ಸೋಮವಾರಪೇಟೆ, ಏ.11: ಮಡಿಕೇರಿ ತಾಲೂಕಿನ ಪೆರಾಜೆ ಗ್ರಾಮದಲ್ಲಿ ಅಕ್ರಮವಾಗಿ ಕಳ್ಳಭಟ್ಟಿ ತಯಾರಿಸುತ್ತಿದ್ದ ಅಡ್ಡೆಯ ಮೇಲೆ ಅಬಕಾರಿ ಇಲಾಖಾಧಿಕಾರಿಗಳು ಧಾಳಿ ನಡೆಸಿದ್ದು, ಈ ಸಂದರ್ಭ ಈರ್ವರು ಆರೋಪಿಗಳು ಪರಾರಿಯಾಗಿದ್ದಾರೆ.

ಸ್ಥಳದಲ್ಲಿದ್ದ ಕಳ್ಳಭಟ್ಟಿ ತಯಾರಿಕಾ ಸಾಮಗ್ರಿಗಳನ್ನು ವಶಕ್ಕೆ ಪಡೆದಿರುವ ಅಬಕಾರಿ ಅಧಿಕಾರಿಗಳು, ಪೆರಾಜೆ ಗ್ರಾಮದ ಈರ್ವರ ವಿರುದ್ಧ ಮೊಕದ್ದಮೆ ದಾಖಲಿಸಿಕೊಂಡಿದ್ದಾರೆ.

ಪೆರಾಜೆ ಗ್ರಾಮದ ಮೂಲೆಮಜಲು ನಿವಾಸಿಗಳಾದ ಹೆಚ್.ಎಲ್. ದಾಮೋದರ್ ಮತ್ತು ಹೆಚ್.ಎಂ. ನಂಜಪ್ಪ ಇವರುಗಳಿಗೆ ಸೇರಿದ ಮನೆ ಹಾಗೂ ಅಡಿಕೆ ತೋಟದ ಮೇಲೆ ಅಧಿಕಾರಿಗಳು ಧಾಳಿ ನಡೆಸಿದ್ದು, ಅಕ್ರಮವಾಗಿ ಕಳ್ಳಭಟ್ಟಿ ತಯಾರಿಸಿ ಮಾರಾಟಕ್ಕೆಂದು ಸಂಗ್ರಹಿಸಿ ಇಡಲಾಗಿದ್ದ 30 ಲೀಟರ್ ಗೇರುಹಣ್ಣಿನ ಪುಳಿಗಂಜಿ ಮತ್ತು ಪರಿಕರಗಳನ್ನು ವಶಕ್ಕೆ ಪಡೆಯಲಾಗಿದೆ.

ಕಾರ್ಯಾಚರಣೆ ಸಂದರ್ಭ ಆರೋಪಿಗಳು ಪರಾರಿಯಾಗಿದ್ದು, ದಾಮೋದರ್ ಮತ್ತು ನಂಜಪ್ಪ ಅವರುಗಳ ವಿರುದ್ಧ ಅಬಕಾರಿ ಕಾಯ್ದೆಯಂತೆ ಮೊಕದ್ದಮೆ ದಾಖಲಿಸಿಕೊಳ್ಳಲಾಗಿದೆ. ಮಡಿಕೇರಿಯ ಅಬಕಾರಿ ಉಪ ಆಯುಕ್ತರು ಮತ್ತು ಅಬಕಾರಿ ಉಪ ಅಧೀಕ್ಷಕರ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಅಬಕಾರಿ ಇಲಾಖೆಯ ಉಪ ನಿರೀಕ್ಷಕ ಬಿ.ಎಸ್. ಲೋಕೇಶ್, ಅಬಕಾರಿ ರಕ್ಷಕರುಗಳಾದ ಕೆ.ಎಸ್. ಅಮ್ಜದ್, ಹೆಚ್.ಕೆ. ರಾಜು, ಲಕ್ಷ್ಮೀದೇವಿ ಅವರುಗಳು ಭಾಗವಹಿಸಿದ್ದರು.

ಬಂಧನ

ಗೋಣಿಕೊಪ್ಪಲು: ಖಚಿತ ಮಾಹಿತಿ ಮೇರೆ ಶ್ರೀಮಂಗಲ ಠಾಣೆ ವ್ಯಾಪ್ತಿಯ ಪ್ರಭಾರ ಸಬ್‍ಇನ್ಸ್‍ಪೆಕ್ಟರ್ ವಸಂತ್‍ಕುಮಾರ್ ಹಾಗೂ ತಂಡ ದಾಳಿ ನಡೆಸಿ ತೆರಾಲು ಗ್ರಾಮದ ಆರೋಪಿ ಕಾರ್ಯಪ್ಪ ಎಂಬುವರನ್ನು ದಸ್ತಗಿರಿ ಮಾಡಿದ್ದಾರೆ. ಆರೋಪಿಯು ತನ್ನ ಮನೆಯ ಹಿಂಭಾಗದಲ್ಲಿ ಕಳ್ಳಭಟ್ಟಿ ತಯಾರಿಸುತ್ತಿದ್ದು ಇದಕ್ಕೆ ಬೇಕಾದ ಪ್ಲಾಸ್ಟಿಕ್ ಡ್ರಂನಲ್ಲಿದ್ದ 50 ಲೀಟರ್ ಪುಳಿಗಂಜಿ, 4 ಲೀ. ಕಳ್ಳಭಟ್ಟಿ ಹಾಗೂ ಕಳ್ಳಭಟ್ಟಿ ತಯಾರಿಸುವ ಪಾತ್ರೆ ಸೇರಿದಂತೆ ಇನ್ನಿತರ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ವೀರಾಜಪೇಟೆ ಡಿವೈಎಸ್ಪಿ ಜಯಕುಮಾರ್ ಮಾರ್ಗದರ್ಶನದಲ್ಲಿ ಕುಟ್ಟ ವೃತ್ತ ನಿರೀಕ್ಷಕರಾದ ಪರಶಿವಮೂರ್ತಿ ಸೂಚನೆ ಮೇರೆಗೆ ಎಸ್‍ಐ ಮೋಹನ್ ರಾಜ್, ಎಎಸ್‍ಐ ಸಾಬು, ಪೊಲೀಸ್ ಸಿಬ್ಬಂದಿಗಳಾದ ರವಿ, ಪ್ರಸನ್ನ, ಧನ್ಯ, ಜೀಪ್ ಚಾಲಕ ಸಂದೀಪ್ ಮುಂತಾದವರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.