ಮಡಿಕೇರಿ, ಏ. 9: ಭಾರತೀಯ ರಕ್ಷಣಾ ಪಡೆಯಲ್ಲಿನ ವಿವಿಧ ವಿಭಾಗಗಳಲ್ಲಿ ಕೊಡಗಿನ ಹಿರಿಮೆ ದೊಡ್ಡದು. ಫೀ.ಮಾ.ಕಾರ್ಯಪ್ಪ, ಜನರಲ್ ತಿಮ್ಮಯ್ಯ ಸೇರಿದಂತೆ ಭೂಸೇನೆ, ವಾಯುಸೇನೆ, ನೌಕಾಪಡೆಗಳಲ್ಲಿ ಅದೆಷ್ಟೋ ಮಂದಿ ಅಧಿಕಾರಿಗಳಾಗಿ, ಯೋಧರಾಗಿ ಸೇವೆ ಸಲ್ಲಿಸಿದ್ದು, ಈಗಲೂ ಹಲವಷ್ಟು ಮಂದಿ ದೇಶ ಸೇವೆಯಲ್ಲಿದ್ದಾರೆ.

ಪ್ರಸ್ತುತ ವಿಶೇಷವೆಂದರೆ ಕೊಡಗಿನ ಮೂವರು ವ್ಯಕ್ತಿಗಳು ಭೂಸೇನೆಯಲ್ಲಿನ ಅತ್ಯುನ್ನತ ಜವಾಬ್ದಾರಿ ಸ್ಥಾನವಾಗಿರುವ ಲೆಫ್ಟಿನೆಂಟ್ ಜನರಲ್‍ಗಳಾಗಿ ಒಂದೇ ಅವಧಿಯಲ್ಲಿ ಕರ್ತವ್ಯದಲ್ಲಿರುವುದು. ಶಿಮ್ಲಾ ಆರ್ಮಿ ಕಮಾಂಡ್‍ನಲ್ಲಿ ಲೆ/ಜ ಆಗಿ ಪಟ್ಟಚೆರವಂಡ ಸಿ. ತಿಮ್ಮಯ್ಯ ಇದೀಗ ಮಥುರಾದ ಆರ್ಮಿ ಒನ್‍ಕೋರ್‍ನ ಕಮಾಂಡ್ ಆಗಿ ನಿಯೋಜಿತರಾಗಿರುವ ಲೆ/ಜ. ಕೋದಂಡ ಪೂವಯ್ಯ ಕಾರ್ಯಪ್ಪ ಹಾಗೂ ಮತ್ತೋರ್ವ ಲೆ/ಜ. ಆಗಿರುವ ಚೆನ್ನೀರ ಬನ್ಸಿಪೊನ್ನಪ್ಪ ಅವರುಗಳು ಒಂದು ಸಂದರ್ಭದಲ್ಲಿ ಒಟ್ಟಿಗೆ ಕಲೆತ ಕ್ಷಣವಿದು. ಪುಟ್ಟ ಜಿಲ್ಲೆಯಾದರೂ ಉನ್ನತವಾದ ಸ್ಥಾನದಲ್ಲಿ ಮೂವರು ಅಧಿಕಾರಿಗಳು ಒಂದೇ ಅವಧಿಯಲ್ಲಿ ಕರ್ತವ್ಯದಲ್ಲಿರುವುದು ಸೈನಿಕ ಪರಂಪರೆಗೆ ಹೆಸರಾದ ಕೊಡಗಿಗೊಂದು ಹಿರಿಮೆ...

-ಶಶಿ