ಮಾನವ ಸಮಾಜಜೀವಿ, ಸಂಘಜೀವಿ ಮಾನವರು ಒಬ್ಬರನ್ನು ಬಿಟ್ಟು ಒಬ್ಬರು ಇರುವುದಿಲ್ಲ ಎಂಬುದು ಗ್ರೀಕ್ ರಾಜಕೀಯ ತಜ್ಞ ಅರಿಸ್ಟಾಟಲ್ ಹೇಳಿದ ಮಾತು. ಆದರೆ ಮಾನವ ತನ್ನ ವೈಯಕ್ತಿಕ ಸ್ವಾತಂತ್ರ್ಯದಿಂದ ಒಂಟಿಯಾಗಿ ಬದುಕುವ ಪ್ರಯತ್ನ ಮಾಡುತ್ತಿದ್ದಾನೆ. ಕೊರೊನಾ ಎಂಬ ಕಾಯಿಲೆ ಮಾನವನನ್ನು ಕುಟುಂಬ ಜೀವಿಯಾಗಿ ಬದುಕುವಂತೆ ಮಾಡಿದೆ. ಸ್ವಾತಂತ್ರ್ಯ ಎಂಬ ಪದವನ್ನು ಎರಡು ರೀತಿ ಉಪಯೋಗಿಸಬಹುದು ಒಂದು ವಸ್ತುವಿಗೆ ಮತ್ತೊಂದು ವ್ಯಕ್ತಿಗೆ. ಯಾವುದೇ ಒಂದು ವಸ್ತು ಯಾವುದೇ ನಿರ್ಬಂಧಕ್ಕೆ ಒಳಪಡದೆ ಯಾವುದೇ ದಿಕ್ಕಿನಲ್ಲಿ ಚಲಿಸಲು ಸಾಧ್ಯವಾದರೆ ಅದನ್ನು ಸ್ವಾತಂತ್ರ ಎನ್ನಬಹುದು. ಅದೇ ವಸ್ತುವಿಗೆ ನಿರ್ಬಂಧವಿದ್ದರೆ ಅದು ಸ್ವಾತಂತ್ರ್ಯ ಕಳೆದುಕೊಂಡಿದೆ ಎಂದು ಅರ್ಥ. ಅದೇ ರೀತಿ ಯಾವುದೇ ವ್ಯಕ್ತಿಯ ಮೇಲೆ ನಿರ್ಬಂಧವಿಲ್ಲದಿದ್ದರೆ ಅದನ್ನು ಸ್ವಾತಂತ್ರ್ಯ ಎನ್ನುತ್ತೇವೆ. ಸ್ವಾತಂತ್ರ್ಯಕ್ಕೆ ನಿರ್ಬಂಧಗಳನ್ನು ಹೇರಿದಾಗ ವ್ಯಕ್ತಿಯು ಸ್ವಾತಂತ್ರ್ಯವನ್ನು ಕಳೆದುಕೊಳ್ಳುತ್ತಾನೆ. ಒಬ್ಬ ವ್ಯಕ್ತಿಯು ತನ್ನಷ್ಟಕ್ಕೆ ತಾನು ಜೀವಿಸುವುದೇ ಸ್ವಾತಂತ್ರ್ಯ.

