ನಾನು ಕೊಂಡಂಗೇರಿಯ ಕೇತುಮೊಟ್ಟೆಯಲ್ಲಿ ಚೆನ್ನಾಗಿದ್ದೇನೆ. ವೈದ್ಯರು, ನರ್ಸ್‍ಗಳ ಶುಶ್ರೂಶೆ ಯಿಂದ ಮತ್ತೆ ಮರುಜೀವ ಪಡೆದಿ ದ್ದೇನೆ. ನೀವು ಹೇಗಿದ್ದೀರಾ ?

ಈ ಪ್ರಶ್ನೆ ಕೇಳಿದವರು ಮಸೂದ್....

ಹೌದು.. ಕೊಡಗಿನ ಜನತೆಯ ಎದೆಬಡಿತ ಹೆಚ್ಚಿಸಿದ್ದ, ತಳಮಳಕ್ಕೆ ಕಾರಣರಾಗಿದ್ದ, ಇಡೀ ಕೊಡಗು ಜಿಲ್ಲೆಯೇ ಆರೋಗ್ಯಕ್ಕಾಗಿ ಬೇಡಿ ಕೊಂಡಿದ್ದ ಮಸೂದ್ ಈಗ ಕ್ಷೇಮವಾಗಿ ಮನೆ ಸೇರಿಕೊಂಡಿದ್ದಾರೆ. 21 ದಿನಗಳ ಚಿಕಿತ್ಸೆ ಬಳಿಕ ಮಸೂದ್ ಹೊಸ ಚೈತನ್ಯದೊಂದಿಗೆ ಸ್ವಗ್ರಾಮ ಸೇರಿಕೊಂಡಿದ್ದಾರೆ. ಅಕ್ಕನ ಮಗಳ ಮದುವೆಗೆಂದು ಸಂಭ್ರಮಿಸುತ್ತಾ ಕೊಡಗಿಗೆ ಬಂದಿಳಿದ ಮಸೂದ್ ಆಸ್ಪತ್ರೆ ಸೇರಿ ಕೊರೊನಾ ವಿರುದ್ಧದ ಸಮರದಲ್ಲಿ ಜಯಶಾಲಿಯಾಗಿ ಮರಳಿದ ಕಥೆಯಿದು.

ಕೊಂಡಂಗೇರಿ ಗ್ರಾಮದ ಕೇತುಮೊಟ್ಟೆಯ ಮಸೂದ್ 12 ವರ್ಷಗಳ ಹಿಂದೆ ಸಪ್ತಸಾಗರದಾಚೆಯ ದುಬೈನ ಬೆಕ್ರ ಎಂಬ ಮರುಭೂಮಿ ನಗರ ಸೇರಿಕೊಂಡರು. ಅಲ್ಲಿನ ದೊಡ್ಡದಾದ ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿಕೊಂಡು ಕೊಡಗಿನಲ್ಲಿದ್ದ ಮೂವರು ಮಕ್ಕಳು, ಪತ್ನಿಯನ್ನು ಸಾಕುತ್ತಿದ್ದರು. ದುಬೈನಲ್ಲಿ ಮಾರ್ಚ್ 15 ರವರೆಗೆ ಕೊರೊನಾ ಸೋಂಕಿನ ಪ್ರಮಾಣ ಹೆಚ್ಚಿರಲಿಲ್ಲ. ಆತಂಕಕ್ಕೂ ಕಾರಣವಾಗಿರಲಿಲ್ಲ. ಹೀಗಾಗಿ ಮಾರ್ಚ್ 28 ರಂದು ಎಮ್ಮೆಮಾಡಿ ನಲ್ಲಿ ನಡೆಯಲು ಸಿದ್ಧಗೊಂಡಿದ್ದ ತನ್ನ ಅಕ್ಕನ ಮಗಳ ಮದುವೆಗೆಂದು ದುಬೈ ಮೂಲಕ ಬೆಂಗಳೂರಿಗೆ ಮಸೂದ್ ವಿಮಾನದಲ್ಲಿ ಬಂದಿಳಿದರು.

ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಎಲ್ಲರ ವೈದ್ಯಕೀಯ ಪರೀಕ್ಷೆ ನಡೆಸುತ್ತಿ ದ್ದವರು ಮಸೂದ್ ಅವರನ್ನು ಹಾಗೇ ಪರೀಕ್ಷೆ ಮಾಡಿ ಬಿಟ್ಟರಂತೆ. ಆಗಲೂ ಮಸೂದ್ ಪುನಃ ಪರೀಕ್ಷೆ ಮಾಡಿ, ನಂಗೆ ಮೈ ಬಿಸಿಯಿರುವ ಸಂಶಯವಿದೆ ಎಂದಾಗಲೂ ಅಲ್ಲಿನ ತಪಾಸಣೆಕಾರರು ಹಾಗೇನಿಲ್ಲ, ನೀವು ನಿಮ್ಮೂರಿನ ಆಸ್ಪತ್ರೆಯಲ್ಲಿ ಚೆಕ್ ಮಾಡಿಸಿಕೊಳ್ಳಿ ಎಂದು ಸಲಹೆ ನೀಡಿದ್ದಾರೆ. ಅದರಂತೆ ಮಸೂದ್ ಮದ್ಯರಾತ್ರಿ ರಾಜಹಂಸ ಬಸ್ ಹತ್ತಿ ವೀರಾಜಪೇಟೆ, ಮೂರ್ನಾಡಿಗೆ ಬಂದು ಅಲ್ಲಿಂದ ಆಟೋದಲ್ಲಿ ಸ್ವಗ್ರಾಮ ಸೇರಿಕೊಂಡಿದ್ದಾರೆ. ಇದೇ ಸಂದರ್ಭ ಮನೆಗೆ ಬಂದ ಕೊಂಡಂಗೇರಿ ಪಂಚಾಯತ್‍ನ ಪ್ರಮುಖರು ದುಬೈನಿಂದ ಬಂದಿದ್ದೀರಲ್ಲ, ಹೆಲ್ತ್ ಚೆಕ್‍ಅಪ್ ಮಾಡಿಸಿಕೊಳ್ಳಿ ಎಂದು ಸೂಚಿಸಿ ಇವರನ್ನು ಮಡಿಕೇರಿಯ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಕರೆತಂದಿದ್ದಾರೆ. ಸಾಧಾರಣ ಕೆಮ್ಮಲಿದ್ದ ತನ್ನನ್ನು ಔಷಧಿ ನೀಡಿ ಮನೆಗೆ ಕಳುಹಿಸಿ ಎಂದು ಹಠ ಹಿಡಿದ ಮಸೂದ್ ಅವರಿಗೆ ವೈದ್ಯ ಡಾ.ಅಜೀಜ್ ಗಂಟಲ ದ್ರವದ ಪರೀಕ್ಷೆ ಕಡ್ಡಾಯಗೊಳಿಸಿ ಅವರನ್ನು ಆಸ್ಪತ್ರೆಯಲ್ಲಿ ದಾಖಲು ಮಾಡಿಬಿಡುತ್ತಾರೆ. ಮೂರು ದಿನಗಳ ನಂತರ ಮನೆಗೆ ಹೋಗಬಹುದೆಂಬ ನಿರೀಕ್ಷೆಯಲ್ಲಿ ಮಸೂದ್ ಸರ್ಕಾರಿ ಆಸ್ಪತ್ರೆಯಲ್ಲಿ ಮಾರ್ಚ್ 17 ರಂದು ವಿಶೇಷ ಅತಿಥಿಯಾಗಿ ದಾಖಲಾಗುತ್ತಾರೆ. ಆದರೆ, ವೈದ್ಯಕೀಯ ತಪಾಸಣೆ ವರದಿ ಬಂದಾಗ ಮಸೂದ್‍ಗೆ ಕೊರೊನಾ ವೈರಾಣು ಸೋಂಕಿರುವುದು ಸ್ಪಷ್ಟವಾಗುತ್ತದೆ. ತನಗೆ ಕೊರೊನಾ ಎಂಬ ಮಹಾಮಾರಿ ಸೋಂಕು ತಗುಲಿದೆ ಎಂದು ತಿಳಿದಾಕ್ಷಣ ಗಾಬರಿಯಾಯಿತು. ಜೀವಭಯ ಉಂಟಾಯಿತು. ಆದರೆ ದೇವರಿದ್ದಾನೆ. ವೈದ್ಯರ ತಂಡವಿದೆ. ನೋಡೋಣ ಏನಾಗುತ್ತೆ ಎಂದು ಚಿಕಿತ್ಸೆಗೊಳಪಟ್ಟೆ ಎಂದು ಮಸೂದ್ ಹೇಳಿದರು.

