ವೀರಾಜಪೇಟೆ, ಏ.11: ಕೆಲ ದಿನಗಳ ಹಿಂದೆ ಎತ್ತನ್ನು ಖರೀದಿಗೆಂದು ಬಿಟ್ಟಂಗಾಲದ ಬಳಿಯ ಕೊಳತ್ತೊಡು ಬೈಗೋಡಿಗೆ ತೆರಳಿ ಬಳಿಕ ನಾಪತ್ತೆಯಾಗಿದ್ದ ಎಂ.ಎಂ. ಮೂಸಾ (65) ಅವರು ಶವವಾಗಿ ಪತ್ತೆಯಾಗಿದ್ದು, ಗ್ರಾಮಾಂತರ ಪೊಲೀಸರು ಮೃತದೇಹದ ಮಹಜರು ನಡೆಸಿ ವೈದ್ಯಕೀಯ ಪರೀಕ್ಷೆಗೆ ಗುರಿಪಡಿಸಿ ಇಂದು ಅಪರಾಹ್ನ 3 ಗಂಟೆಗೆ ಗುಂಡಿಗೆರೆಯ ಮೃತರ ವಾರೀಸುದಾರರಿಗೆ ಒಪ್ಪಿಸಿದ್ದಾರೆ.ಮೃತ ಮೂಸಾ ತಾ. 7ರಂದು ಬೆಳಿಗ್ಗೆ ಕೊಳತ್ತೊಡು ಬೈಗೋಡು ಗ್ರಾಮಕ್ಕೆ ತೆರಳಿ ಎತ್ತನ್ನು ಖರೀದಿಸಿದ ನಂತರ ಎತ್ತಿನೊಂದಿಗೆ ಮನೆಗೆ ಹಿಂತಿರುಗುತ್ತಿದ್ದಾಗ ಮೂಸಾ ಸಾವನ್ನಪ್ಪಿದ್ದಾರೆ. (ಮೊದಲ ಪುಟದಿಂದ) ಮೂಸಾ ಖರೀದಿಸಿದ ಎತ್ತು ಹಾಗೂ ಮೂಸಾ ಅವರ ಮೃತದೇಹ ಸುಮಾರು ಒಂದೂವರೆ ಕಿ.ಮೀ. ದೂರದಲ್ಲಿದ್ದು, ಮೃತದೇಹ ಮರದ ಕೆಳಗೆ ಬಿದ್ದಿತ್ತು. ಮೃತ ದೇಹದ ಮೇಲೆ ಹಲ್ಲೆ ನಡೆಸಿದ ಕಲೆಗಳಾಗಲಿ ದೇಹಕ್ಕೆ ಥಳಿಸಿರುವ ಇತರ ಗುರುತುಗಳಾಗಲಿ ಕಂಡು ಬಾರದ್ದರಿಂದ ಇದನ್ನು ಸಂಶಯಾಸ್ಪದ ಸಾವು ಎಂದು ಪರಿಗಣಿಸಿ ಪೊಲೀಸರು ಐ.ಪಿ.ಸಿ. 174.ಸಿ ಪ್ರಕಾರ ಪ್ರಕರಣ ದಾಖಲಿಸಿದ್ದಾರೆ. ಮೂಸಾ ತಾ.7ರಂದು ಸಂಜೆಯೇ ಸಾವನ್ನಪ್ಪಿರಬಹುದೆಂದು ಪೊಲೀಸ್ ವಲಯದಲ್ಲಿ ಶಂಕಿಸಲಾಗಿದೆ.

ಪೊಲೀಸರ ತನಿಖೆ ಪ್ರಕಾರ ತಾ. 7ರಂದು ಮೂಸಾ ಕೆ.ಬೈಗೋಡಿಗೆ ಹೋಗಿ ಎತ್ತು ಖರೀದಿಸಿದ್ದು ನಿಜ. ಎತ್ತಿನೊಂದಿಗೆ ಮನೆಗೆ ಹಿಂದಿರುಗುವ ಹಾದಿಯಲ್ಲಿ ಸಂಶಯಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ್ದಾರೆ. ಪೊಲೀಸರ ತನಿಖೆ ಹಾಗೂ ವೈದ್ಯಕೀಯ ಪರೀಕ್ಷೆಯ ವರದಿ ಬಂದ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ಮೃತದೇಹದಿಂದ ಅನತಿ ದೂರದಲ್ಲಿ ಕಟ್ಟಿ ಹಾಕಿದ ಸ್ಥಿತಿಯಲ್ಲಿದ್ದ ಎತ್ತನ್ನು ಪೊಲೀಸರು ವಶ ಪಡಿಸಿಕೊಂಡಿದ್ದಾರೆ. ಎತ್ತಿನ ಹೊಟ್ಟೆಯ ಕೆಳ ಭಾಗಕ್ಕೆ ದೊಡ್ಡ ಗಾಯವಾಗಿದ್ದು ಇದರಿಂದ ರಕ್ತ ಸೋರುತ್ತಿತ್ತು ಎನ್ನಲಾಗಿದೆ.

