ಬಾಳೆಗೆ ಬೆಲೆ ಕಡಿಮೆ...

ಮಡಿಕೇರಿ, ಏ. 8: ಕೊರೊನಾ ಪರಿಸ್ಥಿತಿಯ ಹಿನ್ನೆಲೆ ಪ್ರಸ್ತುತ ತೋಟಗಾರಿಕೆ ಇಲಾಖೆಯ ಮೂಲಕ ಬೆಳೆಗಾರರಿಂದ ತರಕಾರಿ, ಹಣ್ಣು-ಹಂಪಲುಗಳ ಖರೀದಿಗೆ ವ್ಯವಸ್ಥೆಯನ್ನು ಸರಕಾರ ಮಾಡಿದ್ದರೂ ಕೊಡಗು ಜಿಲ್ಲೆಗೆ ಸಂಬಂಧಿಸಿದಂತೆ ಉತ್ಪನ್ನಗಳು ಕಡಿಮೆ ಇವೆ. ಜಿಲ್ಲೆಗೆ ಅಗತ್ಯವಿರುವ ತರಕಾರಿ, ಹಣ್ಣು-ಹಂಪಲುಗಳು ಸದ್ಯಕ್ಕೆ ಮೈಸೂರು ಹಾಗೂ ಹಾಸನ ಎ.ಪಿ.ಎಂ.ಸಿ.ಗಳ ಮೂಲಕ ಬರುತ್ತಿವೆ. ಹಾಪ್‍ಕಾಮ್ಸ್ ಮೂಲಕವೂ ಇದು ಜನತೆಗೆ ಲಭ್ಯವಾಗುತ್ತಿವೆ ಎಂದು ತೋಟಗಾರಿಕಾ ಇಲಾಖಾ ಉಪನಿರ್ದೇಶಕ ಶಶಿಧರ್ ‘ಶಕ್ತಿ’ಗೆ ತಿಳಿಸಿದ್ದಾರೆ.

ಶನಿವಾರಸಂತೆಯಲ್ಲಿ ಹಸಿಮೆಣಸಿನ ಕಾಯಿ ಮಾತ್ರ ಹೆಚ್ಚಾಗಿ ದೊರೆಯುತ್ತಿದೆ. ಇದನ್ನು ಪ್ರಸ್ತುತ ಹಾಸನ, ಅರಕಲಗೂಡು ವಿಭಾಗದಿಂದ ಖರೀದಿ ಮಾಡಲಾಗುತ್ತಿದೆ. ಲಾಕ್‍ಡೌನ್ ಕಾರಣದಿಂದಾಗಿ ಕೇರಳ ಹಾಗೂ ಬೇರೆ ರಾಜ್ಯಗಳ ಖರೀದಿದಾರರು ಬರಲು ಆಗುತ್ತಿಲ್ಲ. ಹಸಿಮೆಣಸು ಬಿಟ್ಟರೆ ಸ್ವಲ್ಪಮಟ್ಟಿಗೆ ಬಾಳೆ ಮಾತ್ರ ಜಿಲ್ಲೆಯಲ್ಲಿ ಸಿಗುತ್ತಿವೆ. ಇದು ಆಂತರಿಕವಾಗಿ ಬಳಕೆಯಾಗುತ್ತಿದೆ ಹಾಗೂ ಮೈಸೂರು ಮಾರುಕಟ್ಟೆಗೆ ಹೋಗುತ್ತಿದೆ. ಆದರೆ ಬೆಲೆ ಕಡಿಮೆ ಇದೆ. ಪ್ರಸ್ತುತ ಹೊಟೇಲ್, ಚಿಪ್ಸ್, ಚಾಟ್ ಸೆಂಟರ್‍ಗಳು ಇಲ್ಲ. ಕೇವಲ ಮನೆ ಬಳಕೆಗೆ ಮಾತ್ರ ಬಾಳೆ ಬಳಕೆಯಾಗುತ್ತಿದೆ. ಈ ಕಾರಣದಿಂದ ಬೆಲೆ ಕಡಿಮೆ ಇದೆ ಎಂದು ಅವರು ಹೇಳಿದರು.

ಕುಶಾಲನಗರ, ಕೂಡಿಗೆ ವ್ಯಾಪ್ತಿಗಳಲ್ಲಿ ಕೆಲವೊಂದು ತರಕಾರಿಗಳನ್ನು ಬೆಳೆಯಲಾಗುತ್ತಿದ್ದರೂ ಪ್ರಮಾಣ ಹೆಚ್ಚಿಲ್ಲ. ಜೊತೆಗೆ ಬೆಳೆದವರು ಮಾರಾಟಕ್ಕೆ ಇಡುತ್ತಿಲ್ಲ ಎಂದು ಶಶಿಧರ್ ತಿಳಿಸಿದರು.