ಮಡಿಕೇರಿ, ಏ. 9: ಅದೊಂದು ಕಾಲವಿತ್ತು.., ಏನೇ ವಿಚಾರ ವಿನಿಮಯ, ಮಾಹಿತಿ ಸಂಪರ್ಕಗಳು ಅಂಚೆ ಮೂಲಕವೇ ಸಾಗುತ್ತಿತ್ತು.., ವೈಯಕ್ತಿಕ, ಕಚೇರಿ ಕಾರ್ಯನಿಮಿತ್ತ ವ್ಯವಹಾರಗಳು, ಎಷ್ಟೇ ದೂರವಾದರೂ ಪತ್ರಗಳ ಮುಖೇನ ಅಂಚೆ ಮೂಲಕ ತಲುಪಿಸುವ ವ್ಯವಸ್ಥೆಯಿತ್ತು. ಆಧುನಿಕತೆ ಬೆಳೆದಂತೆ ತಂತ್ರಜ್ಞಾನಗಳು ಮುಂದುವರಿದು ಇದೀಗ ಕುಳಿತಲ್ಲಿಯೇ, ಅಂಗೈ ಯಲ್ಲಿಯೇ ಮಾಹಿತಿ ಪಡೆಯುವ ವ್ಯವಸ್ಥೆ ಬಂದಿದೆ.ಆದರೂ ಕೆಲವೊಂದು ವ್ಯವಹಾರಗಳಿಗೆ ಅಧಿಕೃತ ‘ಮುದ್ರೆ’ಯ ಅಗತ್ಯತೆ ಇರುವುದರಿಂದ ಅಂಚೆ ಸೇವೆ ಮುಂದುವರಿದಿದೆ. ಸರಕಾರಿ ಆದೇಶಗಳು, ದಾಖಲೆಗಳು, ಮನಿ ಆರ್ಡರ್, ಪಿಂಚಣಿ ಸೇವೆ, ಕೋರ್ಟ್ ನೋಟೀಸ್ ಮುಂತಾದವು ಗಳಿಗೆ ಅಂಚೆ ಸೇವೆ ಅಗತ್ಯವೂ ಹೌದು. ಇದೀಗ ‘ಲಾಕ್‍ಡೌನ್’ ಇದ್ದರೂ ಅಡೆ-ತಡೆಗಳ ನಡುವೆಯೂ ಅಂಚೆ ಸೇವೆ ಇದೀಗ ಮುಂದುವರಿದಿದೆ. ಆತಂಕ-ಭೀತಿಯ ನಡುವೆಯೂ ಅಂಚೆಯಣ್ಣ ಮನೆ-ಮನೆಗೆ ಎಡತಾ ಕುತ್ತಿರುವುದು ಸಾಮಾನ್ಯವಾಗಿದೆ.ಕೊರೊನಾ ಮಹಾಮಾರಿ ಹಿನ್ನೆಲೆಯಲ್ಲಿ ದೇಶಾದ್ಯಂತ ಲಾಕ್‍ಡೌನ್ ವ್ಯವಸ್ಥೆ ಜಾರಿಯಲ್ಲಿದ್ದು, ಸಂಪರ್ಕ ವ್ಯವಸ್ಥೆ ಸಂಪೂರ್ಣ ಸ್ಥಗಿತಗೊಂಡಿದೆ. ಸಾರಿಗೆ ಸಂಪರ್ಕ ವಂತೂ ನಿಂತು ಹೋಗಿದೆ. ಆದರೂ ಕೇಂದ್ರ ಸರಕಾರದ ಅಧೀನದ ಅಂಚೆ ಇಲಾಖೆಯಂತೂ ಸೇವೆ ಸಲ್ಲಿಸ ಲೇಬೇಕಿದೆ. ಪತ್ರವ್ಯವಹಾರ ನಡೆಸಲೇಬೇಕಿದೆ. ಏನೇ ಅಡೆ-ತಡೆ ಇದ್ದರೂ ಅಂಚೆ ಸೇವೆ ನಡೆಯುತ್ತಿದೆ.

