ಸುಂಟಿಕೊಪ್ಪ, ಏ. 8: ಕೊರೊನಾ ಲಾಕ್‍ಡೌನ್‍ನಿಂದ ಜನತೆ ಕಂಗೆಟ್ಟಿದ್ದು ಕೆಲಸವಿಲ್ಲದೆ ಮನೆಯಲ್ಲಿಯೇ ಕೂರುವ ಪರಿಸ್ಥಿತಿ ಬಂದಿದೆ. ಕೈಯಲ್ಲಿ ಕಾಸಿಲ್ಲದೆ ಕೂಲಿ ಕಾರ್ಮಿಕರು ಬಡವರು ಹೈರಾಣಾಗಿದ್ದಾರೆ. ಮತ್ತೊಂದೆಡೆ ದಿನಸಿ ಹಾಗೂ ತರಕಾರಿಗಳ ಬೆಲೆ ಗಗನಕ್ಕೇರಿರುವುದರಿಂದ ಗ್ರಾಹಕರು ಮತ್ತಷ್ಟು ಸಂಕಷ್ಟಕ್ಕೊಳಗಾಗಿದ್ದಾರೆ.
ಸುಂಟಿಕೊಪ್ಪ ಪಟ್ಟಣದ ವಿವಿಧ ಗ್ರಾಮಗಳಲ್ಲಿ ಮನೆ ಮನೆಗೆ ತರಕಾರಿ ಮಾರಾಟ ಮಾಡಲು ಪರವಾನಗಿ ಪಡೆದವರು ಆರಂಭದಲ್ಲಿ ಚೇಂಬರ್ ಆಫ್ ಕಾಮರ್ಸ್ ಹಾಗೂ ಜಿಲ್ಲಾ ಪೊಲೀಸ್ ಇಲಾಖೆ ನಿಗದಿಪಡಿಸಿದ ದರದಲ್ಲೇ ತರಕಾರಿ ಮಾರಾಟ ಮಾಡುತ್ತಿದ್ದರು. ಆದರೆ ಇದೀಗ ತರಕಾರಿ ಬೆಲೆ ಕಂಡು ಗ್ರಾಹಕರು ಬೆಚ್ಚಿಬಿದ್ದಿದ್ದಾರೆ. ಬೀನ್ಸ್‍ಗೆ 1.ಕೆಜಿಗೆ 80 ರೂ, ಬೆಂಡೆಕಾಯಿ 80 ರೂ. ಇತರೆ ಎಲ್ಲಾ ತರಕಾರಿಗಳಿಗೆ 60 ರೂ.ನಂತೆ ಮಾರಾಟ ಮಾಡಲಾಗುತ್ತಿದ್ದು, ದಿನಸಿ ಪದಾರ್ಥಗಳ ದರವನ್ನು ಕೂಡ ಒಂದೇ ಸಮನೆ ಏರಿಸಲಾಗಿದೆ. ಇದರಿಂದ ಗ್ರಾಹಕರು ಕಂಗಾಲಾಗಿದ್ದಾರೆ.
ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳು ನ್ಯಾಯೋಚಿತವಾದ ದರವನ್ನು ನಿಗದಿಪಡಿಸಿ ಗ್ರಾಹಕರ ನೆರವಿಗೆ ಬರಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.