ದೇವರ್ಷಿ ಪೂಜ್ಯೇ ವಿಮಲೆ ನದೀಶೇ ಪರಾತ್ಪರೇ ಭಾವಿತ ನಿತ್ಯಪೂರ್ಣೇ

ಸಮಸ್ತ ಲೋಕೋತ್ತಮ ತೀರ್ಥಮಾತಃ ಕಾವೇರಿ ಕಾವೇರಿ ಮಮ ಪ್ರಸೀದ

ದೇವರ್ಷಿಗಳಿಂದಲೂ ಪೂಜಿತಳಾದವಳೆ, ಶುದ್ಧ ಸ್ವರೂಪಿಣಿ ಯಾದ ನದಿಗಳಿಗೆ ಒಡತಿಯಾದವಳೇ, ಪರಾತ್ಪರಳಾದವಳೇ, ಸದಾ ಪೂರ್ಣ ಸ್ವರೂಪಳಾಗಿ ಪ್ರಕಟಗೊಳ್ಳುವವಳೇ, ವಿಶ್ವದಲ್ಲಿ ಅತ್ಯುತ್ತಮ ತೀರ್ಥರೂಪಿಣಿಯಾದ ಕಾವೇರಿ ಮಾತೆಯೇ ಪ್ರಸನ್ನಳಾಗು, ಪ್ರಸನ್ನಳಾಗು.

‘ಗಂಗೇ ಚ ಯಮುನೇ ಚೈವ ಗೋದಾವರೀ ಸರಸ್ವತಿ, ನರ್ಮದೇ ಸಿಂಧು ಕಾವೇರಿ ಜಲೇಸ್ಮಿನ್ ಸನ್ನಿಧಿಂ ಕುರು’ ಎಂದು ಭಾರತದ ಪುಣ್ಯ ಭೂಮಿಯಲ್ಲಿ ಸಹಸ್ರಾರು ಮಂದಿ ನಿತ್ಯ ಜಪ ತಪಗಳ ಸಂದರ್ಭ ಸಂಕಲ್ಪ ಮಾಡುತ್ತಾರೆ. ಸಪ್ತ ನದಿಗಳಾದ ಗಂಗೆ, ಯಮುನೆ, ಗೋದಾವರಿ, ಸರಸ್ವತಿ, ನರ್ಮದೆ, ಸಿಂಧು ಕಾವೇರಿಯ ಪವಿತ್ರ ತೀರ್ಥಗಳು ತಾವು ಮಾಡುವ ಸಂಕಲ್ಪ ಜಲದಲ್ಲಿ ಆವಾಹಿತವಾಗಲಿ ಎಂದು ಮಂತ್ರ ಪೂರ್ವಕವಾಗಿ ಆಹ್ವಾನಿಸುತ್ತಾರೆ. ಪ್ರತಿ ದಿನವೂ ದೇವಾಲಯಗಳಲ್ಲಿ, ಕೋಟ್ಯಂತರ ಮನೆ ಮನೆಗಳಲ್ಲಿ ಜಪ, ತಪ, ಪೂಜಾದಿಗಳ ಸಂದರ್ಭ ಜನರು ನೆನಪಿಸಿಕೊಂಡು ಭಾರತದ ಈ ಮಹಾನ್ ನದಿಗಳಿಗೆ ಕೃತಜ್ಞತೆ ಸಲ್ಲಿಸುತ್ತಾರೆ. ಈ ಪವಿತ್ರ ನದಿಗಳನ್ನು ತಾವು ಮಾಡುವ ನಿತ್ಯ ಧಾರ್ಮಿಕ ವಿಧಿ ವಿಧಾನಗಳಿಗೆ ಪ್ರಧಾನವಾಗಿ ಆವಾಹಿಸಿಕೊಂಡು ಎಲ್ಲ ತೀರ್ಥಗಳು ತಮ್ಮ ಜಲ ಪಾತ್ರೆಯಲ್ಲಿ ಸಮ್ಮಿಲನಗೊಂಡಿವೆ ಎಂದು ಭಾವಿಸಿಕೊಂಡು ಬಳಿಕವಷ್ಟೆ ಜಪ, ಪೂಜಾದಿಗಳನ್ನು ನೆರವೇರಿಸುವ ಪರಿಪಾಠ ಇದುವರೆಗೂ ದೇಶದ ಹಿಂದೂ ಧರ್ಮೀಯರಲ್ಲಿ ನಡೆದುಕೊಂಡು ಬಂದಿದೆ. ತಮ್ಮ ಗೃಹಗಳಲ್ಲಿ ಸಂಕಲ್ಪ ಮಾಡಲು ಅನೇಕ ಕಾರಣಗಳಿಗಾಗಿ ಸಾಧ್ಯವಿಲ್ಲ ದವರು ದೇವಾಲಯಗಳಿಗೆ ತೆರಳಿ, ತೀರ್ಥಕ್ಷೇತ್ರಗಳಿಗೆ ತೆರಳಿ “ಅರ್ಚಕಸ್ಯ ಪ್ರಧಾನಸ್ಯ ಎಂಬಂತೆ ಅರ್ಚಕರ ಮೂಲಕ ಪೂಜಾದಿ ಗಳನ್ನು ನಡೆಸುತ್ತಾರೆ. ಸುಬ್ರಹ್ಮಣ್ಯದಂತಹ ಮಹಾನ್ ಕ್ಷೇತ್ರಗಳಲ್ಲಿ ಹರಕೆ ಅಥವ ಉದ್ದೇಶವಿರಿಸಿಕೊಂಡು ಭಕ್ತಾದಿಗಳು ಪೂಜಾ ಸೇವೆ ನಡೆಸಬೇಕಾದರೆ ಸಂಕಲ್ಪವನ್ನು ಅರ್ಚಕರಿಂದ ಮಾಡಿಸಲೇಬೇಕು. ಇಲ್ಲದಿದ್ದಲ್ಲಿ ನಡೆಸಿದ ಪೂಜೆಗೆ ಪೂರ್ಣ ಫಲ ದೊರಕದು. ಇದಕ್ಕಾಗಿ ಇಂತಹ ಕ್ಷೇತ್ರಗಳಲ್ಲಿ ಸಂಕಲ್ಪ ಮಂಟಪಗಳೆ ಇರುತ್ತವೆ. ದೇಶದ ಸಪ್ತ ಮಹಾನದಿಗಳನ್ನು ಆವಾಹಿಸಿಕೊಂಡು ಸಂಕಲ್ಪ ಮಾಡಿದರೆ ಮಾತ್ರ ಪೂಜಾ ಫಲ ದೊರಕುತ್ತದೆ ಎನ್ನುವ ವಿಧಿ ವಿಧಾನ ನಡೆದುಕೊಂಡು ಬಂದಿದೆ.