ಭಾರತ ದೇಶಕ್ಕೆ ಸ್ವಾತಂತ್ರ್ಯ ಬರುವ ಮುಂಚೆ ಪ್ರಜೆಗಳೆಲ್ಲರೂ ಆಂಗ್ಲರು ಹೇರಿದ್ದ ನಿರ್ಬಂಧಗಳಿಗೆ ಒಳಪಟ್ಟಿದ್ದರು. ಸ್ವಾತಂತ್ರ್ಯ ಎಂದರೆ ಯಾವುದೇ ದೇಶದ ಪ್ರಜೆಗಳು ತಮ್ಮಿಂದಲೇ ಚುನಾಯಿಸಲ್ಪಟ್ಟ ಅಥವಾ ಆರಿಸಲ್ಪಟ್ಟ ಸರ್ಕಾರದಿಂದ ಆಳಲ್ಪಡುತ್ತಾರೋ ಅದೇ ಸ್ವಾತಂತ್ರ್ಯ. ಆಗ ಬೇರೆ ದೇಶದ ಕಾನೂನು ಪಾಲಿಸಬೇಕಾಗಿಲ್ಲ. ಭಾರತಕ್ಕೆ ಸ್ವಾತಂತ್ರ್ಯ ಬರುವ ಮೊದಲು ಜನರು ಅನುಭವಿಸಿದ ನೋವು ಎಂಥದ್ದು ಎಂಬುದು ಯಾರಿಗೂ ತಿಳಿದಿರಲಿಲ್ಲ. ಸ್ವಾತಂತ್ರ್ಯದ ಸವಿಯನ್ನು ಜನರಿಗೆ ತಿಳಿಸಿಕೊಡುವ ದೃಷ್ಟಿಯಿಂದ ಇಂದಿನ ಸಮಾಜದಲ್ಲಿ ಕೊರೊನಾ ವೈರಸ್ ಬಂದಿರಬಹುದು ಎಂದು ಹೇಳಬಹುದು. ಮಾನವ ತನ್ನ ವೈಯಕ್ತಿಕ ಸ್ವಾತಂತ್ರ್ಯದಿಂದ ಅವಿಭಕ್ತ ಕುಟುಂಬದಿಂದ ದೂರವಾಗಿ ವಿಭಕ್ತ ಕುಟುಂಬವನ್ನು ಮಾಡಿಕೊಂಡು ಜೀವನ ನಡೆಸುತ್ತಿರುವುದು ಸರಿಯಷ್ಟೇ. ಆದರೆ ತಾನೆ ಎಲ್ಲಾ, ತನಗೆ ನಿಯಂತ್ರಣ ಹಾಕುವವರು ಯಾರೂ ಇಲ್ಲ ಎಂದುಕೊಂಡಿದ್ದ ಮಾನವನಿಗೆ ಇಂದು ಕೊರೊನಾ ಬುದ್ದಿಕಲಿಸಿದೆ. ಮಾನವ ತನ್ನ ಸ್ವಾತಂತ್ರ್ಯವನ್ನು ಅನುಭವಿಸುವುದಕ್ಕಾಗಿ ಒಂದು ಹಕ್ಕನ್ನು ಸ್ಥಾಪಿಸಿಕೊಂಡನು. 1948ರ ಡಿಸೆಂಬರ್ 10 ರಂದು ವಿಶ್ವದಾದ್ಯಂತ ಮಾನವ ಹಕ್ಕುಗಳ ವಿಶ್ವವ್ಯಾಪಿ ಘೋಷಣೆ ಎಂಬ ಘೋಷಣೆಯನ್ನು ಮಾಡಿ, ಮಾನವ ಹುಟ್ಟಿನಿಂದಲೇ ಸ್ವಾತಂತ್ರ್ಯ, ಮಾನವನಿಗೆ ಯಾವುದೇ ರೀತಿಯ ನಿರ್ಬಂಧಗಳಿಲ್ಲ ಎಂದು ಘೋಷಿಸಿಕೊಂಡನು. ಮಾನವ ಹಕ್ಕು ಎಂದರೆ ಮನುಷ್ಯನು ಪಡೆದಿರುವ ಮೂಲ ಹಕ್ಕುಗಳು ಎಂದು. ಮಾನವ ನಾಗರಿಕ, ರಾಜಕೀಯ, ಆರ್ಥಿಕ, ಸಾಮಾಜಿಕ, ಸಾಂಸ್ಕೃತಿಕ ಹಕ್ಕುಗಳನ್ನು ಹೊಂದಿದ್ದಾನೆ ಇದರಿಂದ ಮಾನವ ಯಾವಾಗಲೂ ಸ್ವಾತಂತ್ರ್ಯನು