ಗೋಣಿಕೊಪ್ಪಲು, ಏ. 11: ರೈತರಿಗೆ ಶೂನ್ಯ ಬಡ್ಡಿದರದಲ್ಲಿ ಮೂರು ಲಕ್ಷ ಸಾಲವನ್ನು ಕರ್ನಾಟಕ ರಾಜ್ಯದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಮೂಲಕ ವಿತರಿಸುತ್ತಾ ಬಂದಿರುವ ರಾಜ್ಯ ಸರಕಾರ ಇದೀಗ ಏಕಾಏಕಿ ಹೊಸ ಸುತ್ತೋಲೆ ಹೊರಡಿಸಿ ಕುಟುಂಬದ ಓರ್ವ ಸದಸ್ಯನಿಗೆ ಮಾತ್ರ ಶೂನ್ಯ ಬಡ್ಡಿ ದರದಲ್ಲಿ ಸಾಲ ನೀಡುವ ನಿರ್ಧಾರಕ್ಕೆ ಬಂದಿದೆ.

ಇಂತಹ ಅಪಾಯಕಾರಿ ಸುತ್ತೋಲೆಯನ್ನು ಸರ್ಕಾರ ತಕ್ಷಣ ಹಿಂಪಡೆಯುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಕೊಡಗು ಜಿಲ್ಲಾದ್ಯಕ್ಷ ಕಾಡ್ಯಮಾಡ ಮನು ಸೋಮಯ್ಯ ಮನವಿ ಸಲ್ಲಿಸಿದರು.

ಮಡಿಕೇರಿಯ ಸಹಕಾರ ಸಂಘಗಳ ಉಪನಿಬಂಧಕರಾದ ಸಲೀಂ ಅವರನ್ನು ಭೇಟಿ ಮಾಡಿದ ರೈತ ಸಂಘದ ಪದಾಧಿಕಾರಿಗಳು ರಾಜ್ಯದ ಮುಖ್ಯ ಮಂತ್ರಿಗಳು ಹೊರಡಿಸಿರುವ ಸುತ್ತೋಲೆ ಹಿಂಪಡೆಯುವಂತೆ ಮನವಿಯಲ್ಲಿ ಒತ್ತಾಯ ಮಾಡಿದ್ದಾರೆ.

ಈ ಆದೇಶವು ರೈತರಿಗೆ ಹಾಗೂ ಸಹಕಾರ ಸಂಘಗಳಿಗೆ ಮಾರಕವಾಗಲಿದೆ. ಈ ಹಿಂದೆ ಪ್ರತ್ಯೇಕ ಪಹಣಿ, ಗೇಣಿದಾರ, ವಿಭಾಗ ಪತ್ರ, ಜಂಟಿ ಖಾತೆದಾರರಿಗೆ ಮತ್ತು ಇತರ ಹಿಡುವಳಿ ಹೊಂದಿರುವ ರೈತರಿಗೆ ಈ ಸೌಲಭ್ಯ ದೊರಕುತಿತ್ತು.

ಪ್ರಸ್ತುತ ಪರಿಸ್ಥಿತಿಯಲ್ಲಿ ರೈತರು ಪ್ರಕೃತಿ ವಿಕೋಪ, ಬೆಳೆಹಾನಿ, ವೈಜ್ಞಾನಿಕ ಬೆಲೆ ನಿಗದಿಯಲ್ಲಿ ವಿಳಂಬ ಕಾಡು ಪ್ರಾಣಿಗಳ ಉಪಟಳ ಸೇರಿದಂತೆ ಆನೇಕ ಸಮಸ್ಯೆಯಲ್ಲಿ ರೈತ ಸಿಲುಕಿದ್ದಾನೆ. ಇಂತಹ ಸಂದರ್ಭ ಸರ್ಕಾರ ರೈತರ ಮೇಲೆ ಒತ್ತಡ ಹೇರುವ ಪ್ರಯತ್ನ ನಡೆಸುತ್ತಿರುವುದು ಸರಿಯಾದ ಕ್ರಮವಲ್ಲ.

ಈ ಆದೇಶದಿಂದ ಮುಂದಿನ ದಿನಗಳಲ್ಲಿ ರೈತರು ಸ್ಥಾಪಿಸಿದ ಸಹಕಾರ ಸಂಘಗಳು ಮುಚ್ಚುವುದರಲ್ಲಿ ಯಾವುದೇ ಅನುಮಾನವಿಲ್ಲ. ಅದ್ದರಿಂದ ಮುಖ್ಯ ಮಂತ್ರಿಗಳು ರೈತರಿಗೆ ಹಿಂದಿನಿಂದಲೂ ಕೊಡುತ್ತ ಬಂದಿರುವ ಸಾಲವನ್ನು ಮುಂದುವರಿಸಬೇಕು.

ಮುಖ್ಯ ಮಂತ್ರಿಗಳು ತಮ್ಮ ಕಚೇರಿಯ ಮೂಲಕ ಹೊರಡಿಸಿದ ಹೊಸ ಆದೇಶವನ್ನು ರದ್ದು ಮಾಡಿ ಇರುವ ವ್ಯವಸ್ಥೆಯನ್ನು ಮುಂದುವರೆಸುವ ಮೂಲಕ ರೈತರನ್ನು ಹಾಗೂ ಸಹಕಾರ ಸಂಘಗಳನ್ನು ರಕ್ಷಣೆ ಮಾಡಬೇಕು ಎಂದು ಮನವಿ ಪತ್ರದಲ್ಲಿ ತಿಳಿಸಿದ್ದಾರೆ.

ಕೆ.ಡಿ.ಸಿ.ಸಿ. ಬ್ಯಾಂಕ್ ಅಧ್ಯಕ್ಷ ಬಾಂಡ್ ಗಣಪತಿ ಅವರಿಗೂ ಮನವಿ ಸಲ್ಲಿಸಿ ಮುಖ್ಯಮಂತ್ರಿಗಳ ಗಮನ ಸೆಳೆಯುವಂತೆ ಕೋರಲಾಯಿತು. ಈ ಸಂದರ್ಭ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚೆಟ್ರುಮಾಡ ಸುಜಯ್ ಬೋಪಯ್ಯ, ಕಾರ್ಯದರ್ಶಿ ಅಜ್ಜಮಾಡ ಚಂಗಪ್ಪ, ಅಮ್ಮತ್ತಿ ಹೋಬಳಿ ಅಧ್ಯಕ್ಷ ಮಂಡೇಪಂಡ ಪ್ರವೀಣ್ ಉಪಸ್ಥಿತರಿದ್ದರು.

- ಹೆಚ್.ಕೆ. ಜಗದೀಶ್.