ಸಪ್ತ ನದಿಗಳಲ್ಲಿ ಕಾವೇರಿಯೂ ಒಳಗೊಂಡಿದ್ದಾಳೆ. ಕೊಡಗಿನ ತಲಕಾವೇರಿಯಲ್ಲಿ ಉದ್ಭವಗೊಂಡ ಕಾವೇರಿಯು ಪುಣ್ಯ ನದಿಯಾಗಿ ಭಾರತದ ಕೋಟ್ಯಂತರ ಮಂದಿಯನ್ನು ರಕ್ಷಿಸುತ್ತಿದ್ದಾಳೆ ಎಂದಾಗ ಕೊಡಗಿನ ಜನರು ನಿಜಕ್ಕೂ ಹೆಮ್ಮೆ ಪಡಬೇಕು. ನಮ್ಮ ನಾಡಿನಲ್ಲಿ ಜನಿಸಿದ ತವರು ಮನೆಯ ಮಾತೃ ಸ್ವರೂಪಿಣಿಯನ್ನು ನಾವು “ಅನನ್ಯಾಶ್ಚಿಂತಯಂತೋಮಾಂ” ಎಂಬಂತೆ ಏಕ ಮಾತ್ರಳೊಬ್ಬಳಾಗಿ ಆಕೆಯನ್ನೇ ಧ್ಯಾನಿಸಿದರೆ ತನ್ನ ತವರು ಮನೆಯ ಮಕ್ಕಳನ್ನು ಆಕೆ ಬೇಗ ಹರಸುತ್ತಾಳೆ. ಕೊಡವರು ತಮ್ಮ ಪ್ರಧಾನ ಕುಲದೇವತೆ ಎಂದು ಪರಿಗಣಿಸಿ “ಕಾವೇರಮ್ಮೆ” ಎಂದು ನಲ್ಮೆಯಿಂದ ಕರೆಯುತ್ತಾರೆ. ‘‘ಕಾವೇರಮ್ಮೆ ದೇವಿ ತಾಯಿ ಕಾಪಾಡೆಂಗಳ” ಎಂದು ಆಕೆಯನ್ನು ತಮ್ಮ ಮನೆ ಮನಗಳಲ್ಲಿ ತುಂಬಿಕೊಂಡಿದ್ದಾರೆ. ಕೊಡಗಿನ ಗೌಡ ಜನಾಂಗ ದವರೂ ಸೇರಿದಂತೆ ಬಹುತೇಕ ಮೂಲ ನಿವಾಸಿ ಜನಾಂಗೀಯರು ಕೂಡ ಕಾವೇರಿ ಮಾತೆಯನ್ನು ತಮ್ಮ ಆರಾಧ್ಯ ದೈವವಾಗಿ ನಂಬಿಕೊಂಡು ಬಂದಿದ್ದಾರೆ., ಕೊಡಗಿನ ಆಸ್ತಿಕ ಮಹಾಶಯರು ಬೆಳಿಗ್ಗೆ ಏಳುತ್ತ್ತಿದ್ದಂತೆ ಹೀಗೆ ಸ್ಮರಿಸಬೇಕು:-

