ಸೋಮವಾರಪೇಟೆ, ಏ.11: ಪ್ರಾಕೃತಿಕ ವಿಕೋಪಕ್ಕೆ ತುತ್ತಾದ ಮಂದಿಗೆ ಮಾದಾಪುರ ಸಮೀಪದ ಜಂಬೂರು ಗ್ರಾಮದಲ್ಲಿ ನಿರ್ಮಿಸಲಾಗುತ್ತಿರುವ ಸಂತ್ರಸ್ತರ ಪುನರ್ವಸತಿ ಕೇಂದ್ರಕ್ಕೆ ಸೋಮವಾರಪೇಟೆ ನ್ಯಾಯಾಲಯದ ನ್ಯಾಯಾಧೀಶರುಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಉಚ್ಚ ನ್ಯಾಯಾಲಯದ ನಿರ್ದೇಶನದ ಮೇರೆಗೆ ತಾಲೂಕು ಕಾನೂನು ಸೇವಾ ಸಮಿತಿ ಹಾಗೂ ವಕೀಲರ ಸಂಘ ಸೋಮವಾರಪೇಟೆ ಇವರ ವತಿಯಿಂದ ಹಿರಿಯ ಸಿವಿಲ್ ನ್ಯಾಯಾಧೀಶರಾದ ಎಸ್.ಆರ್.ದಿಂಡಲಕೊಪ್ಪ ಹಾಗೂ ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಪ್ರತಿಭಾ ಅವರು ನೆರೆಸಂತ್ರಸ್ತ ರಿಗಾಗಿ ಜಂಬೂರಿನಲ್ಲಿ ನಿರ್ಮಿಸುತ್ತಿರುವ ಮನೆಗಳ ನಿರ್ಮಾಣ ಸ್ಥಳಕ್ಕೆ ಭೇಟಿ ನೀಡಿದರು.

ನೂತನವಾಗಿ ಮನೆಗಳನ್ನು ನಿರ್ಮಿಸುತ್ತಿರುವವರಲ್ಲಿ ಬಹುತೇಕರು ಉತ್ತರ ಪ್ರದೇಶ, ತಮಿಳುನಾಡು ಹಾಗೂ ಕರ್ನಾಟಕ ರಾಜ್ಯದ ವಿವಿಧ ಜಿಲ್ಲೆಗಳಿಂದ ಬಂದವರಾಗಿದ್ದು, ಸುಮಾರು 200ಕ್ಕೂ ಅಧಿಕ ಕೂಲಿ ಕಾರ್ಮಿಕರಿರುವ ಬಗ್ಗೆ ನ್ಯಾಯಾಧೀಶರುಗಳು ಮಾಹಿತಿ ಪಡೆದರು.

ಸ್ಥಳದಲ್ಲಿದ್ದ ಎಲ್ಲಾ ಕಾರ್ಮಿಕರ ಸಮಸ್ಯೆಗಳನ್ನು ನ್ಯಾಯಾಧೀಶರು ಆಲಿಸಿದರು. ಕಟ್ಟಡ ಕಾಮಗಾರಿಗೆ ಈಗಾಗಲೇ ಜಿಲ್ಲಾಧಿಕಾರಿಯಿಂದ ಅನುಮತಿ ಪಡೆದಿರುವದಾಗಿ ಮೇಲ್ವಿಚಾರಕ ಮುರುಳಿ ತಿಳಿಸಿದರಲ್ಲದೇ, ಕಾರ್ಮಿಕರಿಗೆ ಊಟ ಮತ್ತು ವಸತಿಗೆ ಯಾವದೇ ಸಮಸ್ಯೆ ಇಲ್ಲದಿರುವ ಬಗ್ಗೆ ಮಾಹಿತಿ ನೀಡಿದರು.

ಈ ಸಂದರ್ಭ ಕಾರ್ಮಿಕರಿಗೆ ಕೊರೊನಾ ರೋಗ ಹರಡದಂತೆ ತಡೆಗಟ್ಟಲು ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಅವರಿಗೆ ಅರ್ಥವಾಗುವಂತೆ ಅವರ ಮಾತೃಭಾಷೆಯಲ್ಲಿಯೇ ತಿಳುವಳಿಕೆ ಮೂಡಿಸಲಾಯಿತು.

ನಂತರ ಮಾದಾಪುರದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ, ಕಟ್ಟಡ ಕಾರ್ಮಿಕರ ವೈದ್ಯಕೀಯ ಪರೀಕ್ಷೆಯನ್ನು ಮಾಡಲು ವೈದ್ಯಾಧಿಕಾರಿಯಾದ ಡಾ. ಹಿಮಾನಿ ಅವರಿಗೆ ನಿರ್ದೇಶನ ನೀಡಲಾಯಿತು. ಈ ಸಂದರ್ಭ ನ್ಯಾಯಾಲಯದ ಸಿಬ್ಬಂದಿ ಬಿ.ಎಸ್.ಮಧು, ಪೊಲೀಸ್ ಸಿಬ್ಬಂದಿ ರಮೇಶ್ ಹಾಜರಿದ್ದರು.