ಮಡಿಕೇರಿ, ಏ. 12: ಇಲ್ಲಿಗೆ ಸಮೀಪದ ಕಡಗದಾಳು ಗ್ರಾಮದ ಕ್ಲೋಸ್‍ಬರ್ನ್ ವ್ಯಾಪ್ತಿಯ ‘ಬ್ರೂಕ್‍ವ್ಯೂ’ ತೋಟದಲ್ಲಿ ನಿನ್ನೆ ರಾತ್ರಿ ಯಾರೋ ದುಷ್ಕರ್ಮಿಗಳು ಒಂದು ಹಸು ಮತ್ತು ಎತ್ತನ್ನು ಗುಂಡು ಹೊಡೆದು ಅಮಾನುಷವಾಗಿ ಹತ್ಯೆಗೈದಿರುವ ದುಷ್ಕøತ್ಯವೊಂದು ಬೆಳಕಿಗೆ ಬಂದಿದೆ.ತಡರಾತ್ರಿಯಲ್ಲಿ ಈ ಕೃತ್ಯ ಎಸಗಿರುವ ಶಂಕೆ ಇದ್ದು, ಇಂದು ಹಗಲು ವೇಳೆಯಲ್ಲಿ ತೋಟದ ಮಾಲೀಕರಿಗೆ ವಿಷಯ ತಿಳಿಯುವುದರೊಂದಿಗೆ ಮಡಿಕೇರಿ ಗ್ರಾಮಾಂತರ ಠಾಣೆಗೆ ದೂರು ನೀಡಲಾಗಿದೆ.ಆ ಮೇರೆಗೆ ಗ್ರಾಮಾಂತರ ಪೊಲೀಸ್ ಠಾಣಾಧಿಕಾರಿ ಚಂದ್ರಶೇಖರ್ ಹಾಗೂ ಸಿಬ್ಬಂದಿ ದುರ್ಘಟನೆ ಸ್ಥಳಕ್ಕೆ ತೆರಳಿ ಮಹಜರು ನಡೆಸುವುದರೊಂದಿಗೆ; ಪಶು ವೈದ್ಯರಿಂದ ಮೃತ ಹಸು ಹಾಗೂ ಎತ್ತುವಿನ ಕಳೇಬರದ ಮರಣೋತ್ತರ ಪರೀಕ್ಷೆ ಕೈಗೊಳ್ಳಲಾಗಿದೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಡಿ.ಪಿ. ಹಾಗೂ ಡಿವೈಎಸ್ಪಿ ಬಿ.ಪಿ. ದಿನೇಶ್ ಕುಮಾರ್ ಮಾರ್ಗದರ್ಶನದಲ್ಲಿ ದುಷ್ಕರ್ಮಿಗಳ ಪತ್ತೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಮೂಲಗಳಿಂದ ಗೊತ್ತಾಗಿದೆ.