ಕುಶಾಲನಗರ, ಏ. 11: ಕುಶಾಲನಗರ ಸಮೀಪದ ದುಬಾರೆ ಸಾಕಾನೆ ಶಿಬಿರದಲ್ಲಿ ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಭಾರೀ ಕಟ್ಟೆಚ್ಚರ ವಹಿಸಲಾಗಿದೆ ಎಂದು ಮಡಿಕೇರಿ ಭಾಗದ ಅರಣ್ಯ ಸಂರಕ್ಷಣಾಧಿಕಾರಿ ಪ್ರಭಾಕರನ್ ತಿಳಿಸಿದ್ದಾರೆ.

ಅವರು ಶಿಬಿರಕ್ಕೆ ಭೇಟಿ ನೀಡಿ ‘ಶಕ್ತಿ’ ಜೊತೆ ಮಾತನಾಡಿ, ದುಬಾರೆ ಶಿಬಿರದಲ್ಲಿ ಒಟ್ಟು 31 ಸಾಕಾನೆಗಳು ಇದ್ದು ಅವುಗಳನ್ನು ಮಾವುತರು ಕಾವಾಡಿಗಳು ನೋಡಿಕೊಳ್ಳುತ್ತಿದ್ದಾರೆ. ಇದೀಗ ಆನೆಗಳನ್ನು ಶಿಬಿರದಲ್ಲಿ ದೂರ ದೂರ ಇರಿಸಲಾಗಿದ್ದು ಅವುಗಳನ್ನು ನೋಡಿಕೊಳ್ಳಲು ಎಲ್ಲಾ ಮುನ್ನೆಚ್ಚರಿಕೆ ವಹಿಸಲಾಗುತ್ತಿದೆ. ಶಿಬಿರಕ್ಕೆ ಹೊರಗಿನಿಂದ ಯಾರು ಬರದಂತೆ ನೋಡಿಕೊಳ್ಳಲಾಗುವುದು ಮತ್ತು ಶಿಬಿರದಿಂದ ಹೊರಗೆ ಹೋಗದಂತೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದ್ದಾರೆ .ದುಬಾರೆ ಸಾಕಾನೆ ಶಿಬಿರದಲ್ಲಿ ಇರುವ 60 ಗಿರಿಜನ ಕುಟುಂಬಗಳಿಗೆ ಎಲ್ಲಾ ರೀತಿಯ ಅಗತ್ಯ ವಸ್ತುಗಳನ್ನು ವಿತರಿಸಲು ಇಲಾಖೆ ಕ್ರಮ ಕೈಗೊಂಡಿದೆ ಎಂದು ಅವರು ತಿಳಿಸಿದ್ದಾರೆ ಶಿಬಿರದ ಉಸ್ತುವಾರಿ ಅಧಿಕಾರಿ ಕೆ. ರಂಜನ್ ಅವರು ಆನೆಗಳ ನಿಗಾ ವಹಿಸುತ್ತಿದ್ದಾರೆ ಅಲ್ಲದೆ ವನ್ಯಜೀವಿ ತಜ್ಞರು ಆಗಾಗ್ಗೆ ಭೇಟಿ ನೀಡಿ ಆನೆಗಳ ಆರೋಗ್ಯ ತಪಾಸಣೆಯಲ್ಲಿ ತೊಡಗಿಸಿಕೊಳ್ಳಲಿದ್ದಾರೆ ಎಂದು ಪ್ರಭಾಕರನ್ ಮಾಹಿತಿ ನೀಡಿದ್ದಾರೆ.