ಎಂದು ಬೀಗುತ್ತಾ ತನ್ನನ್ನು ತಾನೇ ಹೊಗಳಿ ಕೊಳ್ಳುತ್ತಿದ್ದ. ಮಾನವ ಇದಕ್ಕಾಗಿ ತನಗೆ ಬೇಕಾದಷ್ಟು ಹಣವನ್ನು ಸಂಪಾದನೆ ಮಾಡಿ ತಾನು ಒಂಟಿಯಾಗಿ ಜೀವಿಸುವ ಪ್ರಯತ್ನ ಮಾಡುತ್ತಲೇ ಮುಂದೆ ಸಾಗುತ್ತಿದ್ದಾನೆ. ಆದರೆ ಪ್ರಸ್ತುತ ಮಾನವ ಹಕ್ಕುಗಳಿಗೆ ಸವಾಲಾಗಿ ಕೊರೊನಾ ಎಂಬ ವೈರಸ್ ದೇಶದೊಳಗೆ ಪ್ರವೇಶಮಾಡಿ ಮಾನವನ ಹಕ್ಕುಗಳನ್ನು ಕಸಿದುಕೊಂಡಿದೆ. ಕೊರೊನಾ ಇದು ಒಂದು ಸಾಂಕ್ರಾಮಿಕ ವೈರಸ್, ಸರ್ಕಾರ ಕೊರೊನಾ ಎಂಬ ವೈರಸ್ಸಿನ ಬಗ್ಗೆ ಭಯ ಬೇಡ ಎಚ್ಚರಿಕೆಯಿಂದಿರಿ ಎಂದು ತಿಳಿಸಿದ್ದಾರೆ. ಈ ವೈರಸ್ ಮನುಷ್ಯನ ದೇಹವನ್ನು ಪ್ರವೇಶಮಾಡಿ ಕೆಮ್ಮು, ಜ್ವರ, ಉಸಿರಾಟದ ತೊಂದರೆ ಮುಂತಾದ ಸಮಸ್ಯೆಗಳನ್ನು ಎದುರಿಸುವಂತೆ ಮಾಡುತ್ತಿದೆ. ಇದನ್ನು ತಡೆಗಟ್ಟಲು ಸರ್ಕಾರ ವೈದ್ಯರ ಸಲಹೆಯನ್ನು ಪಡೆದು ಔಷಧಿ ಪಡೆಯುವುದು. ಮಾಸ್ಕ್ ಹಾಕಿಯೇ ಮನೆಯಿಂದ ಹೊರಡುವುದು, ಕೈಕಾಲುಗಳನ್ನು ಸಾಬೂನಿನಿಂದ ತೊಳೆಯುವುದು, ಜನರ ಸಂಪರ್ಕದಿಂದ ದೂರವಿರುವುದು, ಮನೆಯಿಂದ ಹೊರ ಬಂದು ಸಾರ್ವಜನಿಕ ಸ್ಥಳಗಳಲ್ಲಿ ಓಡಾಡಬೇಡಿ ಎಂದು ಜಾಗೃತಿಯನ್ನು ಮೂಡಿಸುತ್ತಿದ್ದಾರೆ. ಆದರೆ ಮಾನವ ಸಮಾಜಜೀವಿ ಸಂಘಜೀವಿ ಮಾನವ ಮನೆಯೊಳಗೆ ಬಂದಿಯಾಗಲು ಸಾಧ್ಯವಿಲ್ಲ ಆದ್ದರಿಂದಲೇ ನಮಗೆ ಅನಿಸುತ್ತಿದೆ ಕೊರೊನಾ ಬಂದು ಮಾನವನ ವೈಯಕ್ತಿಕ ಸ್ವಾತಂತ್ರ್ಯವನ್ನು ಕಸಿದುಕೊಂಡಿತೇ ? ಎಂದು. ಇಂದು ಹಣವಿದ್ದರೂ ತನ್ನನ್ನು ತಾನು ರಕ್ಷಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ, ಸ್ವತಂತ್ರವಾಗಿ ಓಡಾಡಲು ಸಾಧ್ಯವಾಗುತ್ತಿಲ್ಲ, ತಾನು ತನ್ನವರು ಎಂಬುವರು ಸಹಾಯ ಮಾಡಲು ಮುಂದೆ ಬರುತ್ತಿಲ್ಲ, ಸತ್ತರೂ ಮುಟ್ಟುತ್ತಿಲ್ಲ.

