ಕೊರೊನಾ ಮುನ್ನೆಚ್ಚರಿಕೆ ಹಿನ್ನೆಲೆ ಯಲ್ಲಿ ಜನಸಾಮಾನ್ಯರು ತಮ್ಮ-ತಮ್ಮ ಧಾರ್ಮಿಕತೆ ಹಾಗೂ ಸಂಸ್ಕøತಿಗೆ ಅನುಗುಣವಾಗಿ ಹಬ್ಬ ಹರಿದಿನ ಗಳನ್ನು ಸರಳ ರೀತಿಯಲ್ಲಾದರೂ ಆಚರಿಸುತ್ತಾರೆ. ಉದಾಹರಣೆಗೆ ಹೋಳಿ, ಯುಗಾದಿ, ರಾಮನವಮಿ, ಮಹಾವೀರ ಜಯಂತಿ, ಗುಡ್‍ಫ್ರೈಡೆ ಇತ್ಯಾದಿ.

ಕ್ರೈಸ್ತರ ಆಧ್ಯಾತ್ಮಿಕ ದೃಷ್ಟಿಯಲ್ಲಿ ಗುಡ್‍ಫ್ರೈಡೆ (ಶುಭಶುಕ್ರವಾರ) ಹಾಗೂ ಈ ವಾರ ಅತ್ಯಂತ ಮಹತ್ವದ್ದಾಗಿದೆ. ಕಳೆದ ಭಾನುವಾರ ತಪಸ್ಸು ಕಾಲದ 6ನೇ ಭಾನುವಾರ ಅರ್ಥಾತ್ ಗರಿಗಳ ಭಾನುವಾರವನ್ನಾಗಿ ಆಚರಿಸಲಾಯಿತು. ಚರ್ಚುಗಳಿಗೆ ಹೋಗದೇ ಅವರವರ ಮನೆಗಳಲ್ಲಿಯೇ ಪ್ರಾರ್ಥಿಸಲಾಯಿತು. ಲೋಕ ರಕ್ಷಕ ಕ್ರಿಸ್ತರಾಜ ಪ್ರಭುಯೇಸು ತನ್ನ ತಂದೆ ದೇವರ ಚಿತ್ತವನ್ನು ನೆರವೇರಿಸಲು ಬದ್ಧನಾಗಿ ಜೆರುಸಲೇಮ್ ನಗರವನ್ನು ಪ್ರವೇಶಿಸಿದ ಸಂತೋಷದ ಸಂಭ್ರಮದ ದಿನವೇ ಗರಿಗಳ ಭಾನುವಾರ. ಒಲಿವ್ ಗರಿಗಳನ್ನು ಹಿಡಿದು ಯೇಸುವಿಗೆ ಜಯಘೋಷ ಮಾಡಿದ ಸುದಿನ. ಪವಿತ್ರ ಗುರುವಾರದಂದು ಯೇಸು ತಮ್ಮ 12 ಮಂದಿ ಶಿಷ್ಯರೊಂದಿಗೆ ಅಂತಿಮ ಭೋಜನವನ್ನು ಸ್ವೀಕರಿಸಿ, ಅವರೆಲ್ಲರಿಗೆ ಆತ್ಮೀಯ ಭೋಜನವಾಗಿ ಪವಿತ್ರ ಪರಮ ಪ್ರಸಾದ ಅಂದರೆ ಪ್ರಭುಯೇಸುವಿನ ಶರೀರ ಮತ್ತು ರಕ್ತವನ್ನು ನೆನಪಿಸುವ ಸಂಸ್ಕಾರವನ್ನು ಸ್ಥಾಪಿಸಿದ್ದು