಲವು ಭಾಗಗಳಲ್ಲಿ ಕಂಡುಬಂದಿರುವ ಗೋವುಗಳ ಕಳ್ಳತನ ಮತ್ತು ಕಾಡುದಾರಿಗಳಲ್ಲಿ ಸಾಗಿಸುವುದು; ಅವುಗಳನ್ನು ಕೊಂದು ಮಾಂಸ ಮಾಡಿ ಮಾರುತ್ತಿರುವ ವ್ಯವಸ್ಥಿತ ಜಾಲವನ್ನು ಕಾನೂನು ರೀತ್ಯಾ ನಿಯಂತ್ರಿಸಲು ಕೊಡಗು ಜಿಲ್ಲಾ ವಿಶ್ವಹಿಂದೂ ಪರಿಷತ್ ಒತ್ತಾಯಿಸಿದೆ.
ಶನಿವಾರಸಂತೆ, ಅಮ್ಮತ್ತಿ, ಸಂಪಾಜೆ, ಕಡಗದಾಳು ಗ್ರಾಮಗಳಲ್ಲಿ ಬೆಳಕಿಗೆ ಬಂದಿರುವ ಘಟನೆಗಳು ಕೇವಲ ಇಲ್ಲಿಗೆ ಮಾತ್ರ ಸೀಮಿತವಾಗಿಲ್ಲ. ಇಡೀ ಜಿಲ್ಲೆಯಲ್ಲಿ ಅಕ್ರಮ ಗೋಮಾಂಸ ಮಾರಾಟ, ಗೋವುಗಳ ಕಳ್ಳತನ ನಡೆಯುತ್ತಿದೆ. ಇಂತಹ ಅಕ್ರಮದ ಬಗ್ಗೆ ಮಾಹಿತಿ ನೀಡಲು ಪೊಲೀಸ್ ಇಲಾಖೆಯೊಂದಿಗೆ ವ್ಯವಹರಿಸಿದರೆ; ಕೊರೊನಾ ಕಾರಣ ಹೇಳಿ ನಿರುತ್ಸಾಹಗೊಳಿವುದಲ್ಲದೇ; ಒಂದೆರಡು ಕಡೆ ಈ ದಂಧೆಯನ್ನು ಪತ್ತೆ ಮಾಡಿದವರ ವಿರುದ್ಧವೇ ಕ್ರಮ ಜರುಗಿಸುವ ಬೆದರಿಕೆಯೂ ಕಂಡು ಬಂದಿದೆ.
ಈ ಕಾರಣದಿಂದಾಗಿ ಸಾಮಾಜಿಕ ಶಾಂತಿ, ಸಹಬಾಳ್ವ್ವೆಯ ವಾತಾವರಣಕ್ಕೆ ಧಕ್ಕೆ ಆಗುತ್ತಿರುವ ಬಗ್ಗೆ ವಿಶ್ವ ಹಿಂದೂ ಪರಿಷತ್ ಕಳವಳ ವ್ಯಕ್ತಪಡಿಸುತ್ತಿದೆ ಎಂದು ಅವರು ಹೇಳಿದ್ದಾರೆ. ಕೊರೊನಾ ಸಂದರ್ಭ ಎಲ್ಲರೂ ಒಗ್ಗಟ್ಟಾಗಿ ಸರಕಾರದ ಸೂಚನೆಯಂತೆ ಕಾರ್ಯಪ್ರವೃತ್ತರಾಗಿರುವ ವೇಳೆ, ಅಕ್ರಮ, ಅಸಾಮಾಜಿಕ ಚಟುವಟಿಕೆಗಳು ಹೆಚ್ಚುತ್ತಿರುವುದನ್ನು ಕಾನೂನು ರೀತ್ಯಾ ನಿರ್ಬಂಧಿಸಬೇಕು. ಇಲಾಖೆಗೆ ಬೇಕಾಗಿರುವ ಎಲ್ಲಾ ರೀತಿಯ ಬೆಂಬಲವನ್ನೂ ವಿಶ್ವ ಹಿಂದೂ ಪರಿಷತ್ ನೀಡಲಿದೆ ಎಂದು ಅವರು ತಿಳಿಸಿದ್ದಾರೆ.