ಸೋಮವಾರಪೇಟೆ, ಮಾ. 10: ಲಾಕ್‍ಡೌನ್ ಹಿನ್ನೆಲೆ ಪಟ್ಟಣದಲ್ಲಿ ನಡೆಯುತ್ತಿದ್ದ ಸಂತೆಯನ್ನು ಪಟ್ಟಣದ ಹೊರವಲಯದಲ್ಲಿರುವ ಆರ್‍ಎಂಸಿ ಪ್ರಾಂಗಣಕ್ಕೆ ಸ್ಥಳಾಂತರಿಸಲಾಗಿದ್ದು, ಕಳೆದೆರಡು ವಾರಗಳಿಂದ ಆರ್‍ಎಂಸಿಯಲ್ಲೇ ಸಂತೆ ನಡೆಯುತ್ತಿದೆ. ವಾರದಲ್ಲಿ 3 ದಿನಗಳ ಕಾಲ ತರಕಾರಿ-ದಿನಸಿ ಖರೀದಿಗೆ ಅವಕಾಶ ಕಲ್ಪಿಸಿರುವ ಹಿನ್ನೆಲೆ ಶುಕ್ರವಾರದಂದು ಮಾರುಕಟ್ಟೆಯಲ್ಲಿ ಗ್ರಾಹಕರಿಗಿಂತ ವರ್ತಕರೇ ಅಧಿಕವಾಗಿದ್ದರು.

ಕಳೆದ ಸೋಮವಾರ ಗ್ರಾಮೀಣ ಭಾಗದಿಂದ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದ ಗ್ರಾಹಕರು ಬುಧವಾರದ ಸಂತೆಯಂದು ವಿರಳವಾಗಿದ್ದರು. ಶುಕ್ರವಾರದಂದು ನಡೆದ ಸಂತೆಯಲ್ಲಿ ಗ್ರಾಹಕರಿಗಿಂತ ವರ್ತಕರೇ ಅಧಿಕವಾಗಿದ್ದರು.

ಲಾಕ್‍ಡೌನ್ ಹಿನ್ನೆಲೆ ವಾರದ ಮೂರು ದಿನಗಳಂದು ಪಟ್ಟಣದ ದಿನಸಿ ಮತ್ತು ತರಕಾರಿ ಅಂಗಡಿಗಳನ್ನು ಹೊರತುಪಡಿಸಿ ಉಳಿದ ಅಂಗಡಿಗಳನ್ನು ಮುಚ್ಚಿರುವ ಹಿನ್ನೆಲೆ, ತರಕಾರಿ ಮಾರುವವರ ಸಂಖ್ಯೆಯೂ ಅಧಿಕವಾಗಿದೆ.

ಸಣ್ಣಪುಟ್ಟ ವ್ಯಾಪಾರ, ಇತರ ಅಂಗಡಿಗಳನ್ನು ನಡೆಸುತ್ತಿದ್ದ ಮಂದಿಯೂ ಸಹ ಇದೀಗ ತರಕಾರಿ ವ್ಯಾಪಾರದಲ್ಲಿ ತೊಡಗಿಸಿ ಕೊಂಡಿದ್ದಾರೆ. ಹೊರ ಜಿಲ್ಲೆಗಳಿಂದ ತರಕಾರಿ ಹಾಗೂ ದಿನಸಿ ಸಾಮಾಗ್ರಿಗಳನ್ನು ತಂದು ಪಟ್ಟಣದಲ್ಲಿ ಮಾರಾಟ ಮಾಡುತ್ತಿದ್ದಾರೆ.