ಮೊದಲ ವರದಿ ಪಾಸಿಟಿವ್ ಆಗಿದ್ದರೂ ತದನಂತರ ಬಂದ ಮೂರೂ ವರದಿಗಳೂ ನೆಗೆಟಿವ್ ಆಗುತ್ತಿದ್ದಂತೆಯೇ ಮಸೂದ್‍ಗೆ ಮತ್ತಷ್ಟು ಚೈತನ್ಯ ಬಂದಂತೆ ಆಯಿತಂತೆ. ತಾನು ಜೀವಿಸಬಲ್ಲೆ ಎಂಬ ಆತ್ಮವಿಶ್ವಾಸ ಬಂತಂತೆ.

ಕೊನೆಗೂ ಕೊರೊನಾ ಸೋಂಕಿನಿಂದ ಸಂಪೂರ್ಣವಾಗಿ ಪಾರಾಗಿ ಏಪ್ರಿಲ್ 7 ರಂದು ವಿಶ್ವ ಆರೋಗ್ಯ ದಿನದಂದು ಸಂಜೆ ಮನೆ ಸೇರಿಕೊಂಡೆ. ಮತ್ತೆ ಪತ್ನಿ, ಮಕ್ಕಳನ್ನು ನೋಡಿದಾಗ ಸಂತೋಷದಿಂದ ಕಣ್ಣೀರು ಬಂತು. ಇದು ನಂಗೆ ಎರಡನೇ ಜನ್ಮದಂತಾಯಿತು ಎಂದು ಸಂಭ್ರಮಿಸಿದರು ಮಸೂದ್. ವೈದ್ಯರ ಸಲಹೆಯಂತೆ ಇದೇ 12 ರವರೆಗೆ ಮನೆಯಲ್ಲಿಯೇ ಇದ್ದರೂ ಸಂಪರ್ಕ ತಡೆಯಲ್ಲಿ ಬೇರೆಯವರ ಸಂಪರ್ಕದಿಂದ ಮಸೂದ್ ದೂರವಾಗಿರಬೇಕಾಗಿದೆ. ತನ್ನನ್ನು ಜಿಲ್ಲಾಸ್ಪತ್ರೆಯಲ್ಲಿ ವೈದ್ಯರು, ನರ್ಸ್‍ಗಳು, ಆಯಾಗಳು ಅತಿಥಿ ರೀತಿಯಲ್ಲಿಯೇ ನೋಡಿಕೊಂಡರು. ಪೌಷ್ಟಿಕಾಂಶಗಳಿಂದ ಕೂಡಿದ ಊಟ, ತಿಂಡಿ ಕೊಟ್ಟರು. ಖಾಸಗಿ ಆಸ್ಪತ್ರೆಗಿಂತ ಚೆನ್ನಾಗಿ ಸರ್ಕಾರಿ ಆಸ್ಪತ್ರೆಯಲ್ಲಿ ನನ್ನ ಆರೋಗ್ಯದ ಕಾಳಜಿ ವಹಿಸಿದರು ಎಂದು ಮಸೂದ್ ಸ್ಮರಿಸಿಕೊಂಡರು.

ಜಾತಿ-ಧರ್ಮ ನೋಡಿ ಕಾಯಿಲೆ ಬರುತ್ತಾ ?

ನನ್ನ ಧರ್ಮದಿಂದಾಗಿ ಕೆಲವರು ನನ್ನ ಧರ್ಮೀಯರನ್ನು ದೂಷಿಸುತ್ತಿದ್ದಾರೆ. ಇದು ನಿಜಕ್ಕೂ ಬೇಸರ ತಂದಿದೆ. ಚೀನಾದಲ್ಲಿ ಕೊರೊನಾ ವೈರಸ್ ಸೋಂಕು ತಗುಲಿದ್ದು ಹೇಗೆ ? ಕೊರೊನಾ ವೈರಸ್ ಇಂಥಹುದ್ದೇ ಜಾತಿ-ಧರ್ಮ ನೋಡಿಕೊಂಡು ಹರಡುತ್ತಾ ? ಬೇರೆ ದೇಶಗಳಲ್ಲಿ ಇಲ್ಲದ ಧರ್ಮದ ಸೋಂಕು ಭಾರತದಲ್ಲಿ ಮಾತ್ರ ಯಾಕಾಗಿ ? ನನಗೆ ಕೊರೊನಾ ಹೇಗೆ ಬಂತು ಎಂದು ಇಂದಿಗೂ ಹೇಳಲಾಗುತ್ತಿಲ್ಲ. ದುಬೈನಲ್ಲಿ ಯಾರಿಂದ ನನಗೆ ಬಂತೋ ಗೊತ್ತಿಲ್ಲ. ಆದರೆ ನಾನು ಇದನ್ನು ನನ್ನ ಮನೆ ಮಂದಿಗೂ ಹರಡಿಲ್ಲ. ಗ್ರಾಮಸ್ಥರಿಗೂ ಹರಡಿಲ್ಲ. ಹೀಗಿರುವಾಗ ದಯವಿಟ್ಟು ಧರ್ಮದ ಆಧಾರದಲ್ಲಿ ಯಾರನ್ನೂ ಕೂಡ ಧೂಷಿಸಬೇಡಿ. ಯಾವುದೇ ಕಾಯಿಲೆ ಜಾತಿ, ಧರ್ಮ ನೋಡಿಕೊಂಡು ಬರುವುದಿಲ್ಲ. ಅರ್ಥ ಮಾಡಿಕೊಳ್ಳಿ ಪ್ಲೀಸ್... ಎಂದು ಮಸೂದ್ ಹೇಳಿದರು. ಕೆಲವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಡಲಾಗುತ್ತಿರುವ ಸಂದೇಶಗಳು ನಿಜಕ್ಕೂ ಆಘಾತ ತಂದಿದೆ ಎಂದೂ ಮಸೂದ್ ಹೇಳಿದರು.

ಕೊರೊನಾ ಕೂಡ ಇತರ ವೈರಸ್‍ನಂತೆ ಬರುತ್ತದೆ. ಕೊರೊನಾ ಬಂದಾಕ್ಷಣ ಖಂಡಿತಾ ಭಯ ಪಡಬೇಡಿ, ಧೈರ್ಯವಾಗಿರಿ. ಯಾವುದಕ್ಕೂ ಕೊರೊನಾ ಬಾರದಂತೆ ತಡೆಯಲು ಮನೆಯಲ್ಲಿಯೇ ಸುರಕ್ಷಿತವಾಗಿರಿ. ಮನೆಯಲ್ಲಿ ಇರುವುದೇ ಕೊರೊನಾ ಬರುವುದನ್ನು ತಡೆಯಲು ಇರುವ ಏಕೈಕ ಮಾರ್ಗ. ಸರ್ಕಾರ ಹೇಳಿದ ಎಲ್ಲಾ ಸೂಚನೆಗಳನ್ನು ಕೆಲವು ವಾರ ಕಡ್ಡಾಯವಾಗಿ ಪಾಲಿಸಿ ಎಂದು ಮಸೂದ್ ಮನವಿ ಮಾಡಿದರು. ಕೊರೊನಾ ಸಂಬಂಧಿತ ವದಂತಿಗಳು, ಸುಳ್ಳು ಸುದ್ದಿಗಳನ್ನು ಹಬ್ಬಿಸುವವರ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕೆಂದೂ ಮಸೂದ್ ಕೋರಿದರು.

ಕೊನೇ ಹನಿ : ಮಸೂದ್ ತನ್ನಲ್ಲಿನ ರೋಗನಿರೋಧಕ ಶಕ್ತಿ, ಆತ್ಮಬಲ ದೊಂದಿಗೆ ವೈದ್ಯರ ಚಿಕಿತ್ಸಾ ಕ್ರಮದಿಂದಾಗಿಯೂ ಚೇತರಿಸಿಕೊಂಡು ಕೊರೊನಾ ವಿರುದ್ಧದ ಸಮರ ಗೆದ್ದಿದ್ದಾರೆ. ಆ ಮೂಲಕ ಕೊಡಗಿನ ಜನತೆಯಲ್ಲಿದ್ದ ತಳಮಳಕ್ಕೂ ಕೊನೆ ಹಾಡಿದ್ದಾರೆ. ನಾನೀಗ ಮನೆಯಲ್ಲಿಯೇ ಕ್ಷೇಮವಾಗಿದ್ದೇನೆ. ನಿಮ್ಮ ಕ್ಷೇಮಕ್ಕೋಸ್ಕರ ನೀವೂ ಮನೆಯೊಳಗಡೆ ಇರಿ ಎಂಬ ಸಂದೇಶವನ್ನೂ ನೀಡಿದ್ದಾರೆ. ಈ ಸಂದೇಶ ಪಾಲಿಸಬೇಕಾದದ್ದು ಎಲ್ಲರ ಕರ್ತವ್ಯವಾಗಲಿ.