ಸೋಮವಾರಪೇಟೆ, ಮಾ. 12: ಸರ್ಕಾರದ ಮಹತ್ವಾಕಾಂಕ್ಷೆಯ ಅನ್ನಭಾಗ್ಯ ಯೋಜನೆಯಡಿ ಪಡಿತರ ಸಾಮಗ್ರಿ ವಿತರಿಸಲು ಸಾರ್ವಜನಿಕ ರಿಂದ ಹಣ ಪಡೆದ ಆರೋಪದ ಮೇರೆ ತಾಲೂಕಿನ 2 ನ್ಯಾಯ ಬೆಲೆ ಅಂಗಡಿಗಳ ವಿರುದ್ದ ಕ್ರಮ ಜರುಗಿಸಲಾಗಿದೆ.

ತಾಲೂಕಿನ ಶನಿವಾರಸಂತೆಯ ನ್ಯಾಯಬೆಲೆ ಅಂಗಡಿ ಸಂಖ್ಯೆ 92- ದಾಕ್ಷಾಯಿಣಿ ನ್ಯಾಯಬೆಲೆ ಅಂಗಡಿ ಹಾಗೂ ಸೋಮವಾರಪೇಟೆ ಪಟ್ಟಣ ಸಮೀಪದ ಚೌಡ್ಲು ವಿ.ಎಸ್.ಎಸ್.ಎನ್. ಶಾಖೆಯ ಕಿಬ್ಬೆಟ್ಟ ನ್ಯಾಯಬೆಲೆ ಅಂಗಡಿಗಳಲ್ಲಿ ಅವ್ಯವಹಾರ ನಡೆದಿರುವ ಆರೋಪದ ಮೇರೆ ತಕ್ಷಣಕ್ಕೆ ಎರಡೂ ನ್ಯಾಯಬೆಲೆ ಅಂಗಡಿಗಳ ಪ್ರಾಧಿಕಾರವನ್ನು ಅಮಾನತುಪಡಿಸಲಾಗಿದೆ.

ಶನಿವಾರಸಂತೆಯ ದಾಕ್ಷಾಯಿಣಿ ನ್ಯಾಯಬೆಲೆ ಅಂಗಡಿ ಮತ್ತು ಸೋಮವಾರಪೇಟೆ ಸಮೀಪದ ಕಿಬ್ಬೆಟ್ಟ ನ್ಯಾಯಬೆಲೆ ಅಂಗಡಿಯಲ್ಲಿ ಅನ್ನಭಾಗ್ಯ ಯೋಜನೆಯಡಿ ಎರಡು ತಿಂಗಳ ಪಡಿತರವನ್ನು ಗ್ರಾಹಕರಿಗೆ ವಿತರಿಸುವ ಸಂದರ್ಭ ಪ್ರತಿ ಕಾರ್ಡ್‍ದಾರರಿಂದ ತಲಾ 20 ರೂಪಾಯಿ ವಸೂಲಿ ಮಾಡಿರುವುದು ತನಿಖೆಯಿಂದ ಸಾಬೀತಾಗಿದೆ.

ಗ್ರಾಹಕರಿಂದ ಇಲಾಖೆಯ ಆಯುಕ್ತರಿಗೆ ಬಂದ ದೂರಿನ ಆಧಾರದ ಮೇರೆ ಆಹಾರ ಇಲಾಖೆಯ ಶಿರಸ್ತೇದಾರ್ ತನಿಖೆ ನಡೆಸಿ ಮೇಲಾಧಿಕಾರಿಗಳಿಗೆ ವರದಿ ಸಲ್ಲಿಸಿದ ಮೇರೆ, ಎರಡೂ ನ್ಯಾಯಬೆಲೆ ಅಂಗಡಿಗಳ ಪ್ರಾಧಿಕಾರ ರದ್ದುಗೊಂಡಿದೆ.

ಚೌಡ್ಲು ವಿ.ಎಸ್.ಎಸ್.ಎನ್.ನ ಕಿಬ್ಬೆಟ್ಟ ನ್ಯಾಯಬೆಲೆ ಅಂಗಡಿಗೆ ಒಳಪಟ್ಟ ಗ್ರಾಹಕರು ಮೇ 2020 ರಿಂದ ಮುಂದಿನ ಆದೇಶದವರೆಗೆ ಗೌಡಳ್ಳಿ ವಿ.ಎಸ್.ಎಸ್.ಎನ್.ಗೆ ಒಳಪಡುವ ದೊಡ್ಡಮಳ್ತೆ ನ್ಯಾಯಬೆಲೆ ಅಂಗಡಿ ಸಂಖ್ಯೆ 115 ಹಾಗೂ ಶನಿವಾರಸಂತೆ ದಾಕ್ಷಾಯಿಣಿ ನ್ಯಾಯಬೆಲೆ ಅಂಗಡಿಗೆ ಒಳಪಡುವ ಗ್ರಾಹಕರು ಶನಿವಾರಸಂತೆಯ ಎಪಿಸಿಎಂಎಸ್ ನ್ಯಾಯಬೆಲೆ ಅಂಗಡಿ ಸಂಖ್ಯೆ 89 ರಿಂದ ಪಡಿತರವನ್ನು ಪಡೆಯುವಂತೆ ಸೂಚಿಸಲಾಗಿದೆ.