ಅಚ್ಛಸ್ವಚ್ಛಲಸದ್ದುಕೂಲ ವಸನಾಂ ಪದ್ಮಾಸನಾಧ್ಯಾಸಿನೀಂ,

ಹಸ್ತನ್ಯಸ್ತವರಾಭಯಾಬ್ಜಕಲಶಾಂ ರಾಕೇಂದು ಕೋಟಿಪ್ರಭಾಂ,

ಭಾಸ್ವದ್ಭೂಷಣಗಂಧಮಾಲ್ಯರುಚಿರಾಂ ಚಾರುಪ್ರಸನ್ನಾನನಾಂ,

ಶ್ರೀ ಗಂಗಾದಿ ಸಮಸ್ತ ತೀರ್ಥನಿಲಯಾಂ ಧ್ಯಾಯಾಮಿ ಕಾವೇರಿಕಾಂ

ನಿರ್ಮಲವಾದ ರೇಷ್ಮೆ ವಸ್ತ್ರಧಾರಿಣಿಯಾಗಿ ಪದ್ಮಾಸನದಲ್ಲಿ ಕುಳಿತು ಧ್ಯಾನಾಸಕ್ತಳಾದ, ಕರದಲ್ಲಿ ವರವನ್ನೂ, ಅಭಯವನ್ನೂ ನೀಡುವಂತಹ ಕಮಲ ಕಲಶದೊಂದಿಗೆ ಕೋಟಿ ಹುಣ್ಣ್ಣಿಮೆ ಚಂದ್ರಮನ ಪ್ರಕಾಶ ದೊಂದಿಗೆ ಕಾಂತಿಯುಕ್ತ ಆಭರಣ, ಗಂಧ ಮಾಲಾಧಾರಿಣಿಯಾಗಿ, ಹೊಳೆಯುತ್ತಿರುವ ಸುಂದರ ವದನಳಾದ, ಗಂಗೆ ಮೊದಲಾದ ಎಲ್ಲ ಪವಿತ್ರ ತೀರ್ಥಗಳ ಆಗರಳಾಗಿರುವ ಕಾವೇರಿಯನ್ನು ಧ್ಯಾನಿಸುತ್ತೇನೆ.