ಸೋಮವಾರದಂದು ಭರ್ಜರಿ ವ್ಯಾಪಾರ ಮಾಡಿದ್ದ ವರ್ತಕರು ಬುಧವಾರ ಮತ್ತು ಶುಕ್ರವಾರದ ಸಂತೆಯಂದು ವ್ಯಾಪಾರವಿಲ್ಲದೇ ನಷ್ಟ ಅನುಭವಿಸಿದರು. ತರಕಾರಿಗಳನ್ನು ಹೆಚ್ಚಿನ ದಿನ ದಾಸ್ತಾನು ಮಾಡಲು ಸಾಧ್ಯವಿಲ್ಲದ ಹಿನ್ನೆಲೆ ಮಧ್ಯಾಹ್ನ 11.30ಕ್ಕೆ ಕಡಿಮೆ ಬೆಲೆಗೆ ತರಕಾರಿಗಳನ್ನು ಮಾರಾಟ ಮಾಡಲು ಮುಂದಾದರೂ ಸಹ ಗ್ರಾಹಕರು ಸಂತೆಯಿಂದ ಹೊರಹೋಗಿದ್ದರು.

ಪಟ್ಟಣದಲ್ಲಿ ಮೆಡಿಕಲ್ ಮತ್ತು ದಿನಸಿ ಅಂಗಡಿಗಳ ಮುಂಭಾಗ ಸಾಮಾಜಿಕ ಅಂತರ ಕಾಯ್ದುಕೊಂಡು ಅಗತ್ಯ ದಿನಸಿ ಮತ್ತು ಔಷಧಿಗಳನ್ನು ಖರೀದಿಸಿದರು.

ಗ್ರಾಮೀಣ ಭಾಗಕ್ಕೆ ಹಲವಷ್ಟು ವಾಹನಗಳಲ್ಲಿ ದಿನಸಿ ಹಾಗೂ ತರಕಾರಿಗಳನ್ನು ಮಾರಾಟಕ್ಕೆ ತೆಗೆದುಕೊಂಡು ಹೋಗುತ್ತಿರುವ ಹಿನ್ನೆಲೆ ಲಾಕ್‍ಡೌನ್ ಸಡಿಲಿಕೆಯಾಗುವ ದಿನಗಳಲ್ಲೂ ಸಹ ಪಟ್ಟಣಕ್ಕೆ ಹೆಚ್ಚಿನ ಜನರು ಆಗಮಿಸುತ್ತಿಲ್ಲ. ಮಾಮೂಲಿ ಸಂತೆ ನಡೆಯುವ ಸೋಮವಾರ ಹೊರತುಪಡಿಸಿದರೆ ಉಳಿದ ಎರಡು ದಿನ (ಬುಧವಾರ-ಶುಕ್ರವಾರ) ಪಟ್ಟಣದಲ್ಲಿ ನಡೆಯುವ ಸಂತೆಯಲ್ಲಿ ಗ್ರಾಹಕರು ಸಂಖ್ಯೆ ಕಡಿಮೆಯಾಗುತ್ತಿದೆ.

ತರಕಾರಿಗಳನ್ನು ಜಾಸ್ತಿ ದಿನ ಇಡಲೂ ಸಾಧ್ಯವಿಲ್ಲ, ಸಂತೆಗೆ ಜನರೂ ಬರುತ್ತಿಲ್ಲ. ಇದರಿಂದಾಗಿ ನಿರೀಕ್ಷಿತ ವ್ಯಾಪಾರ ಇಲ್ಲದಂತಾಗಿದೆ ಎಂದು ವರ್ತಕರು ಅಭಿಪ್ರಾಯಿಸಿ ದರು. ವಾರದಲ್ಲಿ ಮೂರು ದಿನಗಳ ಕಾಲ ತರಕಾರಿ ಮಾರಾಟಕ್ಕೆ ಅವಕಾಶ ಕಲ್ಪಿಸಿರುವದು, ಗ್ರಾಮೀಣ ಭಾಗಕ್ಕೆ ವಾಹನಗಳಲ್ಲಿ ದಿನಸಿ ಹಾಗೂ ತರಕಾರಿ ಸರಬರಾಜಾ ಗುತ್ತಿರುವದ ರಿಂದ ಸೋಮವಾರ ಹೊರತುಪಡಿಸಿ ಉಳಿದ ದಿನಗಳಲ್ಲಿ ಪಟ್ಟಣದಲ್ಲಿ ಹೆಚ್ಚಿನ ಜನಸಂಚಾರ ಕಂಡುಬರುತ್ತಿಲ್ಲ.