ನಿನ್ನೆ ದಿನ ಸಂಜೆ 6.30 ರ ಸಮಯದಲ್ಲಿ ಅರಣ್ಯ ಇಲಾಖೆಯ ನೌಕರರೊಬ್ಬರು ಇಲ್ಲಿನ ಗ್ರಾಮಾಂತರ ಪೊಲೀಸ್ ಠಾಣೆಗೆ ಮೊಬೈಲ್ ಮೂಲಕ ಬಿಟ್ಟಂಗಾಲದ ಮುಖ್ಯ ರಸ್ತೆಯಿಂದ ಕೆ.ಬೈಗೋಡುವಿಗೆ ಹೋಗುವ ಮಣ್ಣಿನ ರಸ್ತೆಯ ಕೆಲವೇ ಅಂತರದಲ್ಲಿ ರಸ್ತೆಯ ಬದಿಯಲ್ಲಿ ಎತ್ತೊಂದನ್ನು ಕಟ್ಟಿ ಹಾಕಲಾಗಿದೆ ಎಂದು ಸುಳಿವು ನೀಡಿದ ನಂತರ ಇಂದು ಬೆಳಿಗ್ಗೆ ಪೊಲೀಸರು ಪ್ರಕರಣದ ಸ್ಥಳಕ್ಕೆ ತೆರಳಿದ್ದರು. ಎತ್ತು ಕಟ್ಟಿದ್ದ ಮುಂದಿನ ಒಂದೂವರೆ ಕಿ.ಮೀ. ದೂರದಲ್ಲಿ ಕಾಫಿ ತೋಟದ ಮರದ ಕೆಳಗೆ ಮೂಸಾ ಅವರ ಮೃತದೇಹ ಪತ್ತೆಯಾಗಿದೆ. ಮೃತ ದೇಹದ ಸುಮಾರು ಹತ್ತು ಅಡಿ ಅಂತರದಲ್ಲಿ ಮೂಸಾ ಅವರ ಚಪ್ಪಲಿ ಪತ್ತೆಯಾದರೆ ಇದರ ಸ್ವಲ್ಪ ದೂರದಲ್ಲಿ ಎತ್ತನ್ನು ಹಿಡಿದುಕೊಂಡು ಬರಲು ಹಗ್ಗ ತರಲು ಬಳಸಿದ್ದ ಬ್ಯಾಗ್ ಪತ್ತೆಯಾಗಿದೆ.

ನಾಪತ್ತೆಯಾಗಿದ್ದ ಮೂಸಾ ಮೃತದೇಹ ಇಂದು ಬೆಳಿಗ್ಗೆ 11 ಗಂಟೆಗೆ ಪತ್ತೆಯಾಗಿ ಸಾರ್ವಜನಿಕ ಆಸ್ಪತ್ರೆಯ ಶವಗಾರಕ್ಕೆ ಸಾಗಿಸಿದೊಡನೆ ಸಮುದಾಯದ ಅನೇಕರು ಆಸ್ಪತ್ರೆಯಲ್ಲಿ ನೆರೆದಿದ್ದರು. ಡಿ.ವೈ.ಎಸ್.ಪಿ. ಸಿ.ಟಿ. ಜಯಕುಮಾರ್ ಆಸ್ಪತ್ರೆಗೆ ಭೇಟಿ ನೀಡಿದ್ದರು. ಸರ್ಕಲ್ ಇನ್ಸ್‍ಪೆಕ್ಟರ್ ಕ್ಯಾತೆಗೌಡ ಮೃತದೇಹದ ಮಹಜರು ನಡೆಸಿದರು. ಸಬ್‍ಇನ್ಸ್‍ಪೆಕ್ಟರ್ ವೀಣಾ ನಾಯಕ್ ಪ್ರಕರಣ ದಾಖಲಿಸಿದರು.

ಶವಗಾರದ ಬಳಿ ಮೂಸಾ ಅವರ ಸಂಬಂಧಿಕರು, ಮಕ್ಕಳಿದ್ದರು. ಮೂಸಾ ಅವರ ಮಗನಾದ ಸಲಾಂ ‘ನಮ್ಮ ತಂದೆಯ ಸಾವು ಆಕಸ್ಮಿಕವಲ್ಲ, ಸಂಶಯಾಸ್ಪದವಲ್ಲ ತಂದೆ ಮೂಸಾ ಅವರನ್ನು ಗುರುತು ಸಿಗದ ರೀತಿಯಲ್ಲಿ ಕೊಲೆ ಮಾಡಲಾಗಿದ್ದು, ವೈದ್ಯಕೀಯ ಪರೀಕ್ಷೆ ಹಾಗೂ ಪೊಲೀಸರು ತನಿಖೆಯಿಂದ ನಿಜಾಂಶವನ್ನು ಬೆಳಕಿಗೆ ತರಬೇಕು’ ಎಂದು ಪೊಲೀಸರಿಗೆ ಶವಗಾರದ ಬಳಿಯೇ ದೂರು ನೀಡಿದರು.. ಮೂಸಾ ಅವರ ಮಕ್ಕಳ ಪ್ರಕಾರ ತಂದೆಯ ಮೃತದೇಹದ ಮೂಗಿನಲ್ಲಿ ರಕ್ತ ಸ್ರಾವವಾಗಿರುವುದು ಕಂಡು ಬಂದಿದೆ. ಎರಡು ಕೈಗಳ ಮೂಳೆ ಗಂಟಿನ ಬಳಿ ಗಾಯವಿರುವ ಗುರುತುಗಳಿವೆ. ಮೃತದೇಹದ ಕೆಳ ಭಾಗದಲ್ಲಿ ಜಿಪ್‍ನ್ನು ಕೆಳಕ್ಕೆ ಸರಿಸಲಾಗಿದೆ.ಇದು ಸಂಶಯಾಸ್ಪದ ಕೊಲೆಯಾಗಿದೆ ಎಂದು ತಮ್ಮ ಅಸಮಾಧಾನ ವ್ಯಕ್ತಪಡಿಸಿದರು. ಮೂಸಾ ಅವರು ಮನೆಯಿಂದ ಹೋಗುವಾಗ ಎತ್ತುಗಳ ಖರೀದಿಗಾಗಿ ರೂ 28000 ನಗದು ತೆಗೆದುಕೊಂಡು ಹೋಗಿದ್ದರು. ಮೂಸಾ ಅವರಿಗೆ ಹಸುಗಳನ್ನು ಸಾಕುವ ಹವ್ಯಾಸವಿದೆ. ಮನೆಯಲ್ಲಿ ಇನ್ನು ಐದು ಹಸುಗಳಿದ್ದು ಇದಕ್ಕಾಗಿ ಎತ್ತನ್ನು ಖರೀದಿಸಲು ಮುಂದಾಗಿದ್ದರು. ಒಂದು ಎತ್ತನ್ನು ರೂ 18000ಕ್ಕೆ ಖರೀದಿಸಿದರೂ ಬಾಕಿ ಹಣ ರೂ10,000 ವನ್ನು ಅಪಹರಿಸಲಾಗಿದೆ. ವಾಚ್ ಹಾಗೂ ಖಾಲಿ ಮನಿ ಪರ್ಸ್ ಮಾತ್ರ ಮೃತ ದೇಹದಲ್ಲಿದ್ದುದನ್ನು ಪೊಲೀಸರು ಸಲಾಂಗೆ ಹಿಂತಿರುಗಿಸಿದರು.

ಶವಾಗಾರಕ್ಕೆ ಅಲ್ಪಸಂಖ್ಯಾತ ನಾಯಕರುಗಳು ಭೇಟಿ ನೀಡಿ ಪ್ರಕರಣದ ಕುರಿತು ಉನ್ನತ ಮಟ್ಟದ ತನಿಖೆಗೆ ಆಗ್ರಹಿಸಿದರು. ಜಿಲ್ಲಾ ವಕ್ಫ್ ಬೋರ್ಡ್ ಅಧ್ಯಕ್ಷ ಯಾಕೂಬ್ ಮಾತನಾಡಿ ಇದೊಂದು ನೈಜ ಸಾವಲ್ಲ ಇದರ ಹಿಂದೆ ಯಾವುದೊ ಕಾಣದ ಕೈಗಳ ಶಂಕೆ ಇದೆ. ಇದನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಉನ್ನತ ಮಟ್ಟದಲ್ಲಿ ತನಿಖೆ ಮಾಡಬೇಕು ಎಂದು ಒತ್ತಾಯಿಸಿದರು. ಜಿಲ್ಲಾ ಪಂಚಾಯತ್ ಸದಸ್ಯ ಅಬ್ದುಲ್ ಲತೀಫ್ ಮಾತನಾಡಿ ಪ್ರಕರಣದ ಶೀಘ್ರ ತನಿಖೆಗೆ ಒತ್ತಾಯಿಸಿದರು. ಈ ಸಂದರ್ಭ ವೀರಾಜಪೇಟೆ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಅಬ್ದುಲ್ ಸಲಾಂ ಆರ್.ಕೆ., ಜಿಲ್ಲಾ ವಕ್ಫ್ ಬೋರ್ಡ್ ಉಪಾಧ್ಯಕ್ಷ ಅಬ್ದುರಹ್ಮಾನ್ ಬಾಪು, ಅಬೂಬಕ್ಕರ್ ಕಡಂಗ, ಪಟ್ಟಣ ಪಂಚಾಯಿತಿ ಸದಸ್ಯರಾದ ರಂಜಿ ಪೂಣಚ್ಚ, ಮಹಮ್ಮದ್ ರಾಫಿ ಜಾಲೀಲ್ ಮತ್ತು ಪ್ರಮುಖ ಎಜಾಸ್ ಮುನ್ನಾ ಮುಂತಾದವರಿದ್ದರು.