ಪರೀಕ್ಷೆ ಮುಗಿಸಿ ಫಲಿತಾಂಶ ಕಾರ್ಯದಲ್ಲಿ ಬಿಡುವಿಲ್ಲದೆ ತೊಡಗಿಕೊಳ್ಳ ಬೇಕಾದ ದಿನಗಳಿವು. ಆದರೆ ಶಾಲೆಗೆ ಹೋಗಲಾರದೆ ಮನೆಯಲ್ಲೇ ಬಂದಿಯಾಗಿ ಜಗತ್ತು ತತ್ತರಿಸುತಿರುವ ಭೀಕರ ಸ್ಥಿತಿಗೆ ಬೆಚ್ಚಿ ಅಸಹಾಯಕತೆ ಯಲಿ ಆಕಾಶ ನೋಡುವಂತಾಗಿದೆ. ದಿನ ಬೆಳಗಾದರೆ ಮಲಗುವವರೆಗೂ ಕೊರೊನಾ ಪೀಡನೆಯದ್ದೇ ಗದ್ದಲ. ದೂರದರ್ಶನ ತೆರೆದರಂತೂ ಬದುಕಿನಲ್ಲಿ ಮುಂದೆ ಆಶಾಭಾವನೆಯೇ ಬರದಷ್ಟು ಭೀತಿ ಹುಟ್ಟುತಿದೆ. ಕೆಲ ತಿಂಗಳ ಹಿಂದೆ ತಾನೇ ಮಹಾಮಳೆಗೆ ಸಿಲುಕಿ ಮೈಗೊಡವಿ ಎದ್ದೇಳುವಷ್ಟರಲ್ಲೆ ಕಣ್ಣಿಗೆ ಕಾಣದ ಕೊರೊನಾ ವೈರಸ್ ಭೀತಿಯಿಂದಾಗುತ್ತಿರುವ ಪರಿಣಾಮಗಳಿಗೆ ಭಯದ ಕಣ್ಣುಗಳಿಂದ ಸಮಾಜದೊಡನೆ ಬೆರೆಯಲಾಗದೆ ಮನೆ ಮಂದಿಯಷ್ಟೇ ಮನೆಯೊಳಗೆ ಒಂದಾಗಿದ್ದೇವೆ.

ಮನುಕುಲದ ಇತಿಹಾಸದಲ್ಲೆ ಮನುಷ್ಯನ ಅಹಂನತ್ತ ಬೆರಳು ತೋರಿ ಇಡೀ ಜಗತ್ತಿನ ವ್ಯವಸ್ಥೆಯನ್ನೇ ಅಲ್ಲೋಲ ಕಲ್ಲೋಲವಾಗಿಸಿ ರಾರಾಜಿಸು ತಿವೆ ಕೊರೊನಾ ವೈರಸ್ ಎಂಬ ಮಾರಿ. ಕಣ್ಣಿಗೆ ಕಾಣದ ಈ ಸೂತ್ರಧಾರ ನಮ್ಮ ಸಾಮೂಹಿಕ ಸಮಾಧಿಗೆಂದೇ ಯುದ್ಧ ಸಾರಿ, ಎಲ್ಲರ ಮನಸ್ಸನ್ನು ನಡುಗಿಸುತ್ತಾ ಮನೆಯೊಳಗೆ ಕೂಡಿಹಾಕಿ ಆತ್ಮಸ್ಥೈರ್ಯವನ್ನು ಕುಗ್ಗಿಸಿ ಆತಂಕದೆಡೆ ಹೊರಳಿಸುತಿರುವುದೆಂತಹ ವಿಪರ್ಯಾಸ. ಏನೇನು ಪ್ರಯತ್ನ ನಡೆದರೂ ಕೈಮೀರುತ್ತಿರುವ ಕೊರೊನಾ ಒಂದೆಡೆಯಾದರೆ ಹತೋಟಿಗೂ ಸಿಗದೆ ಕೈಚೆಲ್ಲಲಾರದ ಪೊಲೀಸರು, ಜೀವ ಪಣಕಿಟ್ಟ ಆರೋಗ್ಯ ಇಲಾಖೆ, ಆಡಳಿತಾಧಿಕಾರಿಗಳ ಆದೇಶಗಳ ಮೀರಿ ನಡೆಯುವ ನಮಗೆ ರೂಢಿಯಾದ ಚಟಗಳನ್ನು ಬಿಡಲಾರದೆ ಓಡಾಡುವ ತವಕ. ತಾವಾಗಿಯೇ ಜಾಗೃತರಾಗಿರು ವುದು ಬೆರಳೆಣಿಕೆಯಷ್ಟು ಮಂದಿಯಷ್ಟೆ. ಮನೆಯೊಳಗಿರಲಿಕ್ಕೆ ತೊಂದರೆಯಾಗು ವುದಾದರೆ ಬಸ್ ನಿಲ್ದಾಣ, ರೈಲ್ವೆ ನಿಲ್ದಾಣಗಳನ್ನೇ ನಂಬಿರುವ ನಿರ್ಗತಿಕರ ಅವಸ್ಥೆ ?

ಮನೆಯೊಳಗಿದ್ದುಕೊಂಡೇ ಮಾಡಲೆಷ್ಟು ಕೆಲಸಗಳು ? ಮನೆ ಸ್ವಚ್ಛತೆ ಯಿಂದ ಹಿಡಿದು ಹೂಗಿಡಗಳ ಕೆಲಸ, ಹೊಸ ಅಡುಗೆ, ನಮಗೆ ಅಂಟಿ ಕೊಂಡಿರುವ ಹವ್ಯಾಸಗಳು... ಹೀಗೆ ಮನಸ್ಸು ಮಾಡಿದರೆ ಅದೆಷ್ಟು ದಾರಿಗಳು ತೆರೆದುಕೊಳ್ಳುತ್ತವೆ ಎಂದು ಪಟ್ಟಿ ಮಾಡಿದರೆ ಬಿಡುವೆ ದೊರೆಯದಷ್ಚು. ಜೀವನ ಎಂದಿನಂತೆ ಸಹಜ ಸ್ಥಿತಿಯಲ್ಲಿಲ್ಲದಾಗ ಹೊಂದಿಕೊಳ್ಳುವುದಕ್ಕೆ ತ್ರಾಸಾಗುತ್ತದೆ ನಿಜ. ಆಗುತ್ತಿರುವುದೆಲ್ಲವೂ ನಮ್ಮ ವಿಲಾಸಿ ಜೀವನಕ್ಕೆ, ಸ್ವಾರ್ಥಕ್ಕೆ ಸಿಕ್ಕುವ ಫಲವೆಂಬುದಕ್ಕೆ ‘ಮಾಡಿದುಣ್ಣೋ ಮಾರಾಯ’, ’ಉಪ್ಪು ತಿಂದವ ನೀರು ಕುಡಿಯಲೇ ಬೇಕು’ ಎಂಬ ಅದೆಷ್ಟೋ ಗಾದೆಗಳು ಎದುರು ಬಂದು ನಿಲ್ಲುತ್ತವೆ. ಸಾರ್ವಜನಿಕ ತಾಣಗಳಲ್ಲಿ ನಾವು ಎಸೆಯುವ ಪ್ಲಾಸ್ಟಿಕ್ ಕಸ, ಕಾಲಿಡಲು ಹೇಸಗೆಯಾಗುವಷ್ಟು ಮನಸ್ಸೋ ಇಚ್ಛೆ ಉಗುಳುವ ಉಗುಳಿ ನಿಂದಲೂ ಇನ್ನೇನು ಕಾದಿದೆಯೋ ಗೊತ್ತಿಲ್ಲ. ಕೊರೊನಾ ಮಹಾ ಮಾರಿ ಬಾಧೆಯಿಂದ ಸಧ್ಯಕ್ಕೆ ಕಾಡ್ಗಿಚ್ಚಿಲ್ಲದೆ, ಪ್ರಾಣಿ ಸಂಕುಲವಾದರೂ ನಿಶ್ಚಿಂತೆಯಿಂದ ಬದುಕುತ್ತಿರಬಹುದೇನೋ ? ನದಿಗಳಲ್ಲೇ ಸುಂದರಿ ಯಮುನೆ ಕೆಲದಿನಗಳಿಂದ ನೆಮ್ಮದಿಯ ಉಸಿರು ಬಿಡುತಿರುವಳೇ ? ದೇಶದ ನೀಳ ನದಿಯೂ, ಪಾವನಳೂ ಆದ ಗಂಗೆ ಶುಭ್ರವಾಗುತ್ತಿರಬಹುದೆ ? ಜೀವನದಿ ಕಾವೇರಿಯೂ ಕೂಡಾ ಯಾವುದರ ಕಾಟವೂ ಇಲ್ಲದೆ ತನ್ನ ಹರಿವಿನ ಹಾದಿಯಲ್ಲಿ ಧ್ಯಾನಸ್ಥ ಸ್ಥಿತಿಯಲ್ಲಿರ ಬಹುದೇನೋ.... ಈ ಜಗತ್ತು ನಮಗೆ ಮೊಗ-ಮೊಗೆದು ಕೊಡುತ್ತಿರುವ ಎಲ್ಲಾ ರೀತಿಯ ಅನುಭವಗಳಿಂದ ಇನ್ನಾದರೂ ನಾವು ಪಾಠ ಕಲಿಯು ತ್ತೇವೆಯೇ ? ಹಾಗೆಂದು ಕನಸು ಕಾಣಬಹುದೇ ? ಹೇಗಾದರೂ ಸರಿ ಮನುಕುಲ ಬೇಗನೆ ಪ್ರಸ್ತುತ ತಲ್ಲಣಗಳಿಂದ, ಕಾಠಿಣ್ಯ ದಿನಗಳಿಂದ ಪಾರಾಗಿ ಸಹಜ ಸ್ಥಿತಿಗೆ ಮರಳಿದರೆ ಸಾಕಷ್ಟೆ. ಮುಂದಿನ ದಿನಗಳಲ್ಲಾದರೂ ರಾಷ್ಟ್ರಗಳ ನಡುವಿನ ದ್ವೇಷ, ರಾಜಕೀಯ ಕಿತ್ತಾಟ ಧರ್ಮಗಳ ನಡುವಿನ ವೈಮನಸ್ಯ ಇನ್ನಿಲ್ಲದಂತೆ ತೊಲಗಿ ಜಗತ್ತೆಂಬ ಅಂಬರದಡಿ ಜನಮನವೆಲ್ಲಾ ಒಗ್ಗೂಡಲಿ. ಸಮಾಜದಲ್ಲಿ ನಮ್ಮನ್ನು ದೂರ ದೂರಾಗಿಸುತ್ತಾ ಬಲಿ ತೆಗೆದುಕೊಳ್ಳುತ್ತಿರುವ ಕೊರೊನಾದಂತಹ ಹೆಮ್ಮಾರಿಯ ಹುಟ್ಟಡಗಲಿ... ನಾವೆಲ್ಲರೂ ಎಂದೆಂದೂ ಹತ್ತಿರವೇ ಇರುವಂತಾಗಲಿ. ?ಸುನೀತ, ಕುಶಾಲನಗರ