ವೀರಾಜಪೇಟೆ, ಏ. 12: ವೀರಾಜಪೇಟೆಯ ಬಾಳುಗೋಡು ಎಂಬಲ್ಲಿ ತಾ. 10ರಂದು ನಡೆದ ಗುಂಪು ಘರ್ಷಣೆಗೆ ಸಂಬಂಧಿಸಿದಂತೆ ಬೇಟೋಳಿ ಗ್ರಾಮ ಪಂಚಾಯಿತಿ ಸದಸ್ಯ ಕೆ.ಎಂ.ಉಮ್ಮರ್ ಫಾರೂಕ್ ನೀಡಿದ ದೂರಿನ ಮೇರೆಗೆ ಇಲ್ಲಿನ ಗ್ರಾಮಾಂತರ ಪೊಲೀಸರು ಬಾಳುಗೋಡು ಗ್ರಾಮದ ಟಿ.ಕೆ.ನಾಣಯ್ಯ, ಕೆ.ಬಿ.ಜಗತ್, ಎಂ.ಪಿ.ಕೃತೀಶ್, ಪಿ.ದೇವಯ್ಯ, ಎಂ.ಆರ್.ಸಚಿನ್ ಹಾಗೂ ಇತರರು ಎಂದು ಪ್ರಕರಣ ದಾಖಲಿಸಿದ್ದಾರೆ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಬಾಳುಗೋಡು ಗ್ರಾಮದ ಸಿ.ಕೆ ಭೀಮಯ್ಯ ಎಂಬುವರು ಪ್ರತ್ಯೇಕವಾಗಿ ಇನ್ನೊಂದು ದೂರು ನೀಡಿದ್ದಾರೆ. ಗುಂಡಿಗೆರೆಯ ಸುಮಾರು 10ರಿಂದ 15 ಮಂದಿ, ಜೀಪ್ ನಂ ಕೆ.ಎ.12ಎ 3886 ರಲ್ಲಿ ಬಂದು ಗ್ರಾಮದ ಯುವಕರ ಮೇಲೆ ಹಲ್ಲೆ ನಡೆಸಿದರೆಂದೂ ಆರೋಪಿಸಿ ದೂರು ನೀಡಿದ್ದಾರೆ. ಈ ದೂರಿನ ಸಂಬಂಧ ಪೊಲೀಸರು ಎಫ್‍ಐಆರ್ ದಾಖಲಿಸಿದ್ದು ದೂರಿನಲ್ಲಿ ಹತ್ತರಿಂದ ಹದಿನೈದು ಮಂದಿ ಎಂದು ತೋರಿಸಿದ್ದಾರೆ. ಹೆಸರುಗಳನ್ನು ತೋರಿಸದ್ದರಿಂದ ಪೊಲೀಸರು ಎಫ್‍ಐಆರ್‍ನಲ್ಲಿ ಯಾರ ಹೆಸರನ್ನು ನಮೂದಿಸಿಲ್ಲವೆನ್ನಲಾಗಿದೆ. ಈ ಎರಡು ಗುಂಪುಗಳ ನಡುವೆ ತಾ. 10ರಂದು ಘರ್ಷಣೆ ಸಂಭವಿಸಿತ್ತು.