ಟಿ.ಪಿ.ನಾರಾಯಣಾಚಾರ್ಯ

ಇಂತಹ ಪವಿತ್ರ ಕಾವೇರಿಯ ಪೂರ್ಣ ಚರಿತ್ರೆ ಸ್ಕಾಂದ ಪುರಾಣದಲ್ಲಿ ಸಂಸ್ಕøತ ಭಾಷೆಯಲ್ಲಿ ಅಡಕವಾಗಿದೆ. ಇದರಲ್ಲಿ ‘ಕಾವೇರಿ ಮಾಹಾತ್ಮೆ’ ಎನ್ನುವ ವಿಭಾಗದಲ್ಲಿ ಕಾವೇರಿಯು ನದಿಯಾಗಿ ಹರಿಯುವ ಅವಳ ಅಧ್ಯಾತ್ಮಿಕ ಅಧಿಭೌತಿಕ, ದೈವಿಕ, ಲೋಕಕಲ್ಯಾಣಾತ್ಮಕ ಹಿನ್ನೆಲೆಯ ಅವತಾರ ಚರಿತ್ರೆ ಒಳಗೊಂಡಿದೆ. ಈ ಗ್ರಂಥದಲ್ಲಿ 15 ಅಧ್ಯಾಯಗಳಿವೆ.ಈ ಮಹಾನ್ ಗ್ರಂಥವನ್ನು ಕನ್ನಡಕ್ಕೆ ಪ್ರಥಮವಾಗಿ ತರ್ಜುಮೆ ಮಾಡಿ ಲೋಕಾರ್ಪಣೆ ಮಾಡಿದ ಪುಣ್ಯಾತ್ಮರೆಂದರೆ ಕೊಡಗಿನವರೇ ಆಗಿದ್ದ ದಿವಂಗತ ಟಿ.ಪಿ. ನಾರಾಯಣಾಚಾರ್ಯರು. ತಲಕಾವೇರಿಯಲ್ಲಿ ಈ ಹಿಂದೆ ಪ್ರಧಾನ ಅರ್ಚಕರಾಗಿದ್ದ ದಿ. ಟಿ.ವಿ.ಪದ್ಮನಾಭಾಚಾರ್ಯ ಅವರ ಪುತ್ರರಾಗಿ 1900ರಲ್ಲಿ ಜನಿಸಿದ ಟಿ.ಪಿ.ನಾರಾಯಣಾಚಾರ್ಯರು ವೀರಾಜಪೇಟೆಯ ಸರಕಾರೀ ಪ್ರೌಢಶಾಲೆಯಲ್ಲಿ ಸಂಸ್ಕøತ ಶಿಕ್ಷಕರಾಗಿದ್ದು ಬಳಿಕ ಮಡಿಕೇರಿಯ ಸೆಂಟ್ರಲ್ ಹೈಸ್ಕೂಲ್‍ನಲ್ಲಿ (1936-56) ನಿವೃತ್ತಿಯಾಗುವವರೆಗೂ ಸಂಸ್ಕøತ ಮತ್ತು ಕನ್ನಡ ಶಿಕ್ಷಕ ರಾಗಿ ಸೇವೆ ಸಲ್ಲಿಸಿ 1984ರಲ್ಲಿ ಇಹಲೋಕ ತ್ಯಜಿಸಿದರು. ಅವರು ಸಂಸ್ಕøತ ದಲ್ಲಿ ಶ್ರೀ ಕಾವೇರಿ ಸುಪ್ರಭಾತ ಮತ್ತು ಶ್ರೀ ಭಗಂಡೇಶ್ವರ ಸುಪ್ರಭಾತಗಳನ್ನು ರಚಿಸಿ ಕನ್ನಡದಲ್ಲಿಯೂ ಅರ್ಥ ವಿವರಣೆ ನೀಡಿದ್ದಾರೆ. ಅಲ್ಲದೆ, ಕಾವೇರಿ ನಕ್ಷತ್ರ ಮಾಲಿಕಾ ಸ್ತೋತ್ರವನ್ನೂ ರಚಿಸಿದ್ದಾರೆ. ಆಗ ಕೊಡಗಿನಲ್ಲಿ ಅವರು ಏಕೈಕ ಸಂಸ್ಕøತ ವಿದ್ವಾಂಸರಾಗಿದ್ದರು ಎಂದು ಅವರ ಸುಪುತ್ರ ಈಗ ಬೆಂಗಳೂರಿನಲ್ಲಿ ತಮ್ಮ ಕುಟುಂಬ ವರ್ಗದವರೊಂದಿಗೆ ವಾಸಿಸುತ್ತಿ ರುವ ಕಾವೇರಿಯ ಪರಮ ಭಕ್ತರಾದ ಟಿ.ಎನ್. ಸತ್ಯ ಮೂರ್ತಿ(ಈಗ ಅವರಿಗೂ 79) ಅವರು ನೆನಪಿಸಿಕೊಳ್ಳುತ್ತಾರೆ. ತಮ್ಮ ಕುಲದೇವಿಯೆಂದು ನಂಬಿಕೊಂಡು ಬಂದಿರುವ ಕೊಡವರು ನಂಬುವದು ಸ್ಕಾಂದ ಪುರಾಣದಲ್ಲಿರುವ ಕಾವೇರಿ ಮಾಹಾತ್ಮೆಯನ್ನು ಎಂದು ತಿಳಿಸಿದ ಸತ್ಯಮೂರ್ತಿ ಅವರು ಕಾವೇರಿ ಕುರಿತು ಆಗ್ನೇಯ ಪುರಾಣದಲ್ಲಿಯೂ ಕತೆಯಿದೆ ಎಂದರು.