ಮಾನವ ಜೀವನ ಇಷ್ಟೇನಾ ? ಎಂಬ ಪ್ರಶ್ನೆ ಉದ್ಭವವಾಗುತ್ತಿದೆ. ಕೊರೊನಾ ಎಂಬ ವೈರಸ್ ಅನೇಕರಿಗೆ ನೀತಿಪಾಠವನ್ನು ಕಲಿಸಿದೆ. ಮನೆಯಲ್ಲಿ ಕುಳಿತುಕೊಳ್ಳದ ಜನರಿಗೆ ಮನೆಯಲ್ಲಿಯೇ ಇರಬೇಕಾದ ಪರಿಸ್ಥಿತಿ ನಿರ್ಮಾಣ ಮಾಡಿದೆ. ಹಣ ಹಣ ಎಂದು ವಿದೇಶಗಳಿಗೆ ಹಾರಾಡುತ್ತಿದ್ದವರು ಈಗ ತನ್ನ ದೇಶವೇ ಸಾಕು ಎಂದು ಓಡೋಡಿ ಬರುತ್ತಿದ್ದಾರೆ. ತಂದೆ-ತಾಯಿಯರನ್ನು ದೂರಮಾಡಿದ ಜನರು ಮತ್ತೆ ತಂದೆ ತಾಯಿಯರ ಮಡಿಲು ಸೇರುತ್ತಿದ್ದಾರೆ. ನಗರಕ್ಕೆ ಓಡಿಹೋಗಿದ್ದ ಅದೆಷ್ಟೋ ಯುವ ಜನರು ಮತ್ತೆ ಹಳ್ಳಿಯತ್ತ ಮುಖ ಮಾಡಿದ್ದಾರೆ. ಪರಿಸರ ಸಂರಕ್ಷಣೆಯ ಬಗ್ಗೆ ಪರಿಪರಿಯಾಗಿ ಬೇಡಿಕೊಂಡರು ಸ್ಪಂದಿಸದ ಜನ ಈ ಕಾಲಘಟ್ಟದಲ್ಲಿ ತಮ್ಮ ವಾಹನಗಳನ್ನು ನಿಲ್ಲಿಸಿ ಪರಿಸರ ಸಂರಕ್ಷಣೆಯಲ್ಲಿ ಸಹಾಯ ಮಾಡುತ್ತಿದ್ದಾರೆ. ಕುಟುಂಬ ಜೀವನವನ್ನು ಮರೆತಿದ್ದ ಜನರು ಮತ್ತೆ ಕುಟುಂಬದ ಸದಸ್ಯರೊಂದಿಗೆ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ವ್ಯಕ್ತಿ ಸ್ವಾತಂತ್ರ್ಯ ಎಂದು ಕೂಗುತ್ತಿದ್ದ ಜನ ಇಂದು ಮನೆಯೊಳಗೆ ಬಂದಿಯಾಗಿದ್ದಾರೆ. ಆದ್ದರಿಂದಲೇ ಹೇಳುವುದು ಪ್ರಕೃತಿ ಮಾನವನನ್ನು ನಿಯಂತ್ರಿಸಲು ಹೆಚ್ಚು ಸಮಯ ತೆಗೆದುಕೊಳ್ಳಬೇಕಾಗಿಲ್ಲ. ಮಾನವನ ಅಟ್ಟಹಾಸವನ್ನು ನಿಯಂತ್ರಿಸಲು ಪ್ರಕೃತಿ ತನಗಿಷ್ಟ ಬಂದಂತೆ ನಿಯಂತ್ರಿಸಿಕೊಳ್ಳುತ್ತದೆ. ಆದರೆ ಇನ್ನು ನಿಯಂತ್ರಣ ಸಾಕು. ಕೊರೊನಾ ಮಾನವನಿಂದ ದೂರ ಸರಿದು ಬದುಕಲು ಬಿಡಲಿ ಎಂದು ಆ ವಿಶಾಲ ಪ್ರಕೃತಿಯಲ್ಲಿ ಪ್ರಾರ್ಥಿಸೋಣ.

?ಮಂದೆಯಂಡ ವನಿತ್ ಸಂಜು