ಕಳೆದ ಮಾರ್ಚ್ 23 ರಿಂದ ಕೊಡಗು ಲಾಕ್‍ಡೌನ್ ಆದ ಬಳಿಕ ತಾ. 25 ರಿಂದ ಇಡೀ ದೇಶವೇ ಲಾಕ್‍ಡೌನ್ ಆಗಿದೆ. ಅಂದಿನಿಂದ ಅಂಚೆ ಸೇವೆ ಕೂಡ ಸ್ಥಗಿತಗೊಂಡಿತ್ತು. ನಂತರದಲ್ಲಿ ಅಂಚೆ ಸೇವೆಯ ಅಗತ್ಯತೆ ಬಗ್ಗೆ ಮನಗಂಡ ಇಲಾಖೆ ತಾ. 1 ರಿಂದ ಅಂಚೆ ಸೇವೆ ಮುಂದುವರಿಸಿದೆ. ಅದರಂತೆ ಅಂಚೆ ಬಟವಾಡೆ ಕಾರ್ಯ ನಡೆಯುತ್ತಿದೆ.

185 ಶಾಖೆಗಳಲ್ಲಿ ಸೇವೆ

ಅಂಚೆ ಸೇವೆ ಸಂಬಂಧ ಸಹಾಯಕ ಅಂಚೆ ಅಧೀಕ್ಷಕ ಹೆಚ್.ಜೆ. ಸೋಮಣ್ಣ ಅವರಲ್ಲಿ ಮಾಹಿತಿ ಬಯಸಿದ ಸಂದರ್ಭ ವಿವರಣೆ ನೀಡಿದ ಅವರು; ಜಿಲ್ಲೆಯಲ್ಲಿ ಒಟ್ಟು 24 ಡಿಪಾರ್ಟ್‍ಮೆಂಟಲ್ ಪೋಸ್ಟ್ ಆಫೀಸ್‍ಗಳು ಸೇರಿದಂತೆ 185 ಗ್ರಾಮೀಣ ಶಾಖೆಗಳು ಕಾರ್ಯ ನಿರ್ವಹಿಸುತ್ತಿವೆ. ಶೇ. 90 ರಷ್ಟು ಮಂದಿ ಸಿಬ್ಬಂದಿಗಳು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಎಲ್ಲ ರೀತಿಯ ಅಂಚೆ ಬಟವಾಡೆ ಆಗುತ್ತಿವೆ ಎಂದು ಮಾಹಿತಿ ನೀಡಿದರು.

ಅಂಚೆ ಮೇಲ್ ವಾಹನ

ಹೊರ ಜಿಲ್ಲೆ ರಾಜ್ಯಗಳಿಂದ ಅಂಚೆ ಪತ್ರಗಳು ಮೈಸೂರು ವಿಭಾಗದವರೆಗೆ ಬರುತ್ತವೆ. ಅಲ್ಲಿಂದ ಕೊಡಗು ಜಿಲ್ಲೆಗೆ ಸಂಬಂಧಿಸಿದ ಅಂಚೆಗಳನ್ನು ವಿಭಾಗಿಸಿ ಅಂಚೆ ಮೇಲ್ ವಾಹನಗಳ ಮೂಲಕ ತರಿಸಿಕೊಳ್ಳಲಾಗುವುದು. ಹಾಗೆಯೇ ಕೊಡಗು ಜಿಲ್ಲೆಯಿಂದ ಬೇರೆ ಕಡೆಗಳಿಗೆ ಹೋಗಬೇಕಾದ ಅಂಚೆಗಳನ್ನು ಮೈಸೂರು ವಿಭಾಗಕ್ಕೆ ತಲುಪಿಸಲಾಗು ವುದು. ಎಲ್ಲವೂ ಮೈಸೂರು ಮೂಲಕವೇ ವಿಲೇವಾರಿ ಆಗುತ್ತವೆ ಎಂದು ಸೋಮಣ್ಣ ತಿಳಿಸಿದರು.

ಕೊಡಗು ಜಿಲ್ಲೆಗೆ ಸಂಬಂಧಿಸಿದ ಅಂಚೆ ಪತ್ರಗಳನ್ನು ನಿರ್ದಿಷ್ಟ ಮಾರ್ಗದ ಮೂಲಕ ಡಿಪಾರ್ಟ್ ಮೆಂಟಲ್ ಪೋಸ್ಟ್ ಆಫೀಸ್‍ಗೆ ಕಳುಹಿಸ ಲಾಗುವುದು.