1948 ರಲ್ಲಿ ನಾರಾಯಣಾಚಾರ್ಯರು ಸ್ಕಾಂದಪುರಾಣಾಂತರ್ಗತ ಶ್ರೀ ಕಾವೇರಿ ಮಾಹಾತ್ಮೈಯನ್ನು ಕನ್ನಡಕ್ಕೆ ಯಥಾವತ್ತಾಗಿ ಅನುವಾದಿಸಿ ಪುಸ್ತಕ ರೂಪದಲ್ಲಿ ಹೊರ ತಂದರು. ನಾರಾಯಣಾಚಾರ್ಯರ ತಂದೆ ಟಿ.ವಿ ಪದ್ಮನಾಭಾಚಾರ್ಯರು ಆ ಪುಸ್ತಕದ ಪ್ರಕಾಶಕರಾಗಿದ್ದರು. ಬೆಂಗಳೂರು ಚಾಮರಾಜಪೇಟೆಯ ಶ್ರೀ ಕೃಷ್ಣ ಪ್ರೆಸ್ ನ ಟಿ.ಕೃಷ್ಣ ಹತ್ವಾರ್ ಅವರು ಮುದ್ರಕರಾಗಿದ್ದರು. ಆ ಪುಸ್ತಕಕ್ಕೆ ಮುನ್ನುಡಿಯನ್ನು ಆಗಿನ ಕೊಡಗು ಸರಕಾರದ “ಚೀಫ್ ಕಮಿಷನರ್” ದಿವಾನ್ ಬಹದ್ದೂರ್ ಕೇಟೋಳಿರ ಚಂಗಪ್ಪ ಅವರು ಬರೆದಿದ್ದರು. ಅವರು ಬರೆದ ಮುನ್ನುಡಿಯ ಸಾರಾಂಶ ಹೀಗಿದೆ:-”ದಕ್ಷಿಣ ಗಂಗೆಯೆಂದು ಪ್ರಸಿದ್ಧವಾದ ಕಾವೇರಿಯು ನಿರ್ದಿಷ್ಟ ಪುಣ್ಯಕಾಲದಲ್ಲಿ ಉದ್ಭವಿಸುವದು ಕಟ್ಟುಕತೆಯೆಂದು ಅನೇಕ ಮಂದಿ ನಾಸ್ತಿಕರು ಹೇಳುವದನ್ನು ನಾನು ಬಲ್ಲೆನು. ಅತಿ ಕಷ್ಟವನ್ನು ಎಣಿಸದೆ ಯಾತ್ರೆಗಾಗಿ ಬರುವ ಲಕ್ಷಾಂತರ ಭಕ್ತಾದಿಗಳ ದೃಢಶ್ರದ್ಧೆಯೇ ಇದಕ್ಕೆ ಪ್ರತ್ಯುತ್ತರವಾಗಿದೆ. ಇದರಿಂದ ಕಾವೇರಿಯ ಉದ್ಭವವು ಕಟ್ಟು ಕತೆಯಲ್ಲವೆಂದು ನಾಸ್ತಿಕರೂ ಅರಿತುಕೊಳ್ಳಬಹುದು.ನಮ್ಮ ಯುಕ್ತಿವಾದಕ್ಕೆ ನಿಲುಕದ ಅನೇಕ ವಿಷಯಗಳು ಇನ್ನೂ ಇವೆ. ಎಲ್ಲರೂ ತಿಳಿಯುವಂತೆ ಸರಳ ಶೈಲಿಯಲ್ಲಿ ಈ ಗ್ರಂಥವನ್ನು ಇಂತಹ ನಾಸ್ತಿಕ ಯುಗದಲ್ಲಿಯೂ ಪ್ರಕಟಿಸಿ ಅನುವಾದಕರು ನಾಸ್ತಿಕರಿಗೂ, ಆಸ್ತಿಕರಿಗೂ ಮಹೋಪಕಾರ ಮಾಡಿದ್ದಾರೆ. ತಲಕಾವೇರಿಯ ಪವಿತ್ರ ಕುಂಡಿಕೆಯಲ್ಲಿ ನಿರ್ದಿಷ್ಟ ಪುಣ್ಯಕಾಲದಲ್ಲಿ ಕಾವೇರಿಯು ಚಲನಾತ್ಮಕವಾಗಿ ಉದ್ಭವಿಸುವ ಸುಸನ್ನಿವೇಶವನ್ನು ಸಂದರ್ಶಿಸುವ ಸುಯೋಗವು ನನಗೂ ದೊರಕಿತ್ತು. ಇದು ಸಾಮಾನ್ಯ ಮಾನವರು ಅರಿಯಲಾಗದ ದೈವಿಕ ವಿಷಯವಾಗಿದೆ.”ಎಂದು ಚೀಫ್ ಕಮಿಷನರ್ ಚೆಂಗಪ್ಪ ತಮ್ಮ ಮುನ್ನುಡಿಯಲ್ಲಿ ಮುಕ್ತ ಅಭಿಪ್ರಾಯ ವ್ಯಕ್ತಪಡಿಸಿದ್ದರು.

