ಮಡಿಕೇರಿ, ಏ. 11: ಕೊರೊನಾ ಸನ್ನಿವೇಶದ ದುಷ್ಪರಿಣಾಮದಿಂದ ಎದುರಾಗಿರುವ ಸಂಕಷ್ಟವನ್ನು ಮೆಟ್ಟಿನಿಲ್ಲುವಲ್ಲಿ ನಡೆಯುತ್ತಿರುವ ಪ್ರಯತ್ನಕ್ಕೆ ಗೋಣಿಕೊಪ್ಪಲು ಕೃಷಿ ಉತ್ಪನ್ನ ಮಾರುಕಟ್ಟೆ ಅಗತ್ಯ ಸಹಕಾರಕ್ಕೆ ಮುಂದಾಗಿದ್ದು; ಹಲವು ನಿರ್ಣಯಗಳನ್ನು ಕೈಗೊಂಡಿದೆ.ಎಪಿಎಂಸಿ ಅಧ್ಯಕ್ಷ ಮಾಚಂಗಡ ಸುಜಾ ಪೂಣಚ್ಚ, ಮಾಜಿ ಅಧ್ಯಕ್ಷ ಮಾಚಿಮಂಡ ಸುವಿನ್ ಗಣಪತಿ ಸೇರಿದಂತೆ ಸಮಿತಿಯ ಸದಸ್ಯರು ಆಡಳಿತ ಮಂಡಳಿಯವರು ಈ ವಿಚಾರದಲ್ಲಿ ಸರಕಾರಕ್ಕೆ ನೆರವು ನೀಡಲು ಕೈಜೋಡಿಸುವದರೊಂದಿಗೆ; ರೈತರಿಗೂ ಅಗತ್ಯ ಸೌಲಭ್ಯ ಕಲ್ಪಿಸುವ ನಿರ್ಧಾರಕ್ಕೆ ಬಂದಿದೆ.

ಇದರಂತೆ ಎಪಿಎಂಸಿ ಮೂಲಕ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ರೂ. 15 ಲಕ್ಷ, ಪ್ರಧಾನಮಂತ್ರಿಗಳ ಪರಿಹಾರ ನಿಧಿಗೆ ರೂ. 5 ಲಕ್ಷ ನೀಡಲು ನಿರ್ಧರಿಸಿದೆ. ಇದರೊಂದಿಗೆ ಮತ್ತೊಂದು ಕೊಡುಗೆಯಾಗಿ ರೂ. 6 ಲಕ್ಷ ಹಣವನ್ನು ವೆಂಟಿಲೇಟರ್ ವ್ಯವಸ್ಥೆ ಕಲ್ಪಿಸಲು ನೀಡಲು ಸಮಿತಿ ಮುಂದಾಗಿದೆ. ಈ ರೂ. 6 ಲಕ್ಷ ಹಣದಲ್ಲಿ ವೆಂಟಿಲೇಟರ್ ಅನ್ನು ಕೊಡಗು ಜಿಲ್ಲಾಸ್ಪತ್ರೆಗೆ ನೀಡಬೇಕೆಂದು ಪ್ರತ್ಯೇಕವಾಗಿ ಮನವಿ ಮಾಡಲಾಗುವದು ಎಂದು ಸುವಿನ್ ಗಣಪತಿ ತಿಳಿಸಿದ್ದಾರೆ.ತಾ. 10 ರಂದು ಜಿಲ್ಲೆಗೆ ಉಸ್ತುವಾರಿ ಸಚಿವರಾದ ಸೋಮಣ್ಣ ಅವರು ಭೇಟಿ ನೀಡುವ ಕಾರ್ಯಕ್ರಮವಿದ್ದ ಸಂದರ್ಭ ಇದನ್ನು ನೀಡಲು ಉದ್ದೇಶಿಸಲಾಗಿತ್ತು. ಆದರೆ ಸಚಿವರ ಭೇಟಿ ರದ್ದಾದ ಹಿನ್ನೆಲೆಯಲ್ಲಿ ನೀಡಲಾಗಿಲ್ಲ. ಇದೀಗ ಸೋಮವಾರದಂದು ಸಂಸದ ಪ್ರತಾಪ್ ಸಿಂಹ ಹಾಗೂ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ಅವರ ಮೂಲಕ ಇದನ್ನು ನೀಡಲಾಗುವದು ಎಂದು ಅವರು ತಿಳಿಸಿದ್ದಾರೆ.

ಈ ವಿಚಾರದಲ್ಲಿ ಹಾಗೂ ಇನ್ನಿತರ ಕೆಲವು ವಿಚಾರಗಳ ಬಗ್ಗೆ ಶಾಸಕ ಬೋಪಯ್ಯ ಅವರೊಂದಿಗೆ ಚರ್ಚಿಸಿ ಅವರ ಸಲಹೆ - ಸೂಚನೆಯಂತೆಯೂ ಹಲವು ಇತರ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ. ಇದೀಗ ಕಾಫಿ ಬೆಳೆಗಾರರ ಸಂಘದ ಮೂಲಕ ಕಾಫಿಯನ್ನು ಖರೀದಿಸಲು ಮುಂಗಡ ಹಣ ನೀಡುವ ಕುರಿತು ತೀರ್ಮಾನಿಸಿರುವದರಿಂದ ಇದಕ್ಕಾಗಿ ಸಂಘಕ್ಕೆ ಗೋಣಿಕೊಪ್ಪಲು ಎಪಿಎಂಸಿಯಲ್ಲಿರುವ 19 ಗೋದಾಮುಗಳನ್ನು ಮೂರು ತಿಂಗಳ ತನಕ ಬಾಡಿಗೆ ರಹಿತವಾಗಿ ನೀಡಲು ಉದ್ದೇಶಿಸಲಾಗಿದೆ.

ಕಾಫಿ ಬೆಳೆಗಾರರ ಸಂಘಕ್ಕೆ ಹೆಬ್ಬಾಲೆ ಹಾಗೂ ಹುಣಸೂರಿನಲ್ಲಿ ಮಾತ್ರ ಗೋದಾಮು ಇರುವದರಿಂದ ಬೆಳೆಗಾರರಿಗೆ ಅನುಕೂಲ ಕಲ್ಪಿಸಲು ಈ ತೀರ್ಮಾನಕ್ಕೆ ಬರಲಾಗಿದೆ. ಇದಲ್ಲದೆ ಎಪಿಎಂಸಿ ಪ್ರಾಂಗಣದಲ್ಲಿ ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ಐದು ಪ್ರಮುಖ ವಾಣಿಜ್ಯ ಮಳಿಗೆ ಹಾಗೂ ಒಳ ಆವರಣದಲ್ಲಿರುವ ಇತರ ಮಳಿಗೆಗಳನ್ನು ಬಾಡಿಗೆ ರಹಿತವಾಗಿ ಮೂರು ತಿಂಗಳ ಅವಧಿಗೆ ತರಕಾರಿ - ಹಣ್ಣು ಹಂಪಲು ವ್ಯಾಪಾರಕ್ಕೆ ಬಿಟ್ಟು ಕೊಡಲಾಗುತ್ತಿದೆ. ಇದರೊಂದಿಗೆ ರಾಜ್ಯ ವೇರ್‍ಹೌಸ್‍ಗೆ ಸಮಿತಿಯಿಂದ ನೀಡಲಾಗುವ ರೂ. 54 ಲಕ್ಷ ಅಡಮಾನ ಸಾಲವನ್ನು ಆ ನಿರ್ಬಂಧವನ್ನು ಸಡಿಲಿಸಿ ಗೋಣಿಕೊಪ್ಪಲು ಎಪಿಎಂಸಿ ವ್ಯಾಪ್ತಿಯ ರೈತರಿಗೆ ಸಾಲವಾಗಿ ನೀಡುವ ಕುರಿತು ಶಾಸಕ ಬೋಪಯ್ಯ ಅವರೊಂದಿಗೆ ಚರ್ಚಿಸಲಾಗಿದೆ. ಈ ನಿಟ್ಟಿನಲ್ಲಿಯೂ ಅಗತ್ಯ ವ್ಯವಸ್ಥೆಗೆ ಪ್ರಯತ್ನ ನಡೆಯುತ್ತಿದೆ ಎಂದು ಸಮಿತಿಯ ಪರವಾಗಿ ಸುವಿನ್ ಗಣಪತಿ ಅವರು ತಿಳಿಸಿದ್ದಾರೆ.