(ಮೊದಲ ಪುಟದಿಂದ) ಅಲ್ಲಿಂದ ಸ್ಥಳೀಯ ಗ್ರಾಮೀಣ ಏಜೆನ್ಸಿಗಳಿಗೆ ಸರಬರಾಜಾಗಲಿದ್ದು, ಸ್ಥಳೀಯ ಅಂಚೆ ಅಣ್ಣಂದಿರು ಮನೆ-ಮನೆಗೆ ತಲುಪಿಸುವ ಕಾರ್ಯ ಮಾಡುತ್ತಿರುವುದಾಗಿ ಅವರು ಹೇಳಿದರು.

ಯಾವುದೇ ಕಾರಣಕ್ಕೂ ಸೇವೆಯನ್ನು ಸ್ಥಗಿತಗೊಳಿಸುವಂತಿಲ್ಲ. ಪ್ರಮುಖವಾಗಿ ಔಷಧಿಗಳು, ಸಂಧ್ಯಾ ಸುರಕ್ಷಾ, ಸಾಮಾಜಿಕ ಭದ್ರತಾ ಪಿಂಚಣಿ, ಮನಿ ಆರ್ಡರ್ ಮುಂತಾದ ಸೇವೆಗಳನ್ನು ಕೂಡಲೇ ತಲುಪಿಸಬೇಕಿದೆ. ಕೆಲವರು ಅಂಚೆ ಕಚೇರಿಗೆ ಬಂದು ಪಡೆದುಕೊಳ್ಳುತ್ತಾರೆ. ಕೆಲವರ ಮನೆ ಮನೆಗಳಿಗೆ ತೆರಳಿ ವಿತರಣೆ ಮಾಡಲಾಗುವುದೆಂದು ತಿಳಿಸಿದರು.

ಪೊಲೀಸ್ ತಕರಾರು

ಅಂಚೆ ಸೇವೆಗಳನ್ನು ಬಹುತೇಕ ಮನೆ ಮನೆಗಳಿಗೆ ತೆರಳಿ ನೀಡಬೇಕಾಗಿದೆ. ಅದರಲ್ಲೂ ಪಿಂಚಣಿ, ಮನಿ ಆರ್ಡರ್, ರಿಜಿಸ್ಟ್ಟರ್ ಪೋಸ್ಟ್ ಮುಂತಾದವುಗಳನ್ನು ಸಮಯಕ್ಕೆ ಸರಿಯಾಗಿ ತಲುಪಿಸಬೇಕಾಗಿದೆ. ಈ ನಿಟ್ಟಿನಲ್ಲಿ ವಿಶೇಷ ತುರ್ತು ಸೇವೆ ಎಂಬ ವಿನಾಯಿತಿ ಇದ್ದರೂ ಅಂಚೆ ಸಿಬ್ಬಂದಿಗಳು ಅಂಚೆ ಹೊತ್ತು ತೆರಳುವಾಗ ಪೊಲೀಸರು ತಡೆಯೊಡ್ಡುತ್ತಿದ್ದಾರೆ. ಇಲಾಖೆಯಿಂದ ನೀಡಿರುವ ಗುರುತಿನ ಚೀಟಿ ತೋರಿಸಿದರೂ ಬಿಡುತ್ತಿಲ್ಲ. ಇದರಿಂದ ಸಮಸ್ಯೆಯಾಗುತ್ತಿದೆ ಎಂದು ಸೋಮಣ್ಣ ಅಸಮಾಧಾನ ತೋಡಿಕೊಂಡರು.

ಈ ಸಂಬಂಧ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಲಿಖಿತವಾಗಿ ಮನವಿ ಸಲ್ಲಿಸಿದ್ದು, ಅಂಚೆ ಸಿಬ್ಬಂದಿಗಳಿಗೆ ಯಾವುದೇ ತೊಂದರೆ ಮಾಡದಂತೆ ಕೋರಿರುವುದಾಗಿ ತಿಳಿಸಿದರು.

ಅಂಚೆ ಸೇವೆ ಸರ್ವರಿಗೂ ಅತ್ಯಗತ್ಯವಾಗಿದ್ದು, ಈ ಒಂದು ಸೇವೆಗೆ ಅಡೆತಡೆಯಾದಲ್ಲಿ ಬಹಳಷ್ಟು ಸಮಸ್ಯೆಗಳು ಎದುರಾಗಬಹುದು. ಅಂಚೆಯಣ್ಣನ ಹಾದಿ ಸುಗಮವಾದಲ್ಲಿ ಒಂದಿಷ್ಟು ಒಳಿತಾಗಬಹುದೇನೋ..!