ಕೇಟೋಳಿರ ಚೆಂಗಪ್ಪ (1878-1963)

ಶ್ರೀ ಕಾವೇರಿ ಮಾಹಾತ್ಮೆ ಪುಸ್ತಕಕ್ಕೆ ಮುನ್ನುಡಿ ಬರೆದ ಕೇಟೋಳಿರ ಚೆಂಗಪ್ಪ ಅವರು ಅಷ್ಟೇ ಮಹತ್ವದ ವಕ್ತಿತ್ವ ಹೊಂದಿ ದ್ದರು. 1946 ರಿಂದ 1951 ರವರೆಗಿನ 5 ವರ್ಷಗಳ ಕಾಲ ಅವರು ಕೊಡಗು ಸರಕಾರದ ಚೀಫ್ ಕಮಿಷನರ್ ಆಗಿ ಸೇವೆ ಸಲ್ಲಿಸಿದ್ದರು. 1947 ರಲ್ಲಿ ಅವರಿಗೆ ದಿವಾನ್ ಬಹದ್ದೂರ್ ಗೌರವ ಲಭ್ಯವಾಯಿತು. ಮತ್ತೊಂದು ಪ್ರಮುಖ ಅಂಶವೆಂದರೆ, ಭಾರತಕ್ಕೆ ಸ್ವಾತಂತ್ರ್ಯ ದೊರಕಿದ ಬಳಿಕ 1947 ರ ಆ.15 ರಂದು ಮಡಿಕೇರಿಯ ಐತಿಹಾಸಿಕ ಕೋಟೆಯಲ್ಲಿ ಮೊದಲ ಬಾರಿಗೆ ಭಾರತದ ಸುವರ್ಣ ಧ್ವಜವನ್ನು ಆರೋಹಣ ಮಾಡಿದ ಮೊದಲ ನಾಯಕ ಕೊಡವ ಜನಾಂಗದ ದಿವಾನ್ ಬಹದ್ದೂರ್ ಕೇಟೋಳಿರ ಚೆಂಗಪ್ಪ ಅವರಾಗಿದ್ದರು. ಅವರ ಪುತ್ರ ದಿ. ಕೆ. ಸಿ. ಮೇದಪ್ಪ ಸೇನೆಯಲ್ಲಿ ಸೇವೆ ಸಲ್ಲಿಸಿದ್ದರು.

(ಮುಂದಿನ ವಾರದಿಂದ ಶ್ರೀ ಕಾವೇರಿ ಮಾಹಾತ್ಮೆಯಲ್ಲಿನ ಶ್ರೀ ಕಾವೇರಿ ಕುರಿತಾದ ಕಥಾ ಸರಣಿ ಪ್ರಕಟಗೊಳ್ಳ ಲಿದೆ. ಈ ಎಲ್ಲ ಮಾಹಿತಿ ಸಂಗ್ರಹಕ್ಕೆ ಸಹಕಾರ ನೀಡಿದ ತಲಕಾವೇರಿಯಲ್ಲಿ ಈಗ ಪ್ರಧಾನ ಅರ್ಚಕ ರಾಗಿರುವ ಟಿ. ಎಸ್. ನಾರಾಯಣಾಚಾರ್ ಅವರಿಗೆ ಲೇಖಕ ಆಭಾರಿ)