ವೀರಾಜಪೇಟೆ, ಏ. 10 : ವೀರಾಜಪೇಟೆ ಬಳಿಯ ಬೇಟೋಳಿಯ ಗ್ರಾಮ ಪಂಚಾಯಿತಿ ಸದಸ್ಯ ಕೆ.ಎಂ.ಉಮ್ಮರ್ ಫಾರೂಖ್ ಹಾಗೂ ಸಂಗಡಿಗರ ಮೇಲೆ ಹಲ್ಲೆ ನಡೆಸಿದರೆಂಬ ಆರೋಪದ ಮೇರೆ ಗ್ರಾಮಾಂತರ ಪೊಲೀಸರು ಇಂದು ಬಾಳುಗೋಡಿನ ಐದು ಮಂದಿಯನ್ನು ಬಂಧಿಸಿದ್ದಾರೆ.

ಗುಂಡಿಗೆರೆಯ ಮೂಸಾ (55) ಎಂಬವರು ಎತ್ತು ಖರೀದಿಸಲು ಹಣದೊಂದಿಗೆ ತಾ:7ರಂದು ಮನೆಯಿಂದ ತೆರಳಿದವರು ಇನ್ನೂ ಮನೆಗೆ ಹಿಂತಿರುಗಿಲ್ಲ ಎಂದು ಫಾರೂಖ್ ಸಂಗಡಿಗರು ಬಾಳುಗೋಡು ಗ್ರಾಮಕ್ಕೆ ತೆರಳಿ ಅಲ್ಲಿನ ದೇವಾಲಯದ ಬಳಿಯಲ್ಲಿ ಹುಡುಕುತ್ತಿದ್ದಾಗ ಐದು ಮಂದಿ ಸೇರಿ ಕತ್ತಿ ದೊಣ್ಣೆಯೊಂದಿಗೆ ಸಂಗಡಿಗರ ಮೇಲೆ ಹಲ್ಲೆ ನಡೆಸಿ; ಇನ್ನೋವಾ ಕಾರನ್ನು ಜಖಂ ಪಡಿಸಿ ಹಾಗೂ ಫಾರೂಖ್‍ಗೆ ಸೇರಿದ ಮೊಬೈಲ್‍ನ್ನು ನಾಶಪಡಿಸದರೆಂದೂ ಫಾರೂಖ್ ನೀಡಿದ ದೂರಿನ ಮೇರೆ ಪೊಲೀಸರು ಐದು ಮಂದಿ ವಿರುದ್ಧ ಐ.ಪಿ.ಸಿ ವಿಧಿ 143,147,323,324, 140 ಪ್ರಕಾರ ಪ್ರಕರಣ ದಾಖಲಿಸಿದ್ದಾರೆ. ಗ್ರಾಮ ಪಂಚಾಯಿತಿ ಸದಸ್ಯ ಹಲ್ಲೆಯಿಂದ ಕಾಲು ಕೈಗಳಿಗೆ ಗಂಭೀರ ಸ್ವರೂಪದ ಗಾಯಗಳಾಗಿದೆ ಎಂದು ಇಲ್ಲಿನ ಸಾರ್ವಜನಿಕ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಮತ್ತೊಂದು ದೂರು

ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ರಾಮಾಂತರ ಪೊಲೀಸರು ಬಾಳುಗೋಡಿನ ಭೀಮಯ್ಯ ಎಂಬುವರು ನೀಡಿದ ದೂರಿನ ಮೇರೆ ಮತ್ತೊಂದು ಗುಂಪಿನ ಐದು ಮಂದಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಎರಡು ಗುಂಪುಗಳ ನಡುವೆ ನಡೆದ ಪರಸ್ಪರ ಹಲ್ಲೆಗೆ ಸಂಬಂಧಿಸಿದಂತೆ ಫಾರೂಖ್ ಆಸ್ಪತ್ರೆಗೆ ದಾಖಲಾದ ಸಂದರ್ಭದಲ್ಲಿ ಗ್ರಾಮಾಂತರ ಪೊಲೀಸ್ ಠಾಣೆಯ ಸಬ್ ಇನ್ಸ್‍ಪೆಕ್ಟರ್ ವೀಣಾ ನಾಯಕ್ ಫಾರೂಖ್‍ವಿನ ಹೇಳಿಕೆಯನ್ನು ದಾಖಲಿಸಿದರು. ಡಿ.ವೈ.ಎಸ್.ಪಿ. ಸಿ.ಟಿ.ಜಯಕುಮಾರ್, ಸರ್ಕಲ್ ಇನ್ಸ್‍ಪೆಕ್ಟರ್ ಕ್ಯಾತೆಗೌಡ ಅವರುಗಳು ಆಸ್ಪತ್ರೆಗೆ ಭೇಟಿ ನೀಡಿ ನಡೆದ ಘಟನೆಯ ಕುರಿತು ಮಾಹಿತಿ ಪಡೆದರು

ಎಸ್.ಪಿ.ಭೇಟಿ

ಗುಂಡಿಗೆರೆಯ ಗುಂಪು ಇಂಟರ್‍ನೆಟ್ ಮೂಲಕ ಕೊಡಗು ಜಿಲ್ಲಾ ಪೊಲೀಸ್ ಉನ್ನತಾಧಿಕಾರಿಗೆ ದೂರು ನೀಡಿದ್ದರಿಂದ ಎಸ್‍ಪಿ ಡಾ. ಸುಮನ್ ಅಪರಾಹ್ನ ವೀರಾಜಪೇಟೆಗೆ ಭೇಟಿ ನೀಡಿ ಎರಡು ಕಡೆಯವರ ದೂರುಗಳನ್ನು ಪರಿಶೀಲಿಸಿದರು. ಎರಡು ಗುಂಪುಗಳ ಮೇಲೆ ನಿರ್ಧಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳುವಂತೆ ಡಿವೈಎಸ್‍ಪಿಗೆ ಆದೇಶಿಸಿದರು.

ಪೊಲೀಸ್ ಅಧಿಕಾರಿಗಳೊಂದಿಗೆ ವಿಚಾರ ವಿನಿಮಯ ಮಾಡಿದ ಡಾ. ಸಮನ್ ಅವರು ನಂತರ ಮಡಿಕೇರಿಗೆ ಹಿಂತಿರುಗಿದರು. ಗುಂಡಿಗೆರೆಯ ಮೂಸಾ ನಾಲ್ಕು ದಿನಗಳಿಂದ ನಾಪತ್ತೆಯಾದ ಕುರಿತು ಇಲ್ಲಿನ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅವರ ಮಗ ಸಲಾಂ ನೀಡಿದ ದೂರಿನ ಮೇರೆ ನಾಪತ್ತೆ ಪ್ರಕರಣ ದಾಖಲಾಗಿದೆ.