ಸಿದ್ದಾಪುರ, ಏ. 11: ಸರ್ಕಾರದ ಸುತ್ತೋಲೆ ಅನ್ವಯ ಗ್ರಾಮ ಮಟ್ಟದಲ್ಲಿ ಕೊರೊನಾ ನಿಗ್ರಹ ದಳ ಹಾಗೂ ಪ್ರತಿ ವಾರ್ಡ್‍ಗೆ ಒಂದರಂತೆ ವಾರ್ಡ್ ಮಟ್ಟದ ಕೊರೊನಾ ನಿಗ್ರಹ ದಳದ ಸಮಿತಿಯನ್ನು ನೆಲ್ಲಿಹುದಿಕೇರಿಯಲ್ಲಿ ರಚನೆ ಮಾಡಲಾಯಿತು. ನಂತರ ಸಭೆಯಲ್ಲಿ ಕೊರೊನಾ ನಿಗ್ರಹ ದಳದ ಕರ್ತವ್ಯಗಳ ಬಗ್ಗೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಅನಿಲ್ ಕುಮಾರ್ ಮಾಹಿತಿ ನೀಡಿದರು. ಗ್ರಾಮದ ಎಲ್ಲಾ ವಾರ್ಡ್‍ನ ನಿಗ್ರಹ ದಳಗಳು ಬೀದಿ ಬೀದಿಯಲ್ಲಿ ಜನರಲ್ಲಿ ಜಾಗೃತಿ ಮೂಡಿಸುವುದು, 5 ಜನಕ್ಕಿಂತ ಹೆಚ್ಚು ಜನ ಒಂದು ಕಡೆ ಸೇರದಂತೆ ನೋಡಿಕೊಳ್ಳಬೇಕೆಂದು ಹಾಗೂ ಎಚ್ಚರ ವಹಿಸಬೇಕೆಂದು ತಿಳಿಸಿದರು. ಗ್ಯಾಸ್, ತರಕಾರಿ, ದಿನಸಿ ಇತ್ಯಾದಿ ವಿತರಣಾ ಕೇಂದ್ರಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಮನವಿ ಮಾಡಿಕೊಂಡರು. ಜಾಗೃತಿ ದಳದ ಸದಸ್ಯರುಗಳು 6 ರಿಂದ 12ರ ವರೆಗಿನ ವ್ಯಾಪಾರ ವಹಿವಾಟಿನ ಸಮಯದಲ್ಲೂ ಕೂಡ ನೆಲ್ಲಿಹುದಿಕೇರಿ ಪಟ್ಟಣ ಭಾಗದಲ್ಲಿ ತಮ್ಮ ಸೇವೆಯನ್ನು ನಿರ್ವಹಿಸಬೇಕೆಂದು ಸೂಚಿಸಿದರು. ಸಭೆಯಲ್ಲಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಸೆಫಿಯ, ಸದಸ್ಯ ಅಫ್ಸಲ್ ಹಾಗೂ ಆಶಾ ಕಾರ್ಯಕರ್ತರು ಹಾಜರಿದ್ದರು.