ಮಾತ್ರವಲ್ಲ ಯೇಸು ಒಬ್ಬ ದೀನನಾಗಿ, ಸೇವಕರಾಗಿ ತನ್ನ ಶಿಷ್ಯರ ಪಾದಗಳನ್ನು ತೊಳೆದು ‘ಸೇವೆಗೆ ಅಧಿಕಾರ, ಅಂತಸ್ತು ಯಾವದೂ ಇಲ್ಲ ಎಂಬದನ್ನು ಸಾಬೀತು ಪಡಿಸಿದ ಸುದಿನ. ಪವಿತ್ರ ಶುಕ್ರವಾರದಂದು ಪ್ರಭುಯೇಸು ದೈವಚಿತ್ತದಂತೆ ಶಿಲುಬೆಯಾತನೆ ಅನುಭವಿಸಿ ಶಿಲುಬೆಯ ಮೇಲೆ ಮೊಳೆಗಳಿಂದ ಜಡಿಯಲ್ಪಟ್ಟ, ಮೂರು ತಾಸು ಶಿಲುಬೆಯ ಮೇಲೆ ನೇತಾಡುತ್ತಾ ‘‘ತಂದೆಯೇ ಇವರು ಏನು ಮಾಡುತ್ತಿದ್ದಾರೆಂದು ಇವರು ಅರಿಯರು, ಇವರನ್ನು ಕ್ಷಮಿಸಿರಿ’ ಎಂದು ತಾನು ಯಾತನೇ ಅನುಭವಿಸುತ್ತಿದ್ದರೂ ‘ಶತ್ರುಗಳನ್ನು ಪ್ರೀತಿಸಿ’ ಎನ್ನುವಂತೆ ಕ್ರೂರ ಸೈನಿಕರನ್ನು ಕ್ಷಮಿಸಿ, ಪ್ರಾಣತ್ಯಾಗ ಮಾಡಿ, ಪ್ರೀತಿ ಮತ್ತು ಕ್ಷಮೆಯ ಮೂಲಕ ಲೋಕವನ್ನು ರಕ್ಷಿಸಿದ ಪಾವನ ದಿನ ಇದುವೇ ಪವಿತ್ರ ಶುಕ್ರವಾರ. ಕ್ರೈಸ್ತ ವಿಶ್ವಾಸದ ಪ್ರಕಾರ ಮರಣ ಅಂತ್ಯವಲ್ಲ, ಸ್ವರ್ಗಲೋಕದ ಶಾಶ್ವತ ಜೀವನಕ್ಕೆ ಆರಂಭ. ಭೂಲೋಕದ ಜೀವನದಲ್ಲಿ ಸತ್ಕಾರ್ಯಗಳನ್ನು ಮಾಡಿ, ದೇವರ ಚಿತ್ತಕ್ಕೆ ಮಣಿದು, ಸದ್ಗುಣಿಗಳಿಗೆ ಸ್ವರ್ಗಲೋಕದ ಪ್ರವೇಶಕ್ಕೆ ಇದು ನಾಂದಿ. ಆದುದರಿಂದಲೇ ಇದು ಶುಭ ಶುಕ್ರವಾರವೂ ಆಗಿದೆ. ದೇವರ ವಾಗ್ದಾನದಂತೆ ಮೃತರಾದ ಯೇಸು ಮೂರನೆ ದಿನ ಮೃತ್ಯುಂಜಯರಾಗಿ, ಪುನರುತ್ಥಾನರಾದ ಸಂಭ್ರಮವೇ ಪಾಸ್ಕ ಭಾನುವಾರ ಅಥವಾ ಈಸ್ಟರ್.

ವಿದ್ಯುನ್ಮಾನ ಉಪಕರಣಗಳೊಂದಿಗೆ ತಲ್ಲೀನರಾಗಿರುವ ಪ್ರಸ್ತುತ ಜನಾಂಗ ಕೊರೊನಾ ವೈರಸ್‍ಗೆ ಕೋವಿಡ್-19ರ ಪರಿಣಾಮವಾಗಿ ಮನೆಯಲ್ಲಿಯೇ ಕೂರೋಣ ಎಂಬ ಪರಿಸ್ಥಿತಿಯನ್ನು ಅವಲೋಕಿಸಿದಾಗ ನಮ್ಮ ಸಂಸ್ಕøತಿ ಸುಮಾರು ಇಪ್ಪತ್ತು ವರ್ಷಗಳ ಹಿಂದಕ್ಕೆ ಸರಿದಿದೆ ಎಂದರೆ ಅತಿಶಯೋಕ್ತಿಯಲ್ಲ, ಆಗ ಕುಟುಂಬದ ಸದಸ್ಯರೆಲ್ಲರೂ ಒಟ್ಟಾಗಿ ಸೇರಿ ಕುಟುಂಬ ಪ್ರಾರ್ಥನೆ, ಪರಸ್ಪರ ಸಂವಾದ, ಪ್ರೀತಿ ಐಕ್ಯತೆ, ಪ್ರಾಚೀನ ಕಾಲದ ಆಟಗಳು ಮತ್ತೆ ಪ್ರಚಲಿತವಾಗಿವೆ. ಸ್ನೇಹಿತರು, ಬಂಧು-ಬಳಗ ಪೇಟೆ-ಬೀದಿ ಎಲ್ಲವೂ ಅಪರಿಚಿತ ವಾಗುತ್ತಿದೆ, ಒಟ್ಟಾಗಿ ಪ್ರಾರ್ಥಿಸುವ ಕುಟುಂಬ ಒಂದಾಗಿ ಬಾಳುತ್ತದೆ ಎಂಬ ತತ್ವದಂತೆ ಕಾರ್ಯರೂಪಕ್ಕೆ ಬರಲಾರಂಬಿಸಿದೆ. ಹಣ, ಆಸ್ತಿ, ಅಧಿಕಾರ, ತಂದೆ-ತಾಯಿಗಳಿಗೆ ಗೌರವ, ದೈವ ಪ್ರೀತಿ ದೇವರತ್ತ ಮುಖಮಾಡಿ ತನ್ನ ಅಂತರಾಳದ ತೊಳಲನ್ನು ಮೆಲುಕು ಹಾಕುತ್ತಿದ್ದಾನೆ. ಕಣ್ಣಿಗೆ ಕಾಣದ ವೈರಾಣು ಶರವೇಗದಲ್ಲಿ ಹಬ್ಬುತ್ತಿರುವಾಗ ಅದರ ವೇಗ, ವ್ಯಾಪ್ತಿ, ಪರಿಣಾಮ ಕಂಡರಿಯಲು ಸಾಧ್ಯವಿಲ್ಲದಿರುವಾಗ ಅದರ ನಿಯಂತ್ರಣ ಹೇಗೆ ? ಆರೋಗ್ಯ ಇಲಾಖೆ, ಸಕಾರ, ವಿಶ್ವ ಆರೋಗ್ಯ ಸಂಸ್ಥೆ, ನೀಡುವ ಎಚ್ಚರಿಕೆಗಳನ್ನು ನಿಯಮಗಳನ್ನು ಪಾಲಿಸುವದರ ಮೂಲಕ ನಮ್ಮನ್ನು ಮಾತ್ರವಲ್ಲ, ನಮ್ಮ ಪರಿವಾರವನ್ನು ಸಮುದಾಯವನ್ನು ರಕ್ಷಿಸೋಣ. 2020ರ ವರ್ಷವು ಈ ನಿಟ್ಟಿನಲ್ಲಿ ಸಂಕಷ್ಟದ ವರ್ಷವಾದರೂ ಶುಭ ಶುಕ್ರವಾರದ ಪ್ರಾರ್ಥನೆ ಧ್ಯಾನ, ಉಪವಾಸವೆಲ್ಲವೂ ಸರ್ವಜನರಿಗೆ ಸುಖ-ಶಾಂತಿ ಆರೋಗ್ಯಭಾಗ್ಯವನ್ನು ನೀಡುವಂತಾಗಲಿ.

-ಚಾಲ್ರ್ಸ್ ಡಿಸೋಜ

ಉಪನ್ಯಾಸಕರು, ವೀರಾಜಪೇಟೆ.