ಮಡಿಕೇರಿ, ಏ. 11: ಕೊಡಗು ಜಿಲ್ಲೆಯಲ್ಲಿ ಕೊರೊನಾ ವೈರಸ್ ಹರಡು ವಿಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಲಾಕ್‍ಡೌನ್ ನಿರ್ಬಂಧ ದೊಂದಿಗೆ ಕೊಡಗು ಜಿಲ್ಲೆಗೆ ವಿವಿಧ ಜಿಲ್ಲೆಗಳು ಹಾಗೂ ನೆರೆಯ ರಾಜ್ಯದಿಂದ ಪ್ರವೇಶವಿರುವಂತಹ ಗಡಿಪ್ರದೇಶಗಳಲ್ಲಿ ಪೊಲೀಸ್ ಇಲಾಖೆ ಹೆಚ್ಚು ಕಟ್ಟೆಚ್ಚರ ವಹಿಸಿದೆ. ಇಲಾಖೆಯ ಸಿಬ್ಬಂದಿಗಳು ಮಾತ್ರವಲ್ಲದೆ; ಆರೋಗ್ಯ ಇಲಾಖಾ ಸಿಬ್ಬಂದಿಗಳ ಸಹಿತವಾಗಿ ಇಂತಹ ಆಯಕಟ್ಟಿನ ಪ್ರದೇಶಗಳಲ್ಲಿ ಹೆಚ್ಚಿನ ನಿಗಾವಹಿಸಿದ್ದು; ದಿನದ 24 ಗಂಟೆಗಳೂ ಗಡಿಗಳಲ್ಲಿ ಹದ್ದಿನಗಣ್ಣು ಇಡಲಾಗಿದೆ.ಕೊಡಗು ಜಿಲ್ಲೆಯ ವಿವಿಧೆಡಗಳಲ್ಲಿ ಇತರೆಡೆಗಳಿಂದ ಸಂಪರ್ಕ ಇರುವ ಒಟ್ಟು 15 ಕಡೆಗಳಲ್ಲಿ ಪೊಲೀಸ್ ಚೆಕ್‍ಪೋಸ್ಟ್‍ಗಳು ಕಾರ್ಯನಿರ್ವ ಹಿಸುತ್ತಿದ್ದು; ಈ ಎಲ್ಲೆಡೆ ಭಾರೀ ಬಿಗಿ ಕ್ರಮ ಅನುಸರಿಸಲಾಗುತ್ತಿದೆ. ಅದರಲ್ಲೂ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಿರುವಂತಹ ಕೇರಳ ರಾಜ್ಯದ ಕಡೆಗಳಿಂದ ಜಿಲ್ಲೆಯನ್ನು ಪ್ರವೇಸಬಹುದಾದ ದಾರಿ ಹಾಗೂ ನೆರೆಯ ಮೈಸೂರು ಹಾಗೂ ಕಾಸರಗೋಡು ಕಡೆಯಿಂದ ಇರುವ ಪ್ರವೇಶದ್ವಾರಗಳಲ್ಲಿ ಹೆಚ್ಚು ನಿಗಾವಹಿಸಲಾಗುತ್ತಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ತಿಳಿಸಿದ್ದಾರೆ.ಪ್ರಸ್ತುತ ಕೊಡಗು ಜಿಲ್ಲೆ ಈ ರೀತಿಯ ಒಟ್ಟು 15 ಚೆಕ್‍ಪೋಸ್ಟ್‍ಗಳಿಂದ ಕೂಡಿದ್ದು; ಇದರ ದಿಗ್ಭಂದನದಲ್ಲಿ ಜಿಲ್ಲೆಯಲ್ಲಿ ಲಾಕ್‍ಡೌನ್ ಅನುರಿಸಲಾಗುತ್ತಿದೆ. ಮುಖ್ಯವಾಗಿ ಕೇರಳದ ಮೂಲಕ ಪ್ರವೇಶಿಸಬಹುದಾಗಿರುವ ಮಾಕುಟ್ಟ, ಕುಟ್ಟ ಹಾಗೂ ಕರಿಕೆ ಗಡಿಗಳಿವೆ. ಇದರೊಂದಿಗೆ ಮೈಸೂರು ಕಡೆಯಿಂದ ಪ್ರವೇಶವಿರುವ ಆನೆಚೌಕೂರು, ಕೊಪ್ಪ, ಮಾಲ್ದಾರೆ, ಕಾಸರಗೋಡು ಕಡೆಯಿಂದ ಬರಬಹುದಾಗಿರುವ ಸಂಪಾಜೆ ಚೆಕ್‍ಪೋಸ್ಟ್ ಮಹತ್ವದ್ದಾಗಿದೆ. ಈ ಎಲ್ಲೆಡೆಗಳಿಂದ ಜಿಲ್ಲೆಯನ್ನು ಪ್ರವೇಶಿಸುವ ರಸ್ತೆಗಳನ್ನು ಬಂದ್ ಮಾಡಲಾಗಿದ್ದು; ಇಲ್ಲಿ ಇಲಾಖಾ ಸಿಬ್ಬಂದಿಗಳು 24 ಗಂಟೆಯೂ ಹೆಚ್ಚು ನಿಗಾವಹಿಸು ತ್ತಿದ್ದಾರೆ. ಅತ್ಯಂತ ತುರ್ತು ಸಂದರ್ಭದ ವಿಚಾರ ಹಾಗೂ ಸರಕು ಸಾಗಣೆ ವಾಹನಗಳನ್ನು ಮಾತ್ರ ಸೂಕ್ತ ಪರಿಶೀಲನೆಯೊಂದಿಗೆ ದಾಖಲೆ ಪಡೆದು ಸಂಚರಿಸಲು ಅನುವು ಮಾಡಿಕೊಡಲಾಗುತ್ತಿದೆ ಎಂದು ಡಾ. ಸುಮನ್ ತಿಳಿಸಿದರು.

ಕರಿಕೆ, ಮಾಕುಟ್ಟ, ಕುಟ್ಟ ರಸ್ತೆಗಳನ್ನು ಮಣ್ಣು ಹಾಕಿ ಸಂಪೂರ್ಣ ಬಂದ್ ಮಾಡಲಾಗಿದ್ದರೂ; ಇಲ್ಲಿ ಓರ್ವ ಎಎಸ್‍ಐ ಹಾಗೂ ಮೂವರು ಪೊಲೀಸರು ಕರ್ತವ್ಯದಲ್ಲಿರುತ್ತಾರೆ. ಈ ಕಡೆಗಳಿಂದ

(ಮೊದಲ ಪುಟದಿಂದ) ಇರುವ ಕಾಲು ದಾರಿಗಳ ಮೇಲೂ ನಿಗಾವಹಿಸಲಾಗುತ್ತಿದೆ. ಇನ್ನು ಕೊಪ್ಪ,

ಆನೆಚೌಕೂರು ಚೆಕ್‍ಪೋಸ್ಟ್‍ಗಳಲ್ಲಿ ಕನಿಷ್ಟ 5 ರಿಂದ 7 ಸಿಬ್ಬಂದಿಗಳು ಸದಾ ಕರ್ತವ್ಯದಲ್ಲಿರುತ್ತಾರೆ. ಇವರೊಂದಿಗೆ ಆರೋಗ್ಯ ಇಲಾಖಾ ಸಿಬ್ಬಂದಿಗಳು ಇರುವದಾಗಿ ಅವರು ಮಾಹಿತಿಯಿತ್ತರು. ಕಾಸರಗೋಡು ಮೂಲಕ ಬರಬಹುದಾದ ಸಂಪಾಜೆಯಲ್ಲೂ ಹೆಚ್ಚಿನ ನಿಗಾವಹಿಸಲಾಗುತ್ತಿದೆ.

ಜಿಲ್ಲೆಯ ಚೆಕ್‍ಪೋಸ್ಟ್‍ಗಳು

ಜಿಲ್ಲೆಯಲ್ಲಿ ತೆರೆಯಲಾಗಿರುವ ವಿವಿಧ ಚೆಕ್‍ಪೋಸ್ಟ್‍ಗಳು ಇಂತಿವೆ. ಮಾಕುಟ್ಟ, ಕುಟ್ಟ, ಸಂಪಾಜೆ, ಕರಿಕೆ, ಮಾಲ್ದಾರೆ, ಆನೆಚೌಕೂರು, ಶಿರಂಗಾಲ, ಹೆಬ್ಬಾಲೆ, ಕುಶಾಲನಗರ (ಕೊಪ್ಪ), ನಿಲುವಾಗಿಲು, ಬಾಣಾವರ, ಕೂತಿ, ಶಾಂತಪುರ, ಹಿಪ್ಪಲಿ ಹಾಗೂ ಚಂಗಡಳ್ಳಿ ಈ ಎಲ್ಲಾ ಚೆಕ್‍ಪೋಸ್ಟ್‍ಗಳಲ್ಲೂ ನಿಗಾ ಮುಂದುವರಿಯುತ್